ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಭದ್ರಾವತಿ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಉದ್ಘಾಟಿಸಿದರು.
ಭದ್ರಾವತಿ, ಜೂ. ೧೭: ನಿರಂತರ ಕಲಿಕೆ ಜೊತೆಗೆ ಗುರುವಿನ ಕಾರುಣ್ಯವಿರಬೇಕು ಆಗ ಮಾತ್ರ ಅಕ್ಷರ ಅಕ್ಷಯವಾಗಿ ಉಳಿಯಲಿದೆ ಎಂದು ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಹೇಳಿದರು.
ಅವರು ಶುಕ್ರವಾರ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಷರ ಕಲಿಕೆಯಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ. ಗುರುಗಳು ಹೇಳಿ ಕೊಡುವ ವಿದ್ಯೆ ನಮ್ಮ ಬದುಕಿನ ಕೊನೆಯವರೆಗೂ ಉಳಿಯಲಿದೆ. ಗುರು ಸ್ಥಾನ ಮಹತ್ವದ್ದಾಗಿದೆ. ಇದನ್ನು ಅರಿತುಕೊಂಡು ಮಕ್ಕಳು ಕಲಿಕೆಯಲ್ಲಿ ತೊಡಗಬೇಕೆಂದರು.
ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ.ಮಹಾಬಲೇಶ್ವರ ಮಾತನಾಡಿ, ಅಕ್ಷರ ಅಂದರೆ ಅಕ್ಷಯವಿದ್ದಂತೆ. ಅದು ಎಂದಿಗೂ ನಾಶವಾಗುವುದಿಲ್ಲ. ಅಂತಹ ಅಕ್ಷರವನ್ನು ಕಲಿಸುವ ಮೂಲಕ ಸಾಕ್ಷರತ್ವದಿಂದ ಸರಸ್ವತ್ವದೆಡೆಗೆ ಸಾಗಿ ಅಂತಿಮವಾಗಿ ಸಮಾಜಕ್ಕೆ ಯೋಗ್ಯ ವ್ಯಕ್ತಿಯಾಗ ಬೇಕು ಎನ್ನುವ ಉದ್ದೇಶದಿಂದ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆಯಾಯ ಕಾಲಕ್ಕೆ ಯಾವ್ಯಾವ ಸಂಸ್ಕಾರಗಳನ್ನು ಮಾಡಬೇಕೋ ಆಯಾಯ ಸಂಸ್ಕರಾರಗಳನ್ನು ಮಾಡಬೇಕು. ಗಣಪತಿ, ಸರಸ್ವತಿ ಹಾಗು ಕುಲ ದೇವರೊಂದಿಗೆ ಪೂಜಿಸಿ ಸ್ಮರಿಸಿ ಅಕ್ಕಿಯ ಕಾಳುಗಳ ಮೇಲೆ ಅಕ್ಷರಭ್ಯಾಸವನ್ನು ಮಗುವಿನಿಂದ ಬರೆಸುವ ಮೂಲಕ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಲೇಟು, ಬಳಪಗಳನ್ನು ವಿತರಿಸಲಾಯಿತು. ವೇ.ಬ್ರ.ಚಂದನ್ ಜೋಯ್ಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
ಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿ ಪ್ರಮುಖರಾದ ಮಧುಕರ್ ಕಾನಿಟ್ಕರ್, ಸುಭಾಷ್, ನಂದಿನಿ ಮಲ್ಲಿಕಾರ್ಜುನ, ಜಯಶ್ರೀ , ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ನಾಗಶ್ರೀ ಪ್ರಾರ್ಥಿಸಿದರು. ಸರಿತಾ ಅಮೃತವಚನ ವಾಚಿಸಿದರು. ಸರ್ವಮಂಗಳ ಸ್ವಾಗತಿಸಿದರು. ಅನಿತಾ ವಂದಿಸಿ, ಗೀತಾ ನಿರೂಪಿಸಿದರು.
No comments:
Post a Comment