ದಿನಕ್ಕೆ ೨೦ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ
![](https://blogger.googleusercontent.com/img/a/AVvXsEh8mjdhdRI1oEebVpwzLLcteYM4TWFKNpLEwDe7tEqqyujUML2m5w6Wdng01XIwNiqhUNLk9bxD_NkR6QVtV6LSgDOjynSekBXzZZqcN53w29LEztuJf5L-VQvtFBIHNNbEHIGdHazowrLUlAPBiTuN0p8mK70uzVghMioBwkkM3p__9_pCk4bVY8-j9g=w400-h244-rw)
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಆಡಳಿತ ಮುಂದಾಗಿದೆ. ಕಳೆದ ೩ ದಿನಗಳಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ, ಏ. ೧೧: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಆಡಳಿತ ಮುಂದಾಗಿದೆ. ಕಳೆದ ೩ ದಿನಗಳಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಸದಸ್ಯರು ನಗರಸಭೆ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಹುತೇಕ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಪರಿಸರ ಅಭಿಯಂತರ ಪ್ರಭಾಕರ್‌ರವರು ಬೀದಿ ನಾಯಿಗಳಿಗೆ ಸಂತಾನೋತ್ಪತ್ತಿಯಾಗದಂತೆ ಶಸ್ತ್ರ ಚಿಕಿತ್ಸೆ ನಡೆಸುವ ಹಾಗು ಆಂಟಿರೇಬಿಸ್ ಚುಚ್ಚು ಮದ್ದು ನೀಡುವ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ದಿನಕ್ಕೆ ೨೦ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ :
ಮಹಾರಾಷ್ಟ್ರದ ಅನಿಮಲ್ ಪ್ರೊಟೆಕ್ಷನ್ ಅಂಡ್ ವೆಲೇರ್ ಸೊಸೈಟಿ' ಪೂರ್ಣಾ ಸಂಸ್ಥೆ ವತಿಯಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬಿಸ್ ಚುಚ್ಚು ಮದ್ದು ನೀಡುವ ಕಾರ್ಯ ನಡೆಯುತ್ತಿದೆ. ಹೊಸಮನೆ ಸಂತಮೈದಾನದ ಪಂಪ್‌ಹೌಸ್ ಪಕ್ಕದಲ್ಲಿರುವ ನಗರಸಭೆ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಪ್ರತಿ ದಿನ ೨೦ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ನಾಯಿಗಳನ್ನು ೩ ದಿನಗಳವರೆಗೆ ಆರೈಕೆ ಮಾಡಿ ಶಸ್ತ್ರ ಚಿಕಿತ್ಸೆ ನಡೆಸಿರುವ ಬಗ್ಗೆ ಗುರುತು ಮಾಡಿ ನಂತರ ಅವುಗಳ ಮೂಲ ಸ್ಥಳಗಳಿಗೆ ಬಿಡಲಾಗುತ್ತದೆ. ಇದುವರೆಗೂ ೬೦ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆಗೆ ತಲಾ ರು. ೧,೫೦೦ ವೆಚ್ಚವಾಗುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧,೦೦೦ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ದಿನ ಬೀದಿನಾಯಿಗಳನ್ನು ಹಿಡಿಯುವ ಕಾರ್ಯ ನಡೆಯುತ್ತಿದೆ.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಸದಸ್ಯರಾದ ಕಾಂತರಾಜ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಆರ್. ಮೋಹನ್‌ಕುಮಾರ್, ಬಿ.ಎಂ ಮಂಜುನಾಥ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯದ ಗಮನ ಸೆಳೆದಿದ್ದ ಜೀವಂತ ನಾಯಿಗಳನ್ನು ಹೂತಿಟ್ಟ ಪ್ರಕರಣ..!
'ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ತಾಲೂಕಿನ ಕಂಬದಾಳ್-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಅವುಗಳ ಸಾವಿಗೆ ಕಾರಣವಾಗಿದ್ದ ಘಟನೆ ನಡೆದಿತ್ತು.
ಈ ಪ್ರಕರಣ ರಾಜ್ಯದ ಗಮನೆ ಸೆಳೆದಿದ್ದು, ಈ ಘಟನೆಯನ್ನು ಪ್ರಾಣಿ ದಯಾ ಸಂಸ್ಥೆಯವರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಇದೀಗ ನಗರಸಭೆ ಆಡಳಿತಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ವ್ಯವಸ್ಥಿತ ಕ್ರಮಗಳನ್ನು ಬಹಳ ಮುನ್ನಚ್ಚರಿಕೆಯಿಂದ ಕೈಗೊಳ್ಳಬೇಕಾಗಿದೆ.
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಆಡಳಿತ ಮುಂದಾಗಿದೆ. ಕಳೆದ ೩ ದಿನಗಳಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ತಂದಿರುವುದು.