![](https://blogger.googleusercontent.com/img/b/R29vZ2xl/AVvXsEh2Gh7qjQ8Qu_X5du39HhFYPpgjhUc6NNSr8SR9KOcL08-I4ZrB7GOOplF9oavpLpaOBrORulyAc8btgvlaYMTXz2FdhM4ArEHUGRZRwye5P6hoxpbDut_TK-7ZtX4xhUF_MognFi68t5bQ/w400-h260-rw/D14-BDVT1-787456.jpg)
ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಭದ್ರಾವತಿ, ಜ. ೧೪: ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಕೋವಿಡ್ ೩ನೇ ಅಲೆ ಭೀತಿ ನಡುವೆಯೂ ನಗರದೆಲ್ಲೆಡೆ ಮಕಾರ ಸಂಕ್ರಾಂತಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವುದು ಕಂಡು ಬರುತ್ತಿದ್ದು, ಹೂ, ಹಣ್ಣು, ಕಬ್ಬಿನ ಜೊಲ್ಲೆ ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಶುಕ್ರವಾರವೇ ಖರೀದಿಸಿಟ್ಟುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಸರ್ಕಾರ ಕೋವಿಡ್ ಭೀತಿ ಹಿನ್ನಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಘೋಷಿಸಿದೆ. ಅಲ್ಲದೆ ಮಕರ ಸಂಕ್ರಾಂತಿ ಸಂಭ್ರಮದ ಆಚರಣೆಗೆ ಕಡಿವಾಣ ಸಹ ಹಾಕಿದೆ. ಆದರೂ ಸಹ ಜನರು ಸಂಕ್ರಾಂತಿ ಸಂಭ್ರಮದ ಆಚರಣೆಗೆ ಮುಂದಾಗಿರುವುದು ತಲೆ ನೋವಾಗಿ ಪರಿಣಮಿಸಿದೆ.
೫ ದಿನಗಳಲ್ಲಿ ೨೦೦ರ ಗಡಿ ದಾಟಿದ ಸೋಂಕು:
ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ ೬೪ ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಳೆದ ೫ ದಿನಗಳಲ್ಲಿ ಒಟ್ಟಾರೆ ೨೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲೂ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಆತಂಕ ಎದುರಾಗಿದೆ.
ಮಾಂಸ ಮಾರಾಟ ನಿಷೇಧ:
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜ.೧೫ರ ಶನಿವಾರ ಮತ್ತು ಸರ್ವೋದಯ ದಿನದ ಅಂಗವಾಗಿ ಜ.೩೦ರಂದು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್, ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಾಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ.
ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಕೆ. ಪರಮೇಶ್ ಎಚ್ಚರಿಸಿದ್ದಾರೆ.