Friday, June 17, 2022

ಏಕಾಏಕಿ ನೀರು ಸರಬರಾಜು ಸ್ಥಗಿತ : ಸುರಗಿತೋಪಿನಲ್ಲಿ ಕುಡಿಯುವ ನೀರಿನ ಸಮಸ್ಯೆ

ಜಯಶೀಲ ಸುರೇಶ್ ನೇತೃತ್ವದಲ್ಲಿ ವಿಐಎಸ್‌ಎಲ್ ಆಡಳಿತ ಮಂಡಳಿಗೆ ಮನವಿ


    ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್ ಸದಸ್ಯೆ ಎಸ್. ಜಯಶೀಲ ಸುರೇಶ್ ನೇತೃತ್ವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೭: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್ ಸದಸ್ಯೆ ಎಸ್. ಜಯಶೀಲ ಸುರೇಶ್ ನೇತೃತ್ವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು.
    ಕಾರ್ಖಾನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸುರಗಿತೋಪಿನಲ್ಲಿ ಕಾರ್ಮಿಕರಿಗೆ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಆ ನಂತರ ಇಲ್ಲಿಯೇ ಕಾರ್ಮಿಕರು, ನಿವೃತ್ತ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರು ನೆಲೆ ನಿಂತಿದ್ದು, ಇಂದಿಗೂ ಇಲ್ಲಿಯೇ ವಾಸಿಸುತ್ತಿದ್ದಾರೆ. ಅಲ್ಲದೆ ಸುಮಾರು ೫೦ ವರ್ಷಗಳಿಂದ ಕಾರ್ಖಾನೆ ವತಿಯಿಂದ ಈ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದೀಗ ಏಕಾಏಕಿ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ನಗರಸಭೆ ವತಿಯಿಂದ ಈ ಭಾಗಕ್ಕೆ ಇನ್ನೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಂಡಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು, ಜಾನುವಾರುಗಳು ಕುಡಿಯುವ ನೀರಿಗಾಗಿ ತೊಂದರೆ ಎದುರಿಸುವಂತಾಗಿದೆ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಲಾಗಿದೆ.
    ಕಾರ್ಖಾನೆ ವತಿಯಿಂದ ದಿನಕ್ಕೆ ಕನಷ್ಠ ಪಕ್ಷ ಒಂದು ಗಂಟೆಯಾದರೂ ಕುಡಿಯುವ ಸರಬರಾಜು ಮಾಡುವ ಮೂಲಕ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಲಾಗಿದೆ.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭಾ ಸದಸ್ಯೆ ಪಲ್ಲವಿ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿನ್ ಗೌರವಾಧ್ಯಕ್ಷ ರಾಮಕೃಷ್ಣ, ಪ್ರಮುಖರಾದ ಕ್ಲಬ್ ಸುರೇಶ್, ದಿಲೀಪ್, ಉಮೇಶ್ ಸುರಗಿತೋಪು, ನಂಜುಂಡಪ್ಪ, ಡಿ.ಟಿ ಶ್ರೀಧರ್, ಚೆನ್ನಿಗಪ್ಪ, ಲೋಕೇಶ್, ನಿರ್ಮಲಕುಮಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿ

ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
    ಭದ್ರಾವತಿ, ಜೂ. ೧೭: ಪ್ರೀತಿ ಮುಂದೆ ಹಣ, ಅಂತಸ್ತು, ಜಾತಿ, ಭಾಷೆ, ವಯಸ್ಸು ಯಾವುದೂ ಇಲ್ಲ ಎನ್ನುತ್ತಾರೆ. ಪರಸ್ಪರ ಪ್ರೀತಿಸಿದ ಬಹುತೇಕ ಜೋಡಿಗಳು ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಡುವುದು ಸಹಜ. ಇಲ್ಲೊಂದು ಪ್ರಕರಣದಲ್ಲಿ ಜ್ಯೋತಿಷಿ ಹೇಳಿದ ಜಾತಕದಿಂದಾಗಿ ಜೋಡಿಗಳಿಬ್ಬರು ಸಾವಿನ ದವಡೆಗೆ ಸಿಲುಕಿಕೊಂಡು ಕೊನೆಗೆ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿ ಬಲಿಯಾಗಿರುವ ಘಟನೆ ನಡೆದಿದೆ.
    ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಬಲಿಯಾಗಿದ್ದು, ಭದ್ರಾವತಿ ವಿಭಾಗ, ಚನ್ನಗಿರಿ ಉಪವಿಭಾಗದ, ಚನ್ನಗಿರಿ ವಲಯದಲ್ಲಿ ಉಪ ವಲಯ ಅರಣ್ಯಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಮೊಕಾಶಿ ಹಾಗು ಸುಧಾ ಕಳೆದ ಸುಮಾರು ೭ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರು ಮದುವೆಗೂ ಮುಂದಾಗಿದ್ದರು. ಅಲ್ಲದೆ ಬೇರೆ ಬೇರೆ ಜಾತಿಯಾಗಿದ್ದರೂ ಸಹ ಆರಂಭದಲ್ಲಿ ಮದುವೆಗೆ ಎರಡು ಮನೆಯವರು ಸಹ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
    ಇನ್ನೇನು ಮದುವೆ ನಡೆದೇ ಹೋಯಿತು ಎನ್ನುವಷ್ಟರಲ್ಲಿ ಪ್ರವೀಣ್ ಮೊಕಾಶಿಯವರ ತಾಯಿ ಲಕ್ಷ್ಮಿಯವರು ಜ್ಯೋತಿಷಿ ಬಳಿ ಜಾತಕ ಕೇಳಿದ್ದು, ಈ ಸಂದರ್ಭದಲ್ಲಿ ಯುವತಿಗೆ ಕುಜ ದೋಷವಿರುವುದಾಗಿ ಹೇಳಿದ್ದಾರೆ. ಜ್ಯೋತಿಷ್ಯದ ಪ್ರಕಾರ ಕುಜ ದೋಷವಿದ್ದಲ್ಲಿ ಒಂದು ವೇಳೆ ಇವರಿಬ್ಬರ ಮದುವೆ ನಡೆದಲ್ಲಿ ಮಗನಿಗೆ ಬೇಗನೆ ಸಾವು ಸಂಭವಿಸಲಿದೆ ಎಂಬ ನಂಬಿಕೆಯಲ್ಲಿ ಲಕ್ಷ್ಮೀಯವರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದು, ಅಲ್ಲದೆ ಇಬ್ಬರು ಪರಸ್ಪರ ಮಾತನಾಡುವುದಕ್ಕೂ ಸಹ ಅಡ್ಡಿಯಾಗಿದ್ದರು ಎನ್ನಲಾಗಿದೆ.


ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
 ಈ ನಡುವೆ ಪ್ರವೀಣ್ ಮೊಕಾಶಿ ಸಹ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದು, ಈ ಹಿನ್ನಲೆ ಸುಧಾ ನೇರವಾಗಿ ಪ್ರವೀಣ್ ಮೊಕಾಶಿಯನ್ನು ಭೇಟಿಯಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿ ಮೇ.೩೦ರಂದು ಉಬ್ರಾಣಿ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರು ನಡುವೆ ಮಾತುಕತೆ ನಡೆದು ಕೊನೆಗೆ ಸುಧಾ ನೀನು ಇಲ್ಲದೆ ನಾನು ಬದುಕುವುದಿಲ್ಲ ಎಂದು ತಿಳಿಸಿದ್ದಾಳೆ.
ಈ ನಡುವೆ ಮೇ.೩೧ರಂದು ಸುಧಾಳನ್ನು ಪ್ರವೀಣ್ ಮೊಕಾಶಿ ಬೈಕ್‌ನಲ್ಲಿ ಕೂರಿಸಿಕೊಂಡು ಸಾವು ಎಂದರೆ ಹೇಗಿರುತ್ತದೆ ಎಂದು ತೋರಿಸುತ್ತೇನೆ ಎಂದು ಬೈಕನ್ನು ಮನಬಂದಂತೆ ಓಡಿಸಿ ಭಯ ಹುಟ್ಟಿಸಿದ್ದಾನೆ. ಆದರೂ ಇದಕ್ಕೆ ಜಗ್ಗದ ಸುಧಾಳನ್ನು ಕೊನೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಕರೆ ತಂದು ಇಬ್ಬರು ವಿಷ ಕುಡಿದು ಸಾಯೋಣವೆಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಪ್ರವೀಣ್ ಮೊಕಾಶಿ ಮೊದಲು ನೀನು ವಿಷ ಕುಡಿಯುವಂತೆ ಯುವತಿಗೆ ತಿಳಿಸಿದ್ದು, ಆದರಂತೆ ಆಕೆ ವಿಷ ಸೇವಿಸಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ವಿಷ ಸೇವಿಸಿರುವ ಬಗ್ಗೆ ಸುಧಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾಳೆ.
    ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಹಿತಿ ತಿಳಿಸಿದ ತಕ್ಷಣ ಇಬ್ಬರನ್ನು ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಸುಧಾಳನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸುಧಾ ಕಳೆದ ೨ ದಿನಗಳ ಹಿಂದೆ ಸಾವು ಕಂಡಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.
    ಪ್ರಕರಣ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಮೊಕಾಶಿ ಹಾಗು ತಾಯಿ ಲಕ್ಷ್ಮೀ ವಿರುದ್ಧ  ಪ್ರಕರಣ ದಾಖಲಾಗಿದೆ. ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿಯಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಕಲಿಕೆ ಜೊತೆಗೆ ಗುರುವಿನ ಕಾರುಣ್ಯವಿದ್ದಾಗ ಮಾತ್ರ ಅಕ್ಷರ ಅಕ್ಷಯವಾಗಲಿದೆ : ಡಾ. ಸುದರ್ಶನ್ ಆಚಾರ್

ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಭದ್ರಾವತಿ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೭:  ನಿರಂತರ ಕಲಿಕೆ ಜೊತೆಗೆ ಗುರುವಿನ ಕಾರುಣ್ಯವಿರಬೇಕು ಆಗ ಮಾತ್ರ ಅಕ್ಷರ ಅಕ್ಷಯವಾಗಿ ಉಳಿಯಲಿದೆ ಎಂದು ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಹೇಳಿದರು.
    ಅವರು ಶುಕ್ರವಾರ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಷರ ಕಲಿಕೆಯಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ. ಗುರುಗಳು ಹೇಳಿ ಕೊಡುವ ವಿದ್ಯೆ ನಮ್ಮ ಬದುಕಿನ ಕೊನೆಯವರೆಗೂ ಉಳಿಯಲಿದೆ. ಗುರು ಸ್ಥಾನ ಮಹತ್ವದ್ದಾಗಿದೆ. ಇದನ್ನು ಅರಿತುಕೊಂಡು ಮಕ್ಕಳು ಕಲಿಕೆಯಲ್ಲಿ ತೊಡಗಬೇಕೆಂದರು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ.ಮಹಾಬಲೇಶ್ವರ ಮಾತನಾಡಿ, ಅಕ್ಷರ ಅಂದರೆ ಅಕ್ಷಯವಿದ್ದಂತೆ. ಅದು ಎಂದಿಗೂ ನಾಶವಾಗುವುದಿಲ್ಲ. ಅಂತಹ ಅಕ್ಷರವನ್ನು ಕಲಿಸುವ ಮೂಲಕ ಸಾಕ್ಷರತ್ವದಿಂದ ಸರಸ್ವತ್ವದೆಡೆಗೆ ಸಾಗಿ ಅಂತಿಮವಾಗಿ ಸಮಾಜಕ್ಕೆ ಯೋಗ್ಯ ವ್ಯಕ್ತಿಯಾಗ ಬೇಕು ಎನ್ನುವ ಉದ್ದೇಶದಿಂದ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
    ಆಯಾಯ ಕಾಲಕ್ಕೆ ಯಾವ್ಯಾವ ಸಂಸ್ಕಾರಗಳನ್ನು ಮಾಡಬೇಕೋ ಆಯಾಯ ಸಂಸ್ಕರಾರಗಳನ್ನು ಮಾಡಬೇಕು. ಗಣಪತಿ, ಸರಸ್ವತಿ ಹಾಗು ಕುಲ ದೇವರೊಂದಿಗೆ ಪೂಜಿಸಿ ಸ್ಮರಿಸಿ ಅಕ್ಕಿಯ ಕಾಳುಗಳ ಮೇಲೆ ಅಕ್ಷರಭ್ಯಾಸವನ್ನು ಮಗುವಿನಿಂದ ಬರೆಸುವ ಮೂಲಕ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಲೇಟು, ಬಳಪಗಳನ್ನು ವಿತರಿಸಲಾಯಿತು. ವೇ.ಬ್ರ.ಚಂದನ್ ಜೋಯ್ಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿ ಪ್ರಮುಖರಾದ ಮಧುಕರ್ ಕಾನಿಟ್ಕರ್, ಸುಭಾಷ್, ನಂದಿನಿ ಮಲ್ಲಿಕಾರ್ಜುನ, ಜಯಶ್ರೀ , ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
    ನಾಗಶ್ರೀ ಪ್ರಾರ್ಥಿಸಿದರು. ಸರಿತಾ ಅಮೃತವಚನ ವಾಚಿಸಿದರು. ಸರ್ವಮಂಗಳ ಸ್ವಾಗತಿಸಿದರು. ಅನಿತಾ ವಂದಿಸಿ, ಗೀತಾ ನಿರೂಪಿಸಿದರು.

Thursday, June 16, 2022

ಟ್ರೆಂಚ್‌ನಲ್ಲಿ ಸಿಕ್ಕಿಹಾಕಿಕೊಂಡ ಹಸು : ಸ್ಥಳೀಯರಿಂದ ರಕ್ಷಣೆ


ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡಿರುವುದು.
ಭದ್ರಾವತಿ, ಜೂ. ೧೬: ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಯ ಪಕ್ಕದಲ್ಲಿ ಟ್ರೆಂಚ್ ಹೊಡೆದು ಹಲವು ದಿನಗಳು ಕಳೆದಿದ್ದು, ಆದರೆ ಟ್ರಂಚ್ ಮುಚ್ಚದ ಕಾರಣ ಹಸುವೊಂದು ಸಿಕ್ಕಿ ಹಾಕಿಕೊಂಡಿದೆ. ಸ್ಥಳೀಯರು ಹಸು ಸಿಕ್ಕಿ ಹಾಕಿಕೊಂಡ ತಕ್ಷಣ ಕಾರ್ಯಪ್ರವೃತರಾಗಿ ಟ್ರಂಚ್ ಅಕ್ಕಪಕ್ಕ  ಮಣ್ಣು ಹೊರ ತೆಗೆದು ಸಡಿಲಗೊಳಿಸುವ ಮೂಲಕ ರಕ್ಷಿಸಿದ್ದಾರೆ. ಈ ನಡುವೆ ಘಟನೆಗೆ ಬಿಎಸ್‌ಎನ್‌ಎಲ್ ನಿರ್ಲಕ್ಷ್ಯತನ ಕಾರಣ ಎಂದು ಸ್ಥಳೀಯರು ಆರೋಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಪಕ್ಕದಲ್ಲಿಯೇ ಟ್ರೆಂಚ್ ಇರುವ ಕಾರಣ ಒಂದು ವೇಳೆ ಶಾಲಾ ಮಕ್ಕಳು ಟ್ರಂಚ್‌ನಲ್ಲಿ ಸಿಕ್ಕಿ ಹಾಕಿಕೊಂಡು ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ತಕ್ಷಣ ಟ್ರಂಚ್ ಮುಚ್ಚುವ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. 

ದೊಣಬಘಟ್ಟ ಗ್ರಾಮ ಅಧ್ಯಕ್ಷರಾಗಿ ಎಂ.ಡಿ ಕಲೀಂ, ಉಪಾಧ್ಯಕ್ಷರಾಗಿ ಮಲ್ಲಮ್ಮ ಅವಿರೋಧ ಆಯ್ಕೆ

ಭದ್ರಾವತಿ ದೊಣಬಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಎಂ.ಡಿ ಕಲೀಂ

    ಭದ್ರಾವತಿ, ಜೂ. ೧೬: ತಾಲೂಕಿನ ದೊಣಬಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಡಿ ಕಲೀಂ ಹಾಗು ಉಪಾಧ್ಯಕ್ಷರಾಗಿ ಮಲ್ಲಮ್ಮ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಒಟ್ಟು ೨೧ ಸದಸ್ಯ ಬಲವನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಎ ವರ್ಗಕ್ಕೆ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಒಡಂಬಡಿಕೆಯಂತೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಖಲೀಲ್ ಸಾಬ್ ಅಧ್ಯಕ್ಷರಾಗಿ ಹಾಗು ಹಾಲಮ್ಮ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.


ಭದ್ರಾವತಿ ದೊಣಬಘಟ್ಟ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ಮಲ್ಲಮ್ಮ

    ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಎಂ.ಡಿ ಕಲೀಂ ಹಾಗು ಉಪಾಧ್ಯಕ್ಷರಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಲ್ಲಮ್ಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾರ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ೧೨ ಸದಸ್ಯರು ಭಾಗವಹಿಸಿದ್ದು, ಎರಡು ಸ್ಥಾನಗಳಿಗೂ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.  


    ಈ ನಡುವೆ ಒಡಂಬಡಿಕೆಯಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯೆ ಕೌಸರು ಬಾನು ಬೆಂಬಲಿಗರೊಂದಿಗೆ ಪ್ರತಿಭಟನಡೆಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸಮಯ ಅಹಿತಕರ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದ್ದಾರೆ.  ಕೌಸರ್ ಬಾನು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದಿರುವ ಘಟನೆ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.


ಅಧ್ಯಕ್ಷ ಸ್ಥಾನ ವಂಚನೆ ಆರೋಪ : ಗ್ರಾ.ಪಂ ಸದಸ್ಯ ಆತ್ಮಹತ್ಯೆಗೆ ಯತ್ನ

ಅತ್ಮಹತ್ಯೆಗೆ ಯತ್ನಿಸಿದ ಭದ್ರಾವತಿ ದೊಣಬಘಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಕೌಸರ್ ಬಾನು.
    ಭದ್ರಾವತಿ, ಜೂ. ೧೬: ತಾಲೂಕಿನ ದೊಣಬಘಟ್ಟ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಅಧ್ಯಕ್ಷ ಸ್ಥಾನ ನೀಡದೆ ವಂಚಿಸಿದ್ದಾರೆಂದು ಮನನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.
    ದೊಣಬಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಒಡಂಬಡಿಕೆಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಂಚಿಕೆ ಮಾಡಿಕೊಂಡಿದ್ದು, ಅದರಂತೆ ತೆರವಾದ ೨ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಸದಸ್ಯೆ ಕೌಸರ್ ಬಾನು ನನಗೆ ಅಧ್ಯಕ್ಷ ಸ್ಥಾನ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಮುಂಭಾಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಈ ನಡುವೆಯೂ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಚುನಾವಣಾಧಿಕಾರಿಯಾಗಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾರ್ಯ ನಿರ್ವಹಿಸಿದರು.

ವಿವಿಧ ಬೇಡಿಕೆ ಈಡೇರಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರಿಗೆ ಮನವಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್‌ರವರಿಗೆ ಮನವಿ ಸಲ್ಲಿಸಿದೆ. 
    ಭದ್ರಾವತಿ, ಜೂ. ೧೬: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್‌ರವರಿಗೆ ಮನವಿ ಸಲ್ಲಿಸಿದೆ.
    ಪ್ರಾಥಮಿಕ ಶಾಲೆಗಳಲ್ಲಿ ೧ ರಿಂದ ೭ನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿರುವ ಸೇವಾನಿರತ ಎಲ್ಲಾ ಪದವಿಧರ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರುಗಳೆಂದು ಪದನಾಮೀಕರಿಸಿ ವಿಲೀನಗೊಳಿಸುವುದರ ಜೊತೆಗೆ ವೇತನ ಬಡ್ತಿ ನೀಡುವುದು. ಹೊಸ ಪಿಂಚಣಿ ಯೋಜನೆ  ರದ್ದುಗೊಳಿಸಿ ಪುನಃ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು. ೨೦೦೫ರಲ್ಲಿ ಅಧಿಸೂಚನೆಯಾಗಿ ೨೦೦೭ರ ಜನವರಿಯಲ್ಲಿ ನೇಮಕಾತಿ ಆದೇಶ ಪಡೆದ ಶಿಕ್ಷಕರುಗಳಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಸಂಬಂಧ ನ್ಯಾಯಾಲಯದ ತೀರ್ಪಿನ ಅನ್ವಯದಂತೆ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚಿಸುವುದು ಹಾಗು ಖಾಸಗಿ ಶಾಲೆಗಳ ಸ್ಥಾಪನೆಗೆ ನೀಡುವ ಅನುಮತಿ ಕಡಿಮೆಗೊಳಿಸಿ ಮೂಲ ಸೌಲಭ್ಯಗಳೊಂದಿಗೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ.
    ಜಿ.ಪಿ.ಟಿ ಹುದ್ದೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪರಿಗಣಿಸುವ ಸಂದರ್ಭದಲ್ಲಿ ಯಾವುದೇ ಶಿಕ್ಷಕರಿಗೂ ತೊಂದರೆಯಾಗದಂತೆ ಎಲ್ಲಾ ವರ್ಗದ ಶಿಕ್ಷಕರಿಗೂ ನ್ಯಾಯ ದೊರಕುವಂತಾಗಬೇಕು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಲೋಪದೋಷಗಳು ಕಂಡುಬಾರದಂತೆ ವ್ಯವಸ್ಥಿತವಾಗಿ ಪ್ರತಿ ವರ್ಷ ವರ್ಗಾವಣೆ ನಡೆಸುವುದು. ಪ್ರತಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ತರಗತಿಗೆ ಒಬ್ಬ ಹಾಗು ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು, ಗುಮಾಸ್ತರನ್ನು, ಡಿ ದರ್ಜೆ ನೌಕರರನ್ನು ಹಾಗು ಗಣಕಯಂತ್ರ ಶಿಕ್ಷಕರನ್ನು ನಿಯುಕ್ತಿಗೊಳಿಸುವುದು. ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವುದು ಹಾಗು ಶಿಕ್ಷಕರುಗಳನ್ನು ಶಿಕ್ಷಣೇತರ ಕಾರ್ಯಗಳಿಂದ ವಿಶೇಷವಾಗಿ ಮತಗಟ್ಟೆ ಅಧಿಕಾರಿಗಳಾಗಿ(ಬಿಎಲ್‌ಓ) ಕಾರ್ಯನಿರ್ವಹಿಸುವ ಕೆಲಸದಿಂದ ವಿಮುಕ್ತಿಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ.
    ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು ಯಾವುದೇ ಪರೀಕ್ಷೆ ನಡೆಸದೆ ಸೇವಾ ಜೇಷ್ಠತೆ ಆಧಾರದ ಮೇಲೆ ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡುವುದು. ಶಾಲಾ ದಾಖಲಾತಿ ೧೦೦ ಮಕ್ಕಳನ್ನು ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪದವಿಧರೇತರ ಮುಖ್ಯೋಪಾಧ್ಯಾಯರ ಹುದ್ದೆಯೆಂದು ಪರಿಗಣಿಸಿ ಆದೇಶ ಹೊರಡಿಸುವುದು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ, ಆರ್ಥಿಕ ಹಾಗು ಇನ್ನಿತರೆ ಎಲ್ಲಾ ಸೇವಾ ಸೌಲಭ್ಯ ನೀಡುವುದು. ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವುದು ಹಾಗು ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುವುದು ಸೇರಿದಂತೆ ಒಟ್ಟು ೧೮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ.
    ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಯು. ಮಹಾದೇವಪ್ಪ, ಬಸವಂತರಾವ್‌ದಾಳೆ, ರೇವಣಪ್ಪ, ಎ. ತಿಪ್ಪೇಸ್ವಾಮಿ, ಡಿ.ಎಸ್ ರಾಜಪ್ಪ, ರಂಗನಾಥಪ್ರಸಾದ್, ಡಿ. ನಾಗರತ್ನ, ಶಿವಲಿಂಗೇಗೌಡ, ಶಿಕ್ಷಣ ಸಂಯೋಜಕ ರವಿಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.