Wednesday, May 18, 2022

ನೂತನ ಪೌರಾಯುಕ್ತ ಎಚ್.ಎಂ ಮನುಕುಮಾರ್

ಎಚ್.ಎಂ ಮನುಕುಮಾರ್
    ಭದ್ರಾವತಿ, ಮೇ. ೧೮ : ಇಲ್ಲಿನ ನಗರಸಭೆ ನೂತನ ಪೌರಾಯುಕ್ತರಾಗಿ ಎಚ್.ಎಂ ಮನುಕುಮಾರ್ ಮಂಗಳವಾರ ಅಧಿಕಾರ ವಹಿಸಿಕೊಂಡರು.
    ಮನುಕುಮಾರ್ ೨೦೧೧ನೇ ಸಾಲಿನ ಕರ್ನಾಟಕ ಪೌರಾಡಳಿತ ಸೇವೆಯ ಮುಖ್ಯಾಧಿಕಾರಿ ಶ್ರೇಣಿ-೧ರ ಗ್ರೂಪ್-ಬಿ ಅಧಿಕಾರಿಯಾಗಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಇವರನ್ನು ಮೊದಲ ಬಾರಿಗೆ ಪೌರಾಯುಕ್ತರ ಹುದ್ದೆಗೆ ನಿಯೋಜನೆಗೊಳಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ.
    ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಪರಮೇಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.

Tuesday, May 17, 2022

ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ

ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ, ಮೇ. ೧೭: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ ವಿಜೃಂಭಣೆಯಿಂದ ಆಚರಿಸಲಾಯಿತು.
    ನಗರದ ವೀರಶೈವ ಕಲ್ಯಾಣ ಮಂಟದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಬಿ.ಪಿ ವೀರಭದ್ರಪ್ಪ ಉದ್ಘಾಟಿಸಿದರು.
    ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಎಂ. ಚಂದ್ರಶೇಖರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಉದ್ಯಮಿಗಳಾದ ಬಿ.ಕೆ ಜಗನ್ನಾಥ, ಲಕ್ಷ್ಮಿ ನಾರಾಯಣ, ವೈದ್ಯ ನರೇಂದ್ರ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಪತ್ರಕರ್ತ ಸುರೇಶ್, ದಲಿತ ನೌಕರರ ಒಕ್ಕೂಟದ ಸಿ. ಜಯಪ್ಪ ಸೇರಿದಂತೆ ಜಿಲ್ಲಾ ಹಾಗು ತಾಲೂಕು ಸಮಿತಿ ಪದಾಧಿಕಾರಿಗಳು, ಉಪಾಸಕ ಮತ್ತು ಉಪಾಸಕಿಯರು ಇನ್ನಿತರರು ಉಪಸ್ಥಿತರಿದ್ದರು.
    ಇದಕ್ಕೂ ಮೊದಲು ಭಗವಾನ್ ಬುದ್ಧರ ಪ್ರತಿಮೆಯೊಂದಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಉತ್ಸವ ಮೆರವಣಿಗೆ ನಡೆಸಲಾಯಿತು.

ತಾಯಿಯ ನೆನಪಿನಲ್ಲಿ ಟ್ರಸ್ಟ್ ರಚನೆ ಇತರರಿಗೆ ಪ್ರೇರಣೆ : ಸತ್ಯ ಭದ್ರಾವತಿ

ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ.ಇನ್ ಅಂತರ್ಜಾಲ ಸುದ್ದಿ ತಾಣ ಹಾಗು ಸನ್ಮಾನ ಸಮಾರಂಭ ಹಾಗು ಬುದ್ಧ ಪೂರ್ಣಿಮಾ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧೭: ತಾಯಿಯ ನೆನಪಿನಲ್ಲಿ ಟ್ರಸ್ಟ್ ರಚಿಸಿರುವುದು ಇತರರಿಗೆ ಪ್ರೇರಣೆಯಾಗಿದ್ದು, ಇಂತಹ ಕಾರ್ಯಗಳು ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
    ಅವರು ಮಂಗಳವಾರ ನ್ಯೂಟೌನ್ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ.ಇನ್ ಅಂತರ್ಜಾಲ ಸುದ್ದಿ ತಾಣ ಹಾಗು ಸನ್ಮಾನ ಸಮಾರಂಭ ಹಾಗು ಬುದ್ಧ ಪೂರ್ಣಿಮಾ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಕೈಗಾರಿಕಾ ನಗರದಲ್ಲಿ ಈ ರೀತಿಯ ಟ್ರಸ್ಟ್‌ಗಳ ಅವಶ್ಯಕತೆ ಹೆಚ್ಚಿನದ್ದಾಗಿದ್ದು, ಎರಡು ಕೈಗಾರಿಕೆಗಳು ಸ್ಥಗಿತಗೊಂಡು ಉದ್ಯೋಗವಿಲ್ಲದೆ ಸಾಕಷ್ಟು ಜನರು ಹಲವಾರು ತೊಂದರೆಗಳಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರಸ್ಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವಂತಹ ಈ ರೀತಿಯ ಕಾರ್ಯಗಳು ನಿರಂತವಾಗಿ ನಡೆಯಲು ಇತರರು ಸಹ ಸಹಕಾರ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಮಾದರಿಯಾಗಿವೆ ಎಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಪ್ರಮುಖರಾದ ರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಪತ್ರಿಕಾ ವೃತ್ತಿಯೊಂದಿಗೆ ಸಮಾಜಮುಖಿ ಚಿಂತನೆಗಳೊಂದಿಗೆ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಟ್ರಸ್ಟ್ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಮುನ್ನಡೆಯುವಂತಾಗಲಿ ಎಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಸುಭಾಷ್‌ರಾವ್ ಸಿಂಧ್ಯಾರವರು, ಪತ್ರಕರ್ತ ಅನಂತಕುಮಾರ್ ಕುಟುಂಬದವರೊಂದಿಗೆ ತಾಲೂಕಿನ ಪತ್ರಕರ್ತರೆಲ್ಲರೂ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ಅವರ ತಂದೆ-ತಾಯಿ ಜೊತೆ ಕೆಲವು ದಿನಗಳನ್ನು ಸಂತೋಷದಿಂದ ಕಳೆದಿದ್ದೇವೆ. ಇದೀಗ ತಾಯಿಯವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದರು.
    ಕಾರ್ಯಕ್ರಮದಲ್ಲಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮರಿಯಪ್ಪ, ಪತ್ರಕರ್ತ ಅನಂತಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಭದ್ರಾವತಿ ಪೀಪಲ್ ಲಿಬರೇಷನ್ ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮ್, ಖಜಾಂಚಿ ಮುರುಳಿ ಕೃಷ್ಣ, ಕಾರ್ಯಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷರಾದ ಸಂಪತ್, ಜಿ. ಗೋವಿಂದ, ಕಾರ್ಯದರ್ಶಿಗಳಾದ ಸುನಿಲ್‌ಕುಮಾರ್, ಎನ್. ಲೋಕೇಶ್, ಡಿಎಸ್‌ಎಸ್ ಮುಖಂಡ ದಾಸ್, ಸಹ ಕಾರ್ಯದರ್ಶಿಗಳಾದ ರಾಜು, ಅಜಂತ್‌ಕುಮಾರ್, ರವೀಂದ್ರಪ್ಪ, ಶ್ರೀನಿವಾಸ್, ವೆಂಕಟೇಶ್, ಶ್ರೀಕಾಂತ್, ಸಂತೋಷ್, ಸಂಜೀವರೆಡ್ಡಿ, ಚಂದ್ರಶೇಖರ್, ಹರ್ಷಿತಾ, ರೇಖಾ ಕೆಂಪರಾಜ್, ಮೈತ್ರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  


Sunday, May 15, 2022

೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿ :

ಯೋಗಪಟು ಡಾ. ನಿಂಗೇಶ್‌ಗೆ ಪ್ರಥಮ ಬಹುಮಾನ

ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿಯ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮೇ. ೧೫: ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ೩ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
    ೫೧ ರಿಂದ ೬೦ ವರ್ಷದೊಳಗಿನ ವಯೋಮಾನ ವಿಭಾಗದಲ್ಲಿ ಉತ್ತಮ ಸಾಧನೆ ತೋರಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬಹುಮಾನ ವಿತರಣೆ ಸಂದರ್ಭದಲ್ಲಿ ವರ್ಷಿಣಿ ಯೋಗ ಎಜ್ಯುಕೇಷನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಪಿ. ಪೆಂಚಾಲಯ್ಯ, ಕಾರ್ಯದರ್ಶಿ ಎನ್.ಪಿ ವೆಂಕಟೇಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ ಮಂಜುನಾಥ ಸ್ವಾಮಿ, ದೀಪಿಕಾ ವೆಂಕಟೇಶ್, ದೊಡ್ಡಮನಿ, ಬಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ನಿಂಗೇಶ್‌ರವರು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ನಗರದ ಗಣ್ಯರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಮೇ.೧೬ರಂದು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ, ಸನ್ಮಾನ ಸಮಾರಂಭ

    ಭದ್ರಾವತಿ, ಮೇ. ೧೬:  ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ ಅಂತರ್ಜಾಲ ಸುದ್ದಿ ತಾಣ ಉದ್ಘಾಟನೆ ಹಾಗು ಬುದ್ಧ ಪೂರ್ಣಿಮಾ ಕಾರ್ಯಕ್ರಮ ಮೇ.೧೬ರಂದು ಸಂಜೆ ೬.೩೦ಕ್ಕೆ ನಡೆಯಲಿದೆ.
    ನಗರದ ನ್ಯೂಟೌನ್ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ಪುಣ್ಯ ಸ್ಮರಣೆ ಅಂಗವಾಗಿ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಹಮ್ಮಿಕೊಳ್ಳಲಾಗಿರುವ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಬಿಪಿಎಲ್ ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ, ಜಿ. ಆನಂದಕುಮಾರ್, ಸರ್ವಮಂಗಳ, ಹೇಮಾವತಿ ವಿಶ್ವನಾಥ್, ಸತ್ಯ, ಚಿನ್ನಯ್ಯ, ಆರ್. ಕರುಣಾಮೂರ್ತಿ, ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  
    ಶಿಕ್ಷಕಿ, ಸಮಾಜ ಸೇವಕಿ ಅನಿತಾ ಕುಮಾರಿ, ಸಿದ್ದಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಅವರಿಗೆ ಸನ್ಮಾನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟ್ರಸ್ಟ್‌ನ ಅನಂತಕುಮಾರ್ ಕೋರಿದ್ದಾರೆ.

Saturday, May 14, 2022

ಮೇ.೧೫ರಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ

    ಭದ್ರಾವತಿ, ಮೇ. ೧೪: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಬಸವಾಭಿಮಾನಿಗಳ ಸಹಯೋಗದೊಂದಿಗೆ ಮೇ.೧೫ರಂದು ಸಂಜೆ ೬ ಗಂಟೆಗೆ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬೆಳಗಾವಿ ನಿಡಸೋಸಿ ಶ್ರೀ ಸಿದ್ದ ಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಹೊಸನಗರ ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
    ಬೆಂಗಳೂರಿನ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಉಪನ್ಯಾಸ ನೀಡಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಹಾಗು ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಮೇ.೧೬ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ :

ವಿಜೃಂಭಣೆಯಿಂದ ಜರುಗಿದ ಗರುಡೋತ್ಸವ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಗರುಡೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೧೪: ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಗರುಡೋತ್ಸವ ವಿಜೃಂಭಣೆಯಿಂದ ಜರುಗಿತು.
    ಬೆಳಿಗ್ಗೆ ಯಾಗಶಾಲೆ ಪ್ರವೇಶ, ಧ್ವಜಾರೋಹಣ ನಂತರ ಗರುಡವಾಹನದಲ್ಲಿ ನಗರದ ಪ್ರಮುಖಬೀದಿಗಳಲ್ಲಿ ಭೂದೇವಿ ಶ್ರೀದೇವಿಸಹಿತನಾಗಿ ವಿರಾಜಮಾನನಾದ ಶ್ರೀನಿವಾಸ ದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನಂತರ ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಸಂಜೆ ಗಣಪತಿಪೂಜೆ, ಭೂಮಿ ಪೂಜೆ ನಡೆಸಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹಗಳಿಗೆ ಕಂಕಣಧಾರಣೆ ನಡೆಯಿತು.
    ಮೇ.೧೫ರಂದು ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ, ವಸಂತ ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಕಲ್ಯಾಣೋತ್ಸವ ನಡೆಯಲಿದೆ. ಮೇ.೧೬ರಂದು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಡೆಯಲಿದೆ.
    ಮೇ.೧೭ರಂದು ಬೆಳಿಗ್ಗೆ ಗಜವಾಹನೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಶೇಷವಾಹನೋತ್ಸವ, ೧೮ರಂದು ಬೆಳಿಗ್ಗೆ ಉತ್ಸವ, ಸಂಧಾನಸೇವೆ, ಅವಭೃತ ಸ್ನಾನ, ಹನುಮಂತೋತ್ಸವ, ಪೂರ್ಣಾಹುತಿ, ಧ್ವಜಾವತರಣ, ದೇವತಾಸಂಪ್ರೋಕ್ಷಣೆ, ಅಷ್ಟಾವಧಾನ, ಮಹಾಮಂಗಳಾರತಿ ಹಾಗು ೧೯ರಂದು ಬೆಳಿಗ್ಗೆ ಮಹಾಭಿಷೇಕ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.