Tuesday, May 10, 2022

ಸಹಾಯಕ ಪ್ರಾಧ್ಯಾಪಕ ಎಸ್. ವರದರಾಜರಿಗೆ ಪಿಎಚ್‌ಡಿ ಪದವಿ

ಎಸ್. ವರದರಾಜ
    ಭದ್ರಾವತಿ, ಮೇ. ೧೦: ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ವರದರಾಜಯವರು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
    'ಅರ್ಬನ್ ಹೌಸಿಂಗ್ ಸ್ಕೀಮ್ ಇನ್ ಕರ್ನಾಟಕ ವಿತ್ ಸ್ಪೆಷಲ್ ರೆಫರನ್ಸ್ ಟು ಶಿವಮೊಗ್ಗ ಡಿಸ್ಟ್ರಿಕ್ಟ್' ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮಾರ್ಗದರ್ಶಕರು ಮತ್ತು ಅಧ್ಯಕ್ಷರಾದ ಪ್ರೊ. ಎನ್.ಕೆ ಗೌಡ(ನಿವೃತ್ತ)ರವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು.
    ವರದರಾಜರವರು ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರಾದ ದಿವಂಗತ ಶಿವಲಿಂಗಯ್ಯ, ಲಕ್ಷ್ಮಮ್ಮ ದಂಪತಿ ಪುತ್ರರಾಗಿದ್ದು, ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.


ರಾಜ್ಯದ ಭವಿಷ್ಯದ ರಾಜಕಾರಣದಲ್ಲಿ ಉತ್ತರ ಪ್ರದೇಶದಂತಹ ಮುಖ್ಯಮಂತ್ರಿ ನೋಡುವ ಬಯಕೆ : ಪವಿತ್ರ ರಾಮಯ್ಯ

ಭದ್ರಾವತಿಯಲ್ಲಿ ಮಂಗಳವಾರ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಕಾರ್ಯಕಾರಿಣಿ ಹಾಗು ರೈತ ಪ್ರಭಾರಿಗಳ ಮೊದಲ ಸಭೆ ನಡೆಯಿತು.  
    ಭದ್ರಾವತಿ, ಮೇ. ೧೦:  ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ದೇಶಕ್ಕೆ ಮಾದರಿಯಾಗಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ರಾಜ್ಯದ ಭವಿಷ್ಯದ ರಾಜಕಾರಣದಲ್ಲಿ ಕಾಣುವ ಅಗತ್ಯತೆ ಇದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
    ಅವರು ಮಂಗಳವಾರ ನಗರದಲ್ಲಿ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಿಣಿ ಹಾಗು ರೈತ ಪ್ರಭಾರಿಗಳ ಮೊದಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನಾನು ಸಾಯುವ ಮೊದಲು ಉತ್ತರ ಪ್ರದೇಶ ಮಾದರಿಯ ಮುಖ್ಯಮಂತ್ರಿಯನ್ನು ರಾಜ್ಯದಲ್ಲಿ ನೋಡಬೇಕೆಂಬ ಬಯಕೆ ಹೊಂದಿದ್ದೇನೆ. ಇಂತಹ ಮುಖ್ಯಮಂತ್ರಿಯಿಂದ ಮಾತ್ರ ಅಭಿವೃದ್ಧಿ ಕಾರ್ಯ ನಿರೀಕ್ಷಿಸಲು ಸಾಧ್ಯ ಎಂದರು.
    ಈ ಹಿಂದೆ ನಾನು ಬಹಳಷ್ಟು ಹೋರಾಟ ನಡೆಸಿದ ಪರಿಣಾಮ ಕಾಡಾ ಅಧ್ಯಕ್ಷರಾಗಲು ಸಾಧ್ಯವಾಯಿತು. ಪ್ರಸ್ತುತ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಲಭ್ಯವಿರುವ ಅನುದಾನದಲ್ಲಿಯೇ ರೈತರ ಜಮೀನುಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಮಂಡಳಿಗೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದರು.
    ರೈತರು ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತರಾಗುವ ಅಗತ್ಯವಿದೆ. ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದರು.
    ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳ, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಅಂಬೋರೆ, ಕಾರ್ಯದರ್ಶಿಗಳಾದ ವಿನ್ಸೆಂಟ್, ಹಾಲೇಶಪ್ಪ, ರವೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮಂಡಿನಕೊಪ್ಪ ಗಂಗಾಧರ್, ಚಂದ್ರಪ್ಪ, ನರಸಿಂಹಚಾರ್, ಮಂಜುನಾಥ್, ನಗರಸಭಾ ಸದಸ್ಯೆ ಶಶಿಕಲಾ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಿಹಿಮೊಗೆ ಮಾಧ್ಯಮ ಸ್ಮರಣ ಸಂಚಿಕೆ ಬಿಡುಗಡೆ

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊರತಂದಿರುವ 'ಸಿಹಿಮೊಗೆ ಮಾಧ್ಯಮ' ಸ್ಮರಣ ಸಂಚಿಕೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್ ಭದ್ರಾವತಿ ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಬಿಡಗಡೆಗೊಳಿಸಿದರು.
    ಭದ್ರಾವತಿ, ಮೇ. ೧೦: ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊರತಂದಿರುವ 'ಸಿಹಿಮೊಗೆ ಮಾಧ್ಯಮ' ಸ್ಮರಣ ಸಂಚಿಕೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್ ಬಿಡಗಡೆಗೊಳಿಸಿದರು.
    ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸಂಚಿಕೆ ಬಿಡುಗಡೆಗೊಳಿಸಿ ಸರ್ವ ಸದಸ್ಯರ ಸಭೆಗೆ ಚಾಲನೆ ನೀಡಲಾಯಿತು.
    ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ವಾರ್ಷಿಕ ವರದಿ ಹಾಗು ಖಜಾಂಚಿ ಅನಂತಕುಮಾರ್ ಲೆಕ್ಕಪತ್ರ ವರದಿ ಮಂಡಿಸಿದರು.
    ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಪಿಲೋಮಿನಾ ನಿರೂಪಿಸಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಸೋಮನಾಥ್, ಸದಸ್ಯ ಗಂಗಾನಾಯ್ಕ ಗೊಂದಿ ಉಪಸ್ಥಿತರಿದ್ದರು.
    ಹಿರಿಯ ಸದಸ್ಯರಾದ ಎನ್. ಬಾಬು, ಶಿವಶಂಕರ್, ಬದರಿನಾರಾಯಣ, ಸುಭಾಷ್‌ರಾವ್ ಸಿಂಧ್ಯಾ, ಸುದರ್ಶನ್, ಟಿ.ಎಸ್ ಆನಂದಕುಮಾರ್, ಸಯ್ಯದ್ ಖಾನ್, ಕೆ.ಆರ್ ಶಂಕರ್, ಪ್ರಶಾಂತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎಸ್.ಜಿ ಸುರೇಶ್

    ಭದ್ರಾವತಿ, ಮೇ. ೧೦: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎಚ್.ಜಿ ಸುರೇಶ್ ಆಯ್ಕೆಯಾಗಿದ್ದಾರೆ.
        ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆರ್. ಮಂಜುನಾಥ್ ಮತ್ತು ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪಿ. ರಾಕೇಶ್, ಸಹಕಾರ್ಯದರ್ಶಿಗಳಾಗಿ ವಿ. ಗುಣಶೇಖರ್, ಎನ್.ಆರ್ ವಿನಯ್‌ಕುಮಾರ್, ಅಂತೋಣಿ ದಾಸ್, ಖಜಾಂಚಿಯಾಗಿ ಜಿ. ಆನಂದ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರಲಿಂಗೇಗೌ, ಪ್ರಸನ್ನಬಾಬು, ನಂಜೇಗೌಡ, ಜೆ. ಕಿರಣ್, ಶಿವಣ್ಣಗೌಡ, ಬಿ. ದೇವರಾಜ, ಆರ್. ಅರುಣ್, ಎ.ಪಿ ಶೇಷಪ್ಪ ಗೌಡ ಮತ್ತು ಸುಬ್ರಮಣಿ ಚುನಾಯಿತರಾಗಿದ್ದರು. ಉಳಿದಂತೆ ಬಿ.ಟಿ ವಾಸುದೇವ, ಎಸ್.ಕೆ ಮಂಜುನಾಥ್ ಮತ್ತು ಪಿ. ಅವಿನಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಕಾರ್ಖಾನೆಯಲ್ಲಿ ಸುಮಾರು ೧೧೪೫ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಮಂದಿ ಮತ ಚಲಾಯಿಸಿದರು. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ಮತದಾನ ನಡೆಯಿತು. ಚುನಾವಣಾಧಿಕಾರಿಯಾಗಿ ಡಾ.ಎಸ್. ಸುಮಂತ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.

Monday, May 9, 2022

ಮೇ.೧೦ರಂದು ಸಾಮಾಜಿಕ ನ್ಯಾಯದ ದಿನ

    ಭದ್ರಾವತಿ, ಮೇ. ೯: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಸಮಿತಿ ವತಿಯಿಂದ ಮೇ.೧೦ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮಹಾನ್ ಚೇತನ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನ 'ಸಾಮಾಜಿಕ ನ್ಯಾಯದ ದಿನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ, ತಾಲೂಕು ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,  ದಲಿತ ಸಂಘಟನೆಗಳ, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಕಿರಣ್‌ಗೆ ಪ್ರಥಮ ಬಹುಮಾನ

೧ ಕೆ.ಜಿ ಬೆಳ್ಳಿ ಗದೆ, ೫೦ ಸಾವಿರ ರು. ನಗದು ಬಹುಮಾನ

೩೩ ಗ್ರಾಮ ದೇವತೆಗಳಿಗೆ ಅದಿದೇವತೆಯಾಗಿರುವ ಭದ್ರಾವತಿ ಹಳೇನಗರದ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕನಕ ಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ಕುಸ್ತಿಪಟು ಕಿರಣ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮೇ. ೯ : ೩೩ ಗ್ರಾಮ ದೇವತೆಗಳಿಗೆ ಅದಿದೇವತೆಯಾಗಿರುವ ಹಳೇನಗರದ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕನಕ ಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ಕುಸ್ತಿಪಟು ಕಿರಣ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅಂತಿಮ ಪಂದ್ಯಾವಳಿಯಲ್ಲಿ ಭದ್ರಾವತಿ ಕಿರಣ್ ಮತ್ತು ಪಂಜಾಬ್‌ನ ರಾಕೇಶ್ ಕಾಳ ನಡುವೆ ರೋಚಕ ಸ್ಪರ್ಧೆ ನಡೆದು ಅಂತಿಮವಾಗಿ ಕಿರಣ್ ಜಯಶೀಲರಾಗುವ ಮೂಲಕ ಪ್ರಥಮ ಬಹುಮಾನ ೧ ಕೆ.ಜಿ ಬೆಳ್ಳಿ ಗದೆ ಮತ್ತು ೫೦ ಸಾವಿರ ರು. ನಗದು ಬಹುಮಾನ ಪಡೆದುಕೊಂಡಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮತ್ತು ಉದ್ಯಮಿ ಮಾರುತಿ ಮೆಡಿಕಲ್ ಆನಂದ್, ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಿ.ಎಂ ಸಂತೋಷ್ ಹಾಗು ಪದಾಧಿಕಾರಿಗಳು, ಕೇಸರಿ ಪಡೆ ಗಿರೀಶ್‌, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಕ್ರಮ ರಸಗೊಬ್ಬರ ಮಾರಾಟ ಪ್ರಕರಣ : ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ


ಎಚ್. ರವಿಕುಮಾರ್
    ಭದ್ರಾವತಿ, ಮೇ. ೯: ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
    ಸರ್ಕಾರ ಸಬ್ಸಿಡಿ ದರದಲ್ಲಿ ನೀಡುವ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಸುಳ್ಳು ದಾಖಲೆ ನೀಡಿ ರೈತರ ಹೆಸರಿನಲ್ಲಿ ಖರೀದಿಸಲಾಗುತ್ತಿದೆ. ೪೫ ಕೆ.ಜಿ ತೂಕದ ಒಂದು ಚೀಲಕ್ಕೆ ೨೬೬ ರು. ನೀಡಲಾಗುತ್ತಿದೆ. ಈ ರಸಗೊಬ್ಬರವನ್ನು ಬೇರೆ ಚೀಲಗಳಿಗೆ ಬದಲಿಸಿ ನೆರೆರಾಜ್ಯಗಳಿಗೆ ಸುಮಾರು ೧,೬೦೦ ರು.ಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯ ರೈತರಿಗೆ ರಸಗೊಬ್ಬರದ ಅಭಾವ ಎದುರಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
    ರಸಗೊಬ್ಬರ ದಂಧೆಯು ಅವ್ಯಾಹತವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕೇವಲ ಸಣ್ಣಪುಟ್ಟ ಅಧಿಕಾರಿಗಳ ವಿರುದ್ಧ ನಾಮಕಾವಸ್ಥೆಗೆ ದೂರು ದಾಖಲಿಸಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬಿ.ಸಿ.ಪಾಟೀಲ್ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.