ಅಧಿಕಾರಿಗಳು, ಸಿಬ್ಬಂದಿಗಳ ಸ್ವಂತ ಹಣದಲ್ಲಿಯೇ ಕಛೇರಿ, ಸಭಾಂಗಣ ನವೀಕರಣ..!
![](https://blogger.googleusercontent.com/img/b/R29vZ2xl/AVvXsEiaI4_yC3W4AhQXG_zO_vrX2nMvmWDiZ15cIStKtrsd-mjdJb0XV6TbIbzvStb2wsK2vA8-flrxlqWtDXwgkQhTnI8OBI1s4MLdp40QhnBUKUt6sWRiOxKOIU2YklSqa8AlzB9l_VXT3dex/w400-h186-rw/D1-BDVT2-709835.jpg)
ಭದ್ರಾವತಿ ತಾಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.
* ಅನಂತಕುಮಾರ್
ಭದ್ರಾವತಿ, ಜ. ೧: ತಾಲೂಕಿನ ಶಕ್ತಿ ಕೇಂದ್ರ ಮಿನಿ ವಿಧಾನಸೌಧ ಹೊಸ ವರ್ಷಕ್ಕೆ ಹೊಸತನದೊಂದಿಗೆ ಕಂಗೊಳಿಸುತ್ತಿದ್ದು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಪರಿಶ್ರಮ ಇದೀಗ ಮಾದರಿಯಾಗಿ ಪರಿಣಮಿಸಿದೆ.
ನಾವು ಕರ್ತವ್ಯ ನಿರ್ವಹಿಸುವ ಸ್ಥಳ ಸಹ ಇತರರಿಗೆ ಮಾದರಿಯಾಗಬೇಕು. ತಮ್ಮ ಸೇವಾ ಅವಧಿಯಲ್ಲಿ ಒಂದಿಷ್ಟು ಏನಾದರೂ ಕೊಡುಗೆ ನೀಡಬೇಕೆಂಬ ಆಶಯ ಕೆಲವು ವ್ಯಕ್ತಿಗಳು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಪ್ರಸ್ತುತ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್. ಪ್ರದೀಪ್ ಅವರು ಹೊಂದಿದ್ದಾರೆ. ಈ ಕಾರಣದಿಂದಲ್ಲಿಯೇ ಕೆಲವೇ ಕೆಲವು ತಿಂಗಳಲ್ಲಿ ತಾಲೂಕು ಕಛೇರಿ ಚಿತ್ರಣವೇ ಬದಲಾಗಿದೆ.
ತಾಲೂಕಿನಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ೧೧೦ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೮ ಜನ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ೪೦ ಜನ ಗ್ರಾಮ ಸಹಾಯಕರು, ೩ ಜನ ರಾಜಸ್ವ ನಿರೀಕ್ಷಕರು, ಉಳಿದಂತೆ ತಹಸೀಲ್ದಾರ್, ತಹಸೀಲ್ದಾರ್ ಗ್ರೇಡ್-೧, ಉಪತಹಸೀಲ್ದಾರ್, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತರು ಹಾಗು 'ಡಿ' ದರ್ಜೆ ನೌಕರರು ಸೇರಿ ಒಟ್ಟು ೪೫ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಒಟ್ಟಾಗಿ ತಮ್ಮ ಸ್ವಂತ ಹಣದಲ್ಲಿ ಹಾಗು ಸರ್ಕಾರದ ಇತರೆ ಇಲಾಖೆಗಳ ನೆರವು ಹಾಗು ದಾನಿಗಳ ಸಹಕಾರದೊಂದಿಗೆ ಪ್ರಥಮ ಹಂತವಾಗಿ ತಹಸೀಲ್ದಾರ್ ಕಛೇರಿ ಮಿನಿವಿಧಾನ ನವೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ.
ಭದ್ರಾವತಿ ಮಿನಿವಿಧಾನಸೌಧದ ತಾಲೂಕು ಕಛೇರಿ ಸಭಾಂಗಣ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ವಂತ ಹಣದಲ್ಲಿ ನವೀಕರಣಗೊಂಡಿರುವುದು.
ಇದೀಗ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ತಹಸೀಲ್ದಾರ್‌ರವರ ಕಛೇರಿ ಹಾಗು ಸಭಾಂಗಣ ನವೀಕರಣಗೊಳಿಸಲಾಗಿದ್ದು, ಹೊಸದಾಗಿ ಅತ್ಯಾಧುನಿಕ ಪೀಠೋಪಕರಣಗಳು, ಸಿ.ಸಿ ಕ್ಯಾಮೆರಾ, ಮೈಕ್, ಸ್ಪೀಕರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಬಣ್ಣ ಲೇಪನ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳ ಜೊತೆಗೆ ಹೊರಭಾಗದಲ್ಲಿ ಹೊಸದಾಗಿ ಕಛೇರಿ ನಾಮಫಲಕ ಅಳವಡಿಸಲಾಗಿದೆ. ನವೀಕರಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಶನಿವಾರ ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್‌ಗಳಾದ ಅರಸು, ನಾರಾಯಣಗೌಡ, ಮಂಜಾನಾಯ್ಕ, ರಾಜಸ್ವ ನಿರೀಕ್ಷಕ ಪ್ರಶಾಂತ್, ರಾಧಕೃಷ್ಣಭಟ್ ಸೇರಿದಂತೆ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಂಭ್ರಮ ತಮ್ಮ ಸಂಭ್ರಮ ಹಂಚಿಕೊಂಡರು.
ಈಗಾಗಲೇ ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಸುಮಾರು ೫೦ ಲಕ್ಷ ರು. ಹಣದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಅಲ್ಲದೆ ದಾನಿಗಳ ನೆರವಿನಿಂದ ಹೊರಭಾಗದಲ್ಲಿ ಧ್ವಜಾ ಸ್ತಂಭ ಹಾಗು ಮುಖ್ಯದ್ವಾರದ ಎರಡು ಬದಿ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಅಭಿವೃದ್ದಿಗೆ ಪೂರಕವಾದ ಸಂಪನ್ಮೂಲಗಳನ್ನು ಸರ್ಕಾರದ ಅನುದಾನ ನಿರೀಕ್ಷಿಸದೆ ಕ್ರೋಢಿಕರಿಸಿಕೊಂಡು ಮಿನಿವಿಧಾನಸೌಧವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯ ಇತರ ಇಲಾಖೆಗಳಿಗೆ ಸಹ ಮಾದರಿಯಾಗಿ ಕಂಡು ಬರುತ್ತಿದೆ.
ನಾನು ತಹಸೀಲ್ದಾರ್ ಆಗಿ ವರ್ಗಾವಣೆಯಾಗಿ ಬರುವವರೆಗೂ ಮಿನಿವಿಧಾನಸೌಧದ ಮುಂಭಾಗ ಧ್ವಜಾಸ್ತಂಭ ಇರಲಿಲ್ಲ. ಇದನ್ನು ಮನಗಂಡು ಕಂದಾಯ ಇಲಾಖೆಯಿಂದ ನೆರವು ಪಡೆದುಕೊಳ್ಳುತ್ತಿರುವ ಸರ್ಕಾರದ ಇತರ ಇಲಾಖೆಗಳ ಹಾಗು ದಾನಿಗಳ ಸಹಕಾರದಿಂದ ಧ್ವಜಾಸ್ತಂಭ ನಿರ್ಮಾಣ ಮಾಡಲಾಯಿತು. ಇದರಿಂದ ಸ್ಪೂರ್ತಿಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಸ್ವಂತ ಹಣದಲ್ಲಿ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ಕಛೇರಿ ಹಾಗು ಸಭಾಂಗಣ ಆಧುನೀಕರಣಗೊಳಿಸಲಾಗಿದೆ. ಒಟ್ಟಾರೆ ಸುಮಾರು ೩೫ ಲಕ್ಷ ರು. ಗಳಷ್ಟು ಹಣ ಸರ್ಕಾರಕ್ಕೆ ಉಳಿತಾಯವಾಗಿದೆ. ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಸಲ್ಲಿಸಲಾಗಿರುವ ೧೦ ಲಕ್ಷ ರು. ಗಳ ಪ್ರಸ್ತಾವನೆಗೂ ಶಾಸಕರು ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನುದಾನವನ್ನು ಮಿನಿವಿಧಾನಸೌಧ ಹಿಂಭಾಗದ ಕಟ್ಟಡ ನವೀಕರಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಅಲ್ಲದೆ ೧೦ ಲಕ್ಷ ರು. ವೆಚ್ಚದ ಜನರೇಟ್ ಅಳವಡಿಕೆಗೂ ಸಹ ಅನುಮೋದನೆ ಲಭಿಸಿದೆ. ಉದ್ಯಮಿಗಳು, ಸೇವಾ ಸಂಸ್ಥೆಗಳು ತಮ್ಮ ಸಿಎಸ್‌ಆರ್ ಹಣದಲ್ಲಿ ಈ ರೀತಿಯ ಕಾರ್ಯಗಳನ್ನು ಕೈಗೊಳ್ಳಲು ನೆರವಾಗುವುದರಿಂದ ಸರ್ಕಾರಿ ಕಛೇರಿಗಳು ಸಹ ಅಭಿವೃದ್ಧಿಗೊಳ್ಳುತ್ತವೆ.
- ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.