Friday, March 4, 2022

ಪ್ರತಿ ಬಾರಿ ಬಜೆಟ್‌ನಲ್ಲಿ ನಿರ್ಲಕ್ಷ್ಯ : ತುಕ್ಕು ಹಿಡಿದು ಪಳೆಯುಳಿಕೆಯಂತೆ ಕಾಣುತ್ತಿವೆ ಯಂತ್ರಗಳು, ಕಟ್ಟಡಗಳು

ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಮೈಸೂರು ಕಾಗದ ಕಾರ್ಖಾನೆ ಪುನಃಶ್ಚೇತನಗೊಳಿಸುವಲ್ಲಿ ದಿವ್ಯ ನಿರ್ಲಕ್ಷ್ಯ

ಮೈಸೂರು ಕಾಗದ ಕಾರ್ಖಾನೆ ಸಕ್ಕರೆ ಘಟಕಕ್ಕೆ ಕಬ್ಬು ಪೂರೈಸುವ ಮಾರ್ಗ.

* ಅನಂತಕುಮಾರ್
    ಭದ್ರಾವತಿ, ಮಾ. ೪: ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ನಗರದ ಮೈಸೂರು ಕಾಗದ ಕಾರ್ಖಾನೆಯ ಕೋಟ್ಯಾಂತರ ರು. ಮೌಲ್ಯದ ಯಂತ್ರಗಳು ಈಗಾಗಲೇ ಶೇ.೭೦ರಷ್ಟು ತುಕ್ಕು ಹಿಡಿದಿದ್ದು, ಗುಜರಿ ಸೇರುವುದು ಬಹುತೇಕ ಖಾತರಿಯಾದಂತೆ ಕಂಡು ಬರುತ್ತಿದೆ. ಈ ಬಾರಿ ಬಜೆಟ್‌ನಲ್ಲೂ ಕಾರ್ಖಾನೆ ಕುರಿತು ಪ್ರಸ್ತಾಪಿಸದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
    ಸುಮಾರು ೭ ದಶಕಗಳಿಗೂ ಹೆಚ್ಚಿನ ಭವ್ಯ ಪರಂಪರೆಯನ್ನು ಹೊಂದಿರುವ ಬೃಹತ್ ಕಾರ್ಖಾನೆಯ ಯಂತ್ರಗಳು ಸ್ಥಗಿತಗೊಂಡು ಸುಮಾರು ೭ ವರ್ಷಗಳು ಕಳೆದಿವೆ. ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭವಿಷ್ಯ ಆಲೋಚನೆಯೊಂದಿಗೆ, ಭಾರತರತ್ನ, ಶ್ರೇಷ್ಠ ತಂತ್ರಜ್ಞಾನಿ ಸರ್.ಎಂ. ವಿಶ್ವೇಶ್ವರಾಯ ಹಾಗು ದಿವಾನ್ ಸರ್ ಮಿರ್ಜಾಇಸ್ಮಾಯಿಲ್‌ರವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯಲ್ಲಿ ಇಂದು ಯಂತ್ರಗಳ, ಕಟ್ಟಡಗಳ ಪಳೆಯುಳಿಕೆಗಳು ಕಂಡು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ಯಾವುದೇ ನಿರ್ಧಾರ ಕೈಗೊಳ್ಳದೆ ಸರ್ಕಾರ ಮೌನಕ್ಕೆ ಶರಣಾಗಿರುವುದು ನಿಜಕ್ಕೂ ದಿವ್ಯ ನಿರ್ಲಕ್ಷ್ಯವಾಗಿದೆ ಎಂದರೆ ತಪ್ಪಾಗಲಾರದು.


ಶಶಿಕುಮಾರ್ ಎಸ್. ಗೌಡ

ಸರ್ಕಾರ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಲು ಸಿದ್ದವಿದೆ. ಆದರೆ ಎಂಪಿಎಂ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಿ ಪುನಃ ಆರಂಭಿಸಲು ಮುಂದೆ ಬರುತ್ತಿಲ್ಲ. ಈಗಾಗಲೇ ಎಂಪಿಎಂ ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿದಿವೆ. ಕಟ್ಟಡಗಳು ಶಿಥಿಲಗೊಂಡಿವೆ. ಕೋಟ್ಯಾಂತರ ರು. ಮೌಲ್ಯದ ಆಸ್ತಿಪಾಸ್ತಿಗಳು ಲೂಟಿಯಾಗಿವೆ. ಈ ಹಿನ್ನಲೆಯಲ್ಲಿ ಈ ಕಾರ್ಖಾನೆಯನ್ನು ಟೆಂಡರ್ ಮೂಲಕ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಪರ್ಯಾಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಐಟಿ ಕಂಪನಿ ಇನ್ನೂ ಬೆಳವಣಿಗೆ ಕಂಡಿಲ್ಲ. ಕೈಗಾರಿಕಾ ಪ್ರದೇಶ ಸಾಕಷ್ಟು ಅಭಿವೃದ್ಧಿಗೊಳ್ಳಬೇಕಾಗಿದೆ. ಯಾವುದನ್ನೂ ಸಹ ಕೈಗೊಳ್ಳದೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ಯಾವುದೇ ಬೆಳವಣಿಗೆ ಸಾದ್ಯವಿಲ್ಲ.  
                                                                        -ಶಶಿಕುಮಾರ್ ಎಸ್. ಗೌಡ, ರಾಜ್ಯ ಕಾರ್ಯದರ್ಶಿ, ಜೆಡಿಯು.


    ಕ್ಷೇತ್ರದಲ್ಲಿಯೇ ನೆಲೆ ಕಂಡುಕೊಂಡಿರುವ ಕಾರ್ಮಿಕ ಕುಟುಂಬಗಳು, ನಿರುದ್ಯೋಗಿಗಳು ಪ್ರತಿ ವರ್ಷ ಬಜೆಟ್‌ನಲ್ಲಿ ಕಾರ್ಖಾನೆ ಅಭಿವೃದ್ಧಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಇದುವರೆಗೂ ಯಾವ ಸರ್ಕಾರಗಳು ಸಹ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ದೃಢ ನಿರ್ಧಾರ ಕೈಗೊಂಡಿಲ್ಲ. ಮುಂದೆಯೂ ಕೈಗೊಳ್ಳುವ ನಿರೀಕ್ಷೆಯೂ ಇಲ್ಲ.
  ಎಂಪಿಎಂ ವಿಚಾರ ಒಂದೆಡೆ ಇರಲಿ, ಯಾವುದಾದರೂ ಹೊಸ ಕಾರ್ಖಾನೆಯನ್ನಾದರೂ ಆರಂಭಿಸಿ ಕ್ಷೇತ್ರದಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಭರವಸೆಯನ್ನು ಸರ್ಕಾರ ನೀಡುತ್ತಿಲ್ಲ. ನಗರ ಪ್ರದೇಶಕ್ಕೆ ಸಮೀಪದಲ್ಲಿರುವ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಂದಿಷ್ಟು ಬಂಡವಾಳ ಶಾಹಿಗಳಿಗೆ ಕಂಪನಿಗಳನ್ನು ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಬಿಟ್ಟರೇ ಬೇರೇನು ಮಾಡಿಲ್ಲ. ಈ ಕೈಗಾರಿಕಾ ಪ್ರದೇಶವನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.  


ಮೈಸೂರು ಕಾಗದ ಕಾರ್ಖಾನೆ

ಆಲೆಮನೆಯಲ್ಲಿ ಬೆಂಕಿ : ಲಕ್ಷಾಂತರ ರು. ನಷ್ಟ

ಆಲೆಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಭದ್ರಾವತಿ ತಾಲೂಕಿನ ಹೊಸ ಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
    ಭದ್ರಾವತಿ, ಮಾ. ೪: ಆಲೆಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಹೊಸ ಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
    ಹೊಸ ಕೋಡಿಹಳ್ಳಿ ಗ್ರಾಮದ ವಿ. ಕೃಷ್ಣಪ್ಪ ಎಂಬುವವರಿಗೆ ಸೇರಿದಂತೆ ಆಲೆಮನೆಯ ಶೆಡ್‌ನಲ್ಲಿ  ಕಬ್ಬಿನ ಚರಟ ಮತ್ತು ತೆಂಗಿನ ಕಾಯಿ ಸಿಪ್ಪೆ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸುಮಾರು ೨ ಲಕ್ಷ ರು. ನಷ್ಟ ಉಂಟಾಗಿದೆ ಅಂದಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ನಗರದ ಅಗ್ನಿಶಾಮಕ ಠಾಣೆಯ ಎನ್. ವಸಂತಕುಮಾರ್ ಮತ್ತು ಶಿವಮೊಗ್ಗ ಅಗ್ನಿ ಶಾಮಕ ಠಾಣೆಯ ಕೆ.ಎನ್ ಪ್ರವೀಣ್ ನೇತೃತ್ವದ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

Thursday, March 3, 2022

ಕುವೆಂಪು ವಿ.ವಿ ದೂರ ಶಿಕ್ಷಣ ನಿರ್ದೇಶನಾಲಯದ ಕುಲಸಚಿವರಾಗಿ ನವೀನ್ ಕುಮಾರ್, ನಿರ್ದೇಶಕರಾಗಿ ಬಿರಾದಾರ ಅಧಿಕಾರ ಸ್ವೀಕಾರ


ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ನೂತನ ಕುಲಸಚಿವ(ಮೌಲ್ಯಮಾಪನ)ರಾಗಿ ಪ್ರೊ. ಎಸ್.ಕೆ ನವೀನ್ ಕುಮಾರ್ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ಪ್ರೊ.ಬಿ.ಎಸ್. ಬಿರಾದಾರ ಗುರುವಾರ ಅಧಿಕಾರ ವಹಿಸಿಕೊಂಡರು.
  ಭದ್ರಾವತಿ, ಮಾ. ೩: ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ನೂತನ ಕುಲಸಚಿವ(ಮೌಲ್ಯಮಾಪನ)ರಾಗಿ ಪ್ರೊ. ಎಸ್.ಕೆ ನವೀನ್ ಕುಮಾರ್ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ಪ್ರೊ.ಬಿ.ಎಸ್. ಬಿರಾದಾರ ಗುರುವಾರ ಅಧಿಕಾರ ವಹಿಸಿಕೊಂಡರು.
 ಮಂಗಳೂರು ವಿಶ್ವ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಧ್ಯಯನ ವಿಭಾಗದ ಪ್ರೊ. ಎಸ್.ಕೆ ನವೀನ್‌ಕುಮಾರ್‌ರವರನ್ನು ಕುಲಸಚಿವ(ಮೌಲ್ಯಮಾಪನ)ರಾಗಿ ಬುಧವಾರ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿತ್ತು.  ಅಲ್ಲದೆ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಮುಂದುವರೆಯುವಂತೆ ಪ್ರೊ. ಬಿ.ಎಸ್. ಬಿರಾದಾರ ಅವರಿಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಈ ಇಬ್ಬರು ಸಹ ಅಧಿಕಾರ ವಹಿಸಿಕೊಂಡರು.
    ಕುಲಸಚಿವರಾದ ಜಿ. ಅನುರಾಧ, ಡಾ. ಕೆ. ಆರ್. ಮಂಜುನಾಥ್, ಡಾ. ಬಿ.ಇ. ಕುಮಾರಸ್ವಾಮಿ, ಪರೀಕ್ಷಾಂಗ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೈಹಿಕ ಆರೋಗ್ಯಕ್ಕೆ ವಿದ್ಯಾಭ್ಯಾಸದ ಜೊತೆಗೆ ಶ್ರಮದಾಯಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ : ಗೀತಾ ರಾಜ್‌ಕುಮಾರ್

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಶಿವಮೊಗ್ಗ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತಂಡ ಪಡೆದುಕೊಂಡಿತು.
    ಭದ್ರಾವತಿ, ಮಾ. ೩: ಇಂದಿನ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಹೆಚ್ಚಾಗಿ ಶ್ರಮದಾಯಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸಹ ಆರೋಗ್ಯವಂತರಾಗಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
ಅವರು ಗುರುವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆ ಮತ್ತು ವಿ.ವಿ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ಆಧುನಿಕ ಬದುಕಿನಲ್ಲಿ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗಿದ್ದು, ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕಾಗಿದೆ. ಆಧುನಿಕ ಯಂತ್ರಗಳನ್ನು ಬಳಸಿ ಕಸರತ್ತು ನಡೆಸುವ ಬದಲು ಶ್ರಮದಾಯಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಶ್ರಮದಾಯಕ ಕ್ರೀಡೆಯಾದ ಗುಡ್ಡಗಾಡು ಓಟದ ಸ್ಪರ್ಧೆ ಹೆಚ್ಚು ನೆರವಾಗಲಿದೆ ಎಂದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಇಂದು ನಾವು ನಮ್ಮ ಮಕ್ಕಳಿಗೆ ಕೇವಲ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತಿದ್ದೇವೆ ಹೊರತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಿಲ್ಲ. ಇದರಿಂದಾಗಿ ಮಕ್ಕಳು ಸದೃಢವಾಗಿ ಆರೋಗ್ಯವಂತರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಹಿಂದೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿತ್ತು. ಇದರಿಂದಾಗಿ ಆನೇಕ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ವಿದ್ಯಾರ್ಥಿಗಳು ವಿದ್ಯೆ ಕಲಿಕೆ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಬೇಕೆಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಕಳೆದ ಸುಮಾರು ೨ ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಕ್ರೀಡಾ ಹಾಗು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಬೇಕೆಂಬ ಆಶಯ ಹೊಂದಲಾಗಿತ್ತು. ಆದರೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಇದೀಗ ನಮ್ಮ ಆಶಯ ನೆರವೇರಿದೆ ಎಂದರು.
    ಕಾಲೇಜಿನ ಸರ್ವಾಂಗಿಣ ಬೆಳವಣಿಗೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹೆಚ್ಚಿನ ಸಹಕಾರ ನೀಡುತ್ತಿದ್ದು, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಎಲ್ಲರನ್ನು ಬೆರಗುಗೊಳಿಸುವಂತೆ ಇಂದು ಕಾಲೇಜು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
    ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳು ಜರುಗಿದವು. ಕುವೆಂಪು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ ವಿರೂಪಾಕ್ಷ, ಶಿಕ್ಷಣ ತಕ್ಷಣ ಎಚ್.ಎನ್ ಮಹಾರುದ್ರ, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಮಾಜಿ ಸದಸ್ಯ ಪುಟ್ಟೇಗೌಡ, ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಶ್ರೀನಿವಾಸಗೌಡ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಪರಮೇಶ್ವರಪ್ಪ, ರಾಜೇಶ್, ಆಕಾಶ್ ಬೋರತ್, ಸುರೇಂದ್ರ, ಶಿವಾಜಿರಾವ್, ಕೆ.ಎನ್ ನಾರಾಯಣ ಮೂರ್ತಿ, ಕೆ.ಎಲ್ ರಾಘವೇಂದ್ರ, ಫೇಸ್ ಕಂಪ್ಯೂಟರ್ ಮಾಲೀಕ ಅಬಿದಾಲಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ ಅಮೃತೇಶ್ವರ ಸ್ವಾಗತಿಸಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ 'ಗುಡ್ಡಗಾಡು' ಓಟದ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಭದ್ರಾವತಿ ಶಂಕರಘಟ್ಟ ಯುಸಿಪಿಇ ಕಾಲೇಜಿನ ತಂಡ ಪಡೆದುಕೊಂಡಿತು.  

ಶಿವಮೊಗ್ಗ ಡಿವಿಎಸ್-ಶಂಕರಘಟ್ಟ ಯುಸಿಪಿಇ ಕಾಲೇಜುಗಳಿಗೆ ಪ್ರಥಮ ಬಹುಮಾನ :

    ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶಿವಮೊಗ್ಗ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತಂಡ ಸಮಗ್ರ ಪ್ರಶಸ್ತಿ ಮೊದಲ ಬಹುಮಾನ, ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ, ಹೊಸನಗರ ಶರಾವತಿ ಪ್ರಥಮ ದರ್ಜೆ ಕಾಲೇಜು ತೃತೀಯ ಬಹುಮಾನ ಹಾಗು ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಬಹುಮಾನ ಪಡೆದುಕೊಂಡವು.
    ಮಹಿಳೆಯರ ವಿಭಾಗದಲ್ಲಿ ಭದ್ರಾವತಿ ಶಂಕರಘಟ್ಟ ಯುಸಿಪಿಇ ಕಾಲೇಜು ಸಮಗ್ರ ಪ್ರಶಸ್ತಿ ಮೊದಲ ಬಹುಮಾನ ಹಾಗು ಸಾಗರ ಶ್ರೀಮತಿ ಇಂದಿರಾಗಾಂಧಿ ಮಹಿಳಾ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡವು.
  

Wednesday, March 2, 2022

ಭದ್ರಾವತಿ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಮಹಾಶಿವರಾತ್ರಿ

ಭದ್ರಾವತಿ ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ಮಾ. ೨: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಾಮಾರಿ ಕೋವಿಡ್ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಹಾಗು ಮಧ್ಯಮ ವರ್ಗದ ಶ್ರೀಸಾಮಾನ್ಯರು ಸಹ ಹಬ್ಬದ ಆಚರಣೆಯಲ್ಲಿ ತೊಡಗುವ ಮೂಲಕ ಸಂಭ್ರಮಿಸಿದರು. 
    ಬಹುತೇಕ ದೇವಾಲಯಗಳಲ್ಲಿ ಭಕ್ತ ಸಮೂಹವೇ ಕಂಡು ಬಂದಿತು.  ದೇವಾಲಯಗಳು ಹಸಿರು ತೋರುಣಗಳಿಂದ, ವಿದ್ಯುತ್ ಹಾಗು ಪುಷ್ಪಾಂಲಕಾರಗಳಿಂದ ಆಕರ್ಷಕವಾಗಿ ಕಂಗೊಳಿಸಿದವು. ಹಗಲು-ರಾತ್ರಿ ಬಿಡುವಿಲ್ಲದೆ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೆ ಪೂರಕವೆಂಬಂತೆ ಭಕ್ತರು ಸಹ ಪಾಲ್ಗೊಂಡು ಭಕ್ತಿ ಮೆರೆದರು.
    ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ :
ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕೇಶವಪುರ ಬಡಾವಣೆಯ ಶ್ರೀ ಕೃಷ್ಣ ಸತ್ಸಂಗ ತಂದದಿಮದ ಭಜನೆ, ಹರಿಪ್ರಿಯ ಭಜನ ಮಂಡಳಿಯಿಂದ ಭಜನೆ, ಮನೋಜ್ ಕಿಶನ್ ನೃತ್ಯ ತಂಡದಿಂದ ನೃತ್ಯ ಹಾಗು ಧರ್ಮಶಾಸ್ರ್ತ ಭಜನ ಮಂಡಳಿಯ ಸುಬ್ಬಣ್ಣ ಮತ್ತು ತಂಡದಿಂದ ಭಜನೆ ಹಾಗು ತೀರ್ಥಹಳ್ಳಿ ಶ್ರೀ ಕ್ಷೇತ್ರ ಅಲಸೆಯ ಶ್ರೀ ಚಂಡಿಕೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಕಾರ್ಯಕ್ರಮಗಳು ಜರುಗಿದವು. ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.


ಭದ್ರಾವತಿ ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

    ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನ :
ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನ ದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ದೇವಸ್ಥಾನದ ಮುಖ್ಯ ಅರ್ಚಕ ತಿಪ್ಪೇಸ್ವಾಮಿ, ಟಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ವಾಗೀಶ್, ಶಿವಣ್ಣ, ಪ್ರಕಾಶ್, ಧರ್ಮರಾಜ್, ಮೇಘರಾಜ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ಜೇಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
    ಕುಟುಂಬ ಸದಸ್ಯರೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಶಿವರಾತ್ರಿ ಆಚರಣೆ :
    ಮೇಕೆದಾಟು ಪಾದಯಾತ್ರೆ ಹಿನ್ನಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗಿದರು.
    ನಗರದ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನ, ಲೋಯರ್ ಹುತ್ತಾ ಬಿ.ಎಚ್ ರಸ್ತೆಯಲ್ಲಿರುವ ಭದ್ರೇಶ್ವರ ದೇವಸ್ಥಾನ, ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ, ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ಈಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇವರೊಂದಿಗೆ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ಪಾಲ್ಗೊಂಡಿದ್ದರು.
    ನಗರದ ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ, ಕಾಗದನಗರದ ಈಶ್ವರ ದೇವಸ್ಥಾನ, ಜನ್ನಾಪುರ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕೆ.ಸಿ ಬಡಾವಣೆ ಹಾಲಪ್ಪ ಶೆಡ್‌ನಲ್ಲಿರುವ ನಾಗ ಬಣ, ವೀರಾಪುರ ಹುಲಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.  


ಮೇಕೆದಾಟು ಪಾದಯಾತ್ರೆ ಹಿನ್ನಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗಿದರು.

ಕುವೆಂಪು ವಿ.ವಿ ಪರೀಕ್ಷಾ ಅಕ್ರಮ : ಕುಲಸಚಿವ ಎತ್ತಂಗಡಿ

ನೂತನ ಕುಲಸಚಿವರಾಗಿ ಮಂಗಳೂರಿನ ಪ್ರೊ. ಎಸ್.ಕೆ ನವೀನ್‌ಕುಮಾರ್ ನೇಮಕ

ಕುವೆಂಪು ವಿಶ್ವವಿದ್ಯಾನಿಲಯ
    ಭದ್ರಾವತಿ, ಮಾ. ೨: ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದ್ದು, ಈ ವಿಭಾಗದ ಕುಲಸಚಿವ(ಮೌಲ್ಯಮಾಪನ)ರನ್ನು ಎತ್ತಂಗಡಿ ಮಾಡಿದೆ.
    ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವ ಸಂಬಂಧ ಸಿಂಡಿಕೇಟ್ ಹಾಗು ವಿದ್ಯಾವಿಷಯಕ ಪರಿಷತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಸಬಂಧ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡಿದ್ದರು.  ಈ ನಡುವೆ ಪರೀಕ್ಷೆ ನಡೆಸಲು ಅವಕಾಶವಿದ್ದರೂ ಸಹ ವಿನಾಕಾರಣ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವ ಹಿಂದೆ ಸಾಕಷ್ಟು ಅಕ್ರಮ, ಅವ್ಯವಹಾರಗಳು ನಡೆದಿರುವ ಬಗ್ಗೆ ಆರೋಪಿಸಿ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು.
    ಈ ಹಿನ್ನಲೆಯಲ್ಲಿ ಬುಧವಾರ ಸರ್ಕಾರ ನಿರ್ಣಯ ಕೈಗೊಂಡು ದೂರ ಶಿಕ್ಷಣ ನಿರ್ದೇಶನಾಲಯದ ಕುಲಸಚಿವರು(ಮೌಲ್ಯಮಾಪನ) ಹುದ್ದೆಗೆ ಮಂಗಳೂರು ವಿಶ್ವ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಧ್ಯಯನ ವಿಭಾಗದ ಪ್ರೊ. ಎಸ್.ಕೆ ನವೀನ್‌ಕುಮಾರ್‌ರವರನ್ನು ನೇಮಕಗೊಳಿಸಿದೆ. ಅಲ್ಲದೆ ಪ್ರಸ್ತುತ ಈ ಹುದ್ದೆಯಲ್ಲಿರುವ ಪ್ರೊ. ಸಿ.ಎಂ ತ್ಯಾಗರಾಜರವರನ್ನು ಪುನಃ ಅವರ ಹಿಂದಿನ ಹುದ್ದೆಯಾದ ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ವ್ಯವಹಾರ ನಿರ್ವಹಣೆ ವಿಭಾಗಕ್ಕೆ ವರ್ಗಾಹಿಸಿ ಆದೇಶಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಸರ್ಕಾರ ಕೈಗೊಂಡಿರುವ ನಡವಳಿಗಳ ಪ್ರತಿಯಲ್ಲಿ ತಿಳಿಸಿದ್ದಾರೆ.
    ನಿರ್ದೇಶಕರಾಗಿ ಡಾ.ಬಿ.ಎಸ್ ಬಿರಾದಾರ ಮುಂದುವರಿಕೆ:
ದೂರ ಶಿಕ್ಷಣ ನಿರ್ದೇಶನಾಲಯದಿಂದ ವಿಶ್ವ ವಿದ್ಯಾಲಯಕ್ಕೆ ಬರಬೇಕಾದ ಕೋಟ್ಯಾಂತರ ರು. ಬಾಕಿ ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಸಂಬಂಧ ಹಾಗು ಇನ್ನಿತರ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಂಡಿಕೇಟ್ ಹಾಗು ವಿದ್ಯಾ ವಿಷಯಕ ಪರಿಷತ್ ಸದಸ್ಯರಿಂದ ಆರೋಪಗಳು ಕೇಳಿ ಬರುತ್ತಿದ್ದವು. ಅಲ್ಲದೆ ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಎನ್ ಯೋಗೀಶ್‌ರವರನ್ನು ಬಿಡುಗೊಳಿಸಿ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಎಸ್ ಬಿರಾದಾರ ಅವರನ್ನು ನೇಮಕಗೊಳಿಸಿದ್ದರು. ಆದರೆ ಕುಲಸಚಿವರ ಆದೇಶವನ್ನು ತಡೆಯಲಾಗಿತ್ತು.
    ಈ ಹಿನ್ನಲೆಯಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು ಈ ಸಂಬಂಧ ಸಹ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು.
    ಸರ್ಕಾರ ಬುಧವಾರ ಈ ದೂರಿನ ಬಗ್ಗೆ ಸಹ ನಿರ್ಣಯ ಕೈಗೊಂಡಿದ್ದು, ಕುಲಸಚಿವರ ಆದೇಶವನ್ನು ಎತ್ತಿ ಹಿಡಿದಿದೆ. ಡಾ. ಬಿ.ಎಸ್ ಬಿರಾದಾರ ಅವರನ್ನು ಮುಂದುವರೆಸುವಂತೆ ನಿರ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾದಪ್ಪನ ಸನ್ನಿಧಿಗೆ ಹರಿದ ಬಂದ ಭಕ್ತ ಸಮೂಹ : ವೈಭವದ ಶಿವರಾತ್ರಿ ಆಚರಣೆ

ಬೆಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರಿಗೆ ಅನ್ನದಾಸೋಹ

ಭದ್ರಾವತಿ ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಹಿನ್ನಲೆಯಲ್ಲಿ ಬುಧವಾರ ಸಹ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
    ಭದ್ರಾವತಿ, ಫೆ. ೨: ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ಜರುಗಿತು.
    ಶ್ರೀ ಶಿವಶಂಕರ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ  ಗಂಗಾ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ-ಹವನ, ಹಾಲರವಿ ಉತ್ಸವ, ಕೆಂಡೋತ್ಸವ, ರಾಜಬೀದಿ ಉತ್ಸವ, ಜಾಗರಣೆ, ಭಜನೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಎರಡು ದಿನಗಳ ಕಾಲ ಜರುಗಿದ ಧಾರ್ಮಿಕ ಆಚರಣೆಗಳಲ್ಲಿ ನಗರ ಹಾಗು ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು. ನಗರದ ಬೈಪಾಸ್ ರಸ್ತೆಯ ಸಮೀಪದಲ್ಲಿ ಅಡಕೆ, ತೆಂಗು ತೋಟ ಹಾಗು ಕಬ್ಬು, ಭತ್ತ ಜಮೀನುಗಳ ನಡುವೆ ಸುಂದರ ಪರಿಸರದಲ್ಲಿ ಈ ದೇವಸ್ಥಾನ ನೆಲೆ ನಿಂತಿದೆ. ಹಬ್ಬ ಹರಿದಿನಗಳಂದು ಸಾವಿರಾರು ಭಕ್ತಾಧಿಗಳು ಈ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದಾರೆ. ಅಲ್ಲದೆ ಸಣ್ಣ ಪ್ರಮಾಣದಲ್ಲಿ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಸಹ ಜರುಗುತ್ತಿವೆ.
    ಮೈಸೂರು ಚಾಮರಾಜನಗರದ ಮಲೆ ಮಹಾದೇಶ್ವರ ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯೇ ಬಂದು ಹೋಗುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಈ ದೇವಸ್ಥಾನಕ್ಕೆ ಇನ್ನೂ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅವಶ್ಯಕವಾಗಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ.


ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ.