ಶ್ರೀ ಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ
![](https://blogger.googleusercontent.com/img/a/AVvXsEhNQhRVs39fV4_CAMGax5LRJZ5hbM1HgcYMW1aywcbWica8ogWdG7IKuSUJxRjxcHN0kUhKBLU22DVEc2Cro_65PV9k3iju1G4ZtCuyw_4t5SzvBGG4LBySBd_P7UwWTJow9QCb6VASViq9ayL54HxOv9hzyFqC6BlvXEJgfTuvsr_3EP4RZ-1G8iVtjA=w400-h226-rw)
ಭದ್ರಾವತಿ ಸಿದ್ದಾರೂಢನಗರದ ಶ್ರೀ ಶಂಕರಮಠದ ಶ್ರೀ ಭಾರತೀ ತೀರ್ಥ ಸಮುದಾಯ ಭವನದಲ್ಲಿ ಬುಧವಾರ ಶ್ರೀ ಶ್ರೀಶೈಲ ಜಗದ್ಗುರುಗಳವರ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠರೋಹಣದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನಶತೋತ್ಸವ ಆಚರಣೆ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಮತ್ತು ನಾಗರತ್ನ ಸಿದ್ದಲಿಂಗಯ್ಯನವರ ೬೦ನೇ ವರ್ಷದ ಷಷ್ಠಿ ಪೂರ್ತಿ ಕಾರ್ಯಕ್ರಮ ನಡೆಯಿತು.
ಭದ್ರಾವತಿ, ಜೂ. ೧: ಸರ್ವ ಧರ್ಮ, ಜನಾಂಗವನ್ನು ಪ್ರೀತಿಸಿ ಅವರೊಂದಿಗೆ ಮುನ್ನಡೆಯುವವನು ನಿಜವಾದ ವೀರಶೈವನಾಗಿದ್ದು, ಈ ದಾರಿಯಲ್ಲಿ ಸಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಶ್ರೀ ಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಗಳು ಬುಧವಾರ ಸಿದ್ದಾರೂಢನಗರದ ಶ್ರೀ ಶಂಕರಮಠದ ಶ್ರೀ ಭಾರತೀ ತೀರ್ಥ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶ್ರೀಶೈಲ ಜಗದ್ಗುರುಗಳವರ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠರೋಹಣದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನಶತೋತ್ಸವ ಆಚರಣೆ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಮತ್ತು ನಾಗರತ್ನ ಸಿದ್ದಲಿಂಗಯ್ಯನವರ ೬೦ನೇ ವರ್ಷದ ಷಷ್ಠಿ ಪೂರ್ತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಸಮಾಜದಿಂದ ಎಲ್ಲವನ್ನು ಪಡೆಯುವ ನಾವು ಸಮಾಜಕ್ಕೆ ನಮ್ಮ ಕೊಡಗೆ ಏನು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಪ್ರತಿಯೊಬ್ಬರಲ್ಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವ ಬೆಳೆಯಬೇಕು. ಇಂತಹ ಮನೋಭಾವ ಹೊಂದಿರುವ ವ್ಯಕ್ತಿಗಳಲ್ಲಿ ಸಿದ್ದಲಿಂಗಯ್ಯನವರು ಸಹ ಒಬ್ಬರಾಗಿದ್ದಾರೆ. ಅವರ ಬದುಕು ಇತರರಿಗೆ ಮಾರ್ಗದರ್ಶನವಾಗಿದೆ ಎಂದರು.
ಧರ್ಮಗ್ರಂಥಗಳ ಪ್ರಕಾರ ಒಬ್ಬ ಮನುಷ್ಯನಿಗೆ ೧೨೦ ವರ್ಷಗಳ ಆಯಸ್ಸು ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ೬೦ ವರ್ಷ ಬದುಕುವುದೇ ಹೆಚ್ಚು. ಮನಸ್ಸು ಮತ್ತು ದೇಹ ಎರಡರ ಆರೋಗ್ಯ ಕಾಪಾಡಿಕೊಂಡು ಬಂದಲ್ಲಿ ೧೨೦ ವರ್ಷ ಬದುಕಬಹುದಾಗಿದೆ. ಇದಕ್ಕೆ ಉದಾಹರಣೆ ತುಮಕೂರು ಸಿದ್ದಗಂಗ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರಾಗಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ. ಒಂದೊಂದು ವರ್ಷವೂ ಒಂದೊಂದು ಸಂವತ್ಸರವಾಗಿದೆ. ೬೦ ಸಂವತ್ಸರಗಳನ್ನು ದಾಟಿ ಅರ್ಧ ಆಯಸ್ಸು ಕಳೆದಿರುವವರ ಬದುಕನ್ನು ಅವಲೋಕನ ಮಾಡಿಕೊಳ್ಳುವ ಜೊತೆಗೆ ಮುಂದಿನ ಉಳಿದ ಅರ್ಧ ಆಯಸ್ಸು ಪೂರೈಸಲು ಅಭಿನಂದಿಸುವ ಉದ್ದೇಶದಿಂದ ಷಷ್ಠಿ ಪೂರ್ತಿಯಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕೆಂದರು.
ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಿ, ಶರಣರ ಬದುಕು ಒಂದು ರೀತಿ ಆದರ್ಶಪ್ರಾಯವಾಗಿದೆ. ಪ್ರತಿಯೊಂದು ವಿಷಯದಲ್ಲೂ ಶರಣರು ಹೊಂದಿದ್ದ ವಿಚಾರಧಾರೆಗಳು ಸಮಾಜಕ್ಕೆ ಪೂರಕವಾಗಿವೆ. ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರಿದವರು, ಕಾಯಕದ ಮಹತ್ವ, ದಾಸೋಹದ ಮಹತ್ವ ಹಾಗು ಶಿಕ್ಷಣದ ಮಹತ್ವ ಸಾರಿದವರು ಶರಣರು ಎಂಬುದನ್ನು ಯಾರು ಮರೆಯುವಂತಿಲ್ಲ. ಶರಣರು ಒಂದಲ್ಲ ಒಂದು ರೀತಿಯಲ್ಲಿ ಮಾದರಿಯಾಗಿದ್ದಾರೆ. ಇಂತಹ ಆದರ್ಶತನಗಳನ್ನು ಸಿದ್ದಲಿಂಗಯ್ಯ ಹಾಗು ಕುಟುಂಬ ವರ್ಗದವರು ರೂಢಿಸಿಕೊಂಡು ಬಂದಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಪ್ರಶಂಸೆ ವ್ಯಕ್ತಪಡಿಸಿದರು.
ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗಯ್ಯನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಸಮಾಜದ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮ್ಮ ೬೦ ವರ್ಷದ ಸಂಭ್ರಮಾಚರಣೆಯನ್ನು ವೈಯಕ್ತಿಕಗೊಳಿಸದೆ ಹಲವು ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜ ಮುಖಿಯಾಗಿ ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ ಕಾರ್ಯಕ್ರಮ ಉದ್ಘಾಟಿಸಿದರು.
ರಟ್ಟೆಹಳ್ಳಿ ಕಬ್ಬಿನಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಗೂ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವೇದಿಕೆಯಲ್ಲಿದ್ದರು.
ನಗರಸಭಾಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಅ.ಭಾ.ವೀ.ಮ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಶಿವಮೊಗ್ಗ ತಾಲೂಕು ಅಧ್ಯಕ್ಷೆ ರೇಣುಕಾ ನಾಗರಾಜ್, ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸಂತೋಷ್, ವಿ.ಹಿ.ಪ ಕಾರ್ಯಾಧ್ಯಕ್ಷ ಶಿವಮೂರ್ತಿ, ಶಿವಮೊಗ್ಗ ಜಗದ್ಗುರು ಪಂಚಾಚಾರ್ಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ವಿ ಈಶ್ವರಯ್ಯ, ಅ.ಭಾ.ವೀ.ಮ ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವ ಘಟಕದ ಅಧ್ಯಕ್ಷ ಹೆಚ್. ಮಂಜುನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ನಗರಸಭಾ ಸದಸ್ಯ ಜಿ. ಸುರೇಶಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಪೂರ್ಣಿಮಾ ಸ್ವಾಗತಿಸಿದರು. ಎಸ್. ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.