Monday, May 2, 2022

ಹೋರಾಟಗಾರ ಗಿರೀಶ್ ಹೆಸರು ನಾಮಕರಣಕ್ಕೆ ಒತ್ತಾಯಿಸಿ ಮನವಿ

ಹೋರಾಟಗಾರ ದಿವಂಗತ ಬಿ.ವಿ ಗಿರೀಶ್‌ರವರ ಹೆಸರನ್ನು ನಗರದ ಬೈಪಾಸ್ ರಸ್ತೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ತಿಮ್ಲಾಪುರಕ್ಕೆ ಹೋಗುವ ರಸ್ತೆಗೆ ನಾಮಕರಣಗೊಳಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಸೋಮವಾರ ವಿವಿಧ ಸಂಘಟನೆಗಳ ಪ್ರಮುಖರು ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಮೇ. ೨: ಹೋರಾಟಗಾರ ದಿವಂಗತ ಬಿ.ವಿ ಗಿರೀಶ್‌ರವರ ಹೆಸರನ್ನು ನಗರದ ಬೈಪಾಸ್ ರಸ್ತೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ತಿಮ್ಲಾಪುರಕ್ಕೆ ಹೋಗುವ ರಸ್ತೆಗೆ ನಾಮಕರಣಗೊಳಿಸುವಂತೆ ಒತ್ತಾಯಿಸಿ ಸೋಮವಾರ ವಿವಿಧ ಸಂಘಟನೆಗಳ ಪ್ರಮುಖರು ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಿದರು.
    ತಾಲೂಕು ಕಛೇರಿ ಬಳಿ ಹಮ್ಮಿಕೊಳ್ಳಲಾಗಿದ್ದ ಬಿ.ವಿ ಗಿರೀಶ್‌ರವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರು ಬಿ.ವಿ ಗಿರೀಶ್‌ರವರು ಕನ್ನಡಪರ ಹೋರಾಟಗಳ ಜೊತೆಗೆ ಕಾರ್ಮಿಕರು, ರೈತರು, ವಿದ್ಯಾರ್ಥಿಗಳ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೋರಾಟಗಳಿಗೆ ಬೆನ್ನೆಲುಬಾಗಿ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಹೆಸರನ್ನು ಚಿರಸ್ಥಾಯಿಯಾಗಿಸಲು ಬೈಪಾಸ್ ರಸ್ತೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ತಿಮ್ಲಾಪುರಕ್ಕೆ ಹೋಗುವ ರಸ್ತೆಗೆ ಇವರ ಹೆಸರನ್ನು ನಾಮಕರಣಗೊಳಿಸುವಂತೆ ಮನವಿ ಮಾಡಿದರು.
    ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ವೀರಶೈವ ಲಿಂಗಾಯತ ಸಮಾಜದ  ಪ್ರಮುಖರಾದ ತೀರ್ಥಯ್ಯ, ಮಲ್ಲಿಕಾರ್ಜುನ, ಬಾರಂದೂರು ಮಂಜುನಾಥ್, ಬಸವರಾಜ್, ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಆರ್. ಶ್ರೇಯಸ್(ಚಿಟ್ಟೆ), ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಮುಖಂಡರಾದ ಬಿ. ಗಂಗಾಧರ್, ಚಂದ್ರಶೇಖರ್ ಹಾಗು ಬಿ.ವಿ ಗಿರೀಶ್ ಅಭಿಮಾನಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, May 1, 2022

ತವರಿಗೆ ಮರಳಿದ ವೀರಯೋಧ ಜಿ. ಮಂಜುನಾಥ್‌ಗೆ ಅದ್ದೂರಿ ಸ್ವಾಗತ

ಭಾರತೀಯ ಸೇನೆಯಲ್ಲಿ ಸುಮಾರು ೨೦ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಭದ್ರಾವತಿಗೆ ಮರಳಿದ ವೀರ ಯೋಧ ಜಿ. ಮಂಜುನಾಥ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಭದ್ರಾವತಿ, ಮೇ. ೧: ಭಾರತೀಯ ಸೇನೆಯಲ್ಲಿ ಸುಮಾರು ೨೦ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ವೀರ ಯೋಧ ಜಿ. ಮಂಜುನಾಥ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಹೊಸಮನೆ ನಿವಾಸಿ ಜಿ. ಮಂಜುನಾಥ್‌ರವರು ಭಾರತೀಯ ಸೇನೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಅಸ್ಸಾಂ, ಭೂಪಾಲ್, ಲಡಾಕ್ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿ ಕೊನೆಯ ಅವಧಿಯನ್ನು ಪಂಜಾಬ್‌ನಲ್ಲಿ ಪೂರೈಸಿ ಇದೀಗ ತವರಿಗೆ ಮರಳಿದ್ದಾರೆ.
    ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಸ್. ರಾಜಶೇಖರ್ ನೇತೃತ್ವದಲ್ಲಿ ಬಜರಂಗದಳ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಪುಷ್ಪ ಮಾಲಿಕೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅದ್ದೂರಿ ಸ್ವಾಗತ ಕೋರಿ ವೀರ ಯೋಧ ಜಿ. ಮಂಜುನಾಥ್‌ರವರ ದೇಶ ಪ್ರೇಮ, ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಮೇ.೩ರಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ

    ಭದ್ರಾವತಿ, ಮೇ. ೧: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮೇ.೩ರಂದು ಬೆಳಿಗ್ಗೆ ೧೧ ಗಂಟೆಗೆ ಸಿದ್ದರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ಕೆ.ಸಿ ನಾರಾಯಣಗೌಡ, ಅರಗಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಎಸ್ ಈಶ್ವರಪ್ಪ, ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೌರಾಯುಕ್ತ ಕೆ. ಪರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರೂಪಾಕ್ಷಪ್ಪ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮಕ್ಕೂ ಮೊದಲು ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಸಭಾಭವನದವರೆಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ವಿವಿಧ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಆರ್. ಪ್ರದೀಪ್  ಕೋರಿದ್ದಾರೆ.    

೩೩ ಗ್ರಾಮ ದೇವತೆಗಳ ಅದಿದೇವತೆ ಶ್ರೀ ಹಳದಮ್ಮ ದೇವಿ

ಮೇ.೩ರಿಂದ ೬ ದಿನಗಳ ಕಾಲ ಜಾತ್ರಾ ಮಹೋತ್ಸವ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಹಳದಮ್ಮ ದೇವಿ ದೇವಸ್ಥಾನ.

    * ಅನಂತಕುಮಾರ್
    ಭದ್ರಾವತಿ: ೩೩ ಗ್ರಾಮ ದೇವತೆಗಳಿಗೆ ಅದಿದೇವತೆ ಎಂಬ ಹೆಗ್ಗಳಿಕೆಗೆ ಪಾತ್ರಳಾದವಳು ಹಳೇನಗರದ ಶ್ರೀ ಹಳದಮ್ಮ ದೇವಿ. ಭವ್ಯ ಪರಂಪರೆ ಹೊಂದಿರುವ ಶ್ರೀ ಹಳದಮ್ಮ ದೇವಿ ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದಾಳೆ. ಪ್ರತಿ ೨ ವರ್ಷಕ್ಕೊಮ್ಮೆ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಕ್ತರು ಜಾತ್ರಾ ಮಹೋತ್ಸವವನ್ನು ಊರ ಹಬ್ಬವನ್ನಾಗಿಸಿಕೊಂಡು ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದಾರೆ.
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಹಳೇನಗರದ ಹೃದಯ ಭಾಗದಲ್ಲಿರುವ ದೇವಸ್ಥಾನದ ಸುತ್ತಮುತ್ತ ಪ್ರಸ್ತುತ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿನಿಂತಿವೆ. ದೇವಸ್ಥಾನವು ತನ್ನದೇ ಆದ ವಿಶಿಷ್ಟತೆಯಿಂದ ಕೂಡಿದ್ದು, ಇಂದಿಗೂ ತಲಾ ತಲಾಂತರಗಳಿಂದ ಶ್ರೀ ದೇವಿಯನ್ನು ಆರಾಧಿಸಿಕೊಂಡು ಬಂದಿರುವ ಭಕ್ತಾಧಿಗಳು ದೇವಸ್ಥಾನದ ಸುತ್ತಮುತ್ತ ನೆಲೆಸಿದ್ದಾರೆ. ದೇವಸ್ಥಾನದ ಸ್ವಲ್ಪ ದೂರದಲ್ಲಿ ೧೨ನೇ ಶತಮಾನದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದ್ದು, ಶ್ರೀ ಹಳದಮ್ಮ ದೇವಸ್ಥಾನಕ್ಕೆ ಮುಕುಟ ಕಳಶದಂತಿದೆ.
    ಶಕ್ತಿ ದೇವತೆ:
    ಶ್ರೀ ಹಳದಮ್ಮ ದೇವಿ ಶಕ್ತಿ ದೇವತೆಯಾಗಿದ್ದು, ೩೩ ಗ್ರಾಮಗಳ ರಕ್ಷಣೆಯನ್ನು ಮಾಡುವ ಕಾಯಕದಲ್ಲಿ ಶ್ರೀ ದೇವಿ ತೊಡಗಿದ್ದಾಳೆ. ಶ್ರೀ ದೇವಿಯ ಶಕ್ತಿ ಆಪಾರವಾದದ್ದು, ಮೊರೆ ಹೋದವರ ಕಷ್ಟ ಕಾರ್ಪಣ್ಯಗಳು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ ಎಂದು ತಲಾ ತಲಾಂತರಗಳಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ದೇವಿಯ ಭಕ್ತಾಧಿಗಳಿಂದ ಕೇಳಿ ಬರುವ ಮಾತು. ಅಂದು ಗ್ರಾಮಗಳಲ್ಲಿ ಭೀಕರ ರೋಗ, ಬರಗಾಲ, ಕ್ಷಾಮ, ಶತ್ರುಗಳ ದಾಳಿ ಸೇರಿದಂತೆ ಇನ್ನಿತರೆ ಗಂಡಾಂತಗಳಿಂದಾಗಿ ಮುಕ್ತಿ ಹೊಂದಲು ಗ್ರಾಮಸ್ಥರು ಶ್ರೀ ದೇವಿಯ ಮೋರೆ ಹೋಗುತ್ತಿದ್ದರು ಎನ್ನಲಾಗಿದೆ.
    ದೇವಸ್ಥಾನದ ವೈಶಿಷ್ಟ್ಯಗಳು:
    ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಶ್ರೀ ಹಳದಮ್ಮ ದೇವಿಯ ಅಕ್ಕ-ಪಕ್ಕ ಕೆರೆಕೋಡಮ್ಮ, ಕೆಂಪಮ್ಮ ಮತ್ತು ಮಾತಂಗಮ್ಮ ದೇವಿಯರು ನೆಲೆನಿಂತಿದ್ದಾರೆ. ಶಿಥಿಲಗೊಂಡಿದ್ದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ೧೯೮೩ರಿಂದ ಆರಂಭಗೊಂಡಿದ್ದು,  ಸಮಾಜ ಸೇವಕ ಸಿ.ಮಹೇಶ್ ಕುಮಾರ್ ನೇತೃತ್ವದಲ್ಲಿ ನಿರ್ಮಾಣಗೊಂಡು ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳಿಂದ ೨೦೧೦ರಲ್ಲಿ ಲೋಕಾರ್ಪಣೆಗೊಂಡ ೫೭ ಅಡಿ ಎತ್ತರದ ರಾಜ ಗೋಪುರವು ಜಿಲ್ಲೆಯಲ್ಲಿಯೇ ಅತಿ ಎತ್ತರದ ರಾಜಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಗರಸಭೆ ವತಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ಈಗಾಗಲೇ ಸಾಮಾನ್ಯಸಭೆಯಲ್ಲಿ ಒತ್ತಾಯಿಸಲಾಗಿದೆ.            
 - ಆರ್. ಶ್ರೇಯಸ್, ನಗರಸಭಾ ಸದಸ್ಯರು, ಭದ್ರಾವತಿ.

    ಊರಹಬ್ಬವಾಗಿ ಬದಲಾದ ಜಾತ್ರಾ ಮಹೋತ್ಸವ :
    ಪ್ರತಿ ೨ ವರ್ಷಕ್ಕೊಮ್ಮೆ ಶ್ರೀ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸಿಡಿ ಉತ್ಸವ ಎಲ್ಲರನ್ನು ಆಕರ್ಷಿಸುತ್ತದೆ. ನಗರ ಹಾಗು ಗ್ರಾಮಾಂತರ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇದರೊಂದಿಗೆ ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿ ಸಹ ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಷ್ಟ್ರ ಹಾಗು ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಳ್ಳುವುದು ವಿಶೇಷವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರಾ ಮಹೋತ್ಸವವನ್ನು ಊರಹಬ್ಬವನ್ನಾಗಿಸಿಕೊಂಡು ಸಂಭ್ರಮಾಚರಣೆ ನಡೆಸಲಾಗುತ್ತಿದೆ.
    ಮೂಲ ಸೌಕರ್ಯ ಕೊರತೆ:
    ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಮೂಲ ಸೌಕರ್ಯ ಕೊರತೆ ಕಂಡು ಬರುತ್ತಿದೆ.  ಭಕ್ತರಿಗೆ ಶುದ್ಧ ಕುಡಿಯುವ ನೀರು ಹಾಗು ಸಭೆ-ಸಮಾರಂಭಗಳನ್ನು ನಡೆಸಲು ಸಮುದಾಯ ಭವನ ಅಗತ್ಯವಿದೆ. ಅಲ್ಲದೆ ಗ್ರಾಮ ದೇವತೆಗೆ ಇದುವರೆಗೂ ಎಲ್ಲಿಯೂ ಸ್ವಾಗತ ದ್ವಾರ (ಕಮಾನು) ನಿರ್ಮಾಣ ಮಾಡಿಲ್ಲ. ದೇವಿಯ ಭವ್ಯ ಪರಂಪರೆ ಕುರಿತ ಮಾಹಿತಿ ಸಹ ಅನಾವರಣಗೊಳಿಸಿಲ್ಲ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ.
    ಮೇ.೩ ರಿಂದ ಜಾತ್ರಾ ಮಹೋತ್ಸವ :
    ಜಾತ್ರಾಮಹೋತ್ಸವ ಮೇ.೩ ರಿಂದ ೮ರವರೆಗೆ ೬ ದಿನಗಳ ಕಾಲ ನಡೆಯಲಿದ್ದು, ಮೇ. ೩ರಂದು ಬೆಳಗ್ಗೆ ೯ ಗಂಟೆಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ ರಾತ್ರಿ ೮ ಗಂಟೆಗೆ ರಾಜಬೀದಿ ಉತ್ಸವ ನಡೆಯಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಅನುಪಮ ಚನ್ನೇಶ್, ಆರ್. ಶ್ರೇಯಸ್(ಚಿಟ್ಟೆ), ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ದೇವಸ್ಥಾನಕ್ಕೆ ಅಮ್ಮನವರ ಕಮಾನು, ಸಮುದಾಯ ಭವನ ಅಗತ್ಯವಿದ್ದು, ಈ ಕುರಿತು ದೇವಸ್ಥಾನ ಸೇವಾ ಸಮಿತಿ ಗಮನ ಹರಿಸುವಂತೆ ಮನವಿ ಮಾಡುತ್ತೇನೆ. ಅಲ್ಲದೆ ಭಕ್ತರು, ದಾನಿಗಳು ಹಾಗು ಜನಪ್ರತಿನಿಧಿಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರುತ್ತೇನೆ.    
- ಗಿರೀಶ್, ಅಧ್ಯಕ್ಷರು, ಕೇಸರಿಪಡೆ, ಭದ್ರಾವತಿ

     ಮೇ.೪ರಂದು ಬೆಳಗ್ಗೆ ೫ ಗಂಟೆಗೆ ಗಂಗಾಪೂಜೆ ಹಾಗೂ ಗದ್ದುಗೆ ಪೂಜೆಯೊಂದಿಗೆ ಅಮ್ಮನವರ ದೇವಸ್ಥಾನ ಪ್ರವೇಶ ಹಾಗು ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮೆ.೫ ರಂದು ಬೆಳಗ್ಗೆ ೫.೩೦ಕ್ಕೆ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವ ನಡೆಯಲಿದ್ದು, ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಸಿ. ಮಹೇಶ್‌ಕುಮಾರ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಎಸ್. ಮಣಿಶೇಖರ್, ಮಾರುತಿ ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಮೇ. ೬ರಂದು ಮಧ್ಯಾಹ್ನ ೩ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಮೇ.೮ರ ವರೆಗೆ ೩ ದಿನಗಳ ಕಾಲ ನಡೆಯಲಿದೆ.
    ಮೇ.೭ರಂದು ಬೆಳಿಗ್ಗೆ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗು ಓಕಳಿ ನಡೆಯಲಿದ್ದು, ನಂತರ ಧಾರ್ಮಿಕ ಆಚರಣೆಗಳಿಗೆ ತೆರೆ ಬೀಳಲಿದೆ.

ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆ

ಭದ್ರಾವತಿ ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಭಾನುವಾರ ಕಾರ್ಮಿಕರ ದಿನಾಚರಣೆ ಆಚರಿಲಾಯಿತು.
    ಭದ್ರಾವತಿ, ಮೇ. ೧: ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಭಾನುವಾರ ಕಾರ್ಮಿಕರ ದಿನಾಚರಣೆ ಆಚರಿಲಾಯಿತು.
    ನ್ಯೂಟೌನ್ ಆಂಜನೇಯ ಅಗ್ರಹಾರದಲ್ಲಿರುವ ಸಂಘದ ಕಛೇರಿಯಲ್ಲಿ ಯೂನಿಯನ್ ಪ್ರಮುಖರು ಕಾರ್ಮಿಕರ ದಿನಾಚರಣೆ ಆಚರಿಸುವ ಮೂಲಕ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗು ಅಸಂಘಟಿತ ಕಾರ್ಮಿಕರು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಲಾಯಿತು.
    ಯೂನಿಯನ್ ಉಪಾಧ್ಯಕ್ಷ ಬಿ.ಎಚ್ ನಾಗೇಂದ್ರ ರೆಡ್ಡಿ, ನಿರ್ದೇಶಕ ಅಂತೋಣಿ ಕ್ರೂಸ್, ಪದಾಧಿಕಾರಿಗಳಾದ ನಾರಾಯಣ ಸ್ವಾಮಿ, ಕೃಷ್ಣ, ಜಯರಾಮ್, ಮಾರಸ್ವಾಮಿ, ಲಿಯಾಕತ್, ಯೋಗೇಶ್ ಬಾಬು, ಕುಮಾರ, ಮೋಹನ್, ಶಿವ, ಷಣ್ಮುಖ, ಮುನಿಸ್ವಾಮಿ, ಜಯಪಾಲ್, ಸುಬ್ರಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Saturday, April 30, 2022

ಸ್ವಾಭಿಮಾನದ ಬದುಕಿನ ಪರಿಕಲ್ಪನೆ ಹೊಂದಿದ್ದ ಪ್ರೊ. ಬಿ. ಕೃಷ್ಣಪ್ಪ : ಸತ್ಯ

ಭದ್ರಾವತಿ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ದಲಿತ ಸಂಘರ್ಷ ಸಮಿತಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿದರು.
    ಭದ್ರಾವತಿ, ಏ. ೩೦: ರಾಜಕೀಯ ಪರಿಕಲ್ಪನೆ ಮೂಲಕ ರಾಜ್ಯದಲ್ಲಿ ಶೋಷಿತರು, ದಲಿತರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಡುವ ಚಿಂತನೆಯನ್ನು ಪ್ರೊ. ಬಿ. ಕೃಷ್ಣಪ್ಪ ಹೊಂದಿದ್ದರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
    ಅವರು ಶನಿವಾರ ನಗರದ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಜೊತೆಗೆ ರಾಜ್ಯದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿದ ಪ್ರೊ. ಬಿ. ಕೃಷ್ಣಪ್ಪನವರು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು. ದಲಿತರು, ಶೋಷಿತರ ಪರವಾಗಿ ರಾಜ್ಯದೆಲ್ಲೆಡೆ ಹೋರಾಟ ನಡೆಸುವ ಜೊತೆಗೆ ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಪರಿಕಲ್ಪನೆ ಹೊಂದಿದ್ದರು. ದಲಿತರು, ಶೋಷಿತರು ಸಹ ರಾಜಕೀಯ ಸ್ಥಾನಮಾನ ಹೊಂದಲು ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿದ್ದರು ಎಂದರು.
    ಬಿ. ಕೃಷ್ಣಪ್ಪನವರು ಇಂದಿಗೂ ನಮ್ಮೆಲ್ಲರಿಗೂ ಹೋರಾಟದ ದಾರಿದೀಪವಾಗಿದ್ದಾರೆ. ಇವರ ಹೋರಾಟದ ಸ್ಪೂರ್ತಿಯಿಂದಾಗಿ ಹಲವು ಹೋರಾಟಗಳಲ್ಲಿ ನ್ಯಾಯ ಲಭಿಸಿದೆ. ಮುಂದಿನ ದಿನಗಳಲ್ಲೂ ಇವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಈಶ್ವರಪ್ಪ ಇನ್ನಿತರರು ಪಾಲ್ಗೊಂಡು ಮಾತನಾಡಿದರು. ಪ್ರಮುಖರಾದ ಸಿ. ಜಯಪ್ಪ, ಶಾಂತಿ, ಎನ್. ಗೋವಿಂದ, ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರ, ಗ್ರಾಮಾಂತರ ಭಾಗದ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ತಾಲೂಕಿನ ಗ್ರಾಮಾಂತರ ಹಾಗು ನಗರ ಪ್ರದೇಶದ ಹಲವು ಮಂದಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೩೦: ತಾಲೂಕಿನ ಗ್ರಾಮಾಂತರ ಹಾಗು ನಗರ ಪ್ರದೇಶದ ಹಲವು ಮಂದಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಬಿಳಿಕಿ, ಬಿಳಿಕಿ ತಾಂಡ, ಹೆಬ್ಬಂಡಿ, ಲಕ್ಷ್ಮೀಪುರ, ಜೇಡಿಕಟ್ಟೆ, ಬಾಳೆಮಾರನಹಳ್ಳಿ, ಗೊಂದಿ ಸೇರಿದಂತೆ ಇನ್ನಿತರ ಗ್ರಾಮಾಂತರ ಪ್ರದೇಶಗಳ ಹಾಗು ಹನುಮಂತನಗರ, ಹುತ್ತಾಕಾಲೋನಿ, ಲೋಯರ್ ಹುತ್ತಾ, ಅಪ್ಪರ್ ಹುತ್ತಾ ಮತ್ತು ಹೊಸಮನೆ ಸುಭಾಷ್ ನಗರ ಸೇರಿದಂತೆ ಇನ್ನಿತರ ನಗರ ಪ್ರದೇಶದ ಹಲವು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಪ್ರಮುಖರಾದ ಪದ್ದು, ಚಂದ್ರಿಕಾ, ಆಂಜನಪ್ಪ, ವೆಂಕಟೇಶ್, ಮುರಳಿ, ಕಲ್ಲೇಶಪ್ಪ, ರಂಗಪ್ಪ, ಮೈಲಾರಪ್ಪ, ರಾಮಾನಾಯ್ಕ, ಸುಶೀಲಮ್ಮ, ಮೂರ್ತಿ, ಶ್ರೀನಿವಾಸ್, ದಿನೇಶ್, ಸುರೇಶ್, ಕವಿತಾ, ವಿನಾಯಕ ಸೇರಿದಂತೆ ಹಲವು ಮಂದಿ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಎಸ್ ಗಣೇಶ್, ಜಿಲ್ಲಾ ಎಸ್.ಸಿ ಘಟಕದ ಉಪಾಧ್ಯಕ್ಷ ಎಸ್.ಎನ್ ಶಿವಪ್ಪ, ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.