Wednesday, July 20, 2022

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ : ಸದುಪಯೋಗಪಡೆದುಕೊಳ್ಳಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ

ಪ್ರಸಕ್ತ ಸಾಲಿನ ಮಣಿಪಾಲ್‌ ಆರೋಗ್ಯಕಾರ್ಡ್‌ ನೋಂದಣಿ ಪ್ರಾರಂಭ ಕುರಿತು ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮಾಹಿತಿ ನೀಡಿದರು.
    ಭದ್ರಾವತಿ, ಜು. ೨೦: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮಣಿಪಾಲ್‌ ಆರೋಗ್ಯಕಾರ್ಡ್‌ ಪ್ರಾರಂಭಿಸಲಾಗಿದೆ.  "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಇದರ ಧ್ಯೇಯ ವಾಕ್ಯವಾಗಿದ್ದು, ಪ್ರಸಕ್ತ ಸಾಲಿನ ನೋಂದಣಿ ಪ್ರಾರಂಭವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮನವಿ ಮಾಡಿದರು.
      ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಣಿಪಾಲ್ ಆರೋಗ್ಯಕಾರ್ಡ್(ಎಂಎಸಿ) ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಈ ಕಾರ್ಡ್‌ ಪಡೆಯುವ ಮೂಲಕ ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗಾಗಿ ಆರಂಭಿಸಿದ ಈ ಸೇವೆ ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗು ಕೇರಳ, ಗೋವಾದಂತಹ ನೆರೆ ರಾಜ್ಯಗಳಲ್ಲೂ ಸೇವೆ ವಿಸ್ತರಿಸಿ ಕೊಂಡಿದೆ ಎಂದರು.
      ಒಂದು  ವರ್ಷದ ಅವಧಿಯ ಕಾರ್ಡ್‌ ಸದಸ್ಯತ್ವ ಒಬ್ಬರಿಗೆ ರು. 300,  ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರು. 600 ಮತ್ತು ಕುಟುಂಬ ಪ್ಲಸ್ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. 750 ನಿಗದಿಪಡಿಸಲಾಗಿದೆ.  2 ವರ್ಷದ ಅವಧಿಗೆ ಒಬ್ಬರಿಗೆ ರು. 500, ಕುಟುಂಬಕ್ಕೆ ರು. 800 ಮತ್ತು ಕೌಟಂಬಿಕ ಪ್ಲಸ್ ಕಾರ್ಡ್‌ಗೆ ರು. 950 ಆಗಿರುತ್ತದೆ ಎಂದರು.
      ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರು ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ. 50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ. 30, ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ ಗಳಲ್ಲಿ  ಶೇ. 20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20, ಔಷಧಾಲಯಗಳಲ್ಲಿ ಶೇ. 12, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25 ಮತ್ತು ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಸರ್ಕಾರದ ಅನುಮೋದಿತ ಪ್ಯಾಕೇಜ್ ಮೇಲೆ ಶೇ. 10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದರು.
      ಮಣಿಪಾಲ್‌ ಆರೋಗ್ಯಕಾರ್ಡ್‌ ಪಡೆಯಲಿಚ್ಛಿಸುವವರು ನಗರದ ವಿ.ಪ್ರ ಸೌಹರ್ದ ಮೊ: 9739080599, ಎಂ ಜಿ ಸುರೇಶ್ ಮೊ: 9845681363, ಡಿ ಶಬರಿವಾಸನ್, ಮೊ : 9035616188, ರಾಜೇಶ್ ಮೊ: 9448062523 ಮತ್ತು ಮಧು, ಮೊ: 9731247134 ಹಾಗು ಶಿವಮೊಗ್ಗದಲ್ಲಿ ಎ ಎನ್ ವಿಜೇಂದ್ರ ರಾವ್ ಮೊ: 9448790127. ಅವರನ್ನು ಹಾಗು ಕಾರ್ಡಿನ ಪ್ರತಿನಿಧಿಯಾಗಬೇಕಾದಲ್ಲಿ ಅನಿಲ್ ನಾಯ್ಕ್ ಮೊ: 9740618912 ಅವರನ್ನು ಸಂಪರ್ಕಿಸಬಹುದಾಗಿದೆ.
      ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಡಿ. ಶಬರಿವಾಸನ್‌, ರಾಜೇಶ್‌, ಆದರ್ಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

No comments:

Post a Comment