Tuesday, February 8, 2022

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನ ಪದಾಧಿಕಾರಿಗಳ ನೇಮಕ

    ಭದ್ರಾವತಿ, ಫೆ. ೮: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
    ಉಪಾಧ್ಯಕ್ಷರಾಗಿ ಎನ್. ಮಂಜುನಾಥ್, ಕುಮಾರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಬೋಸ್ಲೆ, ಮಂಜುನಾಥ ಸಿಂಗ್, ಕಾರ್ಯದರ್ಶಿಗಳಾಗಿ ಪಿ.ಎಲ್ ಪ್ರದೀಪ್, ಬಿ.ಆರ್ ಜಯಶೀಲ ಮತ್ತು ಸಂಚಾಲಕರಾಗಿ ಶ್ರೀನಿವಾಸ್ ಅವರನ್ನು ನೇಮಗೊಳಿಸಿ ವಿಭಾಗದ ಅಧ್ಯಕ್ಷ ಬಿ. ಗಂಗಾಧರ ಆದೇಶ ಹೊರಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಇ-ಶ್ರರ್ಮ್ ಕಾರ್ಡ್ ನೋಂದಾಣಿಗೆ ಚಾಲನೆ

ಭದ್ರಾವತಿಯಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸುವ ಮೂಲಕ ಸಾಂಕೇತಿಕವಾಗಿ ಸ್ಥಳದಲ್ಲಿಯೇ ಇ-ಶ್ರಮ್ ಕಾರ್ಡ್ ವಿತರಿಸಿದರು.
    ಭದ್ರಾವತಿ, ಫೆ. ೮: ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮಂಗಳವಾರ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ ನೀಡಲಾಯಿತು.
    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಮಾತನಾಡಿ, ಇ-ಶ್ರಮ್ ಕಾರ್ಡ್ ಆಶಾಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಆಶಾ ಕಾರ್ಯಕರ್ತೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು.  
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸದಸ್ಯ ಬಿ.ಟಿ ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ವಿಜಯ್, ವಸಂತ, ರಾಜೇಶ್ವರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸುಮಾರು ೪ ಮಂದಿಗೆ ಸ್ಥಳದಲ್ಲಿಯೇ ಇ-ಶ್ರಮ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ಅರ್ಹ ಫಲಾನುಭವಿಗಳಿಗೆ ನಿವೇಶನ, ಹಕ್ಕು ಪತ್ರ ನೀಡುವಲ್ಲಿ ನಿರ್ಲಕ್ಷ್ಯತನ

ತಾಲೂಕು ಆಡಳಿತ, ಗ್ರಾಮ ಪಂಚಾಯಿತಿಗಳ ವಿರುದ್ಧ ನಗರಸಭೆ ಸದಸ್ಯ ಬಿ.ಕೆ ಮೋಹನ್ ಆರೋಪ


ಭದ್ರಾವತಿ ತಾಲೂಕು ಪಂಚಾಯಿತಿ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿದರು.
    ಭದ್ರಾವತಿ, ಫೆ. ೮: ತಾಲೂಕಿನಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿ ನಿವೇಶನ ನೀಡಲು ಹಾಗು ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಆಡಳಿತಗಳು ನಿರ್ಲಕ್ಷ್ಯವಹಿಸಿವೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಆರೋಪಿಸಿದರು.
    ಅವರು ಮಂಗಳವಾರ ತಾಲೂಕು ಪಂಚಾಯಿತಿ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗು ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಸರ್ಕಾರ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ ವಸತಿ ಕಲ್ಪಿಸಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಸೂಚಿಸಿದೆ. ಆದರೆ ಇನ್ನೂ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು, ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಾಗಿಲ್ಲ. ಈ ಸಂಬಂಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ದೂರು ಕೇಳಿ ಬರುತ್ತಿವೆ. ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಆಡಳಿತಗಳು ನಿರ್ಲಕ್ಷ್ಯವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ಎದುರಾಗಿರುವ ಭೂ ವಿವಾದಗಳನ್ನು ವಿವರಿಸುವ ಜೊತೆಗೆ ಅವುಗಳಿಗೆ ಕಾನೂನಾತ್ಮಕವಾಗಿ ಕಂಡುಕೊಳ್ಳಬಹುದಾದ ಮಾಗೋಪಾಯಗಳನ್ನು ವಿವರಿಸಿದರು.
    ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಮಾತನಾಡಿ, ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವ ಸಂಬಂಧ ಹಾಗು ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಭೂ ವಿವಾದಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಎದುರಾಗಿರುವ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.
    ಪಡಿತರ ಚೀಟಿ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳು ಹಾಗು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಿಕೊಡುವ ಸಂಬಂಧ ಸಹ ಸಭೆಯಲ್ಲಿ ಚರ್ಚಿಸಲಾಯಿತು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸದಸ್ಯ ಬಿ.ಟಿ ನಾಗರಾಜ್, ತಾಲೂಕು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷ ನಾಗೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, February 7, 2022

ಅಂಬೇಡ್ಕರ್‌ರವರ ಸ್ಪೂರ್ತಿಯ ಚಿಲುಮೆ ರಮಾಬಾಯಿ : ಮಂಜುನಾಥ್


ಭದ್ರಾವತಿ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಸೋಮವಾರ ರಮಾಬಾಯಿ ಅಂಬೇಡ್ಕರ್‌ರವರ ೧೨೪ನೇ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಫೆ. ೭: ರಮಾಬಾಯಿ ಅಂಬೇಡ್ಕರ್‌ರವರು ಓರ್ವ ಆದರ್ಶ ಮಹಿಳೆ ಮಾತ್ರವಲ್ಲದೆ, ವಿಶ್ವಜ್ಞಾನಿ, ಮಹಾಚೇತನ ಡಾ. ಬಿ.ಆರ್ ಅಂಬೇಡ್ಕರವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು ಎಂದು ಎಂಪಿಎಂಇಎಸ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಹೇಳಿದರು.
    ಅವರು ಸೋಮವಾರ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಮಾಬಾಯಿ ಅಂಬೇಡ್ಕರ್‌ರವರ ೧೨೪ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಂಬೇಡ್ಕರ್‌ರವರ ಸಾಧನೆ ಹಿಂದೆ ರಮಾಬಾಯಿಯವರ ಕೊಡುಗೆ ಅಪಾರವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ರಮಾಬಾಯಿಯವರು ತಮ್ಮ ಸಂಪೂರ್ಣ ಬದುಕನ್ನು ಅಂಬೇಡ್ಕರ್‌ರವರ ಉಜ್ವಲ ಭವಿಷ್ಯಕ್ಕಾಗಿ ಮುಡುಪಾಗಿಟ್ಟರು. ಆ ಕಾಲದಲ್ಲಿಯೇ ತಮ್ಮ ಬದುಕಿನ ವೈಯಕ್ತಿಕ ಸಮಸ್ಯೆಗಳಿಗೆ ಅಂಬೇಡ್ಕರ್‌ರವರ ಶಿಕ್ಷಣ ಮೊಟಕಾಗದಂತೆ ಎಚ್ಚರವಹಿಸಿದರು. ಅಂಬೇಡ್ಕರ್‌ರವರು ವಿದೇಶದಲ್ಲಿ ವ್ಯಾಸಂಗ ಮುಗಿಸಿಕೊಂಡು ಹಿಂದಿರುಗವರೆಗೂ ಅನುಭವಿಸಿದ ನೋವು, ದುಃಖ ಎಲ್ಲವನ್ನು ನುಂಗಿಕೊಂಡು ಕೇವಲ ಸತಿಯಾಗಿರದೆ ಮಾತೆಯ ಸ್ವರೂಪಿಣಿಯಾಗಿದ್ದರು. ಇಂತಹ ಮಹಾನ್ ಮಾತೆಯ ಜನ್ಮದಿನ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕೆಂದರು.
    ನಗರಸಭೆ ಇಂಜಿನಿಯರ್ ರಂಗರಾಜಪುರೆ, ಶಾರದಕುಮಾರಿ ಸೇರಿದಂತೆ ಇನ್ನಿತರರು ಮಾತನಾಡಿದರು. ಸಮಾಜದ ಹಿರಿಯ ಮಹಿಳೆ ಲಕ್ಷ್ಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮೆಸ್ಕಾಂ ನಿವೃತ್ತ ಇಂಜಿನಿಯರ್ ಜಯರಾಜ್, ಶಿಕ್ಷಕಿ ವಿಜಯಲಕ್ಷ್ಮೀ, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪುಟ್ಟರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹೇಶ್ ವಂದಿಸಿದರು.

ಫೆ.೧೦ರಂದು ಸೀಳುತುಟಿ, ಸೀಳು ಅಂಗಳ ಪೀಡಿತರ ಗುರುತಿಸುವಿಕೆ, ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ

    ಭದ್ರಾವತಿ, ಫೆ. ೭: ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ, ಸ್ಮೈಲ್ ಟ್ರೈನ್ ಹಾಗು ಚಿರಂತನ ಟ್ರಸ್ಟ್ ವತಿಯಿಂದ ತಾಲೂಕು ಆರೋಗ್ಯ ಇಲಾಖೆ ಹಾಗು ಸಾರ್ವಜನಿಕ ಆಸ್ಪತ್ರೆ ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಹಯೋಗದೊಂದಿಗೆ ಫೆ.೧೦ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಎಲ್ಲಾ ವಯಸ್ಸಿನವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಹಿಂದೆ ಬೇರೆ ಬೇರೆ ಕಡೆ ತಪಾಸಣೆ, ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡವರು ಸಹ ಮರು ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕೆ.ಎಸ್ ಮನೋಹರ್, ಶಿಬಿರದ ಸಂಚಾಲಕರು, ಮೊ: ೭೦೧೯೨೫೮೦೦೫ ಅಥವಾ ೯೯೬೪೦೭೮೨೨೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನವೀಕರಣಗೊಂಡ ಪಾಕಶಾಲೆ ಕೊಠಡಿ ಉದ್ಘಾಟನೆ

ಭದ್ರಾವತಿ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪಾಕಶಾಲೆಯ ನಿವೀಕರಣಗೊಂಡ ಕೊಠಡಿಯನ್ನು ಸೋಮವಾರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಉದ್ಘಾಟಿಸಿದರು.
    ಭದ್ರಾವತಿ, ಫೆ. ೭: ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪಾಕಶಾಲೆಯ ನಿವೀಕರಣಗೊಂಡ ಕೊಠಡಿಯನ್ನು ಸೋಮವಾರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಉದ್ಘಾಟಿಸಿದರು.
    ತುಂಬಾ ಹಳೇಯದಾದ ಅತಿಥಿ ಗೃಹದಲ್ಲಿ ಶಿಥಿಲಗೊಂಡ ಕೊಠಡಿಯನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಲಾಗಿದೆ. ಧಾರ್ಮಿಕ ಆಚರಣೆಯೊಂದಿಗೆ ಕೊಠಡಿಯನ್ನು ಉದ್ಘಾಟಿಸಲಾಯಿತು.
    ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ ಚಕ್ರವರ್ತಿ, ಅಪರೇಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ಎಸ್ ಸುರೇಶ್, ಅತಿಥಿ ಗೃಹದ ಅಧಿಕಾರಿಗಳಾದ ಎ.ಆರ್ ವೀರಣ್ಣ, ಚಂದ್ರಕಾಂತ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹಾಗು ಪದಾಧಿಕಾರಿಗಳು, ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಅತಿಥಿ ಗೃಹದ ಸಿಬ್ಬಂದಿಗಳಾದ ಮೋಹನ್, ಪ್ರತಾಪ್, ಪ್ರಭಾಕರ್, ವಿಲ್ಸನ್, ಆದಿನಾರಾಯಣ, ಆಸ್ಲಾಂ, ಸುರೇಶ್, ಸುಜಾತ, ಸಾವಿತ್ರಮ್ಮ, ತುಳಸಿ, ಲಕ್ಷ್ಮೀಬಾಯಿ, ರೂಪ, ಪದ್ಮಮ್ಮ ಮತ್ತು ಪಾರ್ವತಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರದ ಆದೇಶದ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಟನೆ

ಹಿಜಾಬ್ ಧರಿಸಿಕೊಂಡು ತರಗತಿಗೆ ಹೋಗಲು ಅವಕಾಶ ನೀಡುವಂತೆ ಮನವಿ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮುಂಭಾಗ ಮುಸ್ಲಿಂ ವಿದ್ಯಾರ್ಥಿಗಳು ಸರ್ಕಾರದ ಆದೇಶದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಫೆ. ೭: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಇನ್ನೂ ಬಗೆ ಹರಿದಿಲ್ಲ. ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಸಹ ಮುಸ್ಲಿಂ ವಿದ್ಯಾರ್ಥಿಗಳು ಸೋಮವಾರ ಆದೇಶದ ವಿರುದ್ಧ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
    ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಕಾಲೇಜಿನ ಒಳಗೆ ಬಿಡದಂತೆ ಕಾಲೇಜಿನ ಮುಂಭಾಗ ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ಓದಿ ತಿಳಿಸಿದರು. ಆದರೂ ಸಹ ವಿದ್ಯಾರ್ಥಿಗಳು ತರಗತಿಗಳಿಗೆ ಹಿಜಾಬ್ ಧರಿಸಿಕೊಂಡು ಹೋಗುವುದಾಗಿ ಹಠಕ್ಕೆ ಬಿದ್ದು, ಪ್ರತಿಭಟನೆ ಕೈಗೊಂಡಿದ್ದಾರೆ. ಅಲ್ಲದೆ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹೋಗಲು ಅವಕಾಶ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
    ಕೇಸರಿ ವಸ್ತ್ರದೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಸರ್ಕಾರದ ಆದೇಶ ಪಾಲನೆ ಮಾಡುವ ಮೂಲಕ ತರಗತಿಗಳಿಗೆ ಹಾಜರಾದರು. ಈ ನಡುವೆ ಪೊಲೀಸರು ಕಾಲೇಜು ಆವರಣದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.