Tuesday, July 12, 2022

ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಎಪಿ ಸಂಘಟನೆಗೆ ಒತ್ತು : ಜು.೧೪ರಂದು ಕಾರ್ಯಾಲಯ ಉದ್ಘಾಟನೆ


ಭದ್ರಾವತಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪಕ್ಷದ ಮುಖಂಡ ಹಾಗು ಚುನಾವಣಾ ಆಕಾಂಕ್ಷಿ ಮಾರುತಿ ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  
    ಭದ್ರಾವತಿ, ಜು. ೧೨: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ ಎಂದು ಪಕ್ಷದ ಮುಖಂಡ ಹಾಗು ಚುನಾವಣಾ ಆಕಾಂಕ್ಷಿ ಮಾರುತಿ ಮೆಡಿಕಲ್ ಆನಂದ್ ತಿಳಿಸಿದರು.
      ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿ ವಿಭಿನ್ನವಾಗಿದ್ದು, ಭ್ರಷ್ಟಾಚಾರ ಮುಕ್ತ ಪಕ್ಷವಾಗಿದೆ. ಈ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧನಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಆದರೆ ಈ ಎರಡು ಪಕ್ಷವನ್ನು ನನ್ನನ್ನು ಆರ್ಥಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಜೊತೆಗೆ ಚುನಾವಣೆ ಸಂದರ್ಭದಲ್ಲಿ ಕಡೆಗಣಿಸಿವೆ ಎಂದು ಆರೋಪಿಸಿದರು.
      ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅನೈತಿಕತೆ ಹೆಚ್ಚಾಗಿದ್ದು, ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಆಶಯ ಹೊಂದಿದ್ದೇನೆ. ಕ್ಷೇತ್ರದಲ್ಲಿ ನಾನು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಆಮ್ ಆದ್ಮಿ ಪಾರ್ಟಿ ಗುರುತಿಸಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಲಭಿಸುವ ವಿಶ್ವಾಸವಿದೆ ಎಂದರು.
      ಜು.೧೪ರಂದು ಕಾರ್ಯಾಲಯ ಉದ್ಘಾಟನೆ :
      ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ನಗರದ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ಆರಂಭಗೊಳ್ಳಲಿದ್ದು, ಈ ಸಂಬಂಧ ಜು.೧೪ರಂದು ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿರುವ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ದೆಹಲಿ ಶಾಸಕ ದಿಲೀಪ್ ಪಾಂಡೆ, ಪಂಜಾಬ್ ಶಾಸಕ ಪುನೀತ್ ಸಿಂಗ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್‌ರಾವ್, ವಿಜಯಶರ್ಮ, ರಾಜ್ಯ ವಕ್ತಾರ ಮಥಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವ ಸಹನಿ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಶಿವಮೊಗ್ಗ-ಚಿಕ್ಕಮಗಳೂರು-ಹಾಸನ ಜಿಲ್ಲಾ ವಲಯ ಉಸ್ತುವಾರಿ ದಿವಾಕರ, ಜಿಲ್ಲಾ ವಲಯ ಉಸ್ತುವಾರಿ ಗೋಪಾಲ, ಜಿಲ್ಲಾ ಮುಖಂಡ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
       ಪಕ್ಷದ ತಾಲೂಕು ಬಿ.ಕೆ ರಮೇಶ್, ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಎ. ಮಸ್ತಾನ್, ಅಬ್ದುಲ್ ಖದೀರ್, ಜಾವಿದ್, ರೇಷ್ಮಬಾನು, ನಾಗಮಣಿ, ಜ್ಯೋತಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Monday, July 11, 2022

ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ, ಜು. ೧೧ : ೨೦೨೧-೨೨ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ತಾಲೂಕಿನ ಕ್ಷತ್ರಿಯ ಮರಾಠ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರತಿಭಾ ಪುರಸ್ಕಾರ ನೀಡಲು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
      ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ, ಸ್ನಾತಕೋತ್ತರ ಪದವಿ ಹಾಗೂ ಅಂತಿಮ ಇಂಜಿನಿಯರಿಂಗ್ ತರಗತಿಗಳಲ್ಲಿ ಶೇ.೯೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ.೬೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು.
      ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಇತ್ತೀಚಿನ ಎರಡು ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಗರದ ಚನ್ನಗಿರಿ ರಸ್ತೆಯ ಭವಾನಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಛೇರಿಗೆ ಜು.೩೦ ರೊಳಗಾಗಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಮೊ: ೯೪೪೯೧೫೯೯೭೭ ಅಥವಾ ೬೩೬೧೭೪೬೧೦೮ ಸಂಖ್ಯೆಗೆ ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ಸಚಿನ್‌ಸಿಂದ್ಯಾ ಕೋರಿದ್ದಾರೆ.

ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಪೊಲೀಸರ ವಶಕ್ಕೆ

    ಭದ್ರಾವತಿ, ಜು. ೧೧: ನಗರದ ಸಿ.ಎನ್ ರಸ್ತೆ ಎಸ್.ಎಸ್ ಜ್ಯೂಯಲರ್‍ಸ್ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿರುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಡಾ. ಬಿ.ಎಂ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.      
    ಈ ಪ್ರಕರಣದಲ್ಲಿ ಒಟ್ಟು ೧.೫ ಕೆ.ಜಿ ಚಿನ್ನಾಭರಣ ಹಾಗು ೮೫ ಕೆ.ಜಿ ಬೆಳ್ಳಿ ಆಭರಣಗಳು ಕಳವಾಗಿದ್ದು, ಗ್ರಾಹಕರಿಂದ ದುರಸ್ತಿಗೆ ಪಡೆಯಲಾಗಿದ್ದ ೨೫೦ ಗ್ರಾಂ. ಚಿನ್ನಾಭರಣ ಸಹ ಕಳವು ಮಾಡಲಾಗಿದೆ ಎಂದರು.
     ಅನುಮಾನಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ ೩೫ ಕೆ.ಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಈ ಇಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದರು.

ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಮರು ಆಯ್ಕೆ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಸೇರಿದಂತೆ ಪದಾಧಿಕಾರಿಗಳು ಅವಿರೋಧವಾಗಿ ಮರು ಆಯ್ಕೆಯಾದರು.
    ಭದ್ರಾವತಿ, ಜು. ೧೧: ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
       ಪ್ರಧಾನ ಕಾರ್ಯದರ್ಶಿಯಾಗಿ ಶೋಭಾ ಗಂಗರಾಜು, ಸಹ ಕಾರ್ಯದರ್ಶಿಯಾಗಿ ಇಂದಿರಾ ರಮೇಶ್ ಮತ್ತು ಖಜಾಂಚಿಯಾಗಿ ಶಾಂತಿ ಶೇಟ್ (ಜಯಂತಿ) ಮರು ಆಯ್ಕೆಯಾಗಿದ್ದಾರೆ.
      ಉಳಿದಂತೆ ಗೌರವ ಅಧ್ಯಕ್ಷರಾಗಿ ಗೌರಮ್ಮಶಂಕರಯ್ಯ, ಉಪಾಧ್ಯಕ್ಷರಾಗಿ ಯಶೋಧ ವೀರಭದ್ರಪ್ಪ, ನಿರ್ದೇಶಕರಾಗಿ ಕಮಲರಾಯ್ಕರ್, ಶಾರದ ಶ್ರೀನಿವಾಸ್, ಲೋಹಿತಾನಂಜಪ್ಪ, ಕಲ್ಪನಾ ಮಂಜುನಾಥ, ಗೀತಾ ರಘುನಂದನ್, ವಾಣಿ ನಾಗರಾಜ್, ಮುಖ್ಯ ಸಲಹೆಗಾರರಾಗಿ ರೂಪಾರಾವ್ ಮತ್ತು ಅನ್ನಪೂರ್ಣ ಸತೀಶ್ ಆಯ್ಕೆಯಾಗಿದ್ದಾರೆ.

ಸಂಸದರಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ

ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು.
ಭದ್ರಾವತಿ, ಜು. ೧೧: ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು. 
ಕೆಲವು ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದ್ದು, ಶಿವಮೊಗ್ಗ-ಭದ್ರಾವತಿ ನಡುವೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಈ ನಡುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಂಸದ ರಾಘವೇಂದ್ರ ಮಳೆ ನಡುವೆಯೂ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈಲ್ವೆ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡುವಂತೆ ಹಾಗು ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಸೂಚಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಅಭಿಯಂತರ ಸತೀಶ್, ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಕಾರ್ಯದರ್ಶಿ ಎಂ. ಪ್ರಭಾಕರ್, ಸ್ಥಳೀಯ ಮುಖಂಡರಾದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್, ನಗರಸಭಾ ಸದಸ್ಯ ವಿ. ಕದಿರೇಶ್, ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಎಸ್.ಎಸ್ ಜ್ಯೋತಿ ಪ್ರಕಾಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, July 10, 2022

‎ವಿಶ್ವೇಶ್ವರಾಯ ಐರನ್& ಸ್ಟೀಲ್ ಪ್ಲಾಂಟ್ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಟಿಯುಸಿ) ಅಧ್ಯಕ್ಷರಾಗಿ ಕುಮಾರಸ್ವಾಮಿ



ಭದ್ರಾವತಿ : ನಗರದ ವಿಶ್ವೇಶ್ವರಾಯ  ಐರನ್& ಸ್ಟೀಲ್    ಪ್ಲಾಂಟ್ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಟಿಯುಸಿ) ಅಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ಧನಂಜಯ,  ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್, ಸಹಕಾರ್ಯದರ್ಶಿಯಾಗಿ ಕೆ. ಐಸಾಕ್‌  ಲಿಂಕನ್ ಮತ್ತು ಖಜಾಂಚಿಯಾಗಿ ಎಂ. ಶಿವನಾಗು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್, ಜಿ. ಮಂಜುನಾಥ್,  ಆರ್. ರಾಘವೇಂದ್ರ, ಜೆ. ಪ್ರಕಾಶ್, ಕಿರಣ್ ಕುಮಾರ್, ದೇವೇಂದ್ರ, ಎಲ್. ಆರ್ ನವೀನ್ ಮತ್ತು  ಎಂ. ವೆಂಕಟೇಶ್ ಆಯ್ಕೆಯಾಗಿದ್ದಾರೆ. ನ್ಯಾಯವಾದಿ  ಎಸ್.  ರವಿಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಪದಾಧಿಕಾರಿಗಳನ್ನು ಕಾರ್ಮಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದಿಸಿದ್ದಾರೆ.

ಪೇಪರ್‌ಟೌನ್ ಪೊಲೀಸ್ ಠಾಣೆಯಿಂದ ಸುರಗಿತೋಪಿನಲ್ಲಿ ಕುಂದುಕೊರತೆ ಸಭೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಪೇಪರ್ ಟೌನ್ ಪೊಲೀಸ್ ಠಾಣೆ ವತಿಯಿಂದ ಕುಂದುಕೊರತೆ ಸಭೆ ನಡೆಸಲಾಯಿತು. ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಹಾಗು ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ಅವರನ್ನು ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಜು. ೧೦: ನಗರಸಭೆ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಪೇಪರ್ ಟೌನ್ ಪೊಲೀಸ್ ಠಾಣೆ ವತಿಯಿಂದ ಕುಂದುಕೊರತೆ ಸಭೆ ನಡೆಸಲಾಯಿತು.
    ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಹಾಗು ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳು ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು.
    ನಗರಸಭೆ ಸದಸ್ಯೆ ಜಯಶೀಲ ಸುರೇಶ್, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿನ ಗೌರವಾಧ್ಯಕ್ಷ ರಾಮಕೃಷ್ಣ, ತರೀಕೆರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್, ಮುಖಂಡರಾದ ಕ್ಲಬ್ ಸುರೇಶ್, ಉಮೇಶ್ ಸುರಗಿತೋಪು, ಬಾಬಣ್ಣ, ನಿರ್ಮಲ ಕುಮಾರಿ, ದತ್ತಣ್ಣ,  ಭಾಸ್ಕರ್ ಬಾಬು, ಪುಟ್ಟಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.