Friday, June 17, 2022

ನಮ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ಹರಡುವ ಹುನ್ನಾರ : ಡಿ. ಮಂಜುನಾಥ್


ಭದ್ರಾವತಿ :  ಬಹು ಸಂಸ್ಕೃತಿ ಒಪ್ಪಿಕೊಂಡಿರುವ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ    ಬದುಕುತ್ತಿದ್ದು, ನಮ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ಹರಡುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ನಾವುಗಳು ಜಾಗೃತಿಕೊಂಡು ಹೋರಾಟ ನಡೆಸುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು. ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಕುಪ್ಪಳ್ಳಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನಕ್ಕೆ  ಜಾಗೃತಿ ಜ್ಯೋತಿ ಪಯಣ  ಕುವೆಂಪು ವಿಶ್ವಮಾನವ ರಥ ಯಾತ್ರೆ ಸ್ವಾಗತ ಕೋರಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಬಹುಸಂಸ್ಕೃತಿಯ ಬಹುತ್ವಕ್ಕೆ ಧಕ್ಕೆ ತರುವಂತಹ ಕೆಲಸಗಳು ನಡೆಯುತ್ತಿವೆ.  ಸೃಜನಾತ್ಮಕವಾಗಿ ಆಲೋಚಿಸುವವರ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದಿನ ಸರ್ಕಾರ ಹಾಗು ಕೆಲವು ಶಕ್ತಿಗಳು  ನಡೆದುಕೊಳ್ಳುತ್ತಿರುವುದು ಖಂಡನೀಯ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಅಗತ್ಯತವಿದೆ.  ಇದಕ್ಕೆ ಪೂರಕವೆಂಬಂತೆ ಕುವೆಂಪು ವಿಶ್ವಮಾನವ ರಥ ಯಾತ್ರೆ ನಡೆಯುತ್ತಿದ್ದು, ಇದರ ಹಿಂದಿನ ಆಶಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಮಾತನಾಡಿ,  ಇಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರ ನಾಡಗೀತೆಯೊಂದಿಗೆ ಬುದ್ಧ, ಬಸವಣ್ಣ, ಮಹಾವೀರ, ಶಂಕರಾಚಾರ್ಯ, ಪೆರಿಯಾರ್, ಗಾಂಧಿ, ಕನಕದಾಸ, ಡಾ. ಬಿ.ಆರ್ ಅಂಬೇಡ್ಕರ್, ನಾರಾಯಣಗುರು ಅವರಿಗೂ ಅವಮಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ  ಪರಿಷ್ಕೃತಗೊಂಡಿರುವ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಆರ್. ಮೋಹನ್ ಕುಮಾರ್,   ಆರ್. ಶ್ರೇಯಸ್,  ಜಾರ್ಜ್,  ಲತಾ ಚಂದ್ರಶೇಖರ್ ಕಾಂತರಾಜು, ಸಾಹಿತಿ ಚಂದ್ರೇಗೌಡ, ಮುಖಂಡರಾದ ಬಿ.ಎಸ್ ಗಣೇಶ್ , ಅಭಿಲಾಷ್, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ , ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ  ಅನ್ನಪೂರ್ಣ ಸತೀಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಬಿ.ಎಸ್.ಪಿ  ಪಕ್ಷದ ರಾಜೇಂದ್ರ, ವೆಂಕಟಯ್ಯ ಮಹಾಲಿಂಗಪ್ಪ, ಕಮಲಕರ  ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.  ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

No comments:

Post a Comment