Friday, February 11, 2022

ಫೆ.೧೩ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಫೆ. ೧೧: ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಲಿ ಲಿಂಕ್‌ಲೈನ್ ಕಾಮಗಾರಿ ಮತ್ತು ಸೀಗೆಬಾಗಿ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಎಸ್.ಎಫ್-೧ ಭದ್ರಾ ಕಾಲೋನಿ ಮತ್ತು ಎಸ್.ಎಫ್ -೨ ವೀರಾಪುರ ಫೀಡರ್‌ನಲ್ಲಿ ೧೧ ಕೆ.ವಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.೧೩ರಂದು ಬೆಳಿಗ್ಗೆ ೯.೩೦ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದನೇರಲಕೆರೆ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಕೆರೆ, ಅರಬಳಚಿ, ತಿಮ್ಲಾಪುರ, ಕಣಕಟ್ಟೆ, ಭದ್ರಾಕಾಲೋನಿ, ಮಜ್ಜಿಗೇನಹಳ್ಳಿ, ಬಾಬಳ್ಳಿ, ಗೌಡ್ರಹಳ್ಳಿ, ಅಂಬೇಡ್ಕರ್ ಬೀದಿ, ಲಕ್ಷ್ಮೀಪುರ, ವೀರಾಪುರ, ಸೈಯ್ಯದ್ ಕಾಲೋನಿ, ಸೀಗೆಬಾಗಿ, ಸತ್ಯಸಾಯಿ ನಗರ ಮತ್ತು ಕೈಗಾರಿಕಾ ಪ್ರದೇಶ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.

ಹೃದಯ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿ ಸಾವು : ಸಂತಾಪ

ಮಹೇಶ್
    ಭದ್ರಾವತಿ, ಫೆ. ೧೧: ನಗರದ ಗೋಲ್ಡನ್ ಜ್ಯೂಬಿಲಿ ನಿವಾಸಿ, ನ್ಯಾಯಬಲೆ ಅಂಗಡಿ ಮಾಲೀಕ ಜಗದೀಶ್ ಗುಪ್ತ ಅವರ ಪುತ್ರ ಮಹೇಶ್(೪೩) ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ಬೆಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
    ಮಹೇಶ್ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ ಶಸ್ತ್ರ ಚಿಕಿತ್ಸೆ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಹೇಶ್ ಪತ್ನಿ ಮತ್ತು ಒಂದು ಮಗು ಹೊಂದಿದ್ದರು.
    ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಹಾಗು ತಾಲೂಕು ಪದಾಧಿಕಾರಿಗಳು, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.


Thursday, February 10, 2022

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವನವಮಿ

ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಆರಾಧನೆ ಅಂಗವಾಗಿ ಮಧ್ವನವಮಿ ಜರುಗಿತು.
    ಭದ್ರಾವತಿ, ಫೆ. ೧೦: ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಆರಾಧನೆ ಅಂಗವಾಗಿ ಮಧ್ವನವಮಿ ಜರುಗಿತು.
    ಬೆಳಿಗ್ಗೆ ನಿರ್ಮಾಲ್ಯ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ಮಧ್ವಾಚಾರ್ಯರ ಭಾವಚಿತ್ರದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸ್ವಾಮಿ ದೇವಸ್ಥಾನದವರೆಗೂ ರಥೋತ್ಸವ ನಡೆಸಲಾಯಿತು. ವೇದಬ್ರಹ್ಮ ಗೋಪಾಲ ಆಚಾರ್ ನೇತೃತ್ವ ವಹಿಸಿದ್ದರು.
    ಮಧ್ವಾಚಾರ್ಯರ ಕುರಿತು ಅನಂತಾಚಾರ್ ಉಪನ್ಯಾಸ ನಡೆಸಿಕೊಟ್ಟರು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರಗಿತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನ್ ಆಚಾರ್, ಪವನ್‌ಕುಮಾರ್ ಉಡುಪ, ವಿದ್ಯಾನಂದ ನಾಯಕ್, ಪ್ರಧಾನ ಅರ್ಚಕ ಸತ್ಯನಾರಾಯಣ, ಶುಭ ಗುರುರಾಜ್, ಮಾಧುರಾವ್,  ಶ್ರೀಪತಿ ತಂತ್ರಿ, ಶ್ರೀಪತಿ ಮಧುಸೂದನ, ರಾಧಿಕಾ, ಶ್ರೀನಿವಾಸ್ ಹಾಗು ವಿವಿಧ ಭಜನಾ ಮಂಡಳಿಗಳು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಸ್ವಂತ ಹಣದಲ್ಲಿ ಉದ್ಯಾನವನ ಅಭಿವೃದ್ಧಿಗೆ ಮುಂದಾಗಿರುವ ನಗರಸಭಾ ಸದಸ್ಯ

ಭದ್ರಾವತಿ ನಗರಸಭೆ ೬ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರೂಢ ನಗರದ ಶಂಕರ ಮಠ ಸಮೀಪದಲ್ಲಿರುವ ಶಾರದಾ ಉದ್ಯಾನವನ ಅಭಿವೃದ್ಧಿಗೆ ವಾರ್ಡಿನ ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಮುಂದಾಗಿದ್ದು, ಮೊದಲ ಹಂತದಲ್ಲಿ ಸ್ವಂತ ಹಣದಲ್ಲಿ ನೀರಿನ ಪೈಪ್ ಖರೀದಿಸಿ ಸ್ಥಳೀಯರಿಗೆ ಹಸ್ತಾಂತರಿಸಿದ್ದಾರೆ.

    ಭದ್ರಾವತಿ, ಫೆ. ೧೦: ನಗರಸಭೆ ೬ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರೂಢ ನಗರದ ಶಂಕರ ಮಠ ಸಮೀಪದಲ್ಲಿರುವ ಶಾರದಾ ಉದ್ಯಾನವನ ಅಭಿವೃದ್ಧಿಗೆ ವಾರ್ಡಿನ ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಮುಂದಾಗಿದ್ದಾರೆ.
    ವಿಶೇಷ ಎಂದರೆ ಸ್ವಂತ ಹಣದಲ್ಲಿ ಉದ್ಯಾನವನ ಅಭಿವೃದ್ಧಿಗೆ ಮುಂದಾಗಿದ್ದು, ನೀರಿನ ಪೈಪ್, ಮೋಟಾರ್ ಸೇರಿದಂತೆ ಇನ್ನಿತರ ಅಗತ್ಯವಿರುವ ಪರಿಕರಗಳನ್ನು ಖರೀದಿಸಿ ಉದ್ಯಾನವನದ ನಿರ್ವಹಣೆ ವಹಿಸಿಕೊಂಡಿರುವ ಸ್ಥಳೀಯರಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ನೀರಿನ ಪೈಪನ್ನು ಗುರುವಾರ ಹಸ್ತಾಂತರಿಸಿದ್ದಾರೆ.
    ಸಿದ್ಧಾರೂಢ ನಗರದ ಮಹಿಳೆಯರು, ನಿವೃತ್ತ ಇಂಜಿನಿಯರ್, ಕುಮಾರಸ್ವಾಮಿ, ನಿವೃತ್ತ  ದೈಹಿಕ ಶಿಕ್ಷಕರಾದ ಕೃಷ್ಣಮೂರ್ತಿ ಹಾಗೂ ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಗನ ಮದುವೆ ಚಪ್ಪರ ಕಾರ್ಯ ದಿನದಂದು ತಂದೆ ಹೃದಯಾಘಾತದಿಂದ ನಿಧನ

ಬೋರೇಗೌಡ
    ಭದ್ರಾವತಿ, ಫೆ. ೧೦: ಮಗನ ಮದುವೆ ಚಪ್ಪರ ಕಾರ್ಯ ದಿನದಂದು ತಂದೆ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಬುಧವಾರ ನಗರಸಭೆ ವ್ಯಾಪ್ತಿಯ ಉಜ್ಜನಿಪುರದಲ್ಲಿ ನಡೆದಿದೆ.
    ಬೋರೇಗೌಡ ಎಂಬುವರು ಮೃತಪಟ್ಟಿದ್ದಾರೆ. ಓರ್ವ ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಬೋರೇಗೌಡ ಈ ಹಿಂದೆಯೇ ಮಗಳಿಗೆ ಮಾಡಿದ್ದು, ಉಳಿದ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವನಿಗೆ ಮದುವೆ ಮಾಡುವ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಬುಧವಾರ ಚಪ್ಪರ ಕಾರ್ಯವಿದ್ದು, ಗುರುವಾರ ಮದುವೆ ನಡೆಯಬೇಕಿತ್ತು. ಆದರೆ ಬೋರೇಗೌಡರವರು ಚಪ್ಪರ ಶಾಸ್ತ್ರ ಮುಗಿಯುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನಡೆಯಿತು.
    ಬೋರೇಗೌಡರವರು ಈ ಬಾರಿ ನಗರಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಇವರ ನಿಧನಕ್ಕೆ ಜೆಡಿಎಸ್ ಪಕ್ಷದ ಮುಖಂಡರು, ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ಆರ್.ಜೆ ನರೇಶ್ ನಿಧನ

ಆರ್.ಜೆ ನರೇಶ್
    ಭದ್ರಾವತಿ ಫೆ.೧೦: ಶಾಸಕ ಬಿ.ಕೆ. ಸಂಗಮೇಶ್ವರ್ ಸಹೋದರಿಯ ಪುತ್ರ ಆರ್.ಜೆ ನರೇಶ್(೩೩) ಅನಾರೋಗ್ಯದಿಂದ ನಿಧನ ಹೊಂದಿದರು.
    ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ನರೇಶ್ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ಇವರ ಅಂತ್ಯಕ್ರಿಯೆ ಗುರುವಾರ ಹಳೇನಗರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪರಿಶಿಷ್ಟ ಜಾತಿ ವಿಧವೆ ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ : ತಪ್ಪಿತಸ್ಥರ ವಿರುದ್ಧ ಕಠಣ ಕ್ರಮಕ್ಕೆ ಆಗ್ರಹಿಸಿ ಮನವಿ

ಪರಿಶಿಷ್ಟ ಜಾತಿಗೆ ಸೇರಿದ ಬಣಜಾರ್ ಸಮುದಾಯದ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ ಮತ್ತು ದೌರ್ಜನ್ಯ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಅರವಟ್ಟಿ ಗ್ರಾಮದಲ್ಲಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಗುರುವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೦: ಪರಿಶಿಷ್ಟ ಜಾತಿಗೆ ಸೇರಿದ ಬಣಜಾರ್ ಸಮುದಾಯದ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ ಮತ್ತು ದೌರ್ಜನ್ಯ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಅರವಟ್ಟಿ ಗ್ರಾಮದಲ್ಲಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಗುರುವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಅರವಟ್ಟಿ ಗ್ರಾಮದ ನಿಂಗಪ್ಪ ದೊಡ್ಡಮನಿ ಎಂಬುವರ ಹೊಲದಲ್ಲಿ ಕಬ್ಬು ಕಟಾವು ಕೆಲಸ ಮಾಡುತ್ತಿದ್ದ ಬಣಜಾರ್ ಸಮುದಾಯಕ್ಕೆ ಸೇರಿದ ವಿಧವೆ ಮಹಿಳೆ ಲಕ್ಷ್ಮೀಬಾಯಿ ಎಂಬುವರ ಮೇಲೆ ಮೇಲ್ಜಾತಿಗೆ ಸೇರಿದ ಅರ್ಜುನ್ ಹಾಗು ೩-೪ ಜನ ಸೇರಿಕೊಂಡು ಏಕಾಏಕಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡುವ ಮೂಲಕ ಕೊರಳಿನಲ್ಲಿದ್ದ ಸುಮಾರು ೧೮ ಗ್ರಾಂ ತೂಕದ ಬಂಗಾರದ ಪದಕದ ಸರವನ್ನು ಕಿತ್ತು ಬಿಸಾಡಿ ದೌರ್ಜನ್ಯವೆಸಗಿದ್ದಾರೆ.  ಅಲ್ಲದೆ ಜೀವ ಬೆದರಿಕೆ ಹಾಕಿದ್ದು, ಈ ಹಿನ್ನಲೆಯಲ್ಲಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
    ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಪಿ. ಕೃಷ್ಣನಾಯ್ಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  ಪ್ರಮುಖರಾದ ಟಿ. ಚಂದ್ರು, ಪ್ರವೀಣ್‌ಕುಮಾರ್, ಕೆ. ಆಂಜನಪ್ಪ ಮತ್ತು ವೇದೇಶ ಉಪಸ್ಥಿತರಿದ್ದರು.