Wednesday, April 6, 2022

ಕೆರೆ ಕೋಡಿ ಶಿಥಿಲ : ನೀರು ಹರಿದು ಹಾಳಾದ ರಸ್ತೆ

ಸ್ಥಳ ಪರಿಶೀಲನೆ ನಡೆಸಿದ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ

ಭದ್ರಾವತಿ ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯಲ್ಲಿರುವ ಕೆರೆ ಕೋಡಿ ಶಿಥಿಲಗೊಂಡಿದ್ದು, ಇದರಿಂದಾಗಿ ಕೆರೆ ನೀರು ಹರಿದು ರಸ್ತೆ ಹಾಳಾಗಿದೆ. ಈ ಹಿನ್ನಲೆಯಲ್ಲಿ  ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಏ. ೬: ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯಲ್ಲಿರುವ ಕೆರೆ ಕೋಡಿ ಶಿಥಿಲಗೊಂಡಿದ್ದು, ಇದರಿಂದಾಗಿ ಕೆರೆ ನೀರು ಹರಿದು ರಸ್ತೆ ಹಾಳಾಗಿದೆ. ಈ ಹಿನ್ನಲೆಯಲ್ಲಿ  ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
    ಕೆರೆ ಕೋಡಿ ಪಕ್ಕದಲ್ಲಿರುವ ರಸ್ತೆಯು ರೈತರ ಜಮೀನುಗಳಿಗೆ ಸಂಪರ್ಕಗೊಂಡಿದ್ದು, ರಸ್ತೆ ಹಾಳಾಗಿರುವುದರಿಂದ ಈ ಭಾಗದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ರೈತರು ಹಾಗು ಸ್ಥಳೀಯರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ನೇತೃತ್ವದಲ್ಲಿ ಕಾಡಾ ಅಧ್ಯಕ್ಷರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದರು.
    ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಅಧ್ಯಕ್ಷರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತರು ಹಾಗು ಸ್ಥಳೀಯರು ಕೆರೆ ಕೋಡಿ ಬಳಿ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರು.

ಮುಂಬರುವ ಚುನಾವಣೆಗೆ ಬಿಎಸ್‌ಪಿ ಸಿದ್ದತೆ : ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದಿಂದ ಕುತಂತ್ರ : ನಾಗೇಂದ್ರ ಆರೋಪ

ಭದ್ರಾವತಿಯಲ್ಲಿ  ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಮಾತನಾಡಿದರು.
    ಭದ್ರಾವತಿ, ಏ. ೬: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಮುಂಬರುವ ವಿಧಾನಸಭಾ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಇದೀಗ ರಾಜ್ಯಾದ್ಯಂತ ವಿಭಿನ್ನ ರೀತಿಯ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹೇಳಿದರು.
    ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಸಂಘಟನಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಪಕ್ಷದ ಸಂಸ್ಥಾಪಕರಾದ ಕಾನ್ಸಿರಾಂರವರ ಜನ್ಮದಿನದಂದು ರಾಜ್ಯದ ೪ ವಿಭಾಗಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲಾಗಿದೆ. ಸಮಾವೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಜೊತೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಜಿಲ್ಲಾಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗಿದ್ದು, ಇದೀಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಈ ಕಾರ್ಯಗಾರದಲ್ಲಿ ಬಹುಜನ ಚಳುವಳಿಯ ಹಿನ್ನಲೆ, ನಡೆದು ಬಂದ ದಾರಿ, ದೇಶದ ಮೂಲ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳು ಹಾಗು ಹೋರಾಟದ ರೂಪುರೇಷೆಗಳ ಕುರಿತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಮಾಯಾವತಿ ಪ್ರಚಾರ:
    ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿಯವರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರು ಆಗಮಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
    ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕುತಂತ್ರ :
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ಉಂಟು ಮಾಡಿ ಆಶಾಂತಿ ವಾತಾವರಣ ರೂಪಿಸುತ್ತಿದೆ. ಹಿಜಾಬ್, ಹಲಾಲ್, ದೇವಸ್ಥಾನಗಳ ಬಳಿ ಹಾಗು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಎಲ್ಲವೂ ಸಂವಿಧಾನ ಬಾಹಿರವಾಗಿವೆ. ಮತ್ತೊಂದೆಡೆ ಈ ವಿಚಾರಗಳನ್ನು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸೇರಿದಂತೆ ಬಿಜೆಪಿ ಅಂಗಸಂಸ್ಥೆಗಳು, ಸಂಘಟನೆಗಳು ಗುಮಾನಿ ಮಾಡುವ ಮೂಲಕ ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಅಲ್ಲದೆ ಈ ಸಂಘಟನೆಗಳು ದೇಶ ದ್ರೋಹದ ಹೇಳಿಕೆಗಳನ್ನು ನೀಡುತ್ತಿವೆ. ದೇಶ ದ್ರೋಹದ ನಿಲುವುಗಳನ್ನು ಪ್ರಕಟಿಸುತ್ತಿವೆ ಆದರೂ ಸಹ ಇವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
    ಬಿಎಸ್‌ಪಿ ಈ ಎಲ್ಲಾ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಲು ಮುಂದಾಗಿದೆ ಎಂದರು.
    ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್, ತಾಲೂಕು ಸಂಯೋಜಕ ಎಂ. ರಾಜೇಂದ್ರ ಉಪಸ್ಥಿತರಿದ್ದರು.

ಮತದಾನ ಹಕ್ಕಿನ ಮಹತ್ವ ತಿಳಿಯದೆ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ : ಎ.ಡಿ ಶಿವಪ್ಪ

 ಬಹುಜನ ಸಮಾಜ ಪಾರ್ಟಿ ಭದ್ರಾವತಿ ತಾಲೂಕು ಘಟಕದ ವತಿಯಿಂದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಏ. ೬: ದೇಶದಲ್ಲಿ ನಾವು ಎಲ್ಲಿಯವರೆಗೆ ಮತದಾನ ಹಕ್ಕಿನ ಮಹತ್ವ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ಪಕ್ಷದ ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ಹೇಳಿದರು.
ಅವರು ಬುಧವಾರ ನಗರದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಈ ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಶೇ.೮೫ರಷ್ಟಿದ್ದು, ಆದರೆ ಶೇ.೩ರಷ್ಟಿರುವ ಮನುವಾದಿಗಳು ಆಡಳಿತ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶದ ಬಹಳಷ್ಟು ಜನರಿಗೆ ಮತದಾನದ ಬೆಲೆ ಗೊತ್ತಿಲ್ಲ. ಇದೀಗ ಪಕ್ಷದ ವತಿಯಿಂದ ಮತದಾನದ ಬೆಲೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನೂ ಹೆಚ್ಚಿನ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ, ಬಹುಜನ ಚಳುವಳಿ ನಡೆದು ಬಂದ ದಾರಿ. ದೇಶದ ಮೂಲ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳನ್ನು ವಿವರಿಸಿದರು. ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ಭದ್ರಾವತಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೬: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
    ೨೦೧೭ರವರೆಗೆ ಕನಿಷ್ಠ ೧೦ ವರ್ಷ ಕರ್ತವ್ಯ ಪೂರೈಸಿ ಉದ್ಯೋಗದಿಂದ ವಂಚಿತರಾಗಿರುವ ನೌಕರರನ್ನು ಪುನಃ ನೇಮಕ ಮಾಡಿಕೊಳ್ಳಬೇಕು. ದಿನಗೂಲಿಯನ್ನು ನಂಬಿ ಬದುಕುತ್ತಿರುವ ನೌಕರರಿಗೆ ಯಾವುದೇ ಕಾರಣಕ್ಕೂ ಉದ್ಯೋಗ ಕಡಿತಗೊಳಿಸಬಾರದು. ಅಲ್ಲದೆ ಕರ್ತವ್ಯ ಸಮಯ ನಿಗದಿಗೊಳಿಸಬೇಕು. ನೌಕರರನ್ನು ನಿಗದಿತ ಸಮಯ ಮೀರಿ ಕರ್ತವ್ಯಕ್ಕೆ ಬಳಸಿಕೊಳ್ಳಬಾರದು. ೧೦ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಬ್ಯಾಂಕ್ ಖಾತೆ ಮೂಲಕ ಓಚರ್ ಮೇಲೆ ಸಹಿ ಪಡೆದು ವೇತನ ಪಾವತಿಸಬೇಕು. ಎಲ್ಲಾ ಸರ್ಕಾರಿ ದಿನಗೂಲಿ ನೌಕರರಿಗೂ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಕಲ್ಪಿಸಿಕೊಡಬೇಕು. ವೈಯಕ್ತಿಕ ಹಿತಾಸಕ್ತಿ ಹಿನ್ನಲೆಯಲ್ಲಿ ವಿನಾಕಾರಣ ನೌಕರರನ್ನು ಕರ್ತವ್ಯದಿಂದ ವಜಾಗೊಳಿಸಿ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ತಕ್ಷಣ ಬೇಡಿಕೆಗಳನ್ನು ಈಡೇರಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
    ಸಂಘದ ಗೌರವಾಧ್ಯಕ್ಷ ಶಿವಕುಮಾರ್, ರಾಜ್ಯಾಧ್ಯಕ್ಷ ಎಚ್.ಕೆ ಹಿಂಚವಳ್ಳಿ ಶಂಕರಪ್ಪ, ಉಪಾಧ್ಯಕ್ಷ ಎಚ್.ಎಸ್ ಹರೀಶ್, ಕಾರ್ಯದರ್ಶಿ ಸಿ. ಬಸವರಾಜು ಮತ್ತು ಖಜಾಂಚಿ ಸಿ. ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Tuesday, April 5, 2022

ಶಿವಮೊಗ್ಗ ಜಿಲ್ಲೆಯಲ್ಲಿ ಬದಲಾವಣೆ ತರದಿದ್ದಲ್ಲಿ ನಿರುದ್ಯೋಗಿಗಳು ಊರು ಬಿಡಬೇಕಾಗುತ್ತದೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಾಣಿ ಅಭಿಯಾನದ ಸಮಗ್ರ ಮಾಹಿತಿ ಸಂಗ್ರಹ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು.
    ಭದ್ರಾವತಿ, ಏ. ೫: ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬದಲಾವಣೆ ತರಬೇಕು. ಇಲ್ಲವಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಮೂಲಕ ಊರು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
    ಅವರು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಾಣಿ ಅಭಿಯಾನದ ಸಮಗ್ರ ಮಾಹಿತಿ ಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ದ್ವಿಗುಣಗೊಂಡಿಲ್ಲ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಕಾರ್ಖಾನೆ ಸ್ಥಾಪನೆಗೊಂಡಿಲ್ಲ ಎಂದು ಆರೋಪಿಸಿದರು.
    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಧಾರ್ಮಿಕ ವಿಚಾರಗಳಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಆಶಾಂತಿ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಮುಂದುವರೆದು ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಸೌದಿ, ಮುಂಬೈ, ಬೆಂಗಳೂರು ಸೇರಿದಂತೆ ಇತರೆಡೆ ವಲಸೆ ಹೋಗುತ್ತಿದ್ದಾರೆ. ಈ ಪರಿಸ್ಥಿತಿ ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸುವ ಲಕ್ಷಣಗಳು ಕಂಡು ಬರುತ್ತಿವೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ  ಆಶಾಂತಿ ವಾತಾವರಣ ನಿರ್ಮಾಣಗುತ್ತಿದ್ದು, ಇಲ್ಲಿನ ಜನರು ಎಚ್ಚೆತ್ತುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಬದಲಾವಣೆ ತರಬೇಕೆಂದರು.
    ಕಾಂಗ್ರೆಸ್ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಡಿಜಿಟಲ್ ಸದಸ್ಯತ್ವ ನೋಂದಾಣಿಗೆ ಚಾಲನೆ ನೀಡಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿ ಸದಸ್ಯತ್ವ ನೋಂದಾಣಿ ನಡೆದಿದ್ದು, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಶ್ರಮವಹಿಸುವಂತೆ ಮನವಿ ಮಾಡಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಮಾಜಿ ಸಂಸದ ಧ್ರುವ ನಾರಾಯಣ, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಆರ್. ವಿ ವೆಂಕಟೇಶ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಪಕ್ಷದ ನಗರಸಭೆ, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ಸಮಾನತೆ ಪರಿಕಲ್ಪನೆಯೊಂದಿಗೆ ಹೊಸ ಸಮಾಜ ನಿರ್ಮಾಣ ಆಶಯ ಹೊಂದಿದ್ದ ಬಾಬು ಜಗಜೀವನ್‌ರಾಮ್

೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ  ಡಾ. ಚನ್ನೇಶ್ ಎಚ್. ಹೊನ್ನಾಳಿ


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ್‌ರಾಮ್‌ರವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನಡೆಸಿಕೊಟ್ಟ ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಚನ್ನೇಶ್ ಎಚ್. ಹೊನ್ನಾಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಏ. ೫: ದೇಶದಲ್ಲಿ ಸಮಾನತೆ ಪರಿಕಲ್ಪನೆಯೊಂದಿಗೆ ಹೊಸ ಸಮಾಜ ನಿರ್ಮಾಣದ ಆಶಯ ಹೊಂದಿದ್ದ ಜಗಜ್ಯೋತಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಸಾಲಿನಲ್ಲಿ ಬಾಬು ಜಗಜೀವನ್ ರಾಮ್ ಸಹ ಒಬ್ಬರಾಗಿದ್ದರು ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಚನ್ನೇಶ್ ಎಚ್. ಹೊನ್ನಾಳಿ ಹೇಳಿದರು.
    ಅವರು ಮಂಗಳವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ್‌ರಾಮ್‌ರವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಹೋರಾಟ ಮಾಡುವ ಜೊತೆಗೆ ಶೋಷಣೆಗೆ ಒಳಗಾದ ಎಲ್ಲಾ ತಳಸಮುದಾಯಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಜಗಜೀವನ ರಾಮ್‌ರವರ ಕೊಡುಗೆ ಅಪಾರವಾಗಿದ್ದು, ಅಲ್ಲದೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಅಭಿವೃದ್ಧಿಗೊಳ್ಳಲು ಶ್ರಮಿಸಿದ್ದರು. ಅಲ್ಲದೆ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ದೇಶದಲ್ಲಿ ಕೃಷಿ ಹಾಗು ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದರು. ಇಂದಿನ ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದ್ದಾರೆ. ಇವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ನಾವೆಲ್ಲರು ಮುನ್ನಡೆಯಬೇಕಾಗಿದೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ಬಾಬು ಜಗಜೀವನ್‌ರಾಮ್‌ರವರು ಮೇಲ್ವರ್ಗದವರ ಎಚ್ಚರಿಕೆಗಳನ್ನು ಲೆಕ್ಕಿಸದೆ ತಳಸಮುದಾಯಗಳ ಪರವಾಗಿ ತಮ್ಮ ಹೋರಾಟ ಮುಂದುವರೆಸಿದರು. ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದರು. ಈ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಶೋಷಣೆಗೆ ಒಳಗಾದ ಎಲ್ಲಾ ಸಮುದಾಯಗಳ ಧ್ವನಿಯಾದರು. ಇವರು ಸಮಾಜಕ್ಕೆ ನೀಡಿರುವ ಅಪಾರವಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಸೇರಿದಂತೆ ಇನ್ನಿತರರು ಬಾಬು ಜಗಜೀವನ್‌ರಾಮ್‌ರವರ ಕುರಿತು ಮಾತನಾಡಿದರು.
    ನಿರ್ಲಕ್ಷ್ಯತನ ಆರೋಪ:
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಆದರ್ಶ ವ್ಯಕ್ತಿಗಳ ಜನ್ಮದಿನಾಚರಣೆ ಕೇವಲ ಕಾಟಚಾರಕ್ಕೆ ಮಾಡಿ ಅವರಿಗೆ ಅವಮಾನ ಮಾಡುವ ಕೆಲಸ ಮಾಡಬಾರದು. ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಇಲಾಖೆಗಳ ಪ್ರಮುಖ ಅಧಿಕಾರಿಗಳೇ ಗೈರು ಹಾಜರಾಗಿರುವುದು ಸರಿಯಲ್ಲ. ಏ.೧೪ರಂದು ನಡೆಯಲಿರುವ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯ ಪಾಲ್ಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ಬಾಂಡ್ ವಿತರಣೆ :
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ ಈ ಬಾರಿ ಅಂತರ್ಜಾತಿ ವಿವಾಹವಾದ ಒಟ್ಟು ೩೫ ದಂಪತಿಗಳನ್ನು ಆಯ್ಕೆ ಮಾಡಲಾಗಿದ್ದು, ೩ ದಂಪತಿಗಳಿಗೆ ಪ್ರೋತ್ಸಾಹ ಧನದ ಬಾಂಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭಾ ಸದಸ್ಯರಾದ ಉದಯಕುಮಾರ್, ಕಾಂತರಾಜ್, ಬಸವರಾಜ ಬಿ. ಆನೇಕೊಪ್ಪ, ಪ್ರೇಮ ಬದರಿನಾರಾಯಣ, ಮಂಜುನಾಥ್, ಮುಖಂಡರಾದ ಡಿ.ಸಿ ಮಾಯಣ್ಣ, ಬಿ.ಎನ್ ರಾಜು, ಎಸ್. ಮಂಜುನಾಥ್, ಮೈಲಾರಪ್ಪ, ಕೆ. ರಂಗನಾಥ್, ಜಿ. ರಾಜು, ವಿ. ವಿನೋದ್, ಜೀವ, ಜಿಂಕ್‌ಲೈನ್‌ಮಣಿ, ಕಾಣಿಕ್‌ರಾಜ್, ರವಿನಾಯ್ಕ, ಕೃಷ್ಣನಾಯ್ಕ, ಈಶ್ವರಪ್ಪ, ಕುಪೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಸ್ವಾಗತಿಸಿದರು. ಶಶಿಕುಮಾರ್ ನಿರೂಪಿಸಿದರು. ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ ಈ ಬಾರಿ ಅಂತರ್ಜಾತಿ ವಿವಾಹವಾದ ಒಟ್ಟು ೩೫ ದಂಪತಿಗಳನ್ನು ಆಯ್ಕೆ ಮಾಡಲಾಗಿದ್ದು, ೩ ದಂಪತಿಗಳಿಗೆ ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ್‌ರಾಮ್‌ರವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ  ಪ್ರೋತ್ಸಾಹ ಧನದ ಬಾಂಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

Monday, April 4, 2022

ಜಾತ್ರಾ ಮಹೋತ್ಸವ : ಶ್ರೀ ಮಹಾಗಣಪತಿ ಹೋಮ, ಅನ್ನಸಂತರ್ಪಣೆ

ಭದ್ರಾವತಿ ಭೂತನಗುಡಿ ಶ್ರೀ ಶನೈಶ್ವರಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಕೆಂಚಮ್ಮದೇವಿ ಮತ್ತು ಶ್ರೀ ಭೂತಪ್ಪನವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ಮಹಾಗಣಪತಿ ಹೋಮ, ಅನ್ನಸಂತರ್ಪಣೆ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು.

ಭದ್ರಾವತಿ, ಏ. ೪: ನಗರದ ಭೂತನಗುಡಿ ಶ್ರೀ ಶನೈಶ್ವರಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಕೆಂಚಮ್ಮದೇವಿ ಮತ್ತು ಶ್ರೀ ಭೂತಪ್ಪನವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ಮಹಾಗಣಪತಿ ಹೋಮ, ಅನ್ನಸಂತರ್ಪಣೆ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು.
ವಿಶೇಷ ಅಲಂಕಾರ ಪೂಜೆ, ಶ್ರೀ ಶನೈಶ್ವರ ಶಾಂತಿ ಹೋಮ, ಶ್ರೀ ದುರ್ಗಾ ಹೋಮ, ದೇವತಾ ಕಲಾ ಹೋಮ, ಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಜೋಯ್ಸ್, ಜಯರಾಂ, ಸುಬ್ರಹ್ಮಣ್ಯ ಪ್ರಸಾದ್ ಹಾಗು ತಾಲೂಕು ಅರ್ಚಕರ ಸಭಾಮಂಡಳಿ ಗೌರವಾಧ್ಯಕ್ಷ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು.
ಏ.೫ರ ಮಧ್ಯಾಹ್ನ ೩ ಗಂಟೆಗೆ ಶ್ರೀ ಶನೈಶ್ವರಸ್ವಾಮಿ ಮತ್ತು ಶ್ರೀ ಕೆಂಚಮ್ಮದೇವಿಯ ರಾಜಬೀದಿ ಉತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.