Monday, May 9, 2022

ಅಕ್ರಮ ರಸಗೊಬ್ಬರ ಮಾರಾಟ ಪ್ರಕರಣ : ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ


ಎಚ್. ರವಿಕುಮಾರ್
    ಭದ್ರಾವತಿ, ಮೇ. ೯: ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
    ಸರ್ಕಾರ ಸಬ್ಸಿಡಿ ದರದಲ್ಲಿ ನೀಡುವ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಸುಳ್ಳು ದಾಖಲೆ ನೀಡಿ ರೈತರ ಹೆಸರಿನಲ್ಲಿ ಖರೀದಿಸಲಾಗುತ್ತಿದೆ. ೪೫ ಕೆ.ಜಿ ತೂಕದ ಒಂದು ಚೀಲಕ್ಕೆ ೨೬೬ ರು. ನೀಡಲಾಗುತ್ತಿದೆ. ಈ ರಸಗೊಬ್ಬರವನ್ನು ಬೇರೆ ಚೀಲಗಳಿಗೆ ಬದಲಿಸಿ ನೆರೆರಾಜ್ಯಗಳಿಗೆ ಸುಮಾರು ೧,೬೦೦ ರು.ಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯ ರೈತರಿಗೆ ರಸಗೊಬ್ಬರದ ಅಭಾವ ಎದುರಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
    ರಸಗೊಬ್ಬರ ದಂಧೆಯು ಅವ್ಯಾಹತವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕೇವಲ ಸಣ್ಣಪುಟ್ಟ ಅಧಿಕಾರಿಗಳ ವಿರುದ್ಧ ನಾಮಕಾವಸ್ಥೆಗೆ ದೂರು ದಾಖಲಿಸಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬಿ.ಸಿ.ಪಾಟೀಲ್ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ನಗರಸಭೆಯಲ್ಲಿ ರಾಜರಂತೆ ವರ್ತಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು

ಬೇಕಾಬಿಟ್ಟಿಯಾಗಿ ಆಸ್ತಿ ತೆರಿಗೆ ಹೆಚ್ಚಿಸಿ ನಿವಾಸಿಗಳ ಶೋಷಣೆ

ಭದ್ರಾವತಿ ನಗರಸಭೆ ಮುಂಭಾಗ ಸೋಮವಾರ ಮನೆ ಮಾಲೀಕರ ಸಂಘದ ವತಿಯಿಂದ ಆಸ್ತಿ ತೆರಿಗೆ ಹೆಚ್ಚಳ ವಿರೋಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೯: ಇಲ್ಲಿನ ನಗರಸಭೆಗೆ ಇಲ್ಲಿನ ನಿವಾಸಿಗಳು ಮಾಲೀಕರು, ಆದರೆ ನಗರಸಭೆಯಲ್ಲಿ ಕೆಲಸ ಮಾಡುವವರು ನಿವಾಸಿಗಳನ್ನು ಶೋಷಿಸುವ ಮೂಲಕ ರಾಜರಂತೆ  ವರ್ತಿಸುತ್ತಿದ್ದಾರೆ. ಈ ನಡುವೆ ನಿವಾಸಿಗಳ ಸಮಸ್ಯೆಗಳನ್ನು ಅರಿತು ಪೂರಕವಾಗಿ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಅಸಮಾಧಾನ ವ್ಯಕ್ತಪಡಿಸಿದರು.
    ಅವರು ಸೋಮವಾರ ಮನೆ ಮಾಲೀಕರ ಸಂಘದ ವತಿಯಿಂದ ಆಸ್ತಿ ತೆರಿಗೆ ಹೆಚ್ಚಳ ವಿರೋಧಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
    ನಾವುಗಳು, ನಮ್ಮ ಅಗತ್ಯಗಳಿಗಾಗಿ ರೂಪಿಸಿಕೊಂಡಿರುವ ವ್ಯವಸ್ಥೆಯಲ್ಲಿ ನಗರಸಭೆ ಸಹ ಒಂದಾಗಿದ್ದು, ನಗರಸಭೆಗೆ ಮಾಲೀಕರು ನಾವುಗಳಾಗಿದ್ದೇವೆ. ನಮ್ಮಿಂದಲ್ಲೇ ನಗರಸಭೆ ನಡೆಯುತ್ತಿದ್ದು, ಇದನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಮೂಲಕ ಶೋಷಿಸುತ್ತಿರುವುದು ಸರಿಯಲ್ಲ ಎಂದರು.
    ನಮ್ಮಿಂದ ಆಯ್ಕೆಯಾದ ವಾರ್ಡ್ ಸದಸ್ಯರುಗಳು ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಆದರೆ ಇವರು  ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸುವ ಬದಲು ಅಧಿಕಾರಿಗಳ ಬೆಂಬಲಕ್ಕೆ ಮುಂದಾಗಿದ್ದಾರೆ. ಮೊದಲು ಆಸ್ತಿ ತೆರಿಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಮಾನ್ಯ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ವಿಶ್ವ ಹಿಂದೂ ಪರಿಷತ್ ಹಾ. ರಾಮಪ್ಪ ಮಾತನಾಡಿ, ನಗರಸಭೆಗೆ ಆಸ್ತಿ ತೆರಿಗೆ ಪಾವತಿಸಲು ಯಾರಿಗೂ ವಿರೋಧವಿಲ್ಲ. ಆದರೆ ಬೇಕಾಬಿಟ್ಟಿಯಾಗಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ತೆರಿಗೆ ಹೆಚ್ಚಳ ಮಾಡದಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಹಿಂದಿನ ಪೌರಾಯುಕ್ತ ಮನೋಹರ್‌ರವರು ವರ್ಗಾವಣೆಗೊಂಡ ನಂತರ ನಗರಸಭೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮೊದಲು ಅಧಿಕಾರಿಗಳು ನಿವಾಸಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೆಚ್ಚಳ ಮಾಡಿರುವ ಆಸ್ತಿ ತೆರಿಗೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.  
    ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ನಗರಸಭೆ ಆಡಳಿತ ಆಸ್ತಿ ತೆರಿಗೆ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ತೊಡಗಿದೆ. ಅಧಿಕಾರಿಗಳಿಗೆ ಒಳ್ಳೆಯ ಕಾರ್ಯ ಮಾಡುವ ಮನಸ್ಥಿತಿ ಇಲ್ಲವಾಗಿದೆ. ನಾವು ಮಾಡುವ ಕೆಲಸ ಮುಂದಿನ ದಿನಗಳಲ್ಲಿ ನೆನಪು ಮಾಡಿಕೊಳ್ಳುವಂತಿರಬೇಕು. ಈ ನಿಟ್ಟಿನಲ್ಲಿ ಆಲೋಚಿಸಿ ಕೆಲಸ ಮಾಡಿದ್ದಲ್ಲಿ ಎಲ್ಲವೂ ಸಾಧ್ಯ ಎಂದರು.
    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ಆಮ್ ಆದಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮನೆ ಮಾಲೀಕರ ಸಂಘದ ಗೌರವ ಸಲಹೆಗಾರ ಎಲ್.ವಿ ರುದ್ರಪ್ಪ, ಗೌರವಾಧ್ಯಕ್ಷ ಆರ್. ಇಂದುಶೇಖರಯ್ಯ, ಉಪಾಧ್ಯಕ್ಷ ಜಿ. ರಾಮು, ಕಾರ್ಯದರ್ಶಿ ಎನ್. ರಘುನಾಥರಾವ್, ಸಹಕಾರ್ಯದರ್ಶಿ ಡಿ.ಕೆ ಮಹಾಬೇಲೇಶ್ವರ, ಖಜಾಂಚಿ ಆರ್. ಸತ್ಯನಾರಾಯಣರೆಡ್ಡಿ ಹಾಗು ನಿರ್ದೇಶಕರುಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಪಾಲ್ಗೊಂಡಿದ್ದರು.

Sunday, May 8, 2022

ಮಳೆಯೊಂದಿಗೆ ಏಕಾಏಕಿ ಬಿರುಗಾಳಿ : ಧರೆಗುರುಳಿ ಬಿದ್ದ ಮರಗಳು, ವಿದ್ಯುತ್ ಕಂಬಗಳು

ಭದ್ರಾವತಿ ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ವಿಐಎಸ್‌ಎಲ್ ಕ್ರೀಡಾಂಗಣ ಸಮೀಪದ ಮಹಾತ್ಮಗಾಂಧಿ ಉದ್ಯಾನವನದ ರಸ್ತೆ ಬದಿಯಲ್ಲಿರುವ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವುದು.
    ಭದ್ರಾವತಿ, ಮೇ. ೮ : ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ಹಲವೆಡೆ ಮರಗಳು ಹಾಗು ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವ ಘಟನೆ ನಡೆದಿದೆ.
    ನ್ಯೂಟೌನ್, ಜನ್ನಾಪುರ, ಸಿದ್ದಾಪುರ ಹಾಗು ಹಳೇನಗರ ಭಾಗದಲ್ಲಿ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡಿದ್ದು, ವಿಐಎಸ್‌ಎಲ್ ಕ್ರೀಡಾಂಗಣ ಸಮೀಪದ ಮಹಾತ್ಮಗಾಂಧಿ ಉದ್ಯಾನವನದ ರಸ್ತೆ ಬದಿಯಲ್ಲಿರುವ ಮರಗಳು, ವಿಐಎಸ್‌ಎಲ್ ಜೋಡಿ ರಸ್ತೆಯ ಎರಡು ಬದಿಯಲ್ಲಿರುವ ಮರಗಳು ಧರೆಗುರುಳಿ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ತಂತಿಗಳು ಕತ್ತರಿಸಿಕೊಂಡು ಹೋಗಿವೆ. ಇದೆ ರೀತಿ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಬಳಿ ಮರದ ರೊಂಬೆಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಕತ್ತರಿಸಿ ಹೋಗಿವೆ.
    ಜನ್ನಾಪುರದಲ್ಲಿ ರಮಾವೆಂಕಟೇಶ್ ಎಂಬುವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಇದರಿಂದಾಗಿ ಕಟ್ಟಡಕ್ಕೆ ಹಾನಿಯಾಗಿದೆ. ತೆಂಗಿನ ಮರ ಕಡಿತಲೆ ಮಾಡುವಂತೆ ಹಲವಾರು ಬಾರಿ ಮನೆ ಮಾಲೀಕರಿಗೆ ಸೂಚಿಸಿದ್ದರೂ ಸಹ ನಿರ್ಲಕ್ಷ್ಯತನ ವಹಿಸಿದ್ದರು ಎಂದು ರಮಾವೆಂಕಟೇಶ್ ದೂರಿದ್ದಾರೆ.
    ಅಲ್ಲದೆ ಹಲವೆಡೆ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿದ್ದು, ಈ ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ಕಡಿತವಾಗಿದೆ. ಭಾನುವಾರ ಬೆಳಿಗ್ಗೆಯಿಂದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಉಳಿದಂತೆ ಹಳೇನಗರ ಭಾಗದಲ್ಲೂ ಬಿರುಗಾಳಿಯಿಂದಾಗಿ ಸ್ವಲ್ಪ ಪರಿಣಾಮದಲ್ಲಿ ಹಾನಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ.



ಭದ್ರಾವತಿ ನಗರದ ವಿವಿಧೆಡೆ ಶನಿವಾರ ಸಂಜೆ ಮಳೆಯೊಂದಿಗೆ ಬಿರುಗಾಳಿ ಕಾಣಿಸಿಕೊಂಡ ಪರಿಣಾಮ ಜನ್ನಾಪುರದಲ್ಲಿ ರಮಾವೆಂಕಟೇಶ್ ಎಂಬುವರ ಮನೆ ಮೇಲೆ ತೆಂಗಿನ ಮುರಿದು ಬಿದ್ದಿರುವುದು.

ಮಹರ್ಷಿ ಶ್ರೀ ಭಗಿರಥ ಜಯಂತಿ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಮಹರ್ಷಿ ಶ್ರೀ ಭಗಿರಥ ಜಯಂತಿ ಆಚರಿಸಲಾಯಿತು.
    ಭದ್ರಾವತಿ, ಮೇ. ೮: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಮಹರ್ಷಿ ಶ್ರೀ ಭಗಿರಥ ಜಯಂತಿ ಆಚರಿಸಲಾಯಿತು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹರ್ಷಿ ಶ್ರೀ ಭಗಿರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಜೀವನ ಚರಿತ್ರೆ ವಿವರಿಸಲಾಯಿತು.
    ಉಪತಹಸೀಲ್ದಾರ್ ಮಂಜಾನಾಯ್ಕ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ರವಿಕುಮಾರ್, ಜಿಲ್ಲಾ ನಿರ್ದೇಶಕ ಎಸ್. ರಾಜಶೇಖರ್, ಪ್ರಮುಖರಾದ ರವೀಶ್, ಮಲ್ಲಿಕಾರ್ಜುನ, ಅಶೋಕ್‌ಕುಮಾರ್, ತೇಜ್ಪಾಲ್, ನಾಗ, ಮಲ್ಲಿಕಣ್ಣ ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Saturday, May 7, 2022

ಗುತ್ತಿಗೆ ಕಾರ್ಮಿಕರೇ ಅಧಿಕವಾಗಿರುವ ಕಾರ್ಖಾನೆಯಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ

ಮೇ.೮ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಚುನಾವಣೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
    * ಅನಂತಕುಮಾರ್
    ಭದ್ರಾವತಿ, ಮೇ. ೭: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇದೀಗ ಗುತ್ತಿಗೆ ಕಾರ್ಮಿಕರೇ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಪರವಾದ ಹೋರಾಟಗಳಿಗೆ ಹೆಚ್ಚು ಶಕ್ತಿ ತುಂಬಿಕೊಡುವ ನಾಯಕರ ಅಗತ್ಯವಿದೆ. ಗುತ್ತಿಗೆ ಕಾರ್ಮಿಕರು ಮೇ.೮ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ನಾಯಕನ ಆಯ್ಕೆಯಲ್ಲಿ ಮುಂದಾಗಿದ್ದಾರೆ.
    ಅಭಿವೃದ್ಧಿ ನಿರೀಕ್ಷೆಯೊಂದಿಗೆ ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಮುನ್ನಡೆಯುತ್ತಿರುವ ಕಾರ್ಖಾನೆಯಲ್ಲಿ . ಒಂದು ಕಾಲದಲ್ಲಿ ಸುಮಾರು ೧೫ ಸಾವಿರಕ್ಕೂ ಹೆಚ್ಚು ಕಾಯಂ ಹಾಗು ೧೦ ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ದೇಶದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂತಹ ಬೃಹತ್ ಕಾರ್ಖಾನೆಯಲ್ಲಿ ಇದೀಗ ಕೇವಲ ೨೧೭ ಕಾಯಂ ಹಾಗು ೫೩ ಅಧಿಕಾರಿಗಳು ಮತ್ತು ೧೧೪೫ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಉದ್ಯೋಗ ಭದ್ರತೆ ಇಲ್ಲ, ತಿಂಗಳ ಪೂರ್ತಿ ಉದ್ಯೋಗವಿಲ್ಲ, ಇಎಸ್‌ಐ ಸೌಲಭ್ಯಗಳು ಸಮರ್ಪಕವಾಗಿಲ್ಲ, ಅಲ್ಲದೆ ಹಲವಾರು ಕಾರ್ಮಿಕ ಸೌಲಭ್ಯಗಳಿಂದ ವಂಚಿತರಾಗಿರುವ ಗುತ್ತಿಗೆ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಅಧಿಕೃತ ಕಾರ್ಮಿಕ ಸಂಘ ಸಹ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಆದರೂ ಇವರ ಬೇಡಿಕೆಗಳು ಈಡೇರುತ್ತಿಲ್ಲ.

ಕಾರ್ಖಾನೆಯನ್ನು ಅಭಿವೃದ್ದಿಪಡಿಸುವಲ್ಲಿ ಅಥವಾ ಖಾಸಗೀಕರಣಗೊಳಿಸುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಸ್ತುತ ಕಾರ್ಖಾನೆ ಇರುವ ವ್ಯವಸ್ಥೆಯಲ್ಲಿಯೇ ಸಣ್ಣ ಪ್ರಮಾಣದ ಉತ್ಪಾದನೆ, ಸಣ್ಣ ಪ್ರಮಾಣದ ಲಾಭದಲ್ಲಿ ಮುನ್ನಡೆಯುತ್ತಿದೆ. ಚಿಕ್ಕ ಚಿಕ್ಕ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈ ನಡುವೆ ಪ್ರಾಧಿಕಾರ ರು. ೧೩ ಕೋ. ಬಿಡುಗಡೆಗೊಳಿಸಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘ ತಟಸ್ಥವಾಗಿ ಉಳಿದುಕೊಂಡಿದ್ದು, ಯಾವುದೇ ಹೋರಾಟಕ್ಕೆ ಮುಂದಾಗದೆ ಮುಂದಿನ ಬೆಳವಣಿಗೆಗಳನ್ನು ಎದುರು ನೋಡುತ್ತಿದೆ. ಕಾರ್ಮಿಕ ಸಂಘ ಸದಾ ಕಾಲ ಗುತ್ತಿಗೆ ಕಾರ್ಮಿಕರ ಪರವಾಗಿದ್ದು, ಅವರ ಹೋರಾಟಗಳಲ್ಲಿ ಕೈಜೋಡಿಸಲಿದೆ.
          - ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಭದ್ರಾವತಿ

    ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದೆಡೆ ಅಗತ್ಯವಿರುವ ಬಂಡವಾಳ ತೊಡಗಿಸದೆ, ಮತ್ತೊಂದೆಡೆ ಖಾಸಗಿಕರಣಗೊಳ್ಳದೆ ಅತಂತ್ರ ಸ್ಥಿತಿಯಲ್ಲಿ ಮುನ್ನಡೆಯುವಂತಾಗಿದೆ. ಈ ನಡುವೆ ೩-೪ ವರ್ಷಗಳಿಂದ ಉಕ್ಕು ಪ್ರಾಧಿಕಾರ ಸರ್ಕಾರ ಕೈಗೊಳ್ಳುವ ತೀರ್ಮಾನಗಳಿಗೆ ಎದುರು ನೋಡದೆ ಕಾರ್ಖಾನೆಯನ್ನು ಸಂಕಷ್ಟದಲ್ಲಿಯೂ ಮುನ್ನಡೆಸಿಕೊಂಡು ಹೋಗುವ ದೃಢ ಸಂಕಲ್ಪ ಕೈಗೊಂಡಿರುವಂತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಅಲ್ಪ ಪ್ರಮಾಣದ ಬಂಡವಾಳ, ಅಲ್ಪ ಪ್ರಮಾಣದ ಉತ್ಪಾದನೆ, ಅಲ್ಪ ಪ್ರಮಾಣದ ಲಾಭ ಕಾಯ್ದುಕೊಂಡು ಬರುತ್ತಿದೆ.  
    ಈ ಎಲ್ಲಾ ಬೆಳವಣಿಗೆಗಳ ನಡುವೆ ಗುತ್ತಿಗೆ ಕಾರ್ಮಿಕರು ತಮ್ಮ ನಾಯಕನ ಆಯ್ಕೆಯಲ್ಲಿ ತೊಡಗಿರುವುದು ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅಧ್ಯಕ್ಷ-೧,  ಉಪಾಧ್ಯಕ್ಷ-೨, ಪ್ರಧಾನ ಕಾರ್ಯದರ್ಶಿ-೧, ಸಹ ಕಾರ್ಯದರ್ಶಿ-೩, ಖಜಾಂಚಿ-೧ ಹಾಗು ೧೨ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಹಲವು ಮಂದಿ ಮೊದಲ ಬಾರಿಗೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ನ್ಯೂಟೌನ್ ಸರ್‌ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಯಲಿದೆ.
    ಗುತ್ತಿಗೆ ಕಾರ್ಮಿಕರು ಸಹ ವಿವಿಧ ರಾಜಕೀಯ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿದ್ದು, ತಮ್ಮ ನಾಯಕನ ಆಯ್ಕೆಯಲ್ಲಿ ರಾಜಕೀಯ ಪಕ್ಷವನ್ನು ಬದಿಗಿಟ್ಟು ಸಮರ್ಥರನ್ನು ಆಯ್ಕೆ ಮಾಡುವಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಆಗ ಮಾತ್ರ ಅವರ ಮುಂದಿನ ಹೋರಾಟಗಳು ರಾಜಕೀಯ ಪ್ರೇರಿತವಾಗದೆ ಕಾರ್ಮಿಕರ ಹೋರಾಟವಾಗಲಿವೆ ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ : ೨,೪೦೦ ರು. ದಂಡ ವಸೂಲಿ

ಭದ್ರಾವತಿ ನಗರದ ವಿವಿಧೆಡೆ ತಂಬಾಕು ನಿಯಂತ್ರಣ ಕಾಯ್ದೆಯಡಿ ಶನಿವಾರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘಿಸಿರುವವರ ವಿರುದ್ಧ ದಂಡ ವಿಧಿಸಲಾಯಿತು.
    ಭದ್ರಾವತಿ, ಮೇ. ೭ : ನಗರದ ವಿವಿಧೆಡೆ ತಂಬಾಕು ನಿಯಂತ್ರಣ ಕಾಯ್ದೆಯಡಿ ಶನಿವಾರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘಿಸಿರುವವರ ವಿರುದ್ಧ ದಂಡ ವಿಧಿಸಿರುವ ಘಟನೆ ನಡೆದಿದೆ.
      ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ  ಹಳೇನಗರದ ಬಸವೇಶ್ವರ ವೃತ್ತ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು ೨೪೦೦ ರು.  ದಂಡ ವಸೂಲಾತಿ ಮಾಡಲಾಯಿತು.      
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ ವಿ ಅಶೋಕ್,  ಭದ್ರಾವತಿ, ಎಚ್.ಐ.ಓ ಅನಂದಮೂರ್ತಿ ಮೂರ್ತಿ, ಜಿಲ್ಲಾ  ತಂಬಾಕು ನಿಯಂತ್ರಣ ಕೋಶದ    ಹೇಮಂತ್ ರಾಜ್,  ರವಿರಾಜ್ ಹಾಗೂ ನಗರ ಆರೋಗ್ಯ ಕೇಂದ್ರದ  ಮನೋಹರ್ರ ಚೇತನ್ ಕಾರ್ಯಾಚರಣೆಯಲ್ಲಿ  ಪಾಲ್ಗೊಂಡಿದ್ದರು.

ಸುಮಾರು ೭ ಅಡಿ ಉದ್ದದ ಹೆಬ್ಬಾವು ಸೆರೆ : ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಅರುಣ್


ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಕಾಣಿಸಿಕೊಂಡ ಸುಮಾರು ೭ ಅಡಿ ಉದ್ದದ ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಅರುಣ್ ಎಂಬುವರು ಯಶಸ್ವಿಯಾಗಿದ್ದಾರೆ.

ಭದ್ರಾವತಿ, ಮೇ. ೭: ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಕಾಣಿಸಿಕೊಂಡ ಸುಮಾರು ೭ ಅಡಿ ಉದ್ದದ ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಅರುಣ್ ಎಂಬುವರು ಯಶಸ್ವಿಯಾಗಿದ್ದಾರೆ.
ಕೂಲಿ ಕೆಲಸದೊಂದಿಗೆ ಹಾವುಗಳನ್ನು ಹಿಡಿಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿರುವ ಅರುಣ್ ಹೆಬ್ಬಾವು ಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಸಮೀಪದ ಗಂಗೂರು ಅರಣ್ಯ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುತ್ತಮುತ್ತಲ ಗ್ರಾಮಗಳ ಜನ ವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡು ಬಂದಲ್ಲಿ ತಕ್ಷಣ ಆಗಮಿಸಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಹಾವುಗಳ ರಕ್ಷಣೆ ಜೊತೆಗೆ ಜನ, ಜಾನುವಾರಗಳ ಪ್ರಾಣ ರಕ್ಷಣೆಯಲ್ಲೂ ಅರಣ್ ನಿರತರಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ: ೮೧೯೭೭೦೦೧೬೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.