![](https://blogger.googleusercontent.com/img/b/R29vZ2xl/AVvXsEgzPFcG6xFwfK3jdCmtlVejyTOKof24OmffnIKBdJ5DMOXvKVErHtmvwIalMgLtpMwj7RL5saO241QORVqf94iHdQ2unG4WkhGHJsm8bzJQbu3jCjf-zPR-xtSL2SLgIWzV1k_dop0-afoB/w400-h239-rw/D12-BDVT-725550.jpg)
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನದಲ್ಲಿ ಅಭ್ಯರ್ಥಿ ಎಸ್. ಕುಮಾರ್ ಪರವಾಗಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗು ಪದಾಧಿಕಾರಿಗಳು ಮತಯಾಚನೆ ನಡೆಸಿದರು.
ಭದ್ರಾವತಿ, ಡಿ. ೧೨: ರಾಜ್ಯ ಒಕ್ಕಲಿಗರ ಸಂಘ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಸಾರ್ವತ್ರಿಕ ಚುನಾವಣೆಗಳನ್ನು ಮೀರಿಸುವಂತಹ ವಾತಾವರಣ ಕಂಡು ಬಂದಿತು.
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನದಲ್ಲಿ ಅಭ್ಯರ್ಥಿ ಧರ್ಮೇಶ್ ಸಿರಿಬೈಲು ಪರವಾಗಿ ಬೆಂಬಲಿಗರು ಮತಯಾಚನೆ ನಡೆಸಿದರು.
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೭ ಗಂಟೆಯಿಂದ ಆರಂಭಗೊಂಡ ಮತದಾನ ಮಧ್ಯಾಹ್ನ ೨ ಗಂಟೆವರೆಗೆ ಬಿರುಸಿನಿಂದ ನಡೆದಿದ್ದು, ಶೇ.೭೦ರಷ್ಟು ಮತದಾನ ನಡೆಯಿತು. ಒಟ್ಟು ೯ ಅಭ್ಯರ್ಥಿಗಳು ಕಣದಲ್ಲಿದ್ದು, ೧೩,೪೩೬ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಮತದಾರರ ಸಂಖ್ಯೆ ಅಧಿಕವಾಗಿದೆ. ಭದ್ರಾವತಿಯಲ್ಲಿ ಒಟ್ಟು ೪೦೫೪ ಮಂದಿ ಮತದಾನದ ಹಕ್ಕು ಹೊಂದಿದ್ದು, ಸಂಜೆ ೪ರ ವೇಳೆಗೆ ಬಹುತೇಕ ಮಂದಿ ಮತಚಲಾಯಿಸಿದರು. ಅಭ್ಯರ್ಥಿಗಳ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ತಾಲೂಕು ಒಕ್ಕಲಿಗರ ಸಂಘ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ರವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಪರಿಣಾಮ ತೀವ್ರ ಪೈಪೋಟಿ ಕಂಡು ಬಂದಿತು. ಕುಮಾರ್ ಪರವಾಗಿ ಸಂಘದ ಪದಾಧಿಕಾರಿಗಳು, ಬೆಂಬಲಿಗರು, ಹಿತೈಷಿಗಳು ಮತಗಟ್ಟೆ ಬಳಿ ಅಬ್ಬರದ ಮತಯಾಚನೆ ನಡೆಸಿದರು.
ಈ ನಡುವೆ ತಾಲೂಕು ಒಕ್ಕಲಿಗರ ಸಂಘಕ್ಕೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದ ಅಭ್ಯರ್ಥಿಗಳು ತಮಗೆ ಮತ ಹಾಕುವಂತೆ ಮನವಿ ಮಾಡಿದರು. ಮತ್ತೊಂದೆಡೆ ಬೇರೆ ತಾಲೂಕಿನ ಅಭ್ಯರ್ಥಿಯನ್ನು ಬೆಂಬಲಿಸಲು ಕೆಲವರು ಮುಂದಾಗಿರುವುದು ಕಂಡು ಬಂದಿತು. ತೀರ್ಥಹಳ್ಳಿಯ ಧರ್ಮೇಶ್ ಸಿರಿಬೈಲು ಪರವಾಗಿ ವ್ಯಾಪಕವಾಗಿ ಮತಯಾಚನೆ ನಡೆಸುತ್ತಿರುವುದು ಕಂಡು ಬಂದಿತು.
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಹಲವು ರೀತಿಯ ಕಸರತ್ತುಗಳು ನಡೆದಿರುವುದು ಕಂಡು ಬಂದಿದ್ದು, ಅಲ್ಲದೆ ಹಣ, ಹೆಂಡ ಸೇರಿದಂತೆ ಇನ್ನಿತರ ಅಮಿಷಗಳ ಮೂಲಕ ಮತದಾರರನ್ನು ಸೆಳೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮತಗಟ್ಟೆ ಬಳಿ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಅದರಲ್ಲೂ ಬಾಡೂಟ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪತ್ರಿಕೆ ಜೊತೆ ಮಾತನಾಡಿದ ಅಭ್ಯರ್ಥಿ ಧರ್ಮೇಶ್ ಸಿರಿಬೈಲು, ಈ ಬಾರಿ ಚುನಾವಣೆ ಯಶಸ್ವಿಯಾಗಿ ನಡೆಯುವ ಮೂಲಕ ಎಲ್ಲಾ ಮತಗಟ್ಟೆಗಳಲ್ಲೂ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಮತದಾನವಾಗಿದೆ. ಈ ಮೂಲಕ ತಮ್ಮ ನೆಚ್ಚಿನ ನಿರ್ದೇಶಕನ ಆಯ್ಕೆಯಲ್ಲಿ ಸಮುದಾಯದವರು ಒಲವು ತೋರಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.