Monday, December 27, 2021

ಸುಗ್ರಾಮ ಅಧ್ಯಕ್ಷೆಗೆ ಅಭಿನಂದನೆ

    ಗೌರಮ್ಮ ಎಸ್. ಮಹಾದೇವ
ಭದ್ರಾವತಿ, ಡಿ. ೨೭: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ಎಸ್. ಮಹಾದೇವ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಗೌರಮ್ಮ ಅವರು ಅಧ್ಯಕ್ಷರಾಗಿವುದು ಪಂಚಾಯಿತಿಗೆ ಹೆಮ್ಮೆಯ ವಿಚಾರವಾಗಿದ್ದು, ತಾಲೂಕಿನಾದ್ಯಂತ ಮಹಿಳಾ ಸದಸ್ಯರಿಗೆ ಗ್ರಾಮ ಪಂಚಾಯಿತಿ ಆಡಳಿತದ ಪರಿಕಲ್ಪನೆ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಒದಗಿಸುವ ಜೊತೆಗೆ ಪಂಚಾಯಿತಿ ಆಡಳಿತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಮಾಡಿದ್ದಾರೆ.
    ಗೌರಮ್ಮ ಅವರಿಗೆ  ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕದ ತಾಲೂಕು ಅಧ್ಯಕ್ಷ ಎಸ್. ಮಹಾದೇವ ಹಾಗು ಮೇದಾರ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಹ ಅಭಿನಂದಿಸಿದ್ದಾರೆ.

ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್


ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.  
    ಭದ್ರಾವತಿ, ಡಿ. ೨೭: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.                                    
    ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ  ಸುದೀಪ್ ಕುಮಾರ್  ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಪೌರಾಯುಕ್ತ ಕೆ. ಪರಮೇಶ್ ಕರ್ತವ್ಯ ನಿರ್ವಹಿಸಿದರು.                                  
      ವಿ.ಕದಿರೇಶ್, ಮಣಿ ಎಎನ್ ಎಸ್, ಬಷೀರ್ ಅಹ್ಮದ್, ಲತಾ ಚಂದ್ರಶೇಖರ್,  ಶೃತಿ ವಸಂತ್, ಜಯಶೀಲ ಸುರೇಶ್, ಕೋಟೇಶ್ವರ ರಾವ್, ಸೈಯದ್ ರಿಯಾಜ್, ರೇಖಾ ಪ್ರಕಾಶ್ ಮತ್ತು ಉದಯ್ ಕುಮಾರ್ ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.                            
   ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್  ಮತ್ತು  ಉಪಾಧ್ಯಕ್ಷ ಚನ್ನಪ್ಪ ಅಭಿನಂದಿಸಿದರು.

Sunday, December 26, 2021

ವಿಕಲಚೇತನ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟಗಳು ಸಹಕಾರಿ : ಶೇಖರ್‌ನಾಯ್ಕ್

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಉದ್ಘಾಟಿಸಿದರು.  
    ಭದ್ರಾವತಿ, ಡಿ. ೨೬: ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾಕೂಟ ಆಯೋಜನೆಯಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗಿದ್ದು, ಭವಿಷ್ಯದಲ್ಲಿ ಸಾವಿರಾರರು ವಿಕಲಚೇತನ ಪ್ರತಿಭೆಗಳು ಹೊರಹೊಮ್ಮುವಂತಾಗಬೇಕೆಂದು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಹೇಳಿದರು.
    ಅವರು ಭಾನುವಾರ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಸಹಕಾರದೊಂದಿಗೆ ತರಬೇತಿ ಹಾಗು ಕ್ರೀಡಾಕೂಟ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಧ ವಿಕಲಚೇತನರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕೆಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಡಿಆರ್‌ಟಿ ಬೆಂಗಳೂರು ತಂಡದ ಉಪಾಧ್ಯಕ್ಷೆ ಕವಿತಾ, ಸ್ನೇಹ ದೀಪಾ ತಂಡ ವ್ಯವಸ್ಥಾಪಕ ಮಹೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್, ಅತಿಥಿ ಉಪನ್ಯಾಸಕಿ ಸೃಷ್ಟಿ ಮತ್ತು ಬಿಆರ್‌ಸಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಿವಮೊಗ್ಗ ಶಾರದದೇವಿ ಅಂಧರ ವಿಕಾಸ ಕೇಂದ್ರದ ದೈಹಿಕ ಶಿಕ್ಷಕ ಸುರೇಶ್ ಮತ್ತು ಚಿಕ್ಕಮಗಳೂರು ಆಶಾಕಿರಣದ ದೈಹಿಕ ಶಿಕ್ಷಕ ಮಂಜುನಾಥ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.

ಅಧಿವೇಶನದಲ್ಲಿ ವಿನಾಕಾರಣ ಕಾಲಹರಣ : ರಾಜ್ಯದ ಜನತೆಗೆ ದ್ರೋಹ

ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ


ಭದ್ರಾವತಿ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು.

    ಭದ್ರಾವತಿ, ಡಿ. ೨೬: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಜನರ ಸಮಸ್ಯೆಗಳಿಗೆ ಚರ್ಚಿಸದೆ ವಿನಾಕಾರಣ ಕಾಲಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ನಗರದ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
    ರಾಜ್ಯದಲ್ಲಿ ಕೊರೋನಾ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ರೈತರು, ಕಾರ್ಮಿಕರು, ವ್ಯಾಪರಸ್ಥರು ಸೇರಿದಂತೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವುಗಳ ಕುರಿತು ಸದನದಲ್ಲಿ ಚರ್ಚಿಸದೆ ಕಾಲಹರಣ ಮಾಡಲಾಗಿದೆ. ಸರ್ಕಾರ ಮೊದಲು ಜನರ ಸಂಕಷ್ಟದಲ್ಲಿ ಪೂರಕವಾಗಿ ಸ್ಪಂದಿಸಬೇಕೆಂದರು.
ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿಹೊಂದಿರುವುದರ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ನಡುವೆಯೂ ೩ ಬಾರಿ ಶಾಸಕರಾಗಿ ಆಯ್ಕೆಮಾಡಿರುವ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಇದೆ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸಮಿತಿ ಪೂರಕವಾಗಿ ಸ್ಪಂದಿಸುವ ಮೂಲಕ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಶಾಸಕರು ನಮ್ಮ ಬಹಳಷ್ಟು ಹೋರಾಟಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಹೋರಾಟ ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಮುಖರಾದ ಎಸ್.ಎಸ್ ಭೈರಪ್ಪ, ಶ್ರೀನಿವಾಸ್, ಕಟ್ಟಡ ಕಾರ್ಮಿಕರ ಸಂಘದ ತಾಂತ್ರಿಕ ಸಲಹೆಗಾರ ಮನೋಹರ್, ಹಿರಿಯ ನಾಗರೀಕರಾದ ದೊಡ್ಡಯ್ಯ, ವೆಂಕಟೇಶ್, ಲಾರ್ಜರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಅಭಿಲಾಷ್ ನಿರೂಪಿಸಿದರು.

ಮರಳಿ ಮಾತೃ ಧರ್ಮಕ್ಕೆ ಸೇರ್ಪಡೆಗೊಂಡ ೯ ಜನರ ಕುಟುಂಬ

ಭದ್ರಾವತಿ ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ಭದ್ರಾವತಿ, ಡಿ. ೨೬:  ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ತಾಲೂಕಿನ ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್ ಕುಟುಂಬದ ಪತ್ನಿ ಜಯಮ್ಮ, ಕುಟುಂಬ ಸದಸ್ಯರಾದ ಪ್ರಭಾಕರನ್, ಲಲಿತಾ ಪ್ರಭಾಕರನ್ ಮತ್ತು ಇವರ ಮಕ್ಕಳಾದ ಭರತ್ ಕುಮಾರ್, ಭಾವನಾ ಹಾಗೂ ದ್ವಿತೀಯ ಪುತ್ರ ಪ್ರಕಾಶ ಮತ್ತು ಈತನ ಪತ್ನಿ ಶ್ವೇತಾ ಪ್ರಕಾಶ್ ಹಾಗೂ ಇವರ ಪುತ್ರಿ ಪೃಥ್ವಿ ಸೇರಿ ೯ ಜನರು ವಿಶ್ವ ಹಿಂದೂ ಪರಿಷದ್, ಬಜರಂಗದಳ ನೇತೃತ್ವದಲ್ಲಿ ಜನ್ನಾಪುರದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹಾಗು ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.
    ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಯಂ ಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರಮುಖರು ಕುಟುಂಬ ಸದಸ್ಯರನ್ನು ಅಭಿನಂದಿಸುವ ಮೂಲಕ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.  
    ವಿಶ್ವಹಿಂದೂ ಪರಿಷದ್ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್. ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಸ್. ನಾರಾಯಣ್, ಪಿ ಮಂಜುನಾಥ್ ರಾವ್. ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ,  ಶಿವಮೂರ್ತಿ. ಮುತ್ತುರಾಮಲಿಂಗಂ, ಯಶೋದ ವೀರಭದ್ರಪ್ಪ. ಪಂಚ ರತ್ನಮ್ಮ, ಕೆ.ಆರ್. ವೇದಾವತಿ, ಗಾಯತ್ರಿ, ಆರ್.ಎಸ್ ಶೋಭಾ, ಮಂಜುಳಾ, ಅನ್ನಪೂರ್ಣ ಸತೀಶ್, ಹೇಮಾವತಿ, ಪರಿವಾರದ ಪ್ರಮುಖರಾದ ಬಾ.ನಿ ಮಹದೇವ, ಕುಲಕರ್ಣಿ, ಕೃಷ್ಣಮೂರ್ತಿ, ಚಂದ್ರಪ್ಪ, ಸುಬ್ರಮಣಿ, ಸುರೇಶ್ ಬಾಬು,  ಬಜರಂಗದಳದ ರಾಘವನ್ ವಡಿವೇಲು, ದಿನೇಶ್, ರವಿಕುಮಾರ್, ವಸಂತಕುಮಾರ್, ಬೆಟ್ಟೇಗೌಡ ಮತ್ತು ಶ್ರೀರಾಮ ಸೇನೆಯ ಉಮೇಶ್ ಗೌಡ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.  


Saturday, December 25, 2021

ಕರ್ನಾಟಕ ರತ್ನ ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ವಿಶ್ವ ಮಾನವ ಬಿರುದು

ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಾರ್ವಜನಿಕರಿಗೆ ಪ್ರಶಸ್ತಿ ಸಮರ್ಪಣೆ

ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
    ಭದ್ರಾವತಿ, ಡಿ. ೨೫: ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
    ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಎಲ್ಲಾ ಜಾತಿ-ಮತದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ಆಶ್ರಯ, ಶಿಕ್ಷಣವನ್ನು ಲಕ್ಷಾಂತರ ಜನಕ್ಕೆ ನೀಡುವ ಮೂಲಕ  'ಜನ ಸೇವೆಯೇ ಜನಾರ್ಧನ ಸೇವೆ' ಎಂಬಂತೆ ಬಸವಣ್ಣನವರ ದಾರಿಯನ್ನೇ ಎತ್ತಿ ಹಿಡಿದ ಶ್ರೀಗಳ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ. ಅಲ್ಲದೆ ಶ್ರೀಗಳ ಸೇವಾ ಕಾರ್ಯಗಳು ಪ್ರಪಂಚದ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿವೆ. ಈ ಹಿನ್ನಲೆಯಲ್ಲಿ ಶ್ರೀಗಳನ್ನು ಗೌರವ ಪೂರ್ವಕವಾಗಿ ಸ್ಮರಣೆ ಮಾಡಿಕೊಳ್ಳುವ ಮೂಲಕ ಪ್ರಪಂಚದ ನಾಗರೀಕರ ಪರವಾಗಿ ವಿಶ್ವ ಮಾನವ ಬಿರುದನ್ನು ನೀಡಿ ಪ್ರಶಸ್ತಿಯನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹಾಗು ವಿವಿಧ ಸಮಾಜಗಳ ಅಧ್ಯಕ್ಷರು, ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 

ಮತಾಂತರ ಕಾಯ್ದೆ ಭೀತಿ ನಡುವೆಯೂ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

ಭದ್ರಾವತಿ ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಮುಂಭಾಗ ನಿರ್ಮಿಸಲಾಗಿರುವ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕ ಗೋದೋಲಿ.
    ಭದ್ರಾವತಿ, ಡಿ. ೨೫: ನಗರದೆಲ್ಲೆಡೆ ಏಸುಕ್ರಿಸ್ತನ ಜನ್ಮದಿನ ಶನಿವಾರ ಕ್ರೈಸ್ತ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
    ರಾಜ್ಯದಲ್ಲಿ ಒಂದೆಡೆ ಮತಾಂತರ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಮತಾಂತರ ಕಾಯ್ದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಆದರೆ ವಿಧಾನಪರಿಷತ್‌ನಲ್ಲಿ ಅನುಮೋದನೆ ಬಾಕಿ ಉಳಿದಿದೆ. ಆತಂಕದ ನಡುವೆಯೂ ಏಸುಕ್ರಿಸ್ತನ ಜನ್ಮದಿನ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ಶಾಂತಿ ಸಂದೇಶ ಸಾರಿದರು. ಶುಕ್ರವಾರ ರಾತ್ರಿಯೇ ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳ ಬಳಿ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕವಾದ ಗೋದೋಲಿ ನಿರ್ಮಾಣ ಮಾಡಿರುವುದು ಕಂಡು ಬಂದಿತು. ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಕೆಲವು ಚರ್ಚ್‌ಗಳಲ್ಲಿ ಒಳಭಾಗದಲ್ಲಿ ಗೋದೋಲಿ ನಿರ್ಮಾಣ ಮಾಡಿದರೆ, ಬಹುತೇಕ ಚರ್ಚ್‌ಗಳಲ್ಲಿ ಹೊರಭಾಗದಲ್ಲಿ ಗೋದೋಲಿಗಳನ್ನು ನಿರ್ಮಾಣ ಮಾಡಲಾಗಿತ್ತು.
    ಶನಿವಾರ ಬೆಳಿಗ್ಗೆ ಸಹ ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅನ್ಯಧರ್ಮಿಯರೊಂದಿಗೆ ಸೌಹಾರ್ದತೆಯಿಂದ ಹಬ್ಬದ ಸಂಭ್ರಮ ಹಂಚಿಕೊಂಡರು.