Monday, March 7, 2022

ಮೋಜಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಮಹಿಳಾ ಕಾರ್ಮಿಕರು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಯೋಜನೆ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕ ಮಹಿಳೆಯರಿಗೆ ಈ ಬಾರಿ ವಿಶೇಷವಾಗಿ ಮೋಜಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ ೭: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕ ಮಹಿಳೆಯರಿಗೆ ಈ ಬಾರಿ ವಿಶೇಷವಾಗಿ ಮೋಜಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
    ಕಾರ್ಖಾನೆಯ ಎಚ್‌ಆರ್‌ಡಿ ಮತ್ತು ಪಿ.ಆರ್ ಇಲಾಖೆಗಳ ಸಹಕಾರದೊಂದಿಗೆ ೨ ದಿನಗಳ ಕಾಲ ಆಯೋಜಿಸಲಾಗಿದ್ದ ಮೋಜಿನ ಕ್ರೀಡೆಯಲ್ಲಿ ಸುಮಾರು ೫೦ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕರು ಪಾಲ್ಗೊಂಡು ಸಂಭ್ರಮಿಸಿದರು.
    ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಾರ್ಖಾನೆಯಲ್ಲಿ ವಿಶೇವವಾಗಿ ಅಚರಿಸಿಕೊಂಡು ಬರಲಾಗುತ್ತಿದ್ದು, ಮಾ.೮ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಖಾನೆ ಆಡಳಿತ ಮಂಡಳಿ ಸಮಸ್ತ ಮಹಿಳೆಯರಿಗೆ ಶುಭ ಕೋರಿದ್ದು, ಅಲ್ಲದೆ ಕಾರ್ಖಾನೆ ಆಡಳಿತ ಕಛೇರಿಯ ಸಭಾಂಗಣದಲ್ಲಿ ಮಧ್ಯಾಹ್ನ ೨.೩೦ ರಿಂದ ಸಾಂಸ್ಕೃತಿಕ ಹಾಗು ವಿಚಾರ ಸಂಕೀರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆ ಮತ್ತು ಸಬಲೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.  

Sunday, March 6, 2022

ಶಿವಮೊಗ್ಗ ಪ್ರತ್ಯೇಕ ಹಾಲು ಒಕ್ಕೂಟ, ವಾರ್ಡ್‌ಗಳಲ್ಲಿ ಕ್ಲಿನಿಕ್, ಯಶಸ್ವಿನಿ ಆರೋಗ್ಯ ಯೋಜನೆ ಅನುಷ್ಠಾನಗೊಳ್ಳಲಿ

ಶಿಮುಲ್ ಮಾಜಿ ಅಧ್ಯಕ್ಷ ಆನಂದ್, ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ಸರ್ಕಾರಕ್ಕೆ ಕೃತಜ್ಞತೆ

ಡಿ. ಆನಂದ್, ಶಿಮುಲ್ ಮಾಜಿ ಅಧ್ಯಕ್ಷರು, ಭದ್ರಾವತಿ

    ಭದ್ರಾವತಿ, ಮಾ. ೬: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಶಿವಮೊಗ್ಗ ಹಾಲು ಒಕ್ಕೂಟವನ್ನು ಪ್ರತ್ಯೇಕಿಸುವ ಕುರಿತು  ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳೆವಣಿಗೆಯಾಗಿದ್ದು, ಇದು ಅನುಷ್ಠಾನಗೊಂಡಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್ ತಿಳಿಸಿದ್ದಾರೆ.
    ಒಕ್ಕೂಟ ಪ್ರತ್ಯೇಕಿಸುವ ವಿಚಾರ ಹಲವಾರು ವರ್ಷಗಳಿಂದ ಉಳಿದುಕೊಂಡಿದ್ದು, ಪ್ರಸ್ತುತ ಒಕ್ಕೂಟ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಹಿನ್ನಲೆಯಲ್ಲಿ ಒಂದು ಜಿಲ್ಲೆಯವರು ಗಳಿಸುವ ಲಾಭ ೩ ಜಿಲ್ಲೆಗಳಿಗೆ ಹಂಚಿಕೆಯಾಗುತ್ತಿದೆ. ಇದರಿಂದಾಗಿ ಒಕ್ಕೂಟ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು ೨.೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಪೈಕಿ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಎರಡು ಜಿಲ್ಲೆಗಳು ಸೇರಿ ಪ್ರತಿದಿನ ಒಟ್ಟು ಸುಮಾರು ೩ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆದರೆ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆರೋಗ್ಯ ದೊದ್ಲಾ ಸೇರಿದಂತೆ ಖಾಸಗಿ ಕಂಪನಿಗಳ ಹಾಲು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಇದರಿಂದಾಗಿ ಒಕ್ಕೂಟದ ಹಾಲು ಉಳಿಯುತ್ತಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಒಕ್ಕೂಟ ರಚನೆಯಾದಲ್ಲಿ ಜಿಲ್ಲೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.


ಎಚ್. ರವಿಕುಮಾರ್, ಆಮ್ ಆದ್ಮಿ ಜಿಲ್ಲಾಧ್ಯಕ್ಷರು, ಭದ್ರಾವತಿ.

    ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಪ್ರಸ್ತಾವನೆಗೆ ಅಭಿನಂದನೆ :

    ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಸಮಾಧಾನಕರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದ್ದಾರೆ.
    ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ಬಡ ವರ್ಗದವರಿಗೆ ಗುಣಮಟ್ಟದ ಆರೋಗ್ಯ ನೀಡುವ ಹಿನ್ನಲೆಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಇದೆ ರೀತಿ ಇದೀಗ ರಾಜ್ಯದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಆರಂಭಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ತಕ್ಷಣ ಕ್ಲಿನಿಕ್‌ಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ.


ಸುನೀಲ್ ಗಾಯಕ್ವಾಡ್, ಯುವ ಮುಖಂಡರು, ಬಿಜೆಪಿ, ಭದ್ರಾವತಿ.

    ಯಶಸ್ವಿನಿ ಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲ:

    ರೈತ ನಾಯಕ, ಬಡವರ ಬಂಧು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಹಿಂದೆ ಆರಂಭಿಸಿದ್ದ ಯಶಸ್ವಿನಿ ಆರೋಗ್ಯ ಯೋಜನೆಗೆ ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಮರುಜೀವ ತುಂಬಲು ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ ಎಂದು ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ತಿಳಿಸಿದ್ದಾರೆ.
    ರೈತರಿಗೆ ಪ್ರಸ್ತುತ ಕೆಲವು ಆರೋಗ್ಯ ಯೋಜನೆಗಳು ಜಾರಿಯಲ್ಲಿದ್ದರೂ ಸಹ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಡಿಯೂರಪ್ಪನವರು ಆರಂಭಿಸಿದ ಯಶಸ್ವಿನಿ ಯೋಜನೆಯಿಂದ ಈ ಹಿಂದೆ ಸಾಕಷ್ಟು ರೈತರಿಗೆ ಹೆಚ್ಚಿನ ಅನುಕೂಲವಾಗಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಲವಾರು ಮಾರ್ಪಾಡುಗಳೊಂದಿಗೆ ಪುನಃ ಯಶಸ್ವಿನಿ ಯೋಜನೆ ಆರಂಭಿಸುವುದಾಗಿ ಪ್ರಸ್ತಾಪಿಸುವ ಜೊತೆಗೆ ರು. ೩೦೦ ಕೋ. ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ. ಯಶಸ್ವಿಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅಗಮುಡಿ ಸಮುದಾಯಕ್ಕೆ ಒಬಿಸಿ ಮೀಸಲಾತಿಗೆ ಪ್ರಧಾನಿಗೆ ಪತ್ರ : ಬಿಎಸ್‌ವೈ

೨೫ನೇ ವರ್ಷದ ರಜತ ಮಹೋತ್ಸವ, ಸಮುದಾಯ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಭರವಸೆ

ಭದ್ರಾವತಿ ಗಾಂಧಿನಗರದಲ್ಲಿ ಭಾನುವಾರ ಜರುಗಿದ ಅಗಮುಡಿ ಮೊದಲಿಯರ್ ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಮಾ. ೬: ಅಗಮುಡಿ ಸಮುದಾಯದವರಿಗೆ ಒಬಿಸಿ ಮೀಸಲಾತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.
ಅವರು ಭಾನುವಾರ ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
    ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರು ಮತ್ತು ತಮಿಳು ಸಮುದಾಯದವರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ನನ್ನ ಅಧಿಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್‌ರವರ ಪ್ರತಿಮೆ ಹಾಗು ತಮಿಳುನಾಡು ಚೆನ್ನೈನಲ್ಲಿ ರನ್ನರವರ ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು. ತಮಿಳು ಸಮುದಾಯದವರು ನನ್ನ ಮೇಲೆ ಅತ್ಯಂತ ವಿಶ್ವಾಸ ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಸಮುದಾಯದವರ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಜೊತೆಗೆ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
    ಶ್ರೀ ಕ್ಷೇತ್ರ ಭದ್ರಗಿರಿ ಅಭಿವೃದ್ಧಿ ಜೊತೆಗೆ ಶ್ರೀಗಳ ಆಶೀರ್ವಾದದೊಂದಿಗೆ ಸಮುದಾಯ ಭವನ ಸಹ ಹಂತ ಹಂತವಾಗಿ ಅಭಿವೃದ್ಧಿಗೊಳಿಸುವಲ್ಲಿ ಸಮುದಾಯದ ಆನೇಕ ಮಹನೀಯರ ಶ್ರಮ ಹೆಚ್ಚಿನದ್ದಾಗಿದೆ. ಇವರೆಲ್ಲರನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಇದೀಗ ಸಮುದಾಯಭವನದ ಲೋಕಾರ್ಪಣೆ ನೆರವೇರಿಸಲು ನನಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.



    ಅಗಮುಡಿ ಮೊದಲಿಯರ್ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಸಮುದಾಯದ ಎಲ್ಲರ ಪರಿಶ್ರಮದಿಂದಾಗಿ ಹಾಗು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಜಯೇಂದ್ರ ಸೇರಿದಂತೆ ಇನ್ನಿತರರ ಸಹಕಾರದಿಂದಾಗಿ ಇದೀಗ ನಮ್ಮ ಸಮುದಾಯಕ್ಕೂ ಒಂದು  ಸುಸಜ್ಜಿತವಾದ ಸಮುದಾಯ ಭವನ ಹೊಂದಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಗಮುಡಿ ಸಮುದಾಯದ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ರಾಜ್ಯದಲ್ಲಿ ೨ ಉಪ ಪಂಗಡಗಳನ್ನು ಹೊಂದಿದೆ. ನೂರಾರು ವರ್ಷಗಳಿಂದ ರಾಜ್ಯದಲ್ಲಿಯೇ ನೆಲೆಸಿರುವ ಸಮುದಾಯವರ ಏಳಿಗೆಗಾಗಿ ಒಬಿಸಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿದರು.
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ವಿ. ಕದಿರೇಶ್, ವಿಜಯ, ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ. ಸುರೇಶ್‌ಕುಮಾರ್, ಶ್ರೀ ಭದ್ರಗಿತಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್, ಸಂಘದ ಕಾರ್ಯದರ್ಶಿ ಪಿ. ದೊರೈ ಮತ್ತು ಎಂ. ಸುಬ್ರಮಣಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Saturday, March 5, 2022

ಸರ್.ಎಂ ವಿಶ್ವೇಶ್ವರಯ್ಯ ವಿತರಕರ ಸಂಘ ಉದ್ಘಾಟನೆ

ಭದ್ರಾವತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್.ಎಂ ವಿಶ್ವೇಶ್ವರಯ್ಯ ವಿತರಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ  ಶನಿವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ   ಕೆ.ಎಸ್ ಶೈಲೇಂದ್ರ ಮಾತನಾಡಿದರು.
    ಭದ್ರಾವತಿ, ಮಾ. ೫: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್.ಎಂ ವಿಶ್ವೇಶ್ವರಯ್ಯ ವಿತರಕರ ಸಂಘವನ್ನು ಶನಿವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಉದ್ಘಾಟಿಸಿದರು.
    ಸಂಘದ ಅಧ್ಯಕ್ಷ ಎ.ವಿ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಕೆ.ಎಸ್ ಶೈಲೇಂದ್ರ, ಹುಬ್ಬಳ್ಳಿ ಕೆಎಸ್‌ಪಿಡಿಎಎಫ್ ಅಧ್ಯಕ್ಷ ಗಿರೀಶ್ ಸುಂಕದ್, ಬೆಂಗಳೂರು ಕೆಎಫ್‌ಡಿಡಬ್ಲ್ಯೂಎ ಅಧ್ಯಕ್ಷ ಆರ್. ಜಯಂತ್ ಗಾಣಿಗ, ಉಪಾಧ್ಯಕ್ಷ ಬಿ. ವಸಂತ್‌ಕುಮಾರ್, ಶಿವಮೊಗ್ಗ ವಿತರಕರ ಸಂಘದ ಅಧ್ಯಕ್ಷ ಶಿವರಾಜ್ ಉಡುಗಣಿ, ಕಾರ್ಯದರ್ಶಿ ಕೆ.ಎಸ್ ಮೋಹನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


    ಉಪಾಧ್ಯಕ್ಷ ಎಸ್. ಮಧು, ಕಾರ್ಯದರ್ಶಿ ಪ್ರವೀಣ್‌ಕುಮಾರ್, ಸಹಕಾರ್ಯದರ್ಶಿ ಎಸ್.ಎನ್ ಶ್ರೀನಿವಾಸ್, ಖಜಾಂಚಿ ಕೆ.ಆರ್ ಸತೀಶ್, ನಿರ್ದೇಶಕರಾದ ಜಿ. ಅಶೋಕ್‌ಕುಮಾರ್ ಜೈನ್, ಎಸ್. ಅರುಣ್‌ಕುಮಾರ್, ಡಿ.ವಿ ಅಜಯ್‌ಬಾಬು, ಬಿ.ಆರ್ ಹರೀಶ್, ನವೀದ್‌ತಿಮ್ಮಸಾಗರ್, ಪಿ. ಉಮೇಶ್‌ಬಾಬು, ಎಂ. ರವಿಚಂದ್ರನ್ ಮತ್ತು ಮನ್ಸೂರ್ ಅಹಮದ್, ಆರ್. ಸಂತೋಷ್ ಮತ್ತು ಜೆ.ಎಸ್ ನಾಗರಾಜ್ ಸೇರಿದಂತೆ ವಿತರಕರು ಪಾಲ್ಗೊಂಡಿದ್ದರು.

ಮಾ.೬ರಂದು ರಜತ ಮಹೋತ್ಸವ, ಸಮುದಾಯ ಭವನ ಲೋಕಾರ್ಪಣೆ

ಅಗಮುಡಿ ಸಮುದಾಯ ಭವನ
    ಭದ್ರಾವತಿ, ಮಾ. ೫: ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಮಾ.೬ರ ಭಾನುವಾರ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಮುದಾಯ ಭವನ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಬೆಂಗಳೂರಿನ ಐಎಂಪಿಎ ಸಂಸ್ಥಾಪಕ ಡಾ.ಆರ್ ಅರುಣಾಚಲಂ, ಶ್ರೀ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಬಸವರಾಜ ಬೊಮ್ಮಾಯಿ ಬಜೆಟ್ ಘೋಷಣೆಗಳು ಅನುಷ್ಠಾನಗೊಳ್ಳುವುದು ಅನುಮಾನ : ಎಚ್.ಎಸ್ ಸುಂದರೇಶ್

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಶಾಸಕ ಬಿ.ಕೆ ಸಂಗಮೇಶ್ವರ್, ಡಿಸಿಸಿ ಬ್ಯಾಂಕ್ ಮಾಜಿ  ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಭದ್ರಾವತಿ, ಮಾ. ೫: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ  ಬಾರಿ ಮಂಡಿಸಿರುವ ಬಜೆಟ್ ಕೇವಲ ಚುನಾವಣೆ ತಂತ್ರಗಾರಿಕೆಯಾಗಿದ್ದು, ಬಜೆಟ್‌ನಲ್ಲಿ ಘೋಷಿಸಿರುವ  ಯೋಜನೆಗಳು ಅನುಷ್ಠಾನಗೊಳ್ಳುವುದು ಬಹುತೇಕ ಅನುಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಸುಂದರೇಶ್ ಹೇಳಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಬಜೆಟ್‌ನಿಂದ ಬಡವರು, ರೈತರು ಮತ್ತು ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಳೆದ ಸುಮಾರು ೩ ವರ್ಷದಿಂದ ಮಹಾಮಾರಿ ಕೊರೋನಾ ಪರಿಣಾಮ ಜನಸಾಮಾನ್ಯರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ನೀಡಿಲ್ಲ. ಅಗತ್ಯ ವಸ್ತುಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿಲ್ಲ. ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆ ರೂಪಿಸಿಲ್ಲ. ಅರ್ಹ ಬಡ ವಸತಿ ರಹಿತರಿಗೆ ಕಳೆದ ಬಜೆಟ್‌ನಲ್ಲಿ ವಸತಿ ಕಲ್ಪಿಸಿಕೊಡಲು ಘೋಷಣೆ ಮಾಡಲಾಗಿದ್ದು, ಆದರೆ ಇದುವರೆಗೂ ಒಂದೇ ಒಂದು ವಸತಿ ನಿರ್ಮಾಣ ಮಾಡಿಲ್ಲ. ಇದೀಗ ಪುನಃ ಹೊಸದಾಗಿ ಹೆಚ್ಚುವರಿ ಮಸತಿಗಳನ್ನು ನಿರ್ಮಿಸುವುದಾಗಿ ಘೋಷಣೆ ಮಾಡಲಾಗಿದೆ. ಶಾಲಾ-ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ  ಈ ಬಾರಿ ಬಜೆಟ್ ಶೂನ್ಯವಾಗಿದ್ದು, ಚುನಾವಣೆ ಉದ್ದೇಶದಿಂದ ಮಂಡಿಸಲಾಗಿರುವ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಘೋಷಿಸಲಾಗಿರುವ ಯಾವುದೇ ಘೋಷಣೆಗಳು ಅನುಷ್ಠಾನಗೊಳ್ಳುವುದಿಲ್ಲ ಎಂದರು.
    ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ :
    ಶಿವಮೊಗ್ಗದಲ್ಲಿ ಯಾವುದೋ ಹಿನ್ನಲೆಯಲ್ಲಿ ನಡೆದಿರುವ  ಹರ್ಷ ಕೊಲೆ ಪ್ರಕರಣವನ್ನು ಬಿಜೆಪಿ ಪಕ್ಷದ ಮುಖಂಡರು ಹಿಂದೂ ಕಾರ್ಯಕರ್ತನ ಕೊಲೆ ಎಂದು ಬಿಂಬಿಸುವ ಮೂಲಕ ಜಿಲ್ಲೆಯಲ್ಲಿ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ.  ವಿನಾಕಾರಣ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಭಯದ ವಾತಾವರಣ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ ಸುಂದರೇಶ್‌ರವರು ಹರ್ಷ ಕೊಲೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಸಹ ಖಂಡಿಸುತ್ತದೆ. ಹರ್ಷ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಬಯಸುತ್ತದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅದರಲ್ಲೂ ಭದ್ರಾವತಿ ತಾಲೂಕಿಗೆ ಶೂನ್ಯ ಕೊಡುಗೆಯಾಗಿದ್ದು, ತಾರತಮ್ಯ ಮಾಡಲಾಗಿದೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಚಾರ ಬಂದಾಗ ಅಭಿವೃದ್ಧಿ, ರಾಜಕೀಯ ಬಂದಾಗ ರಾಜಕಾರಣ ಮಾಡಬೇಕು. ಈ ಬಾರಿ ಬಜೆಟ್ ಕೇವಲ ಘೋಷಣೆ ಮಾತ್ರ ಸೀಮಿತವಾಗಿದೆ ಎಂದರು.
    ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗು ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತಗಳಿಗೆ ಬದ್ಧರಾಗಿ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ ಎಂದರು.
    ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪ್ರಮುಖರಾದ  ಸಿ.ಎಂ ಖಾದರ್, ಶಂಕರಘಟ್ಟ ರಮೇಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

ಛಲವಾದಿ ಸಮಾಜದ ಮುಖಂಡ, ಅಪ್ಪಾಜಿ ಬೆಂಬಲಿಗ ಬದರಿನಾರಾಯಣ ಕಾಂಗ್ರೆಸ್ ಸೇರ್ಪಡೆ


ಭದ್ರಾವತಿಯಲ್ಲಿ ಛಲವಾದಿ ಸಮಾಜದ ಮುಖಂಡ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ  ಬದರಿನಾರಾಯಣ ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

    ಭದ್ರಾವತಿ, ಮಾ. ೫: ಛಲವಾದಿ ಸಮಾಜದ ಮುಖಂಡ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ  ಬದರಿನಾರಾಯಣ ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
ಸುಮಾರು ೨ ದಶಕಗಳಿಗೂ ಹೆಚ್ಚು ಕಾಲ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಬದರಿನಾರಾಯಣರವರು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯುವ ಮೂಲಕ ೨ ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಅವರ ಪತ್ನಿ ಪ್ರೇಮಾ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಇದೀಗ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ನಗರದ ಬಿ.ಎಚ್ ರಸ್ತೆ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಪಕ್ಷದ ಸ್ಥಳೀಯ ಮುಖಂಡರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. 
ಜೆಡಿಎಸ್ ಪಕ್ಷದ ಮುಖಂಡರು, ಅಪ್ಪಾಜಿ ಬೆಂಬಲಿಗರಾದ ಫೀರ್ ಷರೀಫ್, ನಗರಸಭೆ ಮಾಜಿ ಸದಸ್ಯ ಶಿವರಾಜ್, ಶಿವಮಾಧು ಮತ್ತು ಬಿಜೆಪಿ ಪಕ್ಷದ ಕೆಲವು  ಮುಖಂಡರು ಸಹ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಜಾರ್ಜ್, ಸರ್ವಮಂಗಳ, ಕಾಂತರಾಜ್, ಆರ್. ಶ್ರೇಯಸ್, ಬಿ.ಎಂ ಮಂಜುನಾಥ್, ಅನುಸುಧಾ, ರಿಯಾಜ್ ಅಹಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಗರಸಭಾ ಸದಸ್ಯರು, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪ್ರಮುಖರಾದ  ಸಿ.ಎಂ ಖಾದರ್, ಶಂಕರಘಟ್ಟ ರಮೇಶ್, ಬಿ.ಕೆ ಜಗನ್ನಾಥ್, ಪ್ರಕಾಶ್‌ರಾವ್, ಬಿ. ಗಂಗಾಧರ್, ಕೃಷ್ಣಾನಾಯ್ಕ, ಅಭಿಲಾಷ್, ಪ್ರಾನ್ಸಿಸ್, ರಾಘವೇಂದ್ರ ಸರಾಟೆ, ಎಸ್.ಎಸ್ ಭೈರಪ್ಪ, ಎಚ್.ಎಂ ಮಹಾದೇವಯ್ಯ ಹಾಗು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.