Wednesday, December 29, 2021

ಜಯಕರ್ನಾಟಕ ಸಂಘಟನೆ ವತಿಯಿಂದ ಕುವೆಂಪು ಜನ್ಮದಿನ ಆಚರಣೆ

ಡಿ.೩೧ರ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ


ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಸಂಘಟನೆ ಪ್ರಮುಖರು ನಂತರ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದರು.
    ಭದ್ರಾವತಿ: ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಬುಧವಾರ ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಿಸಲಾಯಿತು.
    ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.
    ಡಾ. ದೀಪಕ್ ಮಾತನಾಡಿ, ಸಂಘಟನೆ ಸದಾ ನಾಡು-ನುಡಿ ಹೋರಾಟಕ್ಕೆ ಬದ್ಧವಾಗಿದೆ. ಡಿ.೩೧ ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಸಂಘಟನೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ. ಆದರೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
    ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಪ್ರಧಾನ ಕಾರ್ಯದರ್ಶಿ ನಾಸಿರ್, ಜಿಲ್ಲಾ ಪ್ರಧಾನ ಸಂಚಾಲಕ ದಿವ್ಯರಾಜ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ನಗರ ಅಧ್ಯಕ್ಷ ಸಿಕಂದರ್, ಹೊಳೆಹೊನ್ನೂರು ಅಧ್ಯಕ್ಷ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾರದ ಕಾರಂತ್ ನಿಧನ

ಶಾರದ ಕಾರಂತ್
    ಭದ್ರಾವತಿ, ಡಿ. ೨೯: ನಗರಸಭೆ ವಾರ್ಡ್ ನಂ.೨, ಬಿ.ಎಚ್ ರಸ್ತೆ ನಿವಾಸಿ ಶಾರದ ಕಾರಂತ್(೬೮) ಬುಧವಾರ ನಿಧನ ಹೊಂದಿದರು.
    ಶಾರದ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಿಎಸ್‌ಎನ್‌ಎಲ್ ಮಳಿಗೆಯ ಗಣೇಶ್ ಕಾರಂತ್ ಸೇರಿದಂತೆ ೩ ಗಂಡು ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ನಗರದ ಅನೇಕ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸರ್ಕಾರ ಸರ್ವರ್ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಿ

ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ


ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಬುಧವಾರ ಭದ್ರಾವತಿಯಲ್ಲಿ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಭದ್ರಾವತಿ, ಡಿ. ೨೯: ಪಡಿತರ ವಿತರಕರಿಗೆ ಸರ್ವರ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಸರ್ವರ್ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು.
    ಅವರು ಬುಧವಾರ ನಗರದ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಸರ್ಕಾರ ಮೊದಲು ಸರ್ವರ್ ಸಮಸ್ಯೆ ಬಗೆಹರಿಸಬೇಕು. ಸರ್ವರ್ ಸಮಸ್ಯೆಯಿಂದಾಗಿ ಕೂಲಿಗಾರರು, ಬಡ ಕಾರ್ಮಿಕರು ಹಾಗು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ೪.೭೦ ಕೋಟಿ ಜನರಿಗೆ ಪಡಿತರ ವಿತರಿಸಲಾಗುತ್ತಿದೆ. ದೊಡ್ಡಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಬೆಂಗಳೂರು, ಗುಲ್ಬರ್ಗ ಮತ್ತು ಮೈಸೂರು-ಬೆಳಗಾವಿ ಸೇರಿ ಒಟ್ಟು ೩ ಕಡೆ ಮಾತ್ರ ಸರ್ವರ್ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರ್ವರ್ ಕೇಂದ್ರಗಳನ್ನು ತೆರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
    ಪಡಿತರ ವಿತರಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  ತಾಂತ್ರಿಕ ಸಮಸ್ಯೆಗಳಿಗೆ ಇಲಾಖೆಗಳ ಅಧಿಕಾರಿಗಳು ವಿತರಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ವಿತರಕರನ್ನು ಹೊಣೆಗಾರರನ್ನಾಗಿ ಮಾಡದಿರುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಹ ನೀಡಲಾಗಿದೆ ಎಂದರು.
    ರಾಜ್ಯದಲ್ಲಿ ವಿತರಕರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ನಿಗದಿತ ಸಮಯಕ್ಕೆ ಕಮಿಷನ್ ಹಣ ಬರುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಈ ರೀತಿ ಸಮಸ್ಯೆ ಕಂಡು ಬರುತ್ತಿರಲಿಲ್ಲ. ಈಗಿನ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಿಂಗಳ ಆರಂಭದಲ್ಲಿಯೇ ಕಮಿಷನ್ ಹಣ ನೀಡುವ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪಡಿತರ ವಿತರಕರ ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ರಾಜು, ಯೋಗೇಶ್‌ನಾಯ್ಕ, ಕುಮಾರ್, ಮುಖಂಡರಾದ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, December 28, 2021

ಇ-ಶ್ರಮ್ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಾಣಿಗೆ ಚಾಲನೆ

ಸೌಲಭ್ಯಪಡೆದುಕೊಳ್ಳಲು ಎಲ್ಲಾ ರೀತಿಯ ಸಹಕಾರ : ಮುಮ್ತಾಜ್ ಬೇಗಂ


ಭದ್ರಾವತಿ ಹಳೇನಗರದ ಸವಿತಾ ಸಮಾಜದಲ್ಲಿ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ ನೀಡಿದ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೨೮: ಇ-ಶ್ರಮ್ ಯೋಜನೆಯಡಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಹೇಳಿದರು.
    ಅವರು ಮಂಗಳವಾರ ಹಳೇನಗರದ ಸವಿತಾ ಸಮಾಜದಲ್ಲಿ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ ನೀಡಿ ಮಾತನಾಡಿದರು.
    ಇ-ಶ್ರಮ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಹಕಾರಿಯಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.
    ಕರ್ನಾಟಕ ಸ್ಟೇಟ್ ಕನ್ಸಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಹಾಗು ಸರ್.ಎಂ ವಿಶ್ವೇಶ್ವರಾಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಬಾಬು ಯೋಜನೆಯ ಮಹತ್ವ ಕುರಿತು ವಿವರಿಸಿದರು.
    ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಸವಿತಾ ಸಮಾಜದ ಪದಾಧಿಕಾರಿಗಳು ಹಾಗು ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್ ಕಿರಣ್‌ಕುಮಾರ್‌ಗೆ ಅದ್ದೂರಿ ಸ್ವಾಗತ

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಡಿ. ೨೯ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ, ಅಜಾದಿ ಕಾ ಅಮೃತ ಮಹೋತ್ಸವ, ವಿಶ್ವ ಮಾನವ ದಿನಾಚರಣೆ, ರಾಜ್ಯಮಟ್ಟದ 'ಎಚ್.ಎನ್ ಪ್ರಶಸ್ತಿ' ಪ್ರಧಾನ ಸಮಾರಂಭದ ಸಮ್ಮೇಳನ ಸರ್ವಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‌ಕುಮಾರ್ ಅವರನ್ನು ಮಂಗಳವಾರ ಸಂಜೆ ಭದ್ರಾವತಿ ಬೈಪಾಸ್ ರಸ್ತೆ ಬಾರಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.  
    ಭದ್ರಾವತಿ, ಡಿ. ೨೮: ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಡಿ. ೨೯ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ, ಅಜಾದಿ ಕಾ ಅಮೃತ ಮಹೋತ್ಸವ, ವಿಶ್ವ ಮಾನವ ದಿನಾಚರಣೆ, ರಾಜ್ಯಮಟ್ಟದ 'ಎಚ್.ಎನ್ ಪ್ರಶಸ್ತಿ' ಪ್ರಧಾನ ಸಮಾರಂಭದ ಸಮ್ಮೇಳನ ಸರ್ವಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‌ಕುಮಾರ್ ಅವರನ್ನು ಮಂಗಳವಾರ ಸಂಜೆ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪದಾಧಿಕಾರಿಗಳು, ಸದಸ್ಯರು ಹಾಗು ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಬೆಂಗಳೂರು-ತುಮಕೂರು ಮಾರ್ಗವಾಗಿ ಆಗಮಿಸಿದ ಡಾ.ಎ.ಎಸ್ ಕಿರಿಣ್‌ಕುಮಾರ್ ಹಾಗು ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಸೇರಿದಂತೆ ಇನ್ನಿತರರನ್ನು ನಗರದ ಬೈಪಾಸ್ ರಸ್ತೆ ಬಾರಂದೂರಿನಲ್ಲಿ ಸನ್ಮಾನಿಸಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ ಸ್ವಾಮಿ, ಜಿಲ್ಲಾಧ್ಯಕ್ಷ ರಾಜೇಂದ್ರ ಮತ್ತು ತಾಲೂಕು ಅಧ್ಯಕ್ಷ ಸಿ. ಜಯಪ್ಪ ಅಭಿನಂದನಾ ನುಡಿಗಳನ್ನಾಡಿದರು.
    ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಾಲೂಕು ಉಪಾಧ್ಯಕ್ಷರಾದ ಎಸ್. ಉಮಾ, ಜಿ. ರಾಜು, ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಸದಸ್ಯರಾದ ಈಶ್ವರಪ್ಪ, ಲೋಕೇಶ್ ಮಾಳೇನಹಳ್ಳಿ, ಸಿ. ರಾಮಾಚಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡಿಗರ ಭಾವನೆಗಳಿಗೆ ಧಕ್ಕೆ : ಶಿವಸೇನೆ, ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭದ್ರಾವತಿಯಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೮: ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ಶಿವಸೇನೆ ಹಾಗು ಎಂಇಎಸ್ ಪುಂಡರು ಪ್ರತಿ ಬಾರಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕನ್ನಡ ನಾಡು-ನುಡಿ ವಿಚಾರದಲ್ಲಿ ಕನ್ನಡಿಗರಿಗೆ ಅವಮಾನ ಮಾಡುವ ಮೂಲಕ ಪುಂಡಾಟಿಕೆ ನಡೆಸುತ್ತಿರುವುದು ಸರಿಯಲ್ಲ. ಅಲ್ಲದೆ ಇದುವರೆಗೂ ಯಾವುದೇ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ತಕ್ಷಣ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಎಚ್. ರಾಮಕೃಷ್ಣ, ಪ್ರಮುಖರಾದ ಜವರಪ್ಪ, ರಮೇಶ್, ಎನ್. ಮಲ್ಲಿಕಾರ್ಜುನ, ಆರ್. ದಿಲೀಪ್, ಸುರೇಶ್ ಮತ್ತು ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜಲಕ್ಷ್ಮಿ ನಿಧನ

ರಾಜಲಕ್ಷ್ಮಿ
ಭದ್ರಾವತಿ ಡಿ ೨೮: ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ರಾಜಲಕ್ಷ್ಮಿ(೯೦) ಸೋಮವಾರ ರಾತ್ರಿ ನಿಧನ ಹೊಂದಿದರು.
ರಾಜಲಕ್ಷ್ಮೀ ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಚಿನ್ನಬೆಳ್ಳಿ ವರ್ತಕರು ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.