ನ್ಯಾಯಾಲಯದ ತೀರ್ಪು ಬರುವವರೆಗೂ ತರಗತಿಗಳಿಗೆ ಹಾಜರಾಗುವುದಿಲ್ಲ
ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
ಭದ್ರಾವತಿ, ಫೆ. ೧೭: ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
ಬುಧವಾರ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರಿಗೆ ತಹಸೀಲ್ದಾರ್ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶ ಹಾಗು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವ ಜೊತೆಗೆ ಹಿಜಾಬ್ ಧರಿಸದೆ ತರಗತಿಗಳಿಗೆ ಹಾಜರಾಗುವಂತೆ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದ್ದರು. ಈ ನಡುವೆ ಗುರುವಾರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಪುನಃ ಹಿಜಾಬ್ ಧರಿಸಿಕೊಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರನ್ನು ಶಾಲಾ ಮುಂಭಾಗದಲ್ಲಿಯೇ ತಡೆಯಲಾಗಿತ್ತು. ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಪ್ರತಿಭಟನೆಗೆ ಮುಂದಾದರು.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಪ್ರಸ್ತುತ ನ್ಯಾಯಾಲಯದ ಆದೇಶ ಹಾಗು ಸರ್ಕಾರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಇದಕ್ಕೆ ಪೂರಕವಾಗಿ ಸ್ಪಂದಿಸಿ ತರಗತಿಗಳಿಗೆ ಹಾಜರಾಗುವಂತೆ ಮನವಿ ಮಾಡಿದರು. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕಛೇರಿ ಸಿಬ್ಬಂದಿಗಳು ಸಹ ವಿದ್ಯಾರ್ಥಿನಿಯರಿಗೆ ಸೂಕ್ತ ತಿಳುವಳಿಕೆ ನೀಡಿದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಮೂಲಕ ಮನವೊಲಿಸಿ ತರಗತಿಗಳಿಗೆ ಹಾಜರಾದರು.
ಮನವೊಲಿಕೆ ವಿಫಲ : ಹಿಜಾಬ್ ಮೊದಲು, ನಂತರ ಶಿಕ್ಷಣ
ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಾಲೇಜಿನಲ್ಲಿ ಕೆಲವು ದಿನಗಳವರೆಗೆ ತಣ್ಣಗಾಗಿದ್ದ ಹಿಜಾಬ್ ವಿವಾದ ಗುರುವಾರ ಪುನಃ ಕಾಣಿಸಿಕೊಂಡಿದೆ. ನಗರದಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಈ ಕಾಲೇಜಿನಿಂದಲೇ ಆರಂಭಗೊಂಡಿದ್ದು, ಆರಂಭದಲ್ಲಿ ಬಿಗುವಿನ ವಾತಾವರಣ ಕಂಡು ಬಂದರೂ ಸಹ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಹಿಜಾಬ್ ವಿಚಾರಣೆ ಉಚ್ಛ ನ್ಯಾಯಾಲಯದಲ್ಲಿ ಆರಂಭಗೊಂಡ ನಂತರ ಕಾಲೇಜಿನ ಆಡಳಿತ ಮಂಡಳಿ ಎಚ್ಚರಿಕೆ ನಡೆಗಳನ್ನು ಅನುಸರಿಸಿದ ಹಿನ್ನಲೆಯಲ್ಲಿ ವಿವಾದ ತಣ್ಣಗಾಗಿದ್ದು, ಬುಧವಾರ ಕಾಲೇಜು ಆರಂಭಗೊಂಡರೂ ಸಹ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸದೆ ಮನೆಗಳಿಲ್ಲಿಯೇ ಉಳಿದುಕೊಂಡಿದ್ದರು. ಆದರೆ ಗುರುವಾರ ಏಕಾಏಕಿ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ್ದು, ಈ ವಿದ್ಯಾರ್ಥಿನಿಯರನ್ನು ಕಾಲೇಜು ಮಂಡಳಿ ತರಗತಿಗಳಿಗೆ ಕಳುಹಿಸದೆ ಸುಮಾರು ೨ ಗಂಟೆಗೂ ಹೆಚ್ಚು ಸಮಯ ನ್ಯಾಯಾಲಯದ ಆದೇಶ ಹಾಗು ಸರ್ಕಾರದ ಕ್ರಮಗಳನ್ನು ವಿವರಿಸುವ ಮೂಲಕ ಮನವೊಲಿಕೆಗೆ ಪ್ರಯತ್ನಿಸಿತು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ನಮಗೆ ಮೊದಲು ಹಿಜಾಬ್ ಮುಖ್ಯವಾಗಿದ್ದು, ನಂತರ ಶಿಕ್ಷಣ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ನ್ಯಾಯಾಲಯದ ತೀರ್ಪು ಬರುವವರೆಗೂ ಕಾಲೇಜಿಗೆ ಬರುವುದಿಲ್ಲ ಎಂದು ಬಿಗಿಪಟ್ಟು ಹಿಡಿಯುವ ಜೊತೆಗೆ ಈ ಸಂಬಂಧ ವಿದ್ಯಾರ್ಥಿನಿಯರು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮನೆಗಳಿಗೆ ಹಿಂದಿರುಗಿದ್ದಾರೆ.