ಬಿಜೆಪಿ ಸೇರಿದ ಅಪ್ಪಾಜಿ ಶಿಷ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್
![](https://blogger.googleusercontent.com/img/a/AVvXsEhC829jAGGWBZO3IVdMsvRoumOGOYQu7Y0KjZR9dnyBIWymUZp2C-tnqKvZNWEbJkY4rV0tG6lupSDV-RwNb0_-ZNCOlbkSgmtevB_y7gwlkz1Jna7TydoPJKf8guH1bEwiutHreV47orZk-Rqu41YofXRb7jPd1tTQbcYFvpIBNlCuWYKESM_aOZ4SDg=w400-h148-rw)
ಭದ್ರಾವತಿಯಲ್ಲಿ ಅಪ್ಪಾಜಿ ಬೆಂಬಲಿಗರಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷ ಫೀರ್ ಷರೀಫ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಿರುವುದು.
* ಅನಂತಕುಮಾರ್
ಭದ್ರಾವತಿ, ಫೆ. ೧೯: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಿಧನದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೆಣಕಾಡುತ್ತಿದ್ದು, ಈ ನಡುವೆ ಇದೀಗ ಅಪ್ಪಾಜಿಯೊಂದಿಗೆ ಬಹಳ ವರ್ಷಗಳಿಂದ ಒಡನಾಟ ಹೊಂದಿದ್ದ ಮುಖಂಡರುಗಳು ಪಕ್ಷಾಂತರಗೊಳ್ಳುತ್ತಿದ್ದಾರೆ. ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ್ದ ನಂತರ ಕ್ಷೇತ್ರದ ರಾಜಕೀಯ ವಿದ್ಯಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದು, ಲಿಂಗಾಯಿತ ಮತ್ತು ಒಕ್ಕಲಿಗ ಪ್ರಮುಖ ಸಮುದಾಯಗಳು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಳೆದ ೩ ದಶಕಗಳಿಂದ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇದಕ್ಕೂ ಮೊದಲು ಮುಸ್ಲಿಂ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುತ್ತಿದ್ದರು.
ಕ್ಷೇತ್ರದಲ್ಲಿ ಅಪ್ಪಾಜಿಯನ್ನು ಒಕ್ಕಲಿಗ ಸಮುದಾಯದ ಜೊತೆಗೆ ದಲಿತ ಹಾಗು ಹಿಂದುಳಿದ ಸಮುದಾಯಗಳು ಸಹ ಬೆಂಬಲಿಸುತ್ತಿದ್ದವು. ಸುಮಾರು ೪೦ ಸಾವಿರಕ್ಕೂ ಹೆಚ್ಚಿನ ವರ್ಚಸ್ಸಿನ ಮತಗಳನ್ನು ಅಪ್ಪಾಜಿ ಹೊಂದಿದ್ದರು. ಇದೆ ರೀತಿ ಶಾಸಕ ಸಂಗಮೇಶ್ವರನ್ನು ಲಿಂಗಾಯಿತ ಸಮುದಾಯದ ಜೊತೆಗೆ ಮುಸ್ಲಿಂ ಹಾಗು ದಲಿತ ಸಮುದಾಯಗಳು ಬೆಂಬಲಿಸುತ್ತಿವೆ. ಸಂಗಮೇಶ್ವರ್ ಸಹ ಸುಮಾರು ೪೦ ಸಾವಿರಕ್ಕೂ ಹೆಚ್ಚಿನ ವರ್ಚಸ್ಸಿನ ಮತಗಳನ್ನು ಹೊಂದಿದ್ದಾರೆ. ಇದೀಗ ಅಪ್ಪಾಜಿ ಇಲ್ಲವಾಗಿದ್ದು, ಅವರ ವರ್ಚಸ್ಸಿನ ಮತಗಳು ಯಾರಿಗೆ ಎಂಬ ಪ್ರಶ್ನೆಗಳು ಎದುರಾಗಿವೆ. ಈ ನಡುವೆ ಆರಂಭದಿಂದಲೂ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿರುವ ಬೆಂಬಲಿಗರು ಇದೀಗ ಪಕ್ಷಾಂತರಗೊಳ್ಳುತ್ತಿರುವುದು ಜೆಡಿಎಸ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಶಾರದ ಅಪ್ಪಾಜಿಯವರನ್ನು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ಈ ನಡುವೆ ನಡೆಯುತ್ತಿರುವ ಬೆಳವಣಿಗೆಗಳು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ವ್ಯಾಪಕ ಪರಿಣಾಮ ಉಂಟು ಮಾಡುವ ಲಕ್ಷಣಗಳು ಕಂಡು ಬರುತ್ತಿವೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ :
ಬಹಳ ವರ್ಷಗಳಿಂದ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರಾದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷ ಫೀರ್ ಷರೀಫ್, ನಗರಸಭೆ ಮಾಜಿ ಸದಸ್ಯ ಶಿವರಾಜ್, ಮಡಿವಾಳ ಸಮಾಜದ ಶಿವಮಾದು ಸೇರಿದಂತೆ ಇನ್ನಿತರರು ಸಂಗಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ನಂತರ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿರುವ ಸಂಗಮೇಶ್ವರ್ ಇದೀಗ ನಗರ ವ್ಯಾಪ್ತಿಯಲ್ಲೂ ಮತ್ತಷ್ಟು ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ಈಗಾಗಲೇ ನಗರಸಭೆ ಆಡಳಿತ ಚುಕ್ಕಾಣಿ ಸಹ ಹಿಡಿದಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಅಪ್ಪಾಜಿ ಬೆಂಬಲಿಗರಿಗೆ ತಕ್ಷಣವೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಂಬಲಿಗರು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಸಂಗಮೇಶ್ವರ್ ಪ್ರಾಬಲ್ಯ ಮತ್ತುಷ್ಟು ಹೆಚ್ಚಾಗುವ ಸಾಧ್ಯತೆ ಇದೀಗ ಕಂಡು ಬರುತ್ತಿದೆ.
ಬಿಜೆಪಿ ಸೇರಿದ ಅಪ್ಪಾಜಿ ಶಿಷ್ಯ ಎಸ್. ಕುಮಾರ್:
ಅಪ್ಪಾಜಿಯವರ ಬಹಳ ವರ್ಷಗಳ ಒಡನಾಡಿ, ಅವರ ಶಿಷ್ಯ ಎಸ್. ಕುಮಾರ್ ಇದೀಗ ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ ಸಂದರ್ಭದಲ್ಲಿ ಅಪ್ಪಾಜಿಯೊಂದಿಗೆ ವೈಷಮ್ಯ ಬೆಳೆಸಿಕೊಂಡಿದ್ದ ಕುಮಾರ್ ಹಂತ ಹಂತವಾಗಿ ಅಪ್ಪಾಜಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಈ ನಡುವೆಯೂ ಅಪ್ಪಾಜಿ ಕುಮಾರ್‌ರವರ ಪತ್ನಿ ಜ್ಯೋತಿಯವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಮಾಡಿದ್ದರು. ಇದರ ನಡುವೆಯೂ ಕುಮಾರ್ ಜೆಡಿಎಸ್ ತೊರೆಯುವ ಲಕ್ಷಣಗಳು ಕಂಡು ಬಂದಿದ್ದವು. ಅಪ್ಪಾಜಿ ನಿಧನದ ನಂತರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಂಗಮೇಶ್ವರ್ ಬೆಂಬಲಿಸಿದ್ದರು. ಆದರೂ ಸಹ ಜೆಡಿಎಸ್ ಕುಮಾರ್ ಅವರನ್ನು ಕಡೆಗಣಿಸದೆ ನಗರಸಭೆ ಚುನಾವಣೆ ಜವಾಬ್ದಾರಿಯನ್ನು ವಹಿಸಿತ್ತು. ಆದರೆ ನಿರೀಕ್ಷೆಯಂತೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಎಸ್. ಕುಮಾರ್ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಈ ನಡುವೆ ಕರ್ನಾಟಕ ರಾಜ್ಯ ಒಕ್ಕಲಿಗರ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಕುಮಾರ್ ಸೋಲು ಕಂಡಿದ್ದಾರೆ. ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ವ್ಯಾಪಕ ಪರಿಣಾಮ ಉಂಟು ಮಾಡಲಿದೆ ಎನ್ನಲಾಗಿದೆ.