ಮಂಗಳವಾರ, ಮಾರ್ಚ್ 22, 2022

ಮಾ.೨೫ರಂದು ಯುಗಾದಿ ಕವಿಗೋಷ್ಠಿ

    ಭದ್ರಾವತಿ, ಮಾ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.೨೫ರ ಮಧ್ಯಾಹ್ನ ೩ ಗಂಟೆಗೆ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ಯುಗಾದಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕವಿಗೋಷ್ಠಿ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮುಖ್ಯೋಪಾಧ್ಯಾಯ ಬಿ.ಎಚ್ ವಿರುಪಾಕ್ಷಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಕೋಡ್ಲುಯಜ್ಞಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕಸಾಪ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಸಿದ್ದೋಜಿರಾವ್, ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಎಸ್.ಬಿ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಸೋಮವಾರ, ಮಾರ್ಚ್ 21, 2022

ಅಖಿಲ ಭಾರತ ವಿಶ್ವವಿದ್ಯಾಲಯ ಸೇಪಕ್ ಟಕ್ರಾ ಪಂದ್ಯಾವಳಿಗೆ ಸುಂದರೇಶ್, ಕುಂಬರೇಶ್ ಆಯ್ಕೆ

ಪಿ. ಸುಂದರೇಶ್
    ಭದ್ರಾವತಿ, ಮಾ. ೨೧: ಉತ್ತರ ಪ್ರದೇಶದ ಬರೇಲಿ ಎಂಜೆಪಿ ರೋಹಿಲ್‌ಖಾಂಡ್ ವಿಶ್ವ ವಿದ್ಯಾಲಯದಲ್ಲಿ ಮಾ.೨೬ರ ವರೆಗೆ ನಡೆಯಲಿರುವ ಅಖಿಲ ಭಾರತ ವಿಶ್ವ ವಿದ್ಯಾಲಯ ಮಟ್ಟದ ಸೇಪಕ್ ಟಕ್ರಾ ಪಂದ್ಯಾವಳಿಗೆ ನಗರದ ಹೊಸಮನೆ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
    ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಗಳಾದ ಪಿ. ಸುಂದರೇಶ್ ಮತ್ತು  ಪಿ. ಕುಂಬರೇಶ್ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಸೇಪಕ್ ಟಕ್ರಾ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
    ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು, ಅಧ್ಯಾಪಕ ಮತ್ತು ಅಧ್ಯಾಪಕೇತರ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ಪಿ. ಸುಂದರೇಶ್ ಪರಮೇಶ್ ಮತ್ತು ಸೆಲ್ವಿ ಹಾಗು ಪಿ. ಕುಂಬರೇಶ್ ಪಾಂಡು ಮತ್ತು ಮಣಿ ದಂಪತಿ ಪುತ್ರರಾಗಿದ್ದಾರೆ.


 ಪಿ. ಕುಂಬರೇಶ್

ವಿಲಾಸರಾವ್ ಗಾಯಗ್ವಾಡ್ ನಿಧನ


ವಿಲಾಸರಾವ್ ಗಾಯಗ್ವಾಡ್
    ಭದ್ರಾವತಿ, ಮಾ. ೨೧: ತಾಲೂಕಿನ ದೇವರಹಳ್ಳಿ ಗ್ರಾಮದ ನಿವಾಸಿ ವಿಲಾಸರಾವ್ ಗಾಯಗ್ವಾಡ್(೫೫) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಇವರ ಅಂತ್ಯಕ್ರಿಯೆ ಸಂಜೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನೆರವೇರಿತು. ಇವರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು, ಗಣ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

೧೨ನೇ ಶತಮಾನದಲ್ಲಿ ಮಾನವನ ಇತಿಹಾಸದ ಮಹತ್ತರ ಬದಲಾವಣೆ : ಆರ್. ಪ್ರದೀಪ್

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಮಾ. ೨೧: ೧೨ನೇ ಶತಮಾನ ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆ ಮಾತ್ರವಲ್ಲ. ಅದು ಮಾನವನ ಇತಿಹಾಸದ ಮಹತ್ತರ ಬದಲಾವಣೆಯಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಸೋಮವಾರ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಬುನಾದಿ ೧೨ನೇ ಶತಮಾನ ಎಂದರೆ ತಪ್ಪಾಗಲಾರದು. ಶರಣರ ಸ್ವಂತ ಜ್ಞಾನ, ಅನುಭವದ ಮೇಲೆ ಬರೆದ ವಚನಗಳ ಸಾಲು ಜೀವನದ ಮೌಲ್ಯಗಳನ್ನು ತಿಳಿಸುತ್ತವೆ. ಅಂದು ಜಾರಿಗೆ ತಂದ ಧಾರ್ಮಿಕ ಹಾಗು ಸಾಮಾಜಿಕ ಸುಧಾರಣೆಗಳ ಪರಿಣಾಮ ಶಿವಶರಣರು ಇಂದಿಗೂ ನಮ್ಮೊಂದಿಗೆ ಉಳಿದುಕೊಂಡಿದ್ದಾರೆ. ಇವರು ತೋರಿಸಿಕೊಟ್ಟಿರುವ ದಾರಿಯಲ್ಲಿ ಪ್ರಸ್ತುತ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ. ದತ್ತಿದಾನಿ ಜಗದೀಶ್ ಕವಿ, ಕತ್ತಲಗೆರೆ ತಿಮ್ಮಪ್ಪ, ಪ್ರಾಧ್ಯಾಪಕ ಮಲ್ಲಪ್ಪ ಸೇರಿದಂತೆ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಕದಳಿ ಮಹಿಳಾ ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸುಮಿಯಾ ತಾಜ್. ಆಯಿಶಾ ಸಿದ್ದಿಕಾ. ರೇವತಿ, ಕಾವ್ಯ ಸೇರಿದಂತೆ ಇನ್ನಿತರರು ವಚನಗಳ ವಿಶ್ಲೇಷಣೆ ಹಾಗೂ ಶರಣರ ಚಿಂತನೆ ಕುರಿತು ಮಾತನಾಡಿದರು.

ತಡೆಗೋಡೆ ನಿರ್ಮಿಸಿ ಪ್ರವಾಹದಿಂದ ರಕ್ಷಿಸಿ

ಭದ್ರಾವತಿ ಅಂಬೇಡ್ಕರ್ ವೃತ್ತದ ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಸ್ಥಳೀಯರು ಪ್ರಜಾ ರಾಜ್ಯ ದಲಿತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
    ಭದ್ರಾವತಿ, ಮಾ. ೨೧: ನಗರದ ಅಂಬೇಡ್ಕರ್ ವೃತ್ತದ ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಸ್ಥಳೀಯರು ಪ್ರಜಾ ರಾಜ್ಯ ದಲಿತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಈ ಭಾಗದಲ್ಲಿ ದಲಿತರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಭದ್ರಾ ನದಿಗೆ ಜಲಾಶಯದಿಂದ ನೀರು ಬಿಟ್ಟಾಗ ಮನೆಗಳು ಮುಳುಗಡೆಯಾಗುತ್ತಿವೆ. ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಹಲವಾರು ಒತ್ತಾಯಿಸಿದ ಹಿನ್ನಲೆಯಲ್ಲಿ ಈ ಹಿಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಸರ್ಕಾರದಿಂದ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದರು. ಆದರೆ ಇದೀಗ ತಡೆಗೋಡೆ ಕಾಮಗಾರಿಯನ್ನು ಬದಲಾಯಿಸಲಾಗಿದ್ದು, ಇದರಿಂದಾಗಿ ನಿವಾಸಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಡೆಗೋಡೆ ಕಾಮಗಾರಿ ಬದಲಿಸಿ ೧ನೇ ತಿರುವಿನಿಂದ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು. ಅಲ್ಲದೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.
    ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ರಾಧಾಕೃಷ್ಣಭಟ್ ಮನವಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರಜಾ ರಾಜ್ಯ ದಲಿತ ಸಂಘದ ರಾಜ್ಯಾಧ್ಯಕ್ಷ ಬಿ. ರಮೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
    ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಸಂಚಾಲಕ ಅಬ್ದುಲ್ ಖದೀರ್, ಉಪಾಧ್ಯಕ್ಷ ಇಬ್ರಾಹಿಂ ಖಾನ್, ಪರಮೇಶ್ವರಚಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ ಸುಧೀಂದ್ರ, ಬಿಎಸ್‌ಪಿ ಪಕ್ಷದ ರಾಜೇಂದ್ರ, ಸ್ನೇಹಜೀವಿ ಬಳಗದ ಮುಳ್ಕೆರೆ ಲೋಕೇಶ್, ಸುಹಾಸ್‌ಗೌಡ, ಸ್ಥಳೀಯರಾದ ಕುಪ್ಪಸ್ವಾಮಿ, ಗಣೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಾನುವಾರ, ಮಾರ್ಚ್ 20, 2022

ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಮಹಿಳಾ ಸರ್ಕಾರಿ ನೌಕರರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಮಹಿಳಾ ಸರ್ಕಾರಿ ನೌಕರರಿಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು ಜರುಗಿದವು. ಬಿ. ಸಿದ್ದಬಸಪ್ಪ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
    ಭದ್ರಾವತಿ, ಮಾ. ೨೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಮಹಿಳಾ ಸರ್ಕಾರಿ ನೌಕರರಿಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು ಜರುಗಿದವು.  
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ  ಕ್ರೀಡಾಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮಹಿಳಾ ಸರ್ಕಾರಿ ನೌಕರರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾಜಪ್ಪ,  ಖಜಾಂಚಿ ಎಸ್.ಕೆ ಮೋಹನ್, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಮತ್ತು ಜಾನ್‌ಪಾಲ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ರಾಜ್‌ಕುಮಾರ್, ಲೋಹಿತ್, ಪ್ರಭುರವರು, ಮಲ್ಲಿಕಾರ್ಜುನ್  ಎಂ.ಸಿ ಆನಂದ್, ರೇವತಿ, ರವಿ, ಕರಣ್‌ಸಿಂಗ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೨೧ರಂದು ೬೨೩ನೇ ವಚನ ಮಂಟಪ, ದತ್ತಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೦: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ೬೨೩ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮ ಮಾ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ  ನಡೆಯಲಿರುವ  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ.
    ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದು, ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ, ಬಸವಕೇಂದ್ರ ಅಧ್ಯಕ್ಷ ಜಗದೀಶ್ ಕವಿ ಉಪಸ್ಥಿತರಿರುವರು. ವಿದ್ಯಾರ್ಥಿಗಳಿಂದ ವಚನ ವಿಶ್ಲೇಷಣೆ ಮತ್ತು ಶರಣ ಚಿಂತನೆ ಹಾಗು ಕದಳಿ ಮಹಿಳಾ ವೇದಿಕೆ ವತಿಯಿಂದ ಸಮೂಹ ವಚನ ಗಾಯನ ನಡೆಯಲಿದೆ.