ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಪ್ರಮುಖರು ಮಾತನಾಡಿದರು.
ಭದ್ರಾವತಿ, ಏ. ೨೦: ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯಾರ್ಪಣೆಗಾಗಿ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಜನತಾ ಜಲಧಾರೆ ಯಾತ್ರೆ’ ಏ.೨೩ರಂದು ಕ್ಷೇತ್ರಕ್ಕೆ ಆಗಮಿಸಲಿದ್ದು, ಅಂದು ಭದ್ರಾ ಜಲಾಶಯದ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗಮಿಸಲಿದ್ದಾರೆಂದು ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ತಿಳಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ.೨೨ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗಾಭದ್ರಾ ಸಂಗಮ ಸ್ಥಳದ ಸಮೀಪದ ಚಿಕ್ಕಕೂಡ್ಲಿಯಿಂದ ಯಾತ್ರೆ ಹೊಳೆಹೊನ್ನೂರು, ಕೈಮರ, ಅರಹತೊಳಲು, ಕಲ್ಲಿಹಾಳ್, ಅರಬಿಳಿಚಿ, ಕೂಡ್ಲಿಗೆರೆ ಮಾರ್ಗವಾಗಿ ಸಂಜೆ ೬ ಗಂಟೆಗೆ ಶ್ರೀರಾಮನಗರ ಪ್ರವೇಶಿಸಲಿದ್ದು, ಇಲ್ಲಿಯೇ ತಂಗಲಿದೆ ಎಂದರು.
ಏ.೨೩ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀರಾಮನಗರದ ಶ್ರೀರಾಮೇಶ್ವರ ದೇವಸ್ಥಾನದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಭದ್ರಾ ಕಾಲೋನಿ, ಸೀಗೇಬಾಗಿ, ರಂಗಪ್ಪವೃತ್ತ, ಅಂಡರ್ ಬ್ರಿಡ್ಜ್, ಜಯಶ್ರೀ ವೃತ್ತ ಮೂಲಕ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಬಿ.ಆರ್ ಪ್ರಾಜೆಕ್ಟ್‌ಗೆ ತೆರಳಲಿದೆ. ಮಧ್ಯಾಹ್ನ ೧೨ ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಭೆ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಾರದಪೂರ್‍ಯನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಮುಖಂಡರಾದ ಕೆ. ಕರಿಯಪ್ಪ, ಸ್ಥಳೀಯ ಸಂಸ್ಥೆಗಳ ಹಾಲಿ ಹಾಗು ಮಾಜಿ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರುಗಳು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು, ವ್ಯಾಪರಸ್ಥರು ಸೇರಿದಂತೆ ಸಮಸ್ತ ನಾಗರೀಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಕುರಿತು, ಗುತ್ತಿಗೆ ಹಾಗು ಕಾಯಂ ಮತ್ತು ನಿವೃತ್ತ ಕಾರ್ಮಿಕರ ಹಲವು ಬೇಡಿಕೆಗಳ ಕುರಿತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದಾರೆ. ಕ್ಷೇತ್ರದ ಅಭಿವೃದ್ದಿ ಕುರಿತು ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅವರ ಆಗಮನ ಕ್ಷೇತ್ರದಲ್ಲಿನ ರೈತರು, ಕಾರ್ಮಿಕರು ಸೇರಿದಂತೆ ಶ್ರೀಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಜೆಡಿಎಸ್ ಪಕ್ಷ ಶ್ರೀಸಾಮಾನ್ಯರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಲಿದೆ. ಈ ಹಿನ್ನಲೆಯಲ್ಲಿ ನೀರಿಗಾಗಿ ಹೋರಾಟವನ್ನು ರಾಜ್ಯಾದ್ಯಂತ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ವಿಜಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಬಿ ರವಿಕುಮಾರ್, ಎಂ. ರಾಜು, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಮಧುಕುಮಾರ್, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.