Friday, June 17, 2022

ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿ

ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
    ಭದ್ರಾವತಿ, ಜೂ. ೧೭: ಪ್ರೀತಿ ಮುಂದೆ ಹಣ, ಅಂತಸ್ತು, ಜಾತಿ, ಭಾಷೆ, ವಯಸ್ಸು ಯಾವುದೂ ಇಲ್ಲ ಎನ್ನುತ್ತಾರೆ. ಪರಸ್ಪರ ಪ್ರೀತಿಸಿದ ಬಹುತೇಕ ಜೋಡಿಗಳು ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಡುವುದು ಸಹಜ. ಇಲ್ಲೊಂದು ಪ್ರಕರಣದಲ್ಲಿ ಜ್ಯೋತಿಷಿ ಹೇಳಿದ ಜಾತಕದಿಂದಾಗಿ ಜೋಡಿಗಳಿಬ್ಬರು ಸಾವಿನ ದವಡೆಗೆ ಸಿಲುಕಿಕೊಂಡು ಕೊನೆಗೆ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿ ಬಲಿಯಾಗಿರುವ ಘಟನೆ ನಡೆದಿದೆ.
    ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಬಲಿಯಾಗಿದ್ದು, ಭದ್ರಾವತಿ ವಿಭಾಗ, ಚನ್ನಗಿರಿ ಉಪವಿಭಾಗದ, ಚನ್ನಗಿರಿ ವಲಯದಲ್ಲಿ ಉಪ ವಲಯ ಅರಣ್ಯಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಮೊಕಾಶಿ ಹಾಗು ಸುಧಾ ಕಳೆದ ಸುಮಾರು ೭ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರು ಮದುವೆಗೂ ಮುಂದಾಗಿದ್ದರು. ಅಲ್ಲದೆ ಬೇರೆ ಬೇರೆ ಜಾತಿಯಾಗಿದ್ದರೂ ಸಹ ಆರಂಭದಲ್ಲಿ ಮದುವೆಗೆ ಎರಡು ಮನೆಯವರು ಸಹ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
    ಇನ್ನೇನು ಮದುವೆ ನಡೆದೇ ಹೋಯಿತು ಎನ್ನುವಷ್ಟರಲ್ಲಿ ಪ್ರವೀಣ್ ಮೊಕಾಶಿಯವರ ತಾಯಿ ಲಕ್ಷ್ಮಿಯವರು ಜ್ಯೋತಿಷಿ ಬಳಿ ಜಾತಕ ಕೇಳಿದ್ದು, ಈ ಸಂದರ್ಭದಲ್ಲಿ ಯುವತಿಗೆ ಕುಜ ದೋಷವಿರುವುದಾಗಿ ಹೇಳಿದ್ದಾರೆ. ಜ್ಯೋತಿಷ್ಯದ ಪ್ರಕಾರ ಕುಜ ದೋಷವಿದ್ದಲ್ಲಿ ಒಂದು ವೇಳೆ ಇವರಿಬ್ಬರ ಮದುವೆ ನಡೆದಲ್ಲಿ ಮಗನಿಗೆ ಬೇಗನೆ ಸಾವು ಸಂಭವಿಸಲಿದೆ ಎಂಬ ನಂಬಿಕೆಯಲ್ಲಿ ಲಕ್ಷ್ಮೀಯವರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದು, ಅಲ್ಲದೆ ಇಬ್ಬರು ಪರಸ್ಪರ ಮಾತನಾಡುವುದಕ್ಕೂ ಸಹ ಅಡ್ಡಿಯಾಗಿದ್ದರು ಎನ್ನಲಾಗಿದೆ.


ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
 ಈ ನಡುವೆ ಪ್ರವೀಣ್ ಮೊಕಾಶಿ ಸಹ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದು, ಈ ಹಿನ್ನಲೆ ಸುಧಾ ನೇರವಾಗಿ ಪ್ರವೀಣ್ ಮೊಕಾಶಿಯನ್ನು ಭೇಟಿಯಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿ ಮೇ.೩೦ರಂದು ಉಬ್ರಾಣಿ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರು ನಡುವೆ ಮಾತುಕತೆ ನಡೆದು ಕೊನೆಗೆ ಸುಧಾ ನೀನು ಇಲ್ಲದೆ ನಾನು ಬದುಕುವುದಿಲ್ಲ ಎಂದು ತಿಳಿಸಿದ್ದಾಳೆ.
ಈ ನಡುವೆ ಮೇ.೩೧ರಂದು ಸುಧಾಳನ್ನು ಪ್ರವೀಣ್ ಮೊಕಾಶಿ ಬೈಕ್‌ನಲ್ಲಿ ಕೂರಿಸಿಕೊಂಡು ಸಾವು ಎಂದರೆ ಹೇಗಿರುತ್ತದೆ ಎಂದು ತೋರಿಸುತ್ತೇನೆ ಎಂದು ಬೈಕನ್ನು ಮನಬಂದಂತೆ ಓಡಿಸಿ ಭಯ ಹುಟ್ಟಿಸಿದ್ದಾನೆ. ಆದರೂ ಇದಕ್ಕೆ ಜಗ್ಗದ ಸುಧಾಳನ್ನು ಕೊನೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಕರೆ ತಂದು ಇಬ್ಬರು ವಿಷ ಕುಡಿದು ಸಾಯೋಣವೆಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಪ್ರವೀಣ್ ಮೊಕಾಶಿ ಮೊದಲು ನೀನು ವಿಷ ಕುಡಿಯುವಂತೆ ಯುವತಿಗೆ ತಿಳಿಸಿದ್ದು, ಆದರಂತೆ ಆಕೆ ವಿಷ ಸೇವಿಸಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ವಿಷ ಸೇವಿಸಿರುವ ಬಗ್ಗೆ ಸುಧಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾಳೆ.
    ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಹಿತಿ ತಿಳಿಸಿದ ತಕ್ಷಣ ಇಬ್ಬರನ್ನು ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಸುಧಾಳನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸುಧಾ ಕಳೆದ ೨ ದಿನಗಳ ಹಿಂದೆ ಸಾವು ಕಂಡಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.
    ಪ್ರಕರಣ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಮೊಕಾಶಿ ಹಾಗು ತಾಯಿ ಲಕ್ಷ್ಮೀ ವಿರುದ್ಧ  ಪ್ರಕರಣ ದಾಖಲಾಗಿದೆ. ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿಯಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.


No comments:

Post a Comment