'ಅಪ್ಪು ಅಮರ' ಒಂದು ಅವಲೋಕನ ಪುಸ್ತಕ
ಭದ್ರಾವತಿ, ಮೇ. ೬: ಮೂಲತಃ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿರುವ ವಿಭಿನ್ನ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಭದ್ರಾವತಿ ರಾಮಚಾರಿ ಇದೀಗ ಕಾವ್ಯ ಸ್ಪಂದನ ಪಬ್ಲಿಕೇಷನ್ ಮೂಲಕ ಗುರುತಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ರಾಮಚಾರಿಯವರು ತಮ್ಮದೇ ಸಂಪಾದಕತ್ವದಲ್ಲಿ ನಟ, ಸಮಾಜ ಸೇವಕ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಸವಿನೆನಪಿನಲ್ಲಿ 'ಅಪ್ಪು ಅಮರ' ಒಂದು ಅವಲೋಕನ ಎಂಬ ಬೃಹತ್ ಪುಸ್ತಕವನ್ನು ಹೊರತಂದಿದ್ದಾರೆ. ಮೇ.೭ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ ಸಮೀಪದಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ.
ವಿಶೇಷ ಎಂದರೆ ರಾಮಚಾರಿಯವರು ಪುಸ್ತಕ ಹೊರತರುವಲ್ಲಿ ಹುಟ್ಟೂರಿನ ಪ್ರಮುಖರ ಸಹಕಾರ ಪಡೆದುಕೊಂಡಿದ್ದಾರೆ. ಪರಿಸರವಾದಿ, ನಟ ಶಿವರಾಮ್, ಗ್ರಂಥಾಲಯ ಇಲಾಖೆಯ ಕುಮಾರ್ ಭದ್ರಾವತಿ ಹಾಗು ಎಸ್. ತಾರಾನಾಥ್ ಅವರಿಗೂ ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದಾರೆ. ಇವರೊಂದಿಗೆ ಲೇಖಕ, ಪ್ರಕಾಶಕ ರಮೇಶ್ ಸುರ್ವೆ, ಸುಮಾಲಿನಿ ಹಾಗು ಅಪ್ಪು ವೆಂಕಟೇಶ್ ಸಹ ಕೈಜೋಡಿಸಿದ್ದಾರೆ.
ಈ ಪುಸ್ತಕ ಸುಮಾರು ೩೫೦ ಬಹುವರ್ಣದ ಪುಟಗಳನ್ನು ಒಳಗೊಂಡಿದೆ. ಹಿರಿಯ ನಟ ರಾಮಕೃಷ್ಣರವರು ಪುಸ್ತುಕ ಬಿಡುಗಡೆ ಮಾಡಲಿದ್ದಾರೆ. ಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಿರ್ಮಾಪಕ ಎಸ್.ಎ ಗೋವಿಂದರಾಜ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ. ಮನೋಹರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಹೊಸಮನಿ, ಡಾ.ಸಿ.ಸೋಮಶೇಖರ್, ಧೀರೆನ್ ರಾಮ್‌ಕುಮಾರ್, ಭಾ.ಮ.ಹರೀಶ್, ನಟಿ ಪ್ರೇಮಾ, ಕಿರುತೆರೆ ನಟಿ ಅಪೂರ್ವ ಡಿ. ಸಾಗರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಎಲ್.ನಾಗರಾಜಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎನ್.ಆರ್ ರಮೇಶ್‌ರವರಿಗೆ 'ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ' ಹಾಗು ಭದ್ರಾವತಿಯ ಡಾ. ವಿಜಯದೇವಿಯವರ 'ಅಲ್ಲಮ ಪ್ರಭು ದೇವರು', ಕಾವ್ಯ ಕಲ್ಪವಲ್ಲಿಯವರ 'ಮೇರುಗುರು ಕೈವಾರ ತಾತಯ್ಯ', ಗಣೇಶ ವಿ. ಸಾಗರ ಅವರ 'ರಾಮಕಥಾ ಮಿತ್ರ' ಹಾಗು ವಿ.ಟಿ ರಾಮಕೃಷ್ಣಯ್ಯನವರ 'ಊರುಗೋಲಿನ ಸುತ್ತ ಮುತ್ತ' ಕೃತಿಗಳಿಗೆ 'ಸಾಹಿತ್ಯ ಸುಮ ಪ್ರಶಸ್ತಿ' ಪ್ರದಾನ ನಡೆಯಲಿದೆ.
ಬದುಕು ಕಟ್ಟಿಕೊಳ್ಳಬೇಕೆಂಬ ಆಶಯದೊಂದಿಗೆ ಸುಮಾರು ೨ ದಶಕಗಳ ಹಿಂದೆ ಭದ್ರಾವತಿಯಿಂದ ಬೆಂಗಳೂರಿಗೆ ತೆರಳಿದ ರಾಮಚಾರಿಯವರು ಕಾವ್ಯಸ್ಪಂದನ ಪಬ್ಲಿಕೇಷನ್ ಹುಟ್ಟು ಹಾಕುವ ಮೂಲಕ ಹಲವಾರು ಕವಿಗಳಿಗೆ, ಸಾಹಿತಿಗಳಿಗೆ, ಲೇಖಕರಿಗೆ ನೆರವಾಗಿ ನೂರಾರು ಪುಸ್ತಕಗಳ ಪ್ರಕಾಶಕರಾಗಿ ಹೊರಹೊಮ್ಮಿದ್ದಾರೆ.
ಪುನೀತ್‌ರಾಜ್‌ಕುಮಾರ್‌ರವರ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಗೊಳ್ಳಲು ಎಲ್ಲರೂ ಸಹಕಾರ ನೀಡಬೇಕೆಂದು ರಾಮಾಚಾರಿ ಕೋರಿದ್ದಾರೆ.