Tuesday, December 28, 2021

ಕನ್ನಡಿಗರ ಭಾವನೆಗಳಿಗೆ ಧಕ್ಕೆ : ಶಿವಸೇನೆ, ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭದ್ರಾವತಿಯಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೮: ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ಶಿವಸೇನೆ ಹಾಗು ಎಂಇಎಸ್ ಪುಂಡರು ಪ್ರತಿ ಬಾರಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕನ್ನಡ ನಾಡು-ನುಡಿ ವಿಚಾರದಲ್ಲಿ ಕನ್ನಡಿಗರಿಗೆ ಅವಮಾನ ಮಾಡುವ ಮೂಲಕ ಪುಂಡಾಟಿಕೆ ನಡೆಸುತ್ತಿರುವುದು ಸರಿಯಲ್ಲ. ಅಲ್ಲದೆ ಇದುವರೆಗೂ ಯಾವುದೇ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ತಕ್ಷಣ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಎಚ್. ರಾಮಕೃಷ್ಣ, ಪ್ರಮುಖರಾದ ಜವರಪ್ಪ, ರಮೇಶ್, ಎನ್. ಮಲ್ಲಿಕಾರ್ಜುನ, ಆರ್. ದಿಲೀಪ್, ಸುರೇಶ್ ಮತ್ತು ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜಲಕ್ಷ್ಮಿ ನಿಧನ

ರಾಜಲಕ್ಷ್ಮಿ
ಭದ್ರಾವತಿ ಡಿ ೨೮: ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ರಾಜಲಕ್ಷ್ಮಿ(೯೦) ಸೋಮವಾರ ರಾತ್ರಿ ನಿಧನ ಹೊಂದಿದರು.
ರಾಜಲಕ್ಷ್ಮೀ ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಚಿನ್ನಬೆಳ್ಳಿ ವರ್ತಕರು ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Monday, December 27, 2021

ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಡಿ. ೨೭: ದಿವಂಗತ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಇವರ ಆದರ್ಶತನ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಸ್ಮರಿಸಿದರು.
    ಅವರು ಸೋಮವಾರ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ, ಜೊತೆಗೆ ಸೇವಾ ಮನೋಭಾವನೆ ಹೊಂದಿದ್ದ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಶ್ಲಾಘನೀಯ ಎಂದರು.
    ಚಿತ್ರದುರ್ಗ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ರೈತ ಮುಖಂಡ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾನಕಿ ನಿಧನ

ಜಾನಕಿ
ಭದ್ರಾವತಿ, ಡಿ. ೨೭:  ಹಳೇನಗರದ ಭೂತನಗುಡಿ ನಿವಾಸಿ ಜಾನಕಿ(೬೭) ಭಾನುವಾರ ನಿಧನ ಹೊಂದಿದರು.
ಪತಿ, ಓರ್ವ ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸುಗ್ರಾಮ ಅಧ್ಯಕ್ಷೆಗೆ ಅಭಿನಂದನೆ

    ಗೌರಮ್ಮ ಎಸ್. ಮಹಾದೇವ
ಭದ್ರಾವತಿ, ಡಿ. ೨೭: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ಎಸ್. ಮಹಾದೇವ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಗೌರಮ್ಮ ಅವರು ಅಧ್ಯಕ್ಷರಾಗಿವುದು ಪಂಚಾಯಿತಿಗೆ ಹೆಮ್ಮೆಯ ವಿಚಾರವಾಗಿದ್ದು, ತಾಲೂಕಿನಾದ್ಯಂತ ಮಹಿಳಾ ಸದಸ್ಯರಿಗೆ ಗ್ರಾಮ ಪಂಚಾಯಿತಿ ಆಡಳಿತದ ಪರಿಕಲ್ಪನೆ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಒದಗಿಸುವ ಜೊತೆಗೆ ಪಂಚಾಯಿತಿ ಆಡಳಿತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಮಾಡಿದ್ದಾರೆ.
    ಗೌರಮ್ಮ ಅವರಿಗೆ  ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕದ ತಾಲೂಕು ಅಧ್ಯಕ್ಷ ಎಸ್. ಮಹಾದೇವ ಹಾಗು ಮೇದಾರ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಹ ಅಭಿನಂದಿಸಿದ್ದಾರೆ.

ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್


ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.  
    ಭದ್ರಾವತಿ, ಡಿ. ೨೭: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.                                    
    ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ  ಸುದೀಪ್ ಕುಮಾರ್  ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಪೌರಾಯುಕ್ತ ಕೆ. ಪರಮೇಶ್ ಕರ್ತವ್ಯ ನಿರ್ವಹಿಸಿದರು.                                  
      ವಿ.ಕದಿರೇಶ್, ಮಣಿ ಎಎನ್ ಎಸ್, ಬಷೀರ್ ಅಹ್ಮದ್, ಲತಾ ಚಂದ್ರಶೇಖರ್,  ಶೃತಿ ವಸಂತ್, ಜಯಶೀಲ ಸುರೇಶ್, ಕೋಟೇಶ್ವರ ರಾವ್, ಸೈಯದ್ ರಿಯಾಜ್, ರೇಖಾ ಪ್ರಕಾಶ್ ಮತ್ತು ಉದಯ್ ಕುಮಾರ್ ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.                            
   ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್  ಮತ್ತು  ಉಪಾಧ್ಯಕ್ಷ ಚನ್ನಪ್ಪ ಅಭಿನಂದಿಸಿದರು.

Sunday, December 26, 2021

ವಿಕಲಚೇತನ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟಗಳು ಸಹಕಾರಿ : ಶೇಖರ್‌ನಾಯ್ಕ್

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಉದ್ಘಾಟಿಸಿದರು.  
    ಭದ್ರಾವತಿ, ಡಿ. ೨೬: ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾಕೂಟ ಆಯೋಜನೆಯಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗಿದ್ದು, ಭವಿಷ್ಯದಲ್ಲಿ ಸಾವಿರಾರರು ವಿಕಲಚೇತನ ಪ್ರತಿಭೆಗಳು ಹೊರಹೊಮ್ಮುವಂತಾಗಬೇಕೆಂದು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಹೇಳಿದರು.
    ಅವರು ಭಾನುವಾರ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಸಹಕಾರದೊಂದಿಗೆ ತರಬೇತಿ ಹಾಗು ಕ್ರೀಡಾಕೂಟ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಧ ವಿಕಲಚೇತನರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕೆಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಡಿಆರ್‌ಟಿ ಬೆಂಗಳೂರು ತಂಡದ ಉಪಾಧ್ಯಕ್ಷೆ ಕವಿತಾ, ಸ್ನೇಹ ದೀಪಾ ತಂಡ ವ್ಯವಸ್ಥಾಪಕ ಮಹೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್, ಅತಿಥಿ ಉಪನ್ಯಾಸಕಿ ಸೃಷ್ಟಿ ಮತ್ತು ಬಿಆರ್‌ಸಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಿವಮೊಗ್ಗ ಶಾರದದೇವಿ ಅಂಧರ ವಿಕಾಸ ಕೇಂದ್ರದ ದೈಹಿಕ ಶಿಕ್ಷಕ ಸುರೇಶ್ ಮತ್ತು ಚಿಕ್ಕಮಗಳೂರು ಆಶಾಕಿರಣದ ದೈಹಿಕ ಶಿಕ್ಷಕ ಮಂಜುನಾಥ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.