ನಟ, ಪ್ರಗತಿಪರ ಚಿಂತಕ ಚೇತನ್ ಬಿಡುಗಡೆಗೆ ಆಗ್ರಹ
ಪ್ರಗತಿಪರ ಸಂಘಟನೆಗಳ ವತಿಯಿಂದ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ನಟ, ಪ್ರಗತಿಪರ ಚಿಂತಕ ಚೇತನ್ ಬಂಧನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಫೆ. ೨೫: ಈ ದೇಶದ ಪ್ರಜೆಗಳ ಸಂವಿಧಾನ ಬದ್ಧ ಹಕ್ಕುಗಳನ್ನು ಬಲವಂತವಾಗಿ ಮೊಟಕುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು, ಯಾರು ಸಹ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ, ಪ್ರಗತಿಪರ ಚಿಂತಕ ಪ್ರೊ. ಎಂ. ಚಂದ್ರಶೇಖರಯ್ಯ ಆರೋಪಿಸಿದರು.
ಅವರು ಶುಕ್ರವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ತಾಲೂಕು ಕಛೇರಿ ಮುಂಭಾಗ ನಟ, ಪ್ರಗತಿಪರ ಚಿಂತಕ ಚೇತನ್ ಬಂಧನ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಅನ್ಯಾಯದ ವಿರುದ್ಧ ಯಾರು ಸಹ ಧ್ವನಿ ಎತ್ತುವಂತಿಲ್ಲ. ಒಂದು ವೇಳೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಬಲವಂತವಾಗಿ ಕ್ರಮ ಕೈಗೊಂಡು ಧ್ವನಿ ಎತ್ತದಂತೆ ಎಚ್ಚರಿಸುವ ಮೂಲಕ ಸಮಾಜದಲ್ಲಿ ಆತಂಕ ಉಂಟು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶದ ಬಹುತೇಕ ಕಾರಾಗೃಹಗಳಲ್ಲಿ ಕಾರಣವಿಲ್ಲದೆ ಬಂಧಿತರಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಾಲಿನಲ್ಲಿ ಇದೀಗ ನಟ, ಪ್ರಗತಿಪರ ಚಿಂತಕ ಚೇತನ್ ಸಹ ಸೇರಿಕೊಂಡಿದ್ದಾರೆಂದು ಆರೋಪಿಸಿದರು.
ಪೊಲೀಸರು ತಕ್ಷಣ ಚೇತನ್‌ರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರಮುಖವಾದ ಸುರೇಶ್, ಸತ್ಯ ಭದ್ರಾವತಿ, ಚಿನ್ನಯ್ಯ, ಬಾಲಕೃಷ್ಣ, ಜಿ. ರಾಜು, ನಿತ್ಯಾನಂದ, ಜಯರಾಜ್, ಮಹೇಶ್, ಅರುಣ್, ಈಶ್ವರಪ್ಪ, ಜೆಬಿಟಿ ಬಾಬು, ರಾಜೇಂದ್ರ, ಜಗದೀಶ್, ಟಿಪ್ಪು ಸುಲ್ತಾನ್, ವೆಂಕಟೇಶ್, ಜಿಂಕ್ ಲೈನ್ ಮಣಿ, ಕಾಣಿಕ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.