Thursday, July 21, 2022

೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ  ಕೀರ್ತಿ ತಂದಿದ್ದಾರೆ.
    ಭದ್ರಾವತಿ, ಜು. ೨೧: ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.
    ಪಿಸಿಎ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ನೇಪಾಳ್ ಮತ್ತು ನ್ಯಾಷನಲ್ ಸ್ಪೋರ್ಟ್ಸ್ & ಎಜ್ಯುಕೇಷನ್ ಡೆವಲಪ್‌ಮೆಂಟ್ ಫೆಡರೇಷನ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೧೪ ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯದ ವಿದ್ಯಾರ್ಥಿಗಳಾದ ಬಿ.ಎಂ ವೇದಾಂತ್ ಡಿಸ್ಕಸ್ ಥ್ರೋ, ಕೆ. ಸಮಥ ಗುಂಡು ಎಸೆತ, ಶರಥ್ವಿ ಬಾಗ್ಸಲೆ ೨೦೦ ಮೀ. ಓಟ, ಕೆ,ಎಸ್ ಮೊಹಮದ್ ರಯಾನ್ ೪೦೦ ಮೀ. ಓಟ, ಕೆ. ಸುಪ್ರಿತ ಯೋಗಾಸನ ಮತ್ತು ಡಿ. ಚಿನ್ಮಯ ಪ್ರಸಾದ್ ಚೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗು ಕೆ.ಸಿ ಸಮರ್ಥ್ ಪುರಾಣಿಕ್ ಚೆಸ್ ಮತ್ತು ಪಿ. ಜಸ್ವಂತ್ ರೆಡ್ಡಿ ೨೦೦ ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ವಿಐಎಸ್‌ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂ ಹಾಗು ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ತರಬೇತಿದಾರರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
    ವಿಜೇತ ತಂಡ ಶುಕ್ರವಾರ ನಗರದಕ್ಕೆ ಆಗಮಿಸಲಿದ್ದು, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತಕ್ಕೆ ಶಾಸಕ ಸಂಗಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಪೋಷಕರು, ಕ್ರೀಡಾಭಿಮಾನಿಗಳು ಮುಂದಾಗಿದ್ದಾರೆ.


Wednesday, July 20, 2022

‎ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ : ಸಹಕರಿಸಲು ಸಂಸದರಿಗೆ ಕಾರ್ಮಿಕ ನಿಯೋಗ ಮನವಿ

ಭದ್ರಾವತಿ, ಜು. 21: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ   ಅವಶ್ಯವಿರುವ ರು.300 ಕೋ. ಬಂಡವಾಳ  ತೊಡಗಿಸುವಂತೆ  ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಒತ್ತಾಯಿಸುವಂತೆ ರಾಜ್ಯ ಸಂಸದರಿಗೆ ಕಾರ್ಮಿಕ ಸಂಘದ ನಿಯೋಗದಿಂದ  ಮನವಿ ಸಲ್ಲಿಸಲಾಯಿತು.
      ರಾಜ್ಯದ ಸಂಸದರಾದ ತೇಜಸ್ವಿ ಸೂರ್ಯ,  ಬಿ.ಎನ್ ಬಚ್ಚೇಗೌಡ,   ಅಣ್ಣಾ ಸಾಹಿಬ್ ಜೊಲ್ಲೆ, ಡಾ. ಉಮೇಶ್ ಜಾಧವ್ ಮತ್ತು ಕರಡಿ ಸಂಗಣ್ಣ ಅಮರಪ್ಪ  ಅವರನ್ನು  ದೆಹಲಿಯಲ್ಲಿ  ಭೇಟಿ ಮಾಡಿದ ನಿಯೋಗ   
ಕಾರ್ಖಾನೆಗೆ ರು.300 ಕೋ. ಬಂಡವಾಳ ತೊಡಗಿಸುವಂತೆ  ಎಲ್ಲಾ ಸಂಸದರು ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ  ಉಕ್ಕು ಸಚಿವ  ಜ್ಯೋತಿರಾದಿತ್ಯ ಸಿಂಧ್ಯಾರವರನ್ನು ಭೇಟಿಮಾಡಿ ಚರ್ಚಿಸಲು ಸಹಕರಿಸುವಂತೆ ಕೋರಲಾಯಿತು. 
     ಸಂಘದ ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿ ಉಪಸ್ಥಿತರಿದ್ದರು.

ಅಪಾಯದ ಸ್ಥಿತಿಯಲ್ಲಿ ಹೊಸ ಸೇತುವೆ : ದುರಸ್ತಿಗೊಳ್ಳುವವರೆಗೂ ಸಂಚಾರ ನಿಷೇಧ

ಪ್ರವಾಹದಿಂದ ಹಾನಿಗೊಳಗಾಗಿರುವ ಭದ್ರಾವತಿ ಹೊಸಸೇತುವೆಯನ್ನು ಬುಧವಾರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
    ಭದ್ರಾವತಿ, ಜು. ೨೦: ಕಳೆದ ಕೆಲವು ದಿನಗಳ ಹಿಂದೆ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ ಹಿನ್ನಲೆಯಲ್ಲಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಮುಳುಗಡೆಗೊಂಡಿದ್ದ ಹೊಸಸೇತುವೆಯ ಎರಡು ಬದಿಯ ತಡೆಗೋಡೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಹಿನ್ನಲೆಯಲ್ಲಿ ಸೇತುವೆ ಅಪಾಯದ ಸ್ಥಿತಿಯಲ್ಲಿದ್ದು, ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
      ಬುಧವಾರ ಸೇತುವೆ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಸೇತುವೆ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವುದರಿಂದ ಈ ಸೇತುವೆ ಮೇಲೆ  ವಾಹನ ಹಾಗು ಪಾದಚಾರಿಗಳ ಸಂಚಾರ ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿತು. ಅಲ್ಲದೆ ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿತು.
      ಉಪ ವಿಭಾಗಾಧಿಕಾರಿ ದೊಡ್ಡ ಗೌಡರ್, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್  ಸಂಪತ್‌ಕುಮಾರ್,  ಪೌರಾಯುಕ್ತ ಮನು ಕುಮಾರ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಂತರಾಜ್ ನಿಧನ

ಕಾಂತರಾಜ್
ಭದ್ರಾವತಿ, ಜು. ೨೦: ನಗರದ ಹೊಸಮನೆ ಶಿವಾಜಿ ಸರ್ಕಲ್ ನಿವಾಸಿ, ಓಂ ಹಿಂದೂ ಕೋಟೆ ಸಂಘಟನೆ ಅಧ್ಯಕ್ಷ ಮಂಜುನಾಥ್‌ರವರ ಸಹೋದರ ಕಾಂತರಾಜ್(೪೫) ಬುಧವಾರ ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿಯನ್ನು ಹೊಂದಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ. ಮೃತರ ನಿಧನಕ್ಕೆ ಚಂದನ್ ರಾವ್ ಸೇರಿದಂತೆ ಓಂ ಹಿಂದೂ ಕೋಟೆ ಸಂಘಟನೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.



ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ವಿವಿಧ ಪೊಲೀಸ್ ಠಾಣೆಗಳಿಗೆ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಅಳವಡಿಕೆ


ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಕಿತ್ತೂರು ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಲಾಯಿತು.
    ಭದ್ರಾವತಿ, ಜು. ೨೧: ನಗರಸಭೆ ವ್ಯಾಪ್ತಿಯ ಜನ್ನಾಪುರ ಕಿತ್ತೂರು ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಲಾಯಿತು.
      ಪ್ರಮುಖ ಮೈಕ್ರೋ ಪೈನಾನ್ಸ್ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವ್ಯವಹಾರದ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಸಹ ಕೈಗೊಳ್ಳುತ್ತಿದ್ದು, ಸಾಮಾಜಿಕ ಅಭಿವೃರ್ದಧಿ ಕಾರ್ಯಕ್ರಮದಡಿ(ಸಿಎಸ್‌ಆರ್) ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ, ಹಳೇನಗರ ಪೊಲೀಸ್ ಠಾಣೆ, ಸಂಚಾರಿ ಠಾಣೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಗಳಿಗೆ ಉಚಿತವಾಗಿ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಅಳವಡಿಸುವ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ.
      ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮಾ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ಸೇವಾ ಕಾರ್ಯವನ್ನು ಪ್ರಶಂಸಿ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಸ್ವೀಕರಿಸಿದರು.
      ಲಿಮಿಟೆಡ್ ಕ್ಷೇತ್ರ ವ್ಯವಸ್ಥಾಪಕ ಎಂ.ಎಸ್ ನಟರಾಜ್, ಶಾಖಾ ವ್ಯವಸ್ಥಾಪಕ ಎಂ. ರಂಗಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾಗಿ ಜಗದೀಶ್

ಜಗದೀಶ್ ಅವರನ್ನು ಜಯಕರ್ನಾಟಕ ಜನಪರ ವೇದಿಕೆ ಭದ್ರಾವತಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಎಸ್.ಕೆ ರಘುವೀರ್ ಸಿಂಗ್ ಆದೇಶ ಪತ್ರ ವಿತರಿಸಿದರು.
    ಭದ್ರಾವತಿ, ಜು. ೨೦: ನಗರದ ಬಿ.ಎಚ್ ರಸ್ತೆ ೧ನೇ ತಿರುವಿನ ನಿವಾಸಿ ಜಗದೀಶ್ ಅವರನ್ನು ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
      ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ಕೆ ರಘುವೀರ್ ಸಿಂಗ್ ಜಗದೀಶ್ ಅವರನ್ನು ನೇಮಕಗೊಳಿಸಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
      ಸಾಮಾಜಿಕ ಕಳಕಳಿಯೊಂದಿಗೆ ಅಶಕ್ತ ಜನರ ಧ್ವನಿಯಾಗಿ ಹೋರಾಟ ನಡೆಸುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವೇದಿಕೆಯಲ್ಲಿರುವ ಪ್ರತಿಯೊಬ್ಬರು ಶ್ರಮಿಸಬೇಕೆಂದರು.
      ವೇದಿಕೆ ರಾಜ್ಯ ಯುವ ಸಂಸ್ಥಾಪಕರಾದ ಬಿ. ಗುಣರಂಜನ್ ಶೆಟ್ಟಿ ಹಾಗು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪನವರ ಸಲಹೆ ಮೇರೆಗೆ ತಾಲೂಕು ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಡಲಾಗುತ್ತಿದೆ. ಎಲ್ಲರ ಸಹಕಾರ ಪಡೆದು ವೇದಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
      ವೇದಿಕೆ ಪ್ರಮುಖರಾದ ಜಿಲ್ಲಾ ಮುಖಂಡ, ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್, ಜಿಲ್ಲಾ ಕಾರ್ಯದರ್ಶಿ ಪ್ರಮೋದ್, ಪ್ರಸನ್ನ, ಸುಬ್ಬು, ಶಶಿಕುಮಾರ್, ಪ್ರವೀಣ್, ರಘು, ರಾಜೇಶ್, ಮದನ್, ಪ್ರಮೋದ್, ಪ್ರಸನ್ನ ಸೇರಿದಂತೆ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ : ಸದುಪಯೋಗಪಡೆದುಕೊಳ್ಳಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ

ಪ್ರಸಕ್ತ ಸಾಲಿನ ಮಣಿಪಾಲ್‌ ಆರೋಗ್ಯಕಾರ್ಡ್‌ ನೋಂದಣಿ ಪ್ರಾರಂಭ ಕುರಿತು ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮಾಹಿತಿ ನೀಡಿದರು.
    ಭದ್ರಾವತಿ, ಜು. ೨೦: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮಣಿಪಾಲ್‌ ಆರೋಗ್ಯಕಾರ್ಡ್‌ ಪ್ರಾರಂಭಿಸಲಾಗಿದೆ.  "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಇದರ ಧ್ಯೇಯ ವಾಕ್ಯವಾಗಿದ್ದು, ಪ್ರಸಕ್ತ ಸಾಲಿನ ನೋಂದಣಿ ಪ್ರಾರಂಭವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮನವಿ ಮಾಡಿದರು.
      ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಣಿಪಾಲ್ ಆರೋಗ್ಯಕಾರ್ಡ್(ಎಂಎಸಿ) ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಈ ಕಾರ್ಡ್‌ ಪಡೆಯುವ ಮೂಲಕ ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗಾಗಿ ಆರಂಭಿಸಿದ ಈ ಸೇವೆ ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗು ಕೇರಳ, ಗೋವಾದಂತಹ ನೆರೆ ರಾಜ್ಯಗಳಲ್ಲೂ ಸೇವೆ ವಿಸ್ತರಿಸಿ ಕೊಂಡಿದೆ ಎಂದರು.
      ಒಂದು  ವರ್ಷದ ಅವಧಿಯ ಕಾರ್ಡ್‌ ಸದಸ್ಯತ್ವ ಒಬ್ಬರಿಗೆ ರು. 300,  ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರು. 600 ಮತ್ತು ಕುಟುಂಬ ಪ್ಲಸ್ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. 750 ನಿಗದಿಪಡಿಸಲಾಗಿದೆ.  2 ವರ್ಷದ ಅವಧಿಗೆ ಒಬ್ಬರಿಗೆ ರು. 500, ಕುಟುಂಬಕ್ಕೆ ರು. 800 ಮತ್ತು ಕೌಟಂಬಿಕ ಪ್ಲಸ್ ಕಾರ್ಡ್‌ಗೆ ರು. 950 ಆಗಿರುತ್ತದೆ ಎಂದರು.
      ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರು ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ. 50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ. 30, ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ ಗಳಲ್ಲಿ  ಶೇ. 20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20, ಔಷಧಾಲಯಗಳಲ್ಲಿ ಶೇ. 12, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25 ಮತ್ತು ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಸರ್ಕಾರದ ಅನುಮೋದಿತ ಪ್ಯಾಕೇಜ್ ಮೇಲೆ ಶೇ. 10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದರು.
      ಮಣಿಪಾಲ್‌ ಆರೋಗ್ಯಕಾರ್ಡ್‌ ಪಡೆಯಲಿಚ್ಛಿಸುವವರು ನಗರದ ವಿ.ಪ್ರ ಸೌಹರ್ದ ಮೊ: 9739080599, ಎಂ ಜಿ ಸುರೇಶ್ ಮೊ: 9845681363, ಡಿ ಶಬರಿವಾಸನ್, ಮೊ : 9035616188, ರಾಜೇಶ್ ಮೊ: 9448062523 ಮತ್ತು ಮಧು, ಮೊ: 9731247134 ಹಾಗು ಶಿವಮೊಗ್ಗದಲ್ಲಿ ಎ ಎನ್ ವಿಜೇಂದ್ರ ರಾವ್ ಮೊ: 9448790127. ಅವರನ್ನು ಹಾಗು ಕಾರ್ಡಿನ ಪ್ರತಿನಿಧಿಯಾಗಬೇಕಾದಲ್ಲಿ ಅನಿಲ್ ನಾಯ್ಕ್ ಮೊ: 9740618912 ಅವರನ್ನು ಸಂಪರ್ಕಿಸಬಹುದಾಗಿದೆ.
      ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಡಿ. ಶಬರಿವಾಸನ್‌, ರಾಜೇಶ್‌, ಆದರ್ಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.