ಬಹುತೇಕ ಪಂಚಾಯಿತಿಗಳಲ್ಲಿ ನರೇಗಾ ದಿನಾಚರಣೆ
ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನರೇಗಾ ದಿನಾಚರಣೆ ಆಚರಿಸಲಾಯಿತು.
ಭದ್ರಾವತಿ, ಫೆ. ೨: ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿದ್ದು, ಈ ನಡುವೆ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಮಹಾಮಾರಿ ಕೋವಿಡ್-೧೯ರ ಪರಿಣಾಮ ಉಂಟಾದ ಸಂಕಷ್ಟದಿಂದ ಹೊರಬರಲು ಉದ್ಯೋಗ ಖಾತರಿ ಯೋಜನೆ ಹೆಚ್ಚಿನ ಸಹಕಾರಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಖಾತರಿ ಯೋಜನೆಯಡಿ ೪.೬೨ ಲಕ್ಷ ಮಾನವ ದಿನ ಉದ್ಯೋಗ ಕಲ್ಪಿಸಿಕೊಡಲಾಗಿದೆ. ವಿಶೇಷವಾಗಿ ಈ ಬಾರಿ ಖಾತರಿ ಯೋಜನೆಯಡಿ ೨೫ ಗ್ರಾಮ ಪಂಚಾಯಿತಿಗಳ ಸ್ವಚ್ಛ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಕೆರೆಗಳ ಜೊತೆಗೆ ಸುಮಾರು ೧೭೦ಕ್ಕೂ ಹೆಚ್ಚು ನಾಲೆಗಳಲ್ಲಿ ಹೂಳು ತೆಗೆಯುವಿಕೆ, ಅಡಕೆ ತೋಟ, ಕುರಿ-ಧನದ ಶೆಡ್‌ಗಳ ನಿರ್ಮಾಣ, ಜಾನುವಾರುಗಳ ತೊಟ್ಟಿ, ನೀರು ಹಿಂಗು ಗುಂಡಿಗಳ ನಿರ್ಮಾಣ, ಶಾಲಾ ಕಾಂಪೌಂಡ್ ಮತ್ತು ಅಂಗನವಾಡಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲಾಗಿದೆ.
ಒಟ್ಟಾರೆ ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಗ್ರಾಮೀಣ ಜನರ ಬದುಕಿಗೆ ಆಧಾರವಾಗಿರುವ ಖಾತರಿ ಯೋಜನೆಯನ್ನು ಬಹುತೇಕ ಗ್ರಾಮ ಪಂಚಾಯಿತಿಗಳು ಸದ್ಬಳಕೆ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಬುಧವಾರ ನರೇಗಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿವೆ.
ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು, ನರೇಗಾ ಕೂಲಿ ಕಾರ್ಮಿಕರು ಒಟ್ಟಾಗಿ ದಿನಾಚರಣೆ ಆಚರಿಸಿದರು. ಪಂಚಾಯಿತಿ ಮುಂಭಾಗ ಕೂಲಿ ಕಾರ್ಮಿಕರು ಉದ್ಯೋಗ ಚೀಟಿ ಪ್ರದರ್ಶಿಸಿದರು.