ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಶಿವಮೊಗ್ಗ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತಂಡ ಪಡೆದುಕೊಂಡಿತು.
ಭದ್ರಾವತಿ, ಮಾ. ೩: ಇಂದಿನ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಹೆಚ್ಚಾಗಿ ಶ್ರಮದಾಯಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸಹ ಆರೋಗ್ಯವಂತರಾಗಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
ಅವರು ಗುರುವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆ ಮತ್ತು ವಿ.ವಿ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಬದುಕಿನಲ್ಲಿ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗಿದ್ದು, ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕಾಗಿದೆ. ಆಧುನಿಕ ಯಂತ್ರಗಳನ್ನು ಬಳಸಿ ಕಸರತ್ತು ನಡೆಸುವ ಬದಲು ಶ್ರಮದಾಯಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಶ್ರಮದಾಯಕ ಕ್ರೀಡೆಯಾದ ಗುಡ್ಡಗಾಡು ಓಟದ ಸ್ಪರ್ಧೆ ಹೆಚ್ಚು ನೆರವಾಗಲಿದೆ ಎಂದರು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಇಂದು ನಾವು ನಮ್ಮ ಮಕ್ಕಳಿಗೆ ಕೇವಲ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತಿದ್ದೇವೆ ಹೊರತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಿಲ್ಲ. ಇದರಿಂದಾಗಿ ಮಕ್ಕಳು ಸದೃಢವಾಗಿ ಆರೋಗ್ಯವಂತರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಹಿಂದೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿತ್ತು. ಇದರಿಂದಾಗಿ ಆನೇಕ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ವಿದ್ಯಾರ್ಥಿಗಳು ವಿದ್ಯೆ ಕಲಿಕೆ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಕಳೆದ ಸುಮಾರು ೨ ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಕ್ರೀಡಾ ಹಾಗು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಬೇಕೆಂಬ ಆಶಯ ಹೊಂದಲಾಗಿತ್ತು. ಆದರೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಇದೀಗ ನಮ್ಮ ಆಶಯ ನೆರವೇರಿದೆ ಎಂದರು.
ಕಾಲೇಜಿನ ಸರ್ವಾಂಗಿಣ ಬೆಳವಣಿಗೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹೆಚ್ಚಿನ ಸಹಕಾರ ನೀಡುತ್ತಿದ್ದು, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಎಲ್ಲರನ್ನು ಬೆರಗುಗೊಳಿಸುವಂತೆ ಇಂದು ಕಾಲೇಜು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳು ಜರುಗಿದವು. ಕುವೆಂಪು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ ವಿರೂಪಾಕ್ಷ, ಶಿಕ್ಷಣ ತಕ್ಷಣ ಎಚ್.ಎನ್ ಮಹಾರುದ್ರ, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಮಾಜಿ ಸದಸ್ಯ ಪುಟ್ಟೇಗೌಡ, ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಶ್ರೀನಿವಾಸಗೌಡ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಪರಮೇಶ್ವರಪ್ಪ, ರಾಜೇಶ್, ಆಕಾಶ್ ಬೋರತ್, ಸುರೇಂದ್ರ, ಶಿವಾಜಿರಾವ್, ಕೆ.ಎನ್ ನಾರಾಯಣ ಮೂರ್ತಿ, ಕೆ.ಎಲ್ ರಾಘವೇಂದ್ರ, ಫೇಸ್ ಕಂಪ್ಯೂಟರ್ ಮಾಲೀಕ ಅಬಿದಾಲಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ ಅಮೃತೇಶ್ವರ ಸ್ವಾಗತಿಸಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಭದ್ರಾವತಿ ಶಂಕರಘಟ್ಟ ಯುಸಿಪಿಇ ಕಾಲೇಜಿನ ತಂಡ ಪಡೆದುಕೊಂಡಿತು.
ಶಿವಮೊಗ್ಗ ಡಿವಿಎಸ್-ಶಂಕರಘಟ್ಟ ಯುಸಿಪಿಇ ಕಾಲೇಜುಗಳಿಗೆ ಪ್ರಥಮ ಬಹುಮಾನ :
ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶಿವಮೊಗ್ಗ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತಂಡ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ, ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ, ಹೊಸನಗರ ಶರಾವತಿ ಪ್ರಥಮ ದರ್ಜೆ ಕಾಲೇಜು ತೃತೀಯ ಬಹುಮಾನ ಹಾಗು ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಬಹುಮಾನ ಪಡೆದುಕೊಂಡವು.
ಮಹಿಳೆಯರ ವಿಭಾಗದಲ್ಲಿ ಭದ್ರಾವತಿ ಶಂಕರಘಟ್ಟ ಯುಸಿಪಿಇ ಕಾಲೇಜು ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಹಾಗು ಸಾಗರ ಶ್ರೀಮತಿ ಇಂದಿರಾಗಾಂಧಿ ಮಹಿಳಾ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡವು.