Friday, December 10, 2021

ವಿಧಾನ ಪರಿಷತ್ ಚುನಾವಣೆ : ನಗರಸಭೆ ಮತಗಟ್ಟೆಯಲ್ಲಿ ಮಧ್ಯಾಹ್ನ ೩ರ ವೇಳೆಗೆ ಶೇ.೧೦೦ರಷ್ಟು ಮತದಾನ

ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರಿಂದ ಮತ ಚಲಾವಣೆ

ಭದ್ರಾವತಿ ನಗರಸಭೆ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಕಾಂಗ್ರೆಸ್ ನಗರಸಭಾ ಸದಸ್ಯರು ಮತ ಚಲಾಯಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.
    ಭದ್ರಾವತಿ, ಡಿ. ೧೦: ವಿಧಾನಪರಿಷತ್ ಚುನಾವಣೆ ಮತದಾನ ಶುಕ್ರವಾರ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ನಗರಸಭಾ ಸದಸ್ಯರು ಮತ ಚಲಾಯಿಸಿದರು. 
ಒಟ್ಟು ೩೫ ಸದಸ್ಯರನ್ನು ಒಳಗೊಂಡಿರುವ ನಗರಸಭೆಯಲ್ಲಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು ೩೮ ಮತಗಳಿದ್ದು, ಮಧ್ಯಾಹ್ನ ೧ ಗಂಟೆವರೆಗೆ ನಗರಸಭೆ ಕಛೇರಿಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಬಹುತೇಕ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಮತ ಚಲಾಯಿಸಿದರು. 
ಕಾಂಗ್ರೆಸ್ ಸದಸ್ಯರಾದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಜಾರ್ಜ್, ಬಷೀರ್ ಅಹಮದ್, ಬಿ.ಟಿ ನಾಗರಾಜ್, ಮಹಮದ್ ಯೂಸಫ್, ಸೈಯದ್ ರಿಯಾಜ್, ಲತಾ ಚಂದ್ರ ಶೇಖರ್, ಸರ್ವಮಂಗಳ ಭೈರಪ್ಪ ಮತ್ತು ಶೃತಿ ವಸಂತ್ ಸೇರಿದಂತೆ ಒಟ್ಟು ೧೧ ಮಂದಿ ಹಾಗು ಜೆಡಿಎಸ್ ಸದಸ್ಯರಾದ ರೇಖಾ ಪ್ರಕಾಶ್, ಬಸವರಾಜ್ ಬಿ. ಆನೇಕೊಪ್ಪ, ಮಂಜುಳ ಸುಬ್ಬಣ್ಣ, ಜಯಶೀಲ ಸುರೇಶ್, ವಿಜಯ, ಪ್ರೇಮಾ ಬದರಿನಾರಾಯಣ, ಕೋಟೇಶ್ವರರಾವ್, ಆರ್. ಉದಯಕುಮಾರ್, ರೂಪಾವತಿ ಗುಣಶೇಖರ್, ಪಲ್ಲವಿ ಮತ್ತು ಸವಿತಾ ಉಮೇಶ್ ಸೇರಿದಂತೆ ಒಟ್ಟು ೧೧ ಮಂದಿ ಮತ ಚಲಾಯಿಸಿದರು. ಮತಗಟ್ಟೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಯಿತು. 
ಮಧ್ಯಾಹ್ನ ೨ ಗಂಟೆ ನಂತರ ಕಾಂಗ್ರೆಸ್ ಸದಸ್ಯರಾದ ಕಾಂತರಾಜ್, ಬಿ.ಕೆ ಮೋಹನ್ ಹಾಗು ಪಕ್ಷೇತರ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಬಿಜೆಪಿ ಸದಸ್ಯೆ ಅನುಪಮ ಚನ್ನೇಶ್ ಮತ ಚಲಾಯಿಸಿದರು. ೩ ಗಂಟೆ ನಂತರ ಕಾಂಗ್ರೆಸ್ ಸದಸ್ಯರಾದ ಮಣಿ ಎಎನ್‌ಎಸ್, ಕಾಂತರಾಜ್, ಕೆ. ಸುದೀಪ್‌ಕುಮಾರ್, ಅನುಸುಧಾ ಮೋಹನ್ ಮತ್ತು ಆರ್. ಶ್ರೇಯಸ್ ಮತ ಚಲಾಯಿಸಿದರು.  
ಬೆಳಿಗ್ಗೆ ಬಿಜೆಪಿ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ ಮತ್ತು ಅನಿತಾ ಮಲ್ಲೇಶ್ ಮತ ಚಲಾಯಿಸಿದರು.  ಒಟ್ಟು ೩೮ ಮತಗಳ ಪೈಕಿ ೩೬ ಮತಗಳು ಚಲಾವಣೆಗೊಂಡಿವೆ. ಶೇ.೯೫ರಷ್ಟು ಮತದಾನ ನಡೆದಿದೆ. ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಈ ಬಾರಿ ಮತ ಚಲಾಯಿಸಿಲ್ಲ. ಉಳಿದಂತೆ ಸಂಸದ ಬಿ.ವೈ ರಾಘವೇಂದ್ರರವರು ಶಿಕಾರಿಪುರ ನಗರಸಭೆಯಲ್ಲಿ ಮತ ಚಲಾಯಿಸಿದ್ದಾರೆ. 
ಮತಗಟ್ಟೆ ಬಳಿ ಮಾತಿನ ಚಕಮಕಿ: 
ನಗರಸಭೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯೆ ವಿಜಯ ಹಾಗು ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣರವರು ಶಾಸಕ ಬಿ.ಕೆ ಸಂಗಮೇಶ್ವರ್ ಜೊತೆ ಕೆಲ ಸಮಯ ಮಾತಿನ ಚಕಿಮಕಿ ನಡೆಸಿದ್ದು, ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಯಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರು. 
ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಶೇ.೯೦ ರಷ್ಟು ಮತದಾನ : 
ತಾಲೂಕಿನ ಒಟ್ಟು ೩೭ ಗ್ರಾಮ ಪಂಚಾಯಿತಿಗಳ ಪೈಕಿ ಕೂಡ್ಲಿಗೆರೆ, ಹಿರಿಯೂರು ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಮಧ್ಯಾಹ್ನ ೧ ಗಂಟೆವರೆಗೆ ಶೇ.೧೦೦ರಷ್ಟು ಮತದಾನ ನಡೆದಿದ್ದು, ಉಳಿದಂತೆ ಬಹುತೇಕ ಗ್ರಾಮ ಪಂಚಾಯಿತಿ ಶೇ.೯೦ರಷ್ಟು ಮತದಾನ ನಡೆಯಿತು. ಸಂಜೆ ೪ರ ವೇಳೆಗೆ ಶೇ.೧೦೦ರಷ್ಟು ಮತದಾನ ನಡೆದಿದೆ. 
ಜೆಡಿಎಸ್ ಬಿಜೆಪಿ ಬೆಂಬಲ: 
ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಪಕ್ಷವನ್ನು ಬೆಂಬಲಿಸಿರುವುದು ತಿಳಿದು ಬಂದಿದೆ. ಬಿಜೆಪಿ ಬೆಂಬಲಿಸುವ ನಿರ್ಧಾರ ಆಯಾ ಸ್ಥಳೀಯ ಸಂಸ್ಥೆಗಳ ಜೆಡಿಎಸ್ ಸದಸ್ಯರ ವಿವೇಚನೆಗೆ ಪಕ್ಷದ ಸದಸ್ಯರು ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. 
ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ಈ ಬಾರಿ ಸಹ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಬಿಜೆಪಿ ಸಹ ಈ ಬಾರಿ ತೀವ್ರ ಪೈಪೋಟಿಗೆ ಮುಂದಾಗಿರುವುದು ಕಂಡು ಬಂದಿದೆ. ಈ ನಡುವೆ ಕೆಲವು ಗ್ರಾಮ ಪಂಚಾಯಿತಿಗಳು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿವೆ. 


ಭದ್ರಾವತಿ ನಗರಸಭೆ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಜೆಡಿಎಸ್ ನಗರಸಭಾ ಸದಸ್ಯರು ಮತ ಚಲಾಯಿಸಿದರು.

Thursday, December 9, 2021

ತಂದೆಯ ಚಿತೆಗೆ ಅಗ್ನಿ ಸ್ಪರ್ಶ ನೆರವೇರಿಸಿದ ಪುತ್ರಿಯರು

ಭದ್ರಾವತಿ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕರ ಆರ್. ಜಗನ್ನಾಥ್ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಮೂವರು ಪುತ್ರಿಯರು ನೆರವೇರಿಸಿದರು.
    ಭದ್ರಾವತಿ, ಡಿ. ೯: ಮೂವರು ಪುತ್ರಿಯರು ತಮ್ಮ ತಂದೆಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಗಮನ ಸೆಳೆದಿರುವ ಘಟನೆ ಗುರುವಾರ ನಡೆದಿದೆ.
    ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕ, ನಿಧಿಗೆ ನಿವಾಸಿ ಆರ್. ಜಗನ್ನಾಥ್‌ರವರು ಹಾವು ಕಡಿತದಿಂದ ಬುಧವಾರ ಮಧ್ಯಾಹ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
    ಇವರ ಅಂತ್ಯಕ್ರಿಯೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಜಗನ್ನಾಥ್‌ರವರ ೩ ಜನ ಪುತ್ರಿಯರು ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ತಂದೆಗೆ ಅಂತಿಮ ಗೌರವ ಸಲ್ಲಿಸಿದರು.
    ಸಂಪ್ರದಾಯದಂತೆ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವುದು ವಾಡಿಕೆ. ಆದರೆ ಪುತ್ರಿಯರು ಈ ಕಾರ್ಯವನ್ನು ನೆರವೇರಿಸಿ ಸಂಪ್ರದಾಯವಾದಿಗಳ ಸಮಾಜಕ್ಕೆ ಧಿಕ್ಕಾರ ಹಾಕುವ ಮೂಲಕ ಮಾದರಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹರಿದಾಡುತ್ತಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

ಆರೋಗ್ಯ ಇಲಾಖೆ ವತಿಯಿಂದ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ




    ಭದ್ರಾವತಿ, ಡಿ. ೯: ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಡಿ.೧೦ ಮತ್ತು ೧೧ ಎರಡು ದಿನಗಳ ಕಾಲ ಮೊದಲ ಡೋಸ್ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.
    ಡಿ.೧೦ರಂದು ಅಶ್ವಥ್‌ನಗರ ನಗರ ಆರೋಗ್ಯ ಕೇಂದ್ರ  ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೮, ೦೯, ೧೦, ೧೨ ಮತ್ತು ೧೫ರ ನಿವಾಸಿಗಳಿಗೆ, ನೆಹರುನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೪, ೦೫ ಮತ್ತು ೦೬ರ ನಿವಾಸಿಗಳಿಗೆ, ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೪, ೨೭, ೨೮, ೨೩ ಮತ್ತು ೨೨ರ ನಿವಾಸಿಗಳಿಗೆ ಹಾಗು ಜನ್ನಾಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೧, ೦೩, ೦೨, ೩೧ ಮತ್ತು ೩೩ ನಿವಾಸಿಗಳಿಗೆ ಲಸಿಕೆ ನೀಡಲಾಗುವುದು.
    ಡಿ.೧೧ರಂದು ಅಶ್ವಥ್‌ನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೭, ೧೧, ೧೪, ೧೫ ಮತ್ತು ೧೬ರ ನಿವಾಸಿಗಳಿಗೆ, ನೆಹರುನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೧೩, ೧೭ ಮತ್ತು ೧೮ರ ನಿವಾಸಿಗಳಿಗೆ, ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೨, ೨೩, ೨೫, ೨೭ ಮತ್ತು ೨೮ರ ನಿವಾಸಿಗಳಿಗೆ ಹಾಗು ಜನ್ನಾಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೯, ೩೦, ೩೨, ೩೪ ಮತ್ತು ೩೫ರ ನಿವಾಸಿಗಳಿಗೆ ಲಸಿಕೆ ನೀಡಲಾಗುವುದು.
    ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮನವಿ ಮಾಡಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಸಾರ್ವಜನಿಕರಿಗೆ ಪ್ರವೇಶ ನಿಷೇಧ

    ಭದ್ರಾವತಿ, ಡಿ. ೯: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ಕಛೇರಿಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ಶುಕ್ರವಾರ ಮತದಾನ ನಡೆಯುವ ಸಂಬಂಧ ಮತಗಟ್ಟೆ ಕೇಂದ್ರದಿಂದ ೧೦೦ ಮೀಟರ್ ವಿಸ್ತೀರ್ಣದವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
    ಸ್ಥಳೀಯ ಸಂಸ್ಥೆ ನಗರಸಭೆ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆ ಕೇಂದ್ರ (ಮತಗಟ್ಟೆ ಸಂಖ್ಯೆ ೧೮೦) ತೆರೆಯಲಾಗಿದೆ. ಮತದಾನ ಬೆಳಿಗ್ಗೆ ೮ ರಿಂದ ಸಂಜೆ ೪ರವರೆಗೆ ನಡೆಯಲಿದ್ದು, ಸಾರ್ವಜನಕರು ಸಹಕರಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಸುಬ್ರಮಣ್ಯ ಷಷ್ಠಿ ಉತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೯: ಹಳೇನಗರದ ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
    ಉತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಸುಬ್ರಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಮಹನ್ಯಾಸ ಪೂರ್ವಕ ರುದ್ರಾಭಿಷೇಕ ನಂತರ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ||ಬ್ರ|| ಕೃಷ್ಣಮೂರ್ತಿ ಸೋಮಯಾಜಿಯವರ ನೇತೃತ್ವದಲ್ಲಿ ಮೂಲಮಂತ್ರ ಹೋಮ ನೆರವೇರಿತು. ನಂತರ ರಾಜಬೀದಿ ಉತ್ಸವ, ಪೂರ್ಣಾಹುತಿ, ಬ್ರಹ್ಮಚಾರಿಗಳ ಪೂಜೆ ಮತ್ತು   ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಾಗು ಲಲಿತಾ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.
    ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಜೆ.ಎಂ ಆನಂದರಾವ್, ಸಿ.ಕೆ ರಾಮಣ್ಣ, ಕೃಷ್ಣಮೂರ್ತಿ, ಮಧು, ನಾಗಣ್ಣ  ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ಡಿ.೧೦ರಂದು ಮಾನವ ಹಕ್ಕುಗಳ ದಿನಾಚರಣೆ

    ಭದ್ರಾವತಿ, ಡಿ. ೯: ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ  ಡಿ.೧೦ರಂದು ಬೆಳಿಗ್ಗೆ ೧೦.೩೦ಕ್ಕೆ 'ಮಾನವ ಹಕ್ಕುಗಳ ದಿನಾಚರಣೆ' ಹಮ್ಮಿಕೊಳ್ಳಲಾಗಿದೆ.
       ನಗರದ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ  ಹಾಗು ಶಿವಮೊಗ್ಗ ನೆಹರು ಯುವ ಕೇಂದ್ರ ಮತ್ತು ಹಳೇ ಸೀಗೆಬಾಗಿ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಗೊಳಿಸುವಂತೆ ಜಾನಪದ ಕಲಾವಿದ ತಮಟೆ ಜಗದೀಶ್ ಕೋರಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ ತಾಲೂಕು ಆಡಳಿತ ಭರದ ಸಿದ್ದತೆ : ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಸಭೆ


ಭದ್ರಾವತಿ ವಿಧಾನ ಪರಿಷತ್ ಚುನಾವಣೆ ಮತದಾನ ಶುಕ್ರವಾರ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಚುನಾವಣಾ ನೋಡಲ್ ಅಧಿಕಾರಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಹಾಗು ತಹಸೀಲ್ದಾರ್ ಆರ್. ಪ್ರದೀಪ್ ಚುನಾವಣಾ ತರಬೇತಿ ಅಧಿಕಾರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.
    ಭದ್ರಾವತಿ, ಡಿ. ೯: ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ತಾಲೂಕು ಆಡಳಿತ ಭರದ ಸಿದ್ದತೆ ಕೈಗೊಂಡಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸೇರಿದಂತೆ ತಾಲೂಕಿನ ಒಟ್ಟು ೩೮ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
    ಒಟ್ಟು ೪೭೯ ಮತದಾರರಿದ್ದು, ಈ ಪೈಕಿ ೨೫೪ ಮಹಿಳಾ ಹಾಗು ೨೨೫ ಪುರುಷ ಮತದಾರರಿದ್ದಾರೆ. ಮತದಾನದ ಹಕ್ಕಿನಲ್ಲೂ ಮಹಿಳೆಯರು ಮುಂದೆ ಇರುವುದು ವಿಶೇಷವಾಗಿದೆ. ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಂಡಿರುವುದರಿಂದ ಇನ್ನೂ ಚುನಾವಣೆ ನಡೆದಿಲ್ಲ. ಇತ್ತೀಚೆಗೆ ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾಗಿದ್ದು, ಬಹುತೇಕ ಸದಸ್ಯರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.
    ಆಯಾ ಪಂಚಾಯಿತಿಗಳಲ್ಲಿ ಮತದಾನ ಬೆಳಿಗ್ಗೆ ೮ ಗಂಟೆ ಯಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ನೋಡಲ್ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಗುರುವಾರ ಹಳೇ ತಾಲೂಕು ಕಛೇರಿ ಆವರಣದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ನೋಡಲ್ ಅಧಿಕಾರಿ ಟಿ.ವಿ ಪ್ರಕಾಶ್ ಅಗತ್ಯ ಮಾಹಿತಿಗಳನ್ನು ನೀಡಿದರು. ಉಳಿದಂತೆ ತಹಸೀಲ್ದಾರ್ ಆರ್. ಪ್ರದೀಪ್ ಚುನಾವಣಾ ತರಬೇತಿ ಅಧಿಕಾರಿಗಳೊಂದಿಗೆ ತಮ್ಮ ಕಛೇರಿಯಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಮತದಾನ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.