Thursday, April 28, 2022

ಒಂದೆಡೆ ಆಕರ್ಷಕ ಸರ್ಕಾರಿ ಕಟ್ಟಡಗಳು, ಮತ್ತೊಂದೆಡೆ ಉಚಿತ ಪ್ರಚಾರದ ಕಟ್ಟಡಗಳು

ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟ್‌ಗಳಿಂದ ಆಕರ್ಷಣೆ ಕಳೆದು ಕೊಳ್ಳುತ್ತಿವೆ ಸರ್ಕಾರಿ ಕಟ್ಟಡಗಳು

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸಿರುವುದು.
    * ಅನಂತಕುಮಾರ್
    ಭದ್ರಾವತಿ, ಏ. ೨೮: ಸರ್ಕಾರಿ ಕಟ್ಟಡಗಳಲ್ಲಿ ಸ್ವಚ್ಛತೆಯೊಂದಿಗೆ ಸೌಂದರ್ಯ ಕಾಪಾಡುವ ನಿಟ್ಟಿನಲ್ಲೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಸ್ವಚ್ಛ ಭಾರತ್ ಅಭಿಯಾನದ ಪರಿಕಲ್ಪನೆ ಯಶಸ್ವಿಗೊಳಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  
ತಾಲೂಕಿನ ಶಕ್ತಿ ಕೇಂದ್ರ ಮಿನಿವಿಧಾನಸೌಧ ಇದೀಗ ಉಚಿತ ಪ್ರಚಾರ ಕೇಂದ್ರವಾಗಿ ಕಂಡು ಬರುತ್ತಿದೆ. ಸಭೆ, ಸಮಾರಂಭ, ಹೋರಾಟದ ಕರಪತ್ರಗಳು, ಜಾತ್ರೆ, ಹಬ್ಬ, ಹರಿದಿನಗಳ ಪೋಸ್ಟರ್‌ಗಳು ಕಟ್ಟಡದಲ್ಲಿ ರಾರಾಜಿಸುತ್ತಿವೆ. ಇದರಿಂದಾಗಿ ಕಟ್ಟಡದ ಸೌಂದರ್ಯ ಹಾಳಾಗಿದ್ದು, ಕಟ್ಟಡದ ಮೇಲೆ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದರಿಂದ ಬಣ್ಣ ಸಹ ಮಾಸುವ ಸ್ಥಿತಿಗೆ ಬಂದು ತಲುಪಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸಾರ್ವಜನಿಕರು ಸರ್ಕಾರಿ ಕಛೇರಿಗಳನ್ನು ತಮ್ಮ ಮನೆಗಳಂತೆ, ಸ್ವತ್ತುಗಳಂತೆ ಭಾವಿಸಬೇಕು. ಸ್ವಯಂ ಜಾಗೃತರಾಗಿ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲು ಸಹಕರಿಸಬೇಕು. ಮಿನಿವಿಧಾನಸೌಧದ ಕಟ್ಟಡದ ಮುಂಭಾಗದಲ್ಲಿ ಎಲ್ಲಿಬೇಕೆಂದರಲ್ಲಿ  ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
                                                                                       - ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.


ಆಕರ್ಷಕವಾಗಿ ಕಂಗೊಳಿಸುತ್ತಿರುವ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ.
    ಆಕರ್ಷಿಸುತ್ತಿವೆ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ:
    ತಾಲೂಕು ಕಛೇರಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಗಳು ಸಹ ಕೆಲವು ವರ್ಷಗಳ ಹಿಂದೆ ಉಚಿತ ಪ್ರಚಾರ ಕೇಂದ್ರಗಳಂತೆ ಕಂಡು ಬರುತ್ತಿದ್ದವು. ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರಗಳು, ಪೋಸ್ಟರ್‌ಗಳು ರಾರಾಜುಸುತ್ತಿದ್ದವು. ನಂತರ ಇಲಾಖೆ ಎಚ್ಚೆತ್ತುಕೊಂಡು ಕಟ್ಟಡದ ಸೌಂದರ್ಯಕ್ಕೆ ಹೆಚ್ಚಿನ ಗಮನ ಹರಿಸಿದೆ. ಈ ನಡುವೆ ಕಳೆದ ಸುಮಾರು ೧ ವರ್ಷದ ಹಿಂದೆ ಹೊಸ ಶಿಕ್ಷಣ ನೀತಿ ಪಠ್ಯಕ್ರಮ ಹಿನ್ನಲೆಯಲ್ಲಿ ಕಟ್ಟಡಕ್ಕೆ ಮತ್ತುಷ್ಟು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕುಂಚ ಕಲಾವಿದರ ಸಹಕಾರದೊಂದಿಗೆ ಆಕರ್ಷಕ ಕೇಂದ್ರವನ್ನಾಗಿಸಿದೆ. ಹೊಸ ಶಿಕ್ಷಣ ನೀತಿಯ ಧ್ಯೇಯ, ಬದಲಾದ ಪಠ್ಯಕ್ರಮ ಹಾಗು ಸ್ವರೂಪಗಳೊಂದಿಗೆ, ಆದರ್ಶ ಮಹಾನ್ ವ್ಯಕ್ತಿಗಳು, ಸ್ಥಳೀಯ ಐತಿಹಾಸಿಕ ಪಾರಂಪರಿಕ ಕಟ್ಟಡಗಳು, ಸ್ಥಳಗಳು ಕುಂಚ ಕಲೆಯಲ್ಲಿ ಅರಳುವ ಮೂಲಕ ಕಟ್ಟಡದಲ್ಲಿ ರಾರಾಜುಸುತ್ತಿವೆ.  
    ಪರಿಸರ, ಸ್ವಚ್ಛತೆ ಕುರಿತು ಜಾಗೃತಿ:
    ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
    ಎಲ್ಲೆಬೇಕೆಂದರಲ್ಲಿ ಕಸ ಎಸೆಯದಿರುವುದು, ತ್ಯಾಜ್ಯ ಬೇರ್ಪಡಿಸುವಿಕೆ, ವಿಲೇವಾರಿಗೆ ಅನುಸರಿಸಬೇಕಾದ ಕ್ರಮ, ಪ್ಲಾಸಿಕ್ ನಿಷೇಧ, ಗಿಡ, ಮರಗಳ ಸಂರಕ್ಷಣೆ, ಜಲ ಸಂರಕ್ಷಣೆ ಸೇರಿದಂತೆ ಒಟ್ಟಾರೆ ಪರಿಸರ, ಸ್ವಚ್ಛತೆ ಕುರಿತು ನಗರಸಭೆ ವತಿಯಿಂದ ಆಕರ್ಷಕ ಚಿತ್ತಾರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ.
ನಗರಸಭೆ ವತಿಯಿಂದ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ಜೊತೆಗೆ ಪರಿಸರ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ಅನುದಾನ ಲಭ್ಯತೆಯನ್ನು ಗಮನಿಸಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲಾಗುವುದು. ಸರ್ಕಾರಿ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ದಂಡ ವಿಧಿಸಲಾಗುವುದು.
 - ಕೆ. ಪರಮೇಶ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
    ಎಲ್ಲಾ ಸರ್ಕಾರಿ ಕಟ್ಟಡಗಳು ಸಹ ಸ್ವಚ್ಛತೆಯೊಂದಿಗೆ ಆಕರ್ಷಕವಾಗಿ ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಹೆಚ್ಚಿನದ್ದಾಗಿದೆ.  ಜೊತೆಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಸಹ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಲಾಖೆಗಳು ಸಹ ಸಾರ್ವಜನಿಕ ಪ್ರಕಟಣೆ, ಸುತ್ತೋಲೆ, ಸೂಚನೆಗಳಿಗೆ ನಿಗದಿಪಡಿಸಲಾದ ಫಲಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಬೇಕೆಂದರಲ್ಲಿ ಅಂಟಿಸುವ ಪರಿಪಾಠ ಕೈಬಿಡಬೇಕು. ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಜೊತೆಗೆ ಸ್ವಚ್ಛತೆ ಕುರಿತು ನಿರ್ಲಕ್ಷ್ಯ ವಹಿಸುವವರ ಹಾಗು ಕರಪತ್ರ, ಪೋಸ್ಟರ್‌ಗಳನ್ನು ಎಲ್ಲಿಬೇಕೆಂದರಲ್ಲಿ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.


ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
     ಆಕರ್ಷಣೆಯೊಂದಿಗೆ, ಸ್ವಚ್ಛತೆ, ಸುಂದರ ಪರಿಸರ ಹೊಂದಿರುವ ಸರ್ಕಾರಿ ಕಛೇರಿ, ಕಟ್ಟಡಗಳನ್ನು ಸಹ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸರ್ಕಾರ ಹೊಂದಿರುವ ಕಾಳಜಿಯನ್ನು ನಾವುಗಳು ಅರಿತುಕೊಳ್ಳಬೇಕು. ತಕ್ಷಣಕ್ಕೆ ಸರ್ಕಾರದ ಕಾಳಜಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.

Wednesday, April 27, 2022

ಡಾ. ಶ್ವೇತಾ ಅಮಿತ್‌ಗೆ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್

ಭದ್ರಾವತಿ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಏ.೨೭: ನಗರದ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ನವದೆಹಲಿಯ ಉದ್ಯೋಗ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಾ. ಶ್ವೇತಾ ಅಮಿತ್‌ರವರಿಗೆ ಪ್ರಶಸ್ತಿಯನ್ನು ವಿತರಿಸಿದರು.  ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಆಫ್ ಚಾಲೆಂಜ್-೫ರಲ್ಲಿ ಹೆಲ್ಮೆಟ್ ಮೌಂಟ್ ಕನ್‌ಫರ್ಮಬಲ್ ಆಂಟೈನಾ ಎಂಬ ವಿಷಯದಲ್ಲಿ ಸಾಧಿಸಿದ ಸಾಧನೆಯ ಫಲವಾಗಿ ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಡಾ.ಶ್ವೇತಾ ಅವರನ್ನು ಗೌರವಿಸಲಾಗಿದೆ.
    ಇನ್ನೋವೇಷನ್ಸ್ ಫಾರ್ ಡಿಫೆನ್ಸ್ ಎಕ್ಷಲೆನ್ಸಿ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸಿ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರನ್ನು ಶಿಫಾರಸ್ಸು ಮಾಡಿತ್ತು.  ಡಾ.ಶ್ವೇತಾ ಅಮಿತ್‌ರವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.  

ಉಚಿತ ಸಾಮೂಹಿಕ ವಿವಾಹ : ಸದುಪಯೋಗಕ್ಕೆ ಕರೆ

    ಭದ್ರಾವತಿ, ಏ. ೨೭: ವಿಶ್ವ ಹಿಂದು ಪರಿಷದ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ.೨೯ರ ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ಸಿದ್ದಾರೂಢನಗರ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ನಡೆಯಲಿದೆ.
    ಕಡ್ಡಾಯವಾಗಿ ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ತುಂಬಿರಬೇಕು. ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ವಿವಾಹಕ್ಕೆ ಅಪೇಕ್ಷೆಯುಳ್ಳವರು ಮೇ.೧೦ರೊಳಗೆ ಕೋರಿಕೆ ಪತ್ರ ನೀಡುವುದು. ವಿಧವಾ ವಿವಾಹಕ್ಕೆ ಅವಕಾಶವಿದ್ದು, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶತಾಯುಷಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.
    ಸಾರ್ವಜನಿಕರು, ದಾನಿಗಳು, ಗಣ್ಯರು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೭೬೨೨೮೭೦೧೮ ಅಥವಾ ೯೮೮೦೭೭೯೨೯೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ

ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ, ಯುವ ಮುಖಂಡ ಬಿ.ಎಸ್ ಬಸವೇಶ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
    ಭದ್ರಾವತಿ, ಏ. ೨೭: ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಿ. ಮಧು ಲೇಪಾಕ್ಷಿ ಆಯ್ಕೆಯಾಗಿದ್ದಾರೆ. ಒಟ್ಟು ೧೦ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಧಿಕಾರ ಹಂಚಿಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಮೊದಲ ಅವಧಿಗೆ ಬೆಳ್ಳಿಗೆರೆ ಕ್ಷೇತ್ರದ ಆಗಷರೀಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಉಪಸ್ಥಿತರಿದ್ದರು.
    ನೂತನ ಅಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ, ಯುವ ಮುಖಂಡ ಬಿ.ಎಸ್ ಬಸವೇಶ್, ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪಕ್ಷದ ಮುಖಂಡರು ಸೇರಿದಂತೆ ಇನ್ನಿತರರು ಅಭಿನಂದಿಸಿದರು.

Tuesday, April 26, 2022

ದಲಿತ ಮುಖಂಡ ಪಿ. ಮೂರ್ತಿ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬುಳ್ಳಾಪುರ ನಿವಾಸಿ, ದಲಿತ ಮುಖಂಡ ಪಿ. ಮೂರ್ತಿ ಮಂಗಳವಾರ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೨೬: ನಗರಸಭೆ ವ್ಯಾಪ್ತಿಯ ಬುಳ್ಳಾಪುರ ನಿವಾಸಿ, ದಲಿತ ಮುಖಂಡ ಪಿ. ಮೂರ್ತಿ ಮಂಗಳವಾರ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡರು.
    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯವತಿಯವರ ಸಾಧನೆ ಹಾಗು ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಿ. ಮೂರ್ತಿ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಪಕ್ಷದ ಬಾವುಟ ನೀಡುವುದರ ಮೂಲಕ ಸ್ವಾಗತಿಸಿದರು.
    ತಾಲೂಕು ಸಂಯೋಜಕ ಎಂ. ರಾಜೇಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ಗುಲಾಮ್ ಹುಸೇನ್, ಉಪಾಧ್ಯಕ್ಷ ಮಾಹಿನ್ ಹಾಗೂ ಪಕ್ಷದ ಸಂಘಟನಾ ಕಾರ್ಯದರ್ಶಿ ಶೌಕತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೂಡ್ಲಿಗೆರೆ ಗ್ರಾಮದಲ್ಲಿ ನೂತನ ನಾಡಕಛೇರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಸುಮಾರು ೧೮.೫ ಲಕ್ಷ ರು. ವೆಚ್ಚದಲ್ಲಿ ನೂತನ ನಾಡಕಛೇರಿ ನಿರ್ಮಾಣಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಏ. ೨೬: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಸುಮಾರು ೧೮.೫ ಲಕ್ಷ ರು. ವೆಚ್ಚದಲ್ಲಿ ನೂತನ ನಾಡಕಛೇರಿ ನಿರ್ಮಾಣಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
    ಕೂಡ್ಲಿಗೆರೆಯಲ್ಲಿ ಬಹಳ ವರ್ಷಗಳಿಂದ ನಾಡಕಛೇರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಸ್ವಂತ ಕಟ್ಟಡ ಹೊಂದಿರಲಿಲ್ಲ. ಈ ಹಿನ್ನಲೆಯಲ್ಲಿ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
    ಉಪತಹಸೀಲ್ದಾರ್ ನಾರಾಯಣಗೌಡ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ತಿಪ್ಪೇಶ್, ಉಪಾಧ್ಯಕ್ಷ ಕುಬೇರ್‌ನಾಯ್ಕ್, ಸುಗ್ರಾಮ ಅಧ್ಯಕ್ಷೆ ಗೌರಮ್ಮ, ಹಾಗು ಗ್ರಾ.ಪಂ. ಸದಸ್ಯರು, ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಎನ್.ಎಚ್ ಮಹೇಶ್, ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ದಶರಥಗಿರಿ, ಎಸ್ ಮಹಾದೇವ, ಜಯಣ್ಣ, ಪ್ರವೀಣ್‌ನಾಯ್ಕ್ ಹಾಗು ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್.ಎಲ್ ಅಧಿಕಾರಿ ಉನ್ನಿಕೃಷ್ಣನ್‌ಗೆ ಸಿಎಂಎ ಯುವ ಸಾಧಕ ಪ್ರಶಸ್ತಿ

ಏ.೨೦ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ೨೦೧೭ನೇ ಸಾಲಿನ ಸಿಎಂಎ ಯುವ ಸಾಧಕ ಪ್ರಶಸ್ತಿಯನ್ನು ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ವಿ.ಎಂ ಉನ್ನಿಕೃಷ್ಣನ್‌ರವರಿಗೆ ವಿತರಿಸಿದರು.
    ಭದ್ರಾವತಿ, ಏ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ವಿ.ಎಂ ಉನ್ನಿಕೃಷ್ಣನ್‌ರವರು ಇನ್ಸ್‌ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟ್ಸ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ೨೦೧೭ನೇ ಸಾಲಿನ ಸಿಎಂಎ ಯುವ ಸಾಧಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಬೃಹತ್ ಸಾರ್ವಜನಿಕ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಸಾಧಕರನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿ ಸರ್ಟಿಫಿಕೇಟ್ಸ್ ಆಫ್ ಮೆರಿಟ್ ಒಳಗೊಂಡಿದೆ. ಏ.೨೦ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಪ್ರಶಸ್ತಿಯನ್ನು ಉನ್ನಿಕೃಷ್ಣನ್‌ರವರಿಗೆ ವಿತರಿಸಿದರು.
    ಉನ್ನಿಕೃಷ್ಣನ್‌ರವರು ಎಂ.ಕಾಂ., ಐಸಿಡಬ್ಲ್ಯೂಎ ಮತ್ತು ಸಿಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹಣಕಾಸು ಅಧಿಕಾರಿಯಾಗಿ ಕಳೆದ ೧೧ ವರ್ಷಗಳಿಂದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಬಹುಮುಖ ಪ್ರತಿಮೆಯಾಗಿದ್ದು, ಗಾಯಕರಾಗಿದ್ದಾರೆ. ಇವರ ಸಾಧನೆಗೆ ಕಾರ್ಖಾನೆ ಆಡಳಿತ ಮಂಡಳಿ ಅಭಿನಂದಿಸಿದೆ.