Thursday, April 21, 2022

ಏ.೩೦, ಮೇ.೧ರಂದು ಎರಡು ದಿನ ಕಬಡ್ಡಿ ಪಂದ್ಯಾವಳಿ

ಭದ್ರಾವತಿ, ಏ. ೨೧: ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗು ಆರ್‌ಎಸ್‌ಎನ್ ಸ್ಪೋಟ್ಸ್ ಕ್ಲಬ್ ವತಿಯಿಂದ ಏ.೨೩ ಮತ್ತು ೨೪ ಎರಡು ದಿನಗಳ ಕಾಲ ನಗರದ ನ್ಯೂಟೌನ್ ಆಂಜನೇಯ ಅಗ್ರಹಾರ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಸಮೀಪ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಂದೂಡಲಾಗಿದೆ.
    ಏ.೩೦ ಮತ್ತು ಮೇ.೧ರಂದು ಪಂದ್ಯಾವಳಿ ನಡೆಯಲಿದ್ದು, ಕ್ರೀಡಾಪಟುಗಳು ಹಾಗು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಂದ್ಯಾವಳಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:  ೯೯೦೨೧೯೨೦೨೩ ಅಥವಾ ೯೯೬೪೪೪೬೧೨೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಏ.೨೨ರಂದು ವಿದ್ಯುತ್ ನಿಲುಗಡೆ

    ಭದ್ರಾವತಿ, ಏ. ೨೧: ಮೆಸ್ಕಾಂ ನಗರ ಉಪವಿಭಾಗದ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಏ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಬಸವೇಶ್ವರ ವೃತ್ತ, ಖಾಜಿ ಮೊಹಲ್ಲಾ, ಎನ್‌ಎಸ್‌ಟಿ ರಸ್ತೆ, ಮಾಧವಚಾರ್ ವೃತ್ತ, ಕನಕ ಮಂಟಪ ಮೈದಾನ, ಕುರುಬರ ಬೀದಿ, ಬ್ರಾಹ್ಮಣರ ಬೀದಿ, ಸಿ.ಎನ್ ರಸ್ತೆ, ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜು, ಹಳೇನಗರ ಮಾರುಕಟ್ಟೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Wednesday, April 20, 2022

ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಭದ್ರಾವತಿ, ಏ. ೨೦: ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ನ್ಯಾಯಬೆಲೆ ಅಂಗಡಿಯಲ್ಲಿ  ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿಯಲ್ಲಿ ಅಜಾದಿ-ಕಾ-ಅಮೃತ್ ಮಹೋತ್ಸವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೦: ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ನ್ಯಾಯಬೆಲೆ ಅಂಗಡಿಯಲ್ಲಿ  ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿಯಲ್ಲಿ ಅಜಾದಿ-ಕಾ-ಅಮೃತ್ ಮಹೋತ್ಸವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಪಡಿತರದಾರನಿಗೆ ೫ ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ನೀಡುತ್ತಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರದ ೧ ಕೆ.ಜಿ ಹೆಚ್ಚುವರಿ ಅಕ್ಕಿ ಸೇರಿ ಒಟ್ಟು ೧೧ ಕೆ.ಜಿ ಅಕ್ಕಿಯನ್ನು ಮಾ.೧೯ರಿಂದ ನೀಡಲಾಗುತ್ತಿದೆ. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿ ನ್ಯಾಯಾಬೆಲೆ ಅಂಗಡಿಯಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.  
    ನಗರಸಭೆ ಸದಸ್ಯೆ ಪಲ್ಲವಿ, ನಗರ ಆಹಾರ ನಿರೀಕ್ಷಕಿ ಗಾಯತ್ರಿದೇವಿ, ಜಾಗೃತಿ ಸಮಿತಿ ಸದಸ್ಯೆ ಸುಶೀಲಮ್ಮ, ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದಲಿಂಗಯ್ಯ, ಮುಖಂಡರಾದ ದಿಲೀಪ್, ಎಚ್.ಕೆ ರಾಜು, ಜಿ. ಕುಮಾರ್, ನಾಗರಾಜ ಕದಂ, ಪಡಿತರದಾರರು ಉಪಸ್ಥಿತರಿದ್ದರು.

ಅಪರಂಜಿ ಅಭಿನಯ ಶಾಲೆವತಿಯಿಂದ ರಜಾ-ಮಜಾ ಬೇಸಿಗೆ ಶಿಬಿರ


    ಭದ್ರಾವತಿ, ಏ. ೨೦: ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನ ಸಮೀಪದಲ್ಲಿರುವ ಅಪರಂಜಿ ಅಭಿನಯ ಶಾಲೆಯಲ್ಲಿ ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್ ನೇತೃತ್ವದಲ್ಲಿ ರಜಾ-ಮಜಾ ಬೇಸಿಗೆ ಶಿಬಿರ ಏ.೨೫ ರಿಂದ ಮೇ.೧ರವರೆಗೆ ಹಮ್ಮಿಕೊಳ್ಳಲಾಗಿದೆ.
    ಡ್ರಾಮಾ ಜ್ಯೂನಿಯರ್, ಡ್ರಾಮಾ ಸೀನಿಯರ್, ಓದುವ ಕ್ರಮ, ನೆನಪಿನ ಶಕ್ತಿ, ಏಕಾಗ್ರತೆ, ಕಾಮಿಡಿ ಕಿಲಾಡಿಗಳ ಶೋ, ಅಂಗಳದ ಆಟಗಳು, ಹಾಸ್ಯ ಮತ್ತು ನವರಸ ಸೇರಿದಂತೆ ಇನ್ನಿತರ ಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿದ್ದು, ೫ ವರ್ಷದಿಂದ ೧೫ ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಶಿಬಿರ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮೊ: ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಏ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೦ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಏ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ಗಂಟೆ ವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹಾಗು ಸೂಕ್ಷ್ಮ ಕೆಲಸಗಾರರು, ಚಿನ್ನಬೆಳ್ಳಿ, ಕಂಪ್ಯೂಟರ್, ಟೈಲರಿಂಗ್ ಕೆಲಸಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ವಿಕಲಚೇತನರಿಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಡಿ : ಗೀತಾ ರಾಜ್‌ಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೦: ವಿಕಲಚೇತನರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಹಾಗು ಆರ್ಥಿಕವಾಗಿ ಬಲಗೊಳ್ಳಲು ಸ್ವಯಂ ಉದ್ಯೋಗಗಳು ಅವಶ್ಯಕವಾಗಿವೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
    ವಿಕಲಚೇತನರು ಸಹ ಪ್ರತಿಭಾವಂತರಿದ್ದು, ಇವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೌರಾಯುಕ್ತ ಕೆ. ಪರಮೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಅಂಧ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ನೆರವಿಗೆ ಮುಂದಾಗಬೇಕೆಂದರು.  
    ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು, ಶಿಕ್ಷಣ ಇಲಾಖೆಯ ಸಿಆರ್‌ಪಿ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
    ತರಬೇತಿ ಹೇಗೆ?
    ಕಾರ್ಖಾನೆಯಲ್ಲಿ ಉತ್ಪಾದನೆಗೊಂಡು ಬರುವ ತಟ್ಟೆಗಳಲ್ಲಿ ಬಳಕೆಗೆ ಯೋಗ್ಯವಾದ ತಟ್ಟೆಗಳನ್ನು ಆಯ್ಕೆಮಾಡಿ, ಅವುಗಳನ್ನು ಸ್ವಚ್ಛಗೊಳಿಸಿ ನಂತರ ಎಣಿಕೆ ಮಾಡಿ ಅವುಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವುದಾಗಿದೆ. ಈ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಇದರ ಆಧಾರದ ಮೇಲೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಸಹ ಲಭ್ಯವಾಗಲಿದೆ.
    ನೆರವಿಗೆ ಮುಂದಾದ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ :
    ಅಂಧ ವಿಕಲಚೇತನರ ನೆರವಿಗೆ ಮುಂದಾಗಬೇಕೆಂಬ ಉದ್ದೇಶದೊಂದಿಗೆ ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು ಜಿಲ್ಲೆಯ ಸುತ್ತಮುತ್ತಲಿನ ಭಾಗಗಳಲ್ಲಿ ಅಡಕೆ ತಟ್ಟೆ ಉತ್ಪಾದನಾ ಕಂಪನಿಗಳಿಂದ ತಟ್ಟೆಗಳನ್ನು ಖರೀದಿಸಿ ಅವುಗಳನ್ನು ಮಾರಾಟಕ್ಕೆ ಸಿದ್ದಪಡಿಸಲು ಅಂಧ ವಿಕಲಚೇನರಿಗೆ ನೀಡುತ್ತಿದ್ದಾರೆ. ಕಳೆದ ಸುಮಾರು ೩ ದಿನಗಳಿಂದ ಸುಮಾರು ೧ ಲಕ್ಷ ತಟ್ಟೆಗಳನ್ನು ಮಾರಾಟಕ್ಕೆ  ಸಿದ್ದಗೊಳಿಸುವಲ್ಲಿ ೧೨ ಅಂಧ ವಿಕಲಚೇತನರು ಯಶಸ್ವಿಯಾಗಿದ್ದಾರೆ. ತರಬೇತಿ ಸುಮಾರು ೩ ತಿಂಗಳವರೆಗೆ ನಡೆಯಲಿದೆ.

ಏ.೨೩ರಂದು ಛಲವಾದಿ ಭವನದ ಶಂಕುಸ್ಥಾಪನೆ, ವಾರ್ಷಿಕೋತ್ಸವ


    ಭದ್ರಾವತಿ, ಏ. ೨೦: ನಗರದ ಛಲವಾದಿಗಳ(ಪ.ಜಾ) ಸಮಾಜದ ವತಿಯಿಂದ ಏ.೨೩ರಂದು ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನೋತ್ಸವ ಅಂಗವಾಗಿ ಸಮಾಜದ ವಾರ್ಷಿಕೋತ್ಸವ ಹಾಗು ಛಲವಾದಿ ಭವನದ ಶಂಕುಸ್ಥಾಪನೆ ಏ.೨೩ರಂದು ಸಂಜೆ ೫ ಗಂಟೆಗೆ ಉಂಬ್ಳೆಬೈಲ್ ರಸ್ತೆ, ನ್ಯೂಟೌನ್, ಜಯಶ್ರೀ ವೃತ್ತದ ಸಮೀಪದಲ್ಲಿರುವ ಸಮಾಜದ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಶಂಕುಸ್ಥಾಪನೆ ನೆರವೇರಿಸಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವ ನಾರಾಯಣ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಲಿದ್ದಾರೆ. ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ ಉಪನ್ಯಾಸ ನೀಡಲಿದ್ದು, ನಗರಸಭೆ ಉಪಾಧ್ಯಕ್ಷ, sಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಪ್ರೇಮ ಬದರಿ ನಾರಾಯಣ, ಉದಯಕುಮಾರ್, ಅನ್ನಪೂರ್ಣ, ಕಾರೇಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಮತ, ದೊಡ್ಡೇರಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಾವತಿ, ಸಿಂಗನಮನೆ ಗ್ರಾ.ಪಂ. ಸದಸ್ಯೆ ಚಂದನಮಧು, ಹಿರಿಯೂರು ಗ್ರಾ.ಪಂ. ಸದಸ್ಯ ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕ್ರೀಡಾ ಸ್ಪರ್ಧೆ:
    ಸಮಾಜದ ವಾರ್ಷಿಕೋತ್ಸವದ ಅಂಗವಾಗಿ ಏ.೨೨ರಂದು ಬೆಳಿಗ್ಗೆ ೯ ಗಂಟೆಗೆ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಪ್ರತಿಭಾ ಪುರಸ್ಕಾರ:
    ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗು ಪದವಿ ಪರೀಕ್ಷೆಗಳಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಮಾಜದ ವಿದ್ಯಾರ್ಥಿಗಳು ಅಂಬೇಡ್ಕರ್ ಗ್ರಂಥಾಲಯ, ಜಯಶ್ರೀ ವೃತ್ತ, ನ್ಯೂಟೌನ್, ಭದ್ರಾವತಿ ಈ ವಿಳಾಸದಲ್ಲಿ ಅಂಕಪಟ್ಟಿ ಮಾಹಿತಿಯೊಂದಿಗೆ ಮೊಬೈಲ್ ಸಂಖ್ಯೆ ನೀಡುವುದು. ಹೆಚ್ಚಿನ ಮಾಹಿತಿಗೆ ಮೊ: ೯೪೪೯೭೮೦೨೧೬ ಅಥವಾ ೭೯೭೫೦೫೨೮೧೦ ಸಂಖ್ಯೆಗೆ ಸಂಪರ್ಕಿಸುವಂತೆ ಸಮಾಜದ ಪ್ರಮುಖರಾದ  ಡಿ. ನರಸಿಂಹಮೂರ್ತಿ ಮತ್ತು ಎಂ. ತಿಪ್ಪೇಸ್ವಾಮಿ ಕೋರಿದ್ದಾರೆ.