Wednesday, January 26, 2022

೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಸನ್ಮಾನ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜ. ೨೬: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪತಹಸೀಲ್ದಾರ್‌ಗಳಾದ ಅರಸು, ನಾರಾಯಣಗೌಡ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಜಾನಪದ ಹಾಗು ರಂಗಕಲಾವಿದ ಜಿ. ದಿವಾಕರ್, ಕ್ಷೇತ್ರ ಶಿಕ್ಷಣ ಸಂಯೋಜಕ ಎಸ್.ಕೆ ರವಿಕುಮಾರ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ. ಜೆ.ಎಂ ಪ್ರೀತಿ, ಹೆರಿಗೆ ಹಾಗು ಸ್ತ್ರೀ ರೋಗ ತಜ್ಞೆ ಡಾ. ಎಚ್.ಎಲ್ ಹರ್ಷ, ಸೀನಿಯರ್ ಗ್ರೇಡ್ ನರ್ಸ್ ಪೋಲೆನ್ ಸುನೀತ, ಹಿಂದೂಸ್ತಾನಿ ಗಾಯಕ ಹಾಗು ಕೀರ್ತನಕಾರ ಸಿ. ಶಿವರಾಜು, ಭಾಷಾ ಶಿಕ್ಷಕ ಜಿ. ಉಮಾಪತಿ, ರಂಗಕಲಾವಿದ ಹೊಸಹಳ್ಳಿ ದಾಳೇಗೌಡ, ಮಕ್ಕಳ ಸಹಾಯವಾಣಿ ಕೇಂದ್ರದ ಕೋ ಆರ್ಡಿನೇಟರ್ ಸುಮಿತ್ರ, ದೈಹಿಕ ಶಿಕ್ಷಕಿ ಎನ್. ಬನಶಂಕರಮ್ಮ, ಶಿಕ್ಷಕ ರೇಣುಕಪ್ಪ ಎನ್. ಮಡಿವಾಳರ, ಮುಖ್ಯೋಪಾಧ್ಯಾಯರಾದ ಸಿಸ್ಟರ್ ತೇರೆಸಾ, ಗಿರೀಶ್, ಗುಮಾಸ್ತ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ರಹಮತುಲ್ಲಾ, ಜೆ. ಬಸವರಾಜು, ದೈಹಿಕ ಶಿಕ್ಷಕ ಆರ್. ರವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಸೋಮಶೇಖರಯ್ಯ, ನಗರಸಭೆ ಸದಸ್ಯರು, ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ೭೩ನೇ ಗಣ ರಾಜ್ಯೋತ್ಸವ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಧ್ವಜಾರೋಹಣ ನೆರವೇರಿಸಿದರು.
    ಭದ್ರಾವತಿ, ಜ. ೨೬: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಧ್ವಜಾರೋಹಣ ನೆರವೇರಿಸಿದರು.
    ಧ್ವಜಾರೋಹಣಕ್ಕೂ ಮೊದಲು ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗು ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಸೋಮಶೇಖರಯ್ಯ, ನಗರಸಭೆ ಸದಸ್ಯರು, ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾಸಿ ಗೌರವಿಸಲಾಯಿತು.

ನಿಯಮಾನುಸಾರ ‘ಶಿಕ್ಷಣ ನಿಖಾಯ ಹುದ್ದೆ’(ಡೀನ್)ಗೆ ಅರ್ಹರನ್ನು ನಾಮನಿರ್ದೇನಗೊಳಿಸದೆ ವಿಳಂಬ ಧೋರಣೆ

ಕುವೆಂಪು ವಿ.ವಿ ವಿರುದ್ಧ ವಿದ್ಯಾರ್ಥಿ ಪರಿಷತ್ ಹೋರಾಟದ ಎಚ್ಚರಿಕೆ

ಕುವೆಂಪು ವಿವಿ
ಭದ್ರಾವತಿ, ಜ. ೨೬: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 'ಶಿಕ್ಷಣ ನಿಖಾಯ ಹುದ್ದೆ'(ಡೀನ್) ತೆರವುಗೊಂಡಿದ್ದರೂ ಸಹ ಇದುವರೆಗೂ ಈ ಹುದ್ದೆಯನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
    ೨ ವರ್ಷಗಳ ಅವಧಿಗೆ ಸೀಮಿತವಾದ ಹುದ್ದೆಗೆ ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದವರು ಇದ್ದರೂ ಸಹ ಈ ಹುದ್ದೆಯನ್ನು ಭರ್ತಿ ಮಾಡದೆ ಮೀನಾಮೇಷ ಮಾಡಲಾಗುತ್ತಿದೆ. ಹುದ್ದೆಯನ್ನು ಭರ್ತಿಗೊಳಿಸದಿರುವುದಕ್ಕೆ ನಿಖರವಾದ ಮಾಹಿತಿಯನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಿಲ್ಲ.  ಇದರಿಂದಾಗಿ ಒಂದೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
    ಈಗಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ವಿಶ್ವವಿದ್ಯಾನಿಲಯ ಇದೀಗ ಮತ್ತೊಂದು ಆರೋಪಕ್ಕೆ ಗುರಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ.  'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಸಂಬಂಧಿಸಿದಂತೆ ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿವೆ.
    'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರು ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದಾರೆ. ನಿಯಮಾನುಸಾರ ಕುಲಸಚಿವರು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ೨ ವರ್ಷಗಳಿಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಬೇಕಾಗಿದೆ. ವಿವೇಚನೆ ಮೇರೆಗೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಈ ಹುದ್ದೆಯನ್ನು ಭರ್ತಿ ಮಾಡುವ ಅಧಿಕಾರ ಕುಲಸಚಿವರು ಹೊಂದಿಲ್ಲ ಎನ್ನಲಾಗಿದೆ.  ಈ ನಡುವೆ  ಡಾ. ಜಗನ್ನಾಥ ಕೆ. ಡಾಂಗೆ ಅವರು ಸುಮಾರು ೨ ತಿಂಗಳ ಹಿಂದೆಯೇ ತೆರವಾಗಿರುವ ಹುದ್ದೆಯನ್ನು ಭರ್ತಿಗೊಳಿಸುವಂತೆ ಕುಲಸಚಿವರಿಗೆ ಅರ್ಜಿ ಸಲ್ಲಿಸಿದ್ದಾರೆ.
    ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ  ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಭಿವೃದ್ಧಿ ಒಕ್ಕೂಟ ಸಹ ರಾಜ್ಯಪಾಲರಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಸಹ ದೂರು ಸಲ್ಲಿಸಿದೆ.
    ಈ ನಡುವೆ ದಲಿತ ವಿದ್ಯಾರ್ಥಿ ಪರಿಷತ್ ಡಾ. ಜಗನ್ನಾಥ ಕೆ. ಡಾಂಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, 'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಹುದ್ದೆಯನ್ನು ತಕ್ಷಣ ಭರ್ತಿಗೊಳಿಸಬೇಕು. ಜೇಷ್ಠತೆ ಹಾಗು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಡಾ. ಜಗನ್ನಾಥ ಕೆ. ಡಾಂಗೆ ಅವರನ್ನು ಕುಲಸಚಿವರು ೨ ವರ್ಷಗಳ ಅವಧಿಗೆ ನಾಮನಿರ್ದೇಶನಗೊಳಿಸಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳು ಜಿಲ್ಲೆ ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಂದು ಪರಿಷತ್ ಜಿಲ್ಲಾಧ್ಯಕ್ಷ ಸಿ. ಪ್ರಭಾಕರ್ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.

Tuesday, January 25, 2022

ಹೋರಾಟಗಾರ ಬಿ.ಎನ್ ರಾಜು ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ


ಹೋರಾಟಗಾರ, ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜುರವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೨೫: ಹೋರಾಟಗಾರ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜುರವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜುರವರು ತಾಲೂಕಿನ ಸಾವಿರಾರು ಜನರ ಪಿಂಚಣಿ ಹಾಗು ಪಡಿತರ ಚೀಟಿ ರದ್ದು ಮಾಡಿರುವ ಹಿನ್ನಲೆಯಲ್ಲಿ ತಾಲೂಕು ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸಲು ಜ.೧೩ರಂದು ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ತೆರಳಿದ್ದು, ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿನಾಕಾರಣ ಗೈರು ಹಾಜರಿ ಇರುವುದನ್ನು ಕಂಡು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ನ್ಯಾಯ ಕೇಳಲು ಹೋದ ಇವರ ಮೇಲೆಯೇ ದುರುದ್ದೇಶ ಪೂರ್ವಕವಾಗಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ.
    ಬಿ.ಎನ್ ರಾಜುರವರು ಕಳೆದ ೩೦ ವರ್ಷಗಳಿಂದ ಬಡವರು, ಶೋಷಿತರು, ಅನ್ಯಾಯದ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಹೋರಾಟದಲ್ಲಿ ಯಾವುದೇ ರಾಜೀ ಇಲ್ಲವಾಗಿದೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ರಾಜುರವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಹಿನ್ನಲೆಯಲ್ಲಿ ತಕ್ಷಣ ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ಬಂಧನದಲ್ಲಿರುವ ರಾಜುರವರನ್ನು ತಕ್ಷಣ ಬಿಡುಗಡೆಗಡೆಗೊಳಿಸಬೇಕೆಂದು ಆಗ್ರಹಿಸಿದರು.
    ಪ್ರಮುಖರಾದ ಸಮಿತಿಯ ಅಕ್ರಮ್‌ಖಾನ್, ಅರುಣ್‌ಕುಮಾರ್, ಎಎಪಿ ಎಚ್. ರವಿಕುಮಾರ್, ರವಿಕುಮಾರ್, ಬಸವರಾಜ, ಮಾರುತಿ, ಚಿನ್ನಪ್ಪ ಶ್ರೀನಿವಾಸ್, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆಮ್ ಆದ್ಮಿ ಪಾರ್ಟಿ ನೇತೃತ್ವದಲ್ಲಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

Monday, January 24, 2022

ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ವಿಫಲ

೮ ಎಡ ಪಕ್ಷಗಳಿಂದ ಮನೆ-ಮನೆಯಿಂದ ಪ್ರತಿಭಟನೆ

ಮಹಾಮಾರಿ ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಖಂಡಿಸಿ ಸಿಪಿಐ-ಸಿಪಿಐಎಂ-ಎಸ್‌ಯುಸಿಐ-ಸಿಪಿಐ(ಎಂಎಲ್)-ಎಐಎಫ್‌ಬಿ-ಆರ್‌ಪಿಐ-ಸ್ವರಾಜ್ ಇಂಡಿಯಾ ಒಟ್ಟು ೮ ಎಡ ಪಕ್ಷಗಳಿಂದ ಸೋಮವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮನೆ-ಮನೆಯಿಂದ ಪ್ರತಿಭಟನೆ ಭದ್ರಾವತಿ ವಿದ್ಯಾಮಂದಿರದಲ್ಲಿರುವ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಎಂ. ನಾರಾಯಣ ನಿವಾಸದಲ್ಲಿ ನಡೆಯಿತು.
    ಭದ್ರಾವತಿ, ಜ. ೨೪: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಅಲ್ಲದೆ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಎಂ. ನಾರಾಯಣ ಆರೋಪಿಸಿದರು.
    ಮಹಾಮಾರಿ ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಖಂಡಿಸಿ ಸಿಪಿಐ-ಸಿಪಿಐಎಂ-ಎಸ್‌ಯುಸಿಐ-ಸಿಪಿಐ(ಎಂಎಲ್)-ಎಐಎಫ್‌ಬಿ-ಆರ್‌ಪಿಐ-ಸ್ವರಾಜ್ ಇಂಡಿಯಾ ಒಟ್ಟು ೮ ಎಡ ಪಕ್ಷಗಳಿಂದ ಸೋಮವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮನೆ-ಮನೆಯಿಂದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
    ಪ್ರತಿಯೊಂದು ವಾರ್ಡ್‌ಗಳಲ್ಲಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಜೊತೆಗೆ ನಿಯಂತ್ರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೂ ೧೦ ಸಾವಿರ ರು. ನಗದು ನೇರವಾಗಿ ಅವರ ಖಾತೆಗೆ ವರ್ಗಾಯಿಸುವುದು. ತಲಾ ೧೦ ಕೆ.ಜಿ ಉಚಿತ ಪಡಿತರ ವಿತರಿಸುವುದು. ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ೨೦೦ ದಿನಗಳ ಉದ್ಯೋಗ ಖಾತ್ರಿ ಒದಗಿಸುವುದು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಿ, ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡುವುದು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚಿನ ಗಮನ ಹರಿಸುವುದು ಮತ್ತು ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ನೆರವು ನೀಡುವಂತೆ ಒತ್ತಾಯಿಸಿದರು.
    ಕಾರ್ಮಿಕ ವಿರೋಧಿ, ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಹಾಗು ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು.
    ಮುಖಂಡರುಗಳಾದ ಕೆ. ಮಂಜಣ್ಣ, ಜಿ. ಶಿವಣ್ಣ, ಸಿ. ನಿಂಗಯ್ಯ, ಕೃಷ್ಣೋಜಿರಾವ್, ಮಾದೇವಪ್ಪ ಮತ್ತು ಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರಣ್ಯ ಇಲಾಖೆ ಜಾಗ ಅಕ್ರಮವಾಗಿ ಕಬಳಿಕೆ : ನಿವಾಸಿ ದೃಢೀಕರಣ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜ. ೨೪: ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ಶಾಸಕರ ಅಕ್ರಮಗಳು ಮಿತಿಮೀರಿದೆ. ಶಾಸಕರ ದಬ್ಬಾಳಿಕೆಗೆ ಅಸಹಾಯಕರು, ಶೋಷಿತರು ಧ್ವನಿ ಕಳೆದುಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳು ಸಹ ಶಾಸಕರು ಹೇಳಿದಂತೆ ಕೇಳುವಂತಾಗಿದೆ. ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಹೋರಾಟ ಮಾಡದಿರುವ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣದಲ್ಲಿ ಬಿಜೆಪಿ ಪಕ್ಷ ಜನರ ಪರವಾಗಿದ್ದು, ಎಲ್ಲಾ ರೀತಿಯ ಹೋರಾಟ ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
    ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ ಬೆಟ್ಟದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕೆಲವರು ಅಕ್ರಮವಾಗಿ ಕಬಳಿಸಿಕೊಂಡು ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ನಿವಾಸಿಗಳು ಯಾವುದೇ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಈ ನಡುವೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರನ್ನು ನಾಮಕರಣ ಮಾಡಿಕೊಳ್ಳಲಾಗಿದೆ. ಈ ಬಡಾವಣೆ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಅನುಮೋದನೆಯಾಗಿರುವುದಿಲ್ಲ. ಇದೀಗ ಕಂದಾಯ ಇಲಾಖೆಯವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸುಮಾರು ೧೫೦ ಕುಟುಂಬಗಳಿಗೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರಿನಲ್ಲಿ ನಿವಾಸಿ ದೃಢೀಕರಣ ಪತ್ರ  ನೀಡಿರುತ್ತಾರೆ. ಈ ನಿವಾಸಿ ದೃಢೀಕರಣ ಪತ್ರದ ಆಧಾರದ ಮೇಲೆ ನಿವಾಸಿಗಳು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ  ಅಕ್ರಮವಾಗಿ ನಿವಾಸಿ ದೃಢೀಕರಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಎಸ್.ಸಿ ಘಟಕದ ಅಧ್ಯಕ್ಷ ಪಿ. ಗಣೇಶ್‌ರಾವ್, ವಿ. ಕದಿರೇಶ್,  ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿ. ಆನಂದಕುಮಾರ್, ಎಚ್. ಕರಿಗೌಡ, ಬಿ.ಕೆ ಚಂದ್ರಪ್ಪ, ಎಚ್.ಎಂ ರವಿಕುಮಾರ್, ಆರ್.ಎಸ್ ಶೋಭಾ, ಅನಿತಾ ಮಲ್ಲೇಶ್, ಚಂದ್ರು, ನಕುಲ್ ಜೆ. ರೇವಣಕರ್, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಬಾರಂದೂರು ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ತಮ್ಮ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಜ. ೨೪: ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ತಮ್ಮ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಸ್ಥಾಯಿ ಸಮಿತಿ ಅಧ್ಯಕ್ಷರ ಕಛೇರಿಯನ್ನು ಉದ್ಘಾಟಿಸಿದರು. ನಂತರ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಸದಸ್ಯರಾದ ವಿ. ಕದಿರೇಶ್, ಮಣಿ ಎಎನ್‌ಎಸ್, ಬಷೀರ್ ಅಹಮದ್, ಲತಾ ಚಂದ್ರಶೇಖರ್, ರಿಯಾಜ್ ಅಹಮದ್, ಶೃತಿ ವಸಂತ್, ಜಯಶೀಲ ಸುರೇಶ್, ರೇಖಾ ಪ್ರಕಾಶ್, ಉದಯಕುಮಾರ್ ಮತ್ತು ಕೋಟೇಶ್ವರ ರಾವ್ ಉಪಸ್ಥಿತರಿದ್ದರು. 
ಸದಸ್ಯರಾದ ಟಿಪ್ಪುಸುಲ್ತಾನ್, ಜಾರ್ಜ್, ಆರ್. ಶ್ರೇಯಸ್(ಚಿಟ್ಟೆ), ಅನುಸುಧಾ ಮೋಹನ್, ಪಲ್ಲವಿ ದಿಲೀಪ್, ಸವಿತಾ ಉಮೇಶ್, ಕಾಂತರಾಜ್, ಸರ್ವಮಂಗಳ ಭೈರಪ್ಪ, ಬಿ.ಎಂ ಮಂಜುನಾಥ್, ಮಾಜಿ ಸದಸ್ಯರಾದ ರೇಣುಕಾ ಸುದೀಪ್‌ಕುಮಾರ್, ಅನಿಲ್‌ಕುಮಾರ್, ಆಂಜನಪ್ಪ ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.  
ನಗರಸಭೆ ವಾರ್ಡ್ ನಂ. ೧೨ರ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಸುದೀಪ್‌ಕುಮಾರ್ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲಿಯೇ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದಿದ್ದಾರೆ.