ಮಂಗಳವಾರ, ಜೂನ್ 14, 2022

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪೂರಕ ಸ್ಪಂದನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣ. 
    ಭದ್ರಾವತಿ, ಜೂ. ೧೪ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಲ್ಲಿಸಲಾಗಿದ್ದ ಮನವಿಗೆ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆಂದು ಭದ್ರಾವತಿ ಕ್ಷೇತ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಜಿ.ಟಿ ಬಸವರಾಜ್ ಹಾಗು ಕಾರ್ಯದರ್ಶಿ ಡಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
    ವೇದಿಕೆ ವತಿಯಿಂದ ಇತ್ತೀಚೆಗೆ ಸುಮಾರು ೧೧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಆಯುಕ್ತರು, ನಗರ ವ್ಯಾಪ್ತಿಯಲ್ಲಿ ಸಂಚರಿಸಲು ೨ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ, ಕೇಂದ್ರಿಯ ವಿಭಾಗದಿಂದ ಅನುಮತಿ ಪಡೆದು ಭದ್ರಾವತಿ ಡಿಪೋದಿಂದ ಮಣಿಪಾಲ್, ಉಡುಪಿಗೆ ಜುಲೈ ತಿಂಗಳಿನಲ್ಲಿ ಬಸ್ ಸಂಚಾರ ವ್ಯವಸ್ಥೆ, ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳುವುದು, ವಿಕಲಚೇತನರಿಗೆ ಹಾಗು ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಶೌಚಾಲಯಗಳಲ್ಲಿ ವೆಸ್ಟ್ರನ್ ಕಮೋಡ್‌ಗಳನ್ನು ಅಳವಡಿಸುವುದು, ವಿದ್ಯುತ್ ದೀಪಗಳ ದುರಸ್ತಿ ಹಾಗು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
    ಸಾರ್ವಜನಿಕರ ಹಿತದೃಷ್ಟಿಯಿಂದ ವೇದಿಕೆ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರಿಗೆ ಜಿ.ಟಿ ಬಸವರಾಜ್ ಹಾಗು ಡಿ. ನರಸಿಂಹಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸತ್ಯಲಕ್ಷ್ಮಿ ನಿಧನ

ಸತ್ಯಲಕ್ಷ್ಮಿ 
    ಭದ್ರಾವತಿ ಜೂ ೧೪ : ಇಲ್ಲಿನ ಗಾಂಧಿನಗರದ ನಿವಾಸಿ ಸತ್ಯಲಕ್ಷ್ಮಿ(೬೯) ಸೋಮವಾರ ರಾತ್ರಿ  ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಸತ್ಯಲಕ್ಷ್ಮಿ ಅವರಿಗೆ ಪತಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸೋಮವಾರ, ಜೂನ್ 13, 2022

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪೆನ್ನು, ನೋಟ್ ಪುಸ್ತಕ ವಿತರಣೆ

ದಿ ಶಿವಮೊಗ್ಗ ಮಲ್ಟಿಪಪ೯ಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಸಹಕಾರದೊಂದಿಗೆ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಭದ್ರಾವತಿ ನಗರಸಭೆ ವ್ಯಪ್ತಿಯ ಬೊಮ್ಮನಕಟ್ಟೆ ಸಕಾ೯ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ಪೆನ್ನು ಹಾಗು ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ, ಜೂ. ೧೩ : ದಿ ಶಿವಮೊಗ್ಗ ಮಲ್ಟಿಪಪ೯ಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಸಹಕಾರದೊಂದಿಗೆ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ನಗರಸಭೆ ವ್ಯಪ್ತಿಯ ಬೊಮ್ಮನಕಟ್ಟೆ ಸಕಾ೯ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ಪೆನ್ನು ಹಾಗು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
    ಕಾರ್ಯಕ್ರಮದಲ್ಲಿ ಸೊಸೈಟಿ ನಿದೇ೯ಶಕರಾದ ಕ್ಲೆಮೆಟ್ ಪಿಂಟೋ ಮತ್ತು ಸಿಸ್ಟರ ಪ್ರೇಮಲತಾ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ, ಮುಖ್ಯೋಪಾಧ್ಯಾಯಿನಿ ಗಿರಿಜಮ್ಮ, ಪ್ರೇಮಮ್ಮ,  ಪ್ರಮೀಳ, ಷಣ್ಮುಖಪ್ಪ, ವಿಶ್ವನಾಥ್, ಸುಜಾತ ಹಾಗು ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಅಡುಗೆ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಎ. ತಿಪ್ಪೇಸ್ವಾಮಿ ಸ್ವಾಗತಿಸಿ ವಂದಿಸಿದರು.

ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್‌ಗೆ ಕಲ್ಯಾಣ ಸೇವಾ ಕಲಾ ರತ್ನ ಪ್ರಶಸ್ತಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಲ್ಯಾಣ ಕರ್ನಾಟಕ ವೇದಿಕೆ ವತಿಯಿಂದ ಭದ್ರಾವತಿ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್‌ರವರಿಗೆ ಕಲ್ಯಾಣ ಸೇವಾ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ, ಜೂ. ೧೩ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಲ್ಯಾಣ ಕರ್ನಾಟಕ ವೇದಿಕೆ ವತಿಯಿಂದ ನಗರದ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್‌ರವರಿಗೆ ಕಲ್ಯಾಣ ಸೇವಾ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಪವರ್ ಸ್ಟಾರ್, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಸವಿನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಂಭ್ರಮ ಹಾಗು ಕಲ್ಯಾಣ ಸೇವಾ ಕಲಾರತ್ನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿರುವ ಅಪೇಕ್ಷ ಮಂಜುನಾಥ್‌ರವರು ಶಿಕ್ಷಣ ಹಾಗು ಕಲಾರಂಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಗಾಯಕ ಶಶಿಧರ್ ಕೋಟೆ, ಕಿರುತೆರೆ ನಟ ಮೈಕೋ ಚಂದ್ರು, ರಂಗಭೂಮಿ ಹಾಗೂ ಚಲನಚಿತ್ರ ನಟಿ ಮಾಲತಿ ಹಾಗೂ ಕಲ್ಯಾಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷೆ ರಜನಿ ಅಶೋಕ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ಕಲಾವಿದ ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಶ್ರಯ ಬಡಾವಣೆ ಸರ್ಕಾರಿ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
    ಭದ್ರಾವತಿ, ಜೂ. ೧೩ : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಹಳೇಯ ವಿದ್ಯಾರ್ಥಿಗಳು, ದಾನಿಗಳು ಹಾಗು ಪೋಷಕರು ಮುಂದೆ ಬರುತ್ತಿದ್ದಾರೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಪುಂಡ-ಪೋಕರಿಗಳಿಗೆ ಆಶ್ರಯ ತಾಣವಾಗಿ ಮಾರ್ಪಾಡಾಗಿದೆ. ಈ ಶಾಲೆಯ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣವಾಗಿರುವುದು.
    ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಸಮೀಪದಲ್ಲಿರುವ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದ್ದು, ಪುಂಡ-ಪೋಕರಿಗಳ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಂಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸಹ ಶಾಲೆ ಸುತ್ತ ಕಾಂಪೌಂಡ್ ಇಲ್ಲವಾಗಿದೆ. ಇದರಿಂದಾಗಿ ಪುಂಡ-ಪೋಕರಿಗಳು ಶಾಲೆಯನ್ನು ಪ್ರವೇಶಿಸಿ ಶಾಲೆ ಕೊಠಡಿಗಳ ಮುಂಭಾಗದಲ್ಲಿಯೇ ಮದ್ಯಪಾನ, ಧೂಮಪಾನ ಸೇವನೆ ನಡೆಸುತ್ತಿದ್ದಾರೆ. ಜೊತೆಗೆ ಎಲೆ ಅಡಕೆ, ಗುಟ್ಕಾ, ಪಾನ್‌ಮಸಾಲ ಜಗಿದು ಅಲ್ಲಿಯೇ ಉಗಿಯುತ್ತಿದ್ದಾರೆ. ಇದರಿಂದಾಗಿ ಶಾಲಾ ಪರಿಸರ ಹಾಳಾಗುತ್ತಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೌಚಾಲಯಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸಿರುವುದು.
    ಅಲ್ಲದೆ ಅನಧಿಕೃತವಾಗಿ ಶೌಚಾಲಯಗಳಿಗೆ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸುತ್ತಿದ್ದಾರೆ. ಶೌಚಾಲಯದಲ್ಲೂ ಸ್ವಚ್ಚತೆ ಇಲ್ಲದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಕಿರಿಕಿರಿಯಾಗುತ್ತಿದೆ. ಈ ಶಾಲೆ ಆವರಣದಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು, ಈ ಶಾಲೆಗೆ ಚಿಕ್ಕಮಕ್ಕಳು ಹೆಚ್ಚಾಗಿ ಬರುವ ಹಿನ್ನಲೆಯಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರು ಸಾಧ್ಯತೆ ಕಂಡು ಬರುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
.

 ಯಾರೋ ಕೆಲವರು ರಾತ್ರಿ ವೇಳೆ ಬಂದು ಮದ್ಯಪಾನ, ಧೂಮಪಾನ ಸೇವನೆಯಲ್ಲಿ ತೊಡಗುತ್ತಾರೆಂಬ ಬಗ್ಗೆ ಮಾಹಿತಿ ಇದೆ. ಆದರೆ ಈ ಕುರಿತು ಅಧಿಕೃತವಾಗಿ ಯಾರು ದೂರು ನೀಡಿಲ್ಲ. ಆದರೂ ಸಹ ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
                                                                             - ರಾಘವೇಂದ್ರ ಕಾಂಡಿಕೆ, ನಗರ ಪೊಲೀಸ್ ವೃತ್ತ ನಿರೀಕ್ಷಕ




ಭಾನುವಾರ, ಜೂನ್ 12, 2022

ವಿಜೃಂಭಣೆಯಿಂದ ಜರುಗಿದ ವೈಕಾಶಿ ವಿಶಾಕಂ ಉತ್ಸವ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೨ : ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಉತ್ಸವ ಅಂಗವಾಗಿ ಬೆಳಿಗ್ಗೆ ಮೂಲ ವಿಗ್ರಹಗಳಿಗೆ ಕ್ಷೀರಾಭಿಷೇಕ ನಂತರ ಪಂಚಾಮೃತ ಅಭಿಷೇಕ ಹಾಗು ರುದ್ರಾಭಿಷೇಕ, ಬಿಲ್ವಾರ್ಚನೆ, ಅನ್ನ ಅಭಿಷೇಕ ಮಧ್ಯಾಹ್ನ ೧೨.೩೦ಕ್ಕೆ ನೈವೇದ್ಯ ಸಮರ್ಪಣೆ, ನಂತರ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಶ್ರೀ ಮಹಂತ್‌ಶ್ರೀ ಅಣ್ಣಾಮಲೈ ಸ್ವಾಮಿ (ಶ್ರೀ ಮೌನಿ ಬಾಬಾಜಿ ಮಹಾರಾಜ್, ಶ್ರೀ ರಾಮಮಂದಿರ್ ಪುಲಿವಾಲ, ಅಕ್ನೂರ್, ಜಮ್ಮು ಮತ್ತು ಕಾಶ್ಮೀರ್) ಹಾಗು ಸಂಗಡಿಗರಿಂದ ಜರುಗಿದವು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಕೃಪೆಗೆ ಪಾತ್ರರಾದರು. ದೇವಸ್ಥಾನ ಸೇವಾ ಸಮಿತಿ ಪ್ರಮುಖರು, ಸೇವಾಕರ್ತರು ಉಪಸ್ಥಿತರಿದ್ದರು.

ಐಟಿಐ ವಿವಿಧ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

(ಸಂಗ್ರಹ ಅಂತರ್ಜಾಲ ಚಿತ್ರ)
ಭದ್ರಾವತಿ: ನಗರದ ಚನ್ನಗಿರಿ ರಸ್ತೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಟಿಎಂಎಇಎಸ್ ಸರ್ಕಾರಿ ಅನುದಾನಿತ ಕೈಗಾರಿಕಾ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ವೃತ್ತಿಪರ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷದ ತರಬೇತಿಗಳಾದ ಫಿಟ್ಟರ್, ಎಲೆಕ್ಟ್ರಾನಿಕ್-ಮೆಕಾನಿಕ್, ಡ್ರಾಫ್ಟ್ ಮೆನ್ ಮೆಕಾನಿಕ್(ಡಿಎಂಎಂ), ಒಂದು ವರ್ಷದ ತರಬೇತಿಗಳಾದ ಕೋಪ(ಸಿಓಪಿಎ), ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಉತ್ತಿರ್ಣಗೊಂಡವರು ಅರ್ಜಿ ಸಲ್ಲಿಸಬಹುದಾಗಿದ್ದು, ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಅನುತ್ತೀರ್ಣಗೊಂಡವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9480897237/9900601615 ಸಂಖ್ಯೆಗೆ ಕರೆ ಮಾಡಬಹುದಾಗಿದೆ.