Wednesday, January 12, 2022

ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಿ, ವಿತರಕರ ಬೇಡಿಕೆಗಳನ್ನು ಈಡೇರಿಸಿ : ಟಿ. ಕೃಷ್ಣಪ್ಪ

ಭದ್ರಾವತಿ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭವನ್ನು ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಉದ್ಘಾಟಿಸಿದರು.  
    ಭದ್ರಾವತಿ, ಜ. ೧೨: ಸರ್ಕಾರ ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ವಿತರಕರ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಹಿತಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಆಗ್ರಹಿಸಿದರು.
    ಅವರು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜ್ಯದಲ್ಲಿ ಬಯೋಮೆಟ್ರಿಕ್ ಪದ್ದತಿಯಿಂದಾಗಿ ಪಡಿತರ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಪ್ರಮುಖವಾಗಿ ಸರ್ವರ್ ಸಮಸ್ಯೆ ಇದ್ದು, ಹಲವಾರು ಬಾರಿ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಪದ್ದತಿಯನ್ನು ರದ್ದುಪಡಿಸಿ ಈ ಹಿಂದಿನಂತೆ ಓಟಿಪಿ ಅಥವಾ ಚೆಕ್‌ಲಿಸ್ಟ್ ಪದ್ದತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಈ ಹಿಂದಿನ ಪದ್ದತಿಯಲ್ಲಿ ಕೆಲವು ವಿತರಕರು ಅಕ್ರಮ ವೆಸಗಿದ್ದಾರೆಂದು ಇಡೀ ವಿತರಕರನ್ನು ಗುರಿಯಾಗಿಸಿಕೊಂಡು ಪದ್ದತಿಯನ್ನು ಬದಲಿಸುವುದು ಸರಿಯಾದ ಕ್ರಮವಲ್ಲ. ಬದಲಿಗೆ ಅಕ್ರಮ ವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಎಲ್ಲವೂ ಸರಿಯಾಗುತ್ತದೆ ಎಂದರು.
    ಕೇರಳ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ಹೆಚ್ಚಿನ ಕಮಿಷನ್ ನೀಡಲಾಗುತ್ತಿದ್ದು, ಅಲ್ಲದೆ ಪಡಿತರ ವಿತರಣೆಯೊಂದಿಗೆ ದಿನ ಬಳಕೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ. ಇದೆ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ಕಲ್ಪಿಸಿಕೊಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಇಂದಿನ ಸರ್ಕಾರ ವಿತರಕರಿಗೆ ನಿಗದಿತ ಸಮಯದಲ್ಲಿ ಕಮಿಷನ್ ಹಣ ಜಮಾ ಮಾಡದೆ ಬಾಕಿ ಉಳಿಸಿಕೊಂಡಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ವಿತರಕರು ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ತಕ್ಷಣ ಕಮಿಷನ್ ಬಾಕಿ ನೀಡಬೇಕೆಂದು ಆಗ್ರಹಿಸಿದರು.
    ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ಪರಮೇಶ್ವರಪ್ಪ, ಕೆ. ಈಶ್ವರಾಚಾರಿ, ಎಸ್.ಆರ್ ನಾಗರಾಜ್, ಜವರಾಯಿ, ರಾಜೇಶ್, ಕೆ. ನಾಗರಾಜ್, ಕೆ. ಲಕ್ಷ್ಮೀಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಕುವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ. ಬಿ.ಜಿ ಧನಂಜಯ

ಡಾ. ಬಿ.ಜಿ ಧನಂಜಯ
    ಭದ್ರಾವತಿ, ಜ. ೧೨: ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ನಾಮನಿರ್ದೇಶನಗೊಂಡಿದ್ದಾರೆ.
    ಸೇವಾ ಜೇಷ್ಠತೆ ಹಾಗು ಸರದಿ ಆಧಾರದ ಮೇರೆಗೆ ಮುಂದಿನ ಒಂದು ವರ್ಷದ ಅವಧಿಗೆ ಅಥವಾ ವಯೋನಿವೃತ್ತಿ ದಿನಾಂಕದವರೆಗೂ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಳಿಸಿ ಕುಲಪತಿಗಳು ಆದೇಶ ಹೊರಡಿಸಿದ್ದಾರೆ.
    ಡಾ. ಬಿ.ಜಿ ಧನಂಜಯ ಸೇರಿದಂತೆ ಪಂಚನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಬಿ ರಾಜಶೇಖರ, ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತಿ ಮತ್ತು ಚಿಕ್ಕಮಗಳೂರು ಸರ್ಕಾರಿ ಮಹಿಳಾ ಕಾಲೇಜಿನ ಎಸ್.ಎಂ ನಟೇಶ್ ಒಟ್ಟು ೪ ಜನರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.

Tuesday, January 11, 2022

ಡಿಎಫ್ಒ ಕಛೇರಿ ಮುಂಭಾಗ ಕಾರು ಅಪಘಾತ


ಭದ್ರಾವತಿ : ನಗರದ ಬಿ.ಎಚ್ ರಸ್ತೆ  ಉಪಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ ಬಳಿ ಮಂಗಳವಾರ ಮಧ್ಯಾಹ್ನ ರಾತ್ರಿ ಕಾರು ಅಪಘಾತ ಸಂಭವಿಸಿದೆ.
       KA-14 ME 6537 ಕೆಂಪು ಬಣ್ಣದ  ಕಾರು ಅಪಘಾತಕ್ಕೆ ಒಳಗಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.  ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಡ್ಜ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಪ್ರಕರಣ ದಾಖಲು : ಓರ್ವನ ಬಂಧನ


    ಭದ್ರಾವತಿ, ಜ. ೧೧:  ಅಪ್ರಾಪ್ತ ಬಾಲಕಿಯೊಬ್ಬಳನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂಬ ದೂರು ನಗರದ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
    ಕಳೆದ ೨ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಿದಿಗೆ ನಿವಾಸಿ ಉಮೇಶ್(೨೮) ಎಂಬಾತನನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ.
    ಬಾರಂದೂರು ಗ್ರಾಮದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಸುಮಾರು ೧೫ ವರ್ಷದ ಪುತ್ರಿಯನ್ನು ಶಾಲೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ತಡೆದು ತರೀಕೆರೆಗೆ ಕರೆದೊಯ್ದು ಲಾಡ್ಜ್ ಒಂದರಲ್ಲಿ ಅತ್ಯಾಚಾರ ನಡೆಸಲಾಗಿದ್ದು, ಅಲ್ಲದೆ ಈ ವಿಚಾರ ಯಾರಿಗಾದರೂ ತಿಳಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಈ ನಡುವೆ ಪೊಲೀಸರು ಬಾಲಕಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆಗೆ ಒಳಪಡಿಸಿದ್ದು, ಬಾಲಕಿಯಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಲೋಕೋಪಯೋಗಿ ಇಲಾಖೆ ಕಛೇರಿಯಲ್ಲಿ ಸುಮಾರು ೭ ಮಂದಿಗೆ ಕೋವಿಡ್ ಸೋಂಕು

ನಗರಸಭೆ ವತಿಯಿಂದ ಸೋಂಕು ನಿವಾರಕ ಸಿಂಪಡಣೆ


    ಭದ್ರಾವತಿ, ಜ. ೧೧: ನಗರದ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ತಿಳಿದು ಬಂದಿದೆ.
    ಕಛೇರಿಯಲ್ಲಿ ಕಾರ್ಯಪಾಲಕ ಇಂಜಿನಿಯರ್(ಎಇಇ) ಸೇರಿದಂತೆ ಸುಮಾರು ೧೧ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೈಕಿ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ೭ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
    ಕಛೇರಿ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಮಂಗಳವಾರ ಮಧ್ಯಾಹ್ನ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಒಂದು ದಿನದ ಮಟ್ಟಿಗೆ ಕಛೇರಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಎಸಿಬಿ ಬಲೆಗೆ ಬಿಳಿಕಿ ಗ್ರಾ.ಪಂ. ಪಿಡಿಓ : ರು.೭೦ ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಡಿ. ಕೇಶವಮೂರ್ತಿ

ಭದ್ರಾವತಿ ಬಿಳಿಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಕೇಶವಮೂರ್ತಿ
    ಭದ್ರಾವತಿ ಜ. ೧೧: ಲಂಚ ಸ್ವೀಕರಿಸುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬಿಳಕಿ ಗ್ರಾಮ ಪಂಚಾಯತ್‌ಯಲ್ಲಿ ಮಂಗಳವಾರ ನಡೆದಿದೆ.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಕೇಶವಮೂರ್ತಿ ಎಸಿಬಿ ಬಲೆಗೆ  ಬಿದ್ದಿದ್ದು, ಜಮೀನಿಗೆ ಸಂಬಂಧಿಸಿದಂತೆ ಎನ್‌ಓಸಿ ನೀಡಲು ರು. ೧ ಲಕ್ಷ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿಂದೆ ರು. ೫ ಸಾವಿರ ಲಂಚ ಪಡೆದುಕೊಂಡಿದ್ದು, ಉಳಿದಂತೆ ರು. ೭೦ ಸಾವಿರ ಲಂಚ ಸ್ವೀಕರಿಸುವಾಗ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  
    ಕೇಶವಮೂರ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ದಾಳಿಯಲ್ಲಿ ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ಪಿಎಸ್‌ಐ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಗಿಯದ ಶರಾವತಿ ಮುಳುಗಡೆ ಸಂತ್ರಸ್ಥರ ಬವಣೆ : ಜಮೀನು ಮಂಜೂರಾದರೂ ಸ್ವಾಧೀನಕ್ಕೆ ಬಂದಿಲ್ಲ

ಜಮೀನು ಬಿಟ್ಟುಕೊಡಲು ಅರಣ್ಯ ಇಲಾಖೆ ಮೀನಾಮೀಷ : ಹೋರಾಟಕ್ಕೆ ಮುಂದಾದ ಕುಟುಂಬಸ್ಥರು

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ.೮ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಸೀತಾರಾಮ್ ಬಿನ್ ಮಂಜಪ್ಪ ಕುಟುಂಬಸ್ಥರು ಸರ್ಕಾರದಿಂದ ತಮಗೆ ಮಂಜೂರಾಗಿರುವ ಜಮೀನು ಸ್ವಾಧೀನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುತ್ತಿರುವುದು.
    ಭದ್ರಾವತಿ, ಜ. ೧೧: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿಯನ್ನು ಕಳೆದಕೊಂಡ ಶರಾವತಿ ಮುಳುಗಡೆ ಸಂತ್ರಸ್ಥರು ಇಂದಿಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಜಮೀನು ಮಂಜೂರು ಮಾಡಿದರೂ ಸಹ ಅನುಭೋಗಕ್ಕೆ ಬಂದಿಲ್ಲ. ಭವಿಷ್ಯದ ಬದುಕಿಗೆ ಎದುರು ನೋಡುತ್ತಿರುವ ಸಂತ್ರಸ್ಥರು ಇದೀಗ ವಿಧಿ ಇಲ್ಲದೆ ಹೋರಾಟದ ಮೊರೆ ಹೋಗಬೇಕಾಗಿದೆ.
    ತಾಲೂಕಿನ ಕೂಡ್ಲಿಗೆರೆ ಹೋಬಳಿ, ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ.೮ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಸೀತಾರಾಮ್ ಬಿನ್ ಮಂಜಪ್ಪ ಎಂಬುವರಿಗೆ ೪ ಎಕರೆ ಜಮೀನು ಸರ್ಕಾರದಿಂದ ೨೦೧೮ರಲ್ಲಿ ಮಂಜೂರಾಗಿದೆ. ಆದರೆ ಈ ಜಮೀನು ಅರಣ್ಯ ಇಲಾಖೆ ಸಂತ್ರಸ್ಥರಿಗೆ ನೀಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದಾಗಿ ಕುಟುಂಬಸ್ಥರು ಕಂಗಲಾಗಿದ್ದು, ಜಮೀನಿನಲ್ಲಿಯೇ ಹೋರಾಟಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸ್ಥಳಕ್ಕೆ ಯಾರು ಬಂದಿಲ್ಲ ಎಂದು ಸಂತ್ರಸ್ಥರು ತಮ್ಮ ಅಳಲು ತೋರ್ಪಡಿಸಿಕೊಂಡಿದ್ದಾರೆ.

ನಮ್ಮ ಕುಟುಂಬದಲ್ಲಿ ಒಟ್ಟು ೯ ಜನರಿದ್ದು, ನಮಗೆ ಇರುವುದು ಈ ಜಮೀನು ಮಾತ್ರ. ಇದನ್ನು ನಂಬಿಕೊಂಡಿರುವ ನಮನ್ನು ಇಲ್ಲಿಂದ ಉದ್ದೇಶ ಪೂರ್ವಕವಾಗಿ ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದೆ. ಅಕ್ಕಪಕ್ಕದ ಜಮೀನಿನವರಿಗೆ ಅನ್ವಯವಾಗದ ಕಾಯ್ದೆಯನ್ನು ನಮಗೆ ಮಂಜೂರಾಗಿರುವ ಜಮೀನಿಗೆ ಮಾತ್ರ ಅರಣ್ಯ ಇಲಾಖೆಯವರು ಅನ್ವಯಿಸಲು ಮುಂದಾಗುತ್ತಿದ್ದು, ಜಮೀನು ಕಸಿದು ಕೊಳ್ಳಲು ಕುತಂತ್ರ ನಡೆಸಲಾಗುತ್ತಿದೆ.
                                                                                     - ಮಹಾದೇವಪ್ಪ, ಸಂತ್ರಸ್ಥ ಕುಟುಂಬದ ಹಿರಿಯ ಪುತ್ರ
    ನಮಗೆ ಮಂಜೂರಾಗಿರುವ ೪ ಎಕೆರೆ ಜಮೀನಿನಲ್ಲಿ ಅಕೇಶಿಯಾ ಮರಗಳು ಬೆಳೆದಿದ್ದು, ಅರಣ್ಯ ಇಲಾಖೆಯವರು ಈ ಜಾಗ ದೊಡ್ಡೇರಿ ಮೈನರ್ ಫಾರೆಸ್ಟ್‌ಗೆ ಸೇರಿದೆ ಎಂದು ಹೇಳುವ ಮೂಲಕ ಸ್ವಾಧೀನಕ್ಕೆ ಕೊಡಲು ಮೀನಾಮೇಷ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.  ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಫೆಬ್ರವರಿ ೨೦೧೯ರಂದು ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸೀತಾರಾಮ್ ಬಿನ್ ಮಂಜಪ್ಪ ಅವರಿಗೆ ಮಂಜೂರಾಗಿರುವ ಜಮೀನು ಸರ್ಕಾರಿ ಬಂಜರು ಜಮೀನಾಗಿದೆ. ಅಲ್ಲದೆ ಮಂಜೂರಾತಿರಾಗಿರುವುದು ಖಾತೆ ಪಹಣಿಯಲ್ಲಿ ಸಹ ದಾಖಲಾಗಿದೆ ಎಂದು ತಿಳಿಸಿದ್ದಾರೆ.
    ಈ ಹಿನ್ನಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಸರ್ವೆ ನಂ.೮ರ ಒಟ್ಟು ೪೦೪.೩೪ ಎಕರೆಯಲ್ಲಿ ೩೨೫ ಎಕರೆ ದೊಡ್ಡೇರಿ ಮೈನರ್  ಫಾರಸ್ಟ್‌ಗೆ ಒಳಪಟ್ಟಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಬಂಜರು ಜಮೀನು ಮತ್ತು ಮೈನರ್ ಫಾರೆಸ್ಟ್ ಎರಡನ್ನು ಪ್ರತ್ಯೇಕಿಸಬೇಕಿದ್ದು, ಸರ್ವೆ ಕಾರ್ಯ ನಡೆಸುವಂತೆ ತಿಳಿಸಿದ್ದಾರೆ. ಇದರಂತೆ ತಹಸೀಲ್ದಾರ್‌ರವರು ಸರ್ವೆ ನಡೆಸಿದ್ದು, ಮಂಜೂರಾಗಿರುವ ಜಾಗ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಹಿಂಬರಹ ನೀಡಿದ್ದಾರೆ. ಆದರೂ ಸಹ ಜಮೀನು ಬಿಟ್ಟುಕೊಡಲು ಅರಣ್ಯ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಈ ಹಿನ್ನಲೆಯಲ್ಲಿ ವಿಧಿ ಇಲ್ಲದೆ ಹೋರಾಟ ನಡೆಸಬೇಕಾಗಿದೆ ಎಂದರು.
    ಸೀತಾರಾಮ್ ಅವರ ಪತ್ನಿ ಲಲಿತಮ್ಮ ಮಾತನಾಡಿ, ಈಗಾಗಲೇ ನಾವು ಎಲ್ಲವನ್ನು ಕಳೆದುಕೊಂಡಿದ್ದೇವೆ. ಸಾಲಸೋಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ನಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳೇ ಈಡೇರಿಸಿಕೊಡಬೇಕು. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.