Saturday, July 23, 2022

ಜು.26ರಂದು ಮುಂಗಾರು ಜಾನಪದ ಸಂಭ್ರಮ


ಭದ್ರಾವತಿ, ಜು. 23:  ಕರ್ನಾಟಕ ಜಾನಪದ ಪರಿಷತ್ ವತಿಯಿಂದ  ಜು.26ರಂದು, ಮಧ್ಯಾಹ್ನ 3-30 ಕ್ಕೆ, ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದಲ್ಲಿ  ಜಾನಪದ ಗೀತೆಗಳ ವೃಂದಗಾನ ( ಕನಿಷ್ಠ 5ಜನರ ತಂಡ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
     ಆಷಾಢ ಮಾಸ, ಮುಂಗಾರು ಹಾಗೂ ಕೃಷಿ ಚಟವಟಿಕೆಗಳಿಗೆ ಸಂಬಂಧಿತ ಜಾನಪದ ಗೀತೆಗಳನ್ನು ಆಯ್ದು ಕೊಳ್ಳ ಬೇಕಾಗಿರುತ್ತದೆ. 
    ಭಾಗವಹಿಸುವಂತಹ ಆಸಕ್ತರು ಜು.25 ರೊಳಗಾಗಿ ಮೋಹನ್. ಬಿ.ಎಲ್ ಮೊ: 9986241232, ಲತಾ ಎಲ್.ಕೆ, ಮೊ: 9449401402 ಮತ್ತು  ಹೇಮಾವತಿ ವಿಶ್ವನಾಥ್ ಮೊ: 9886859993 ಕರೆ ಮಾಡಿ ಹೆಸರು ನೊಂದಾಯಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದ್ದಾರೆ. 

‎ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ : ಮುಖ್ಯಮಂತ್ರಿ ಭರವಸೆ

ಭದ್ರಾವತಿ, ಜು. 23: ಕೇಂದ್ರ ಉಕ್ಕುಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಪ್ರಾಧಿಕಾರದ ಮೂಲಕ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
 ಕಾರ್ಖಾನೆಯ ಕಾರ್ಮಿಕ ಸಂಘದ ನಿಯೋಗ ದೆಹಲಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ರವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
 ಮುಖ್ಯಮಂತ್ರಿಗಳು ಮನವಿಗೆ ಪೂರಕವಾಗಿ ಸ್ಪಂದಿಸಿ  ಭರವಸೆ ನೀಡಿದರು.  ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್, ಕಾರ್ಯದರ್ಶಿ ಮನು, ಖಜಾಂಚಿ ಮೋಹನ್ ಉಪಸ್ಥಿತರಿದ್ದರು. 

Friday, July 22, 2022

ಕೆರೆ ಕೋಡಿ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಡಿ.ಎಸ್ ಅರುಣ್ ಗೆ ಮನವಿ

ಭದ್ರಾವತಿ: ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿ ಸಮೀಪದಲ್ಲಿರುವ ಸರ್ಕಾರಿ ಹಿರೇಕೆರೆ ಕೋಡಿ ಬಿದ್ದು ರಸ್ತೆ ಹಾಳಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಬೇಕೆಂದು ನಗರದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಅವರಿಗೆ ಮನವಿ ಸಲ್ಲಿಸಲಾಗಿದೆ.
      ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮತ್ತು ಎಟಿಎಂ ಕೌಂಟರ್ ಪ್ರಾರಂಭ ಮಾಡಲು ಹಾಗೂ ಅಡುಗೆ ಅನಿಲ ವಿತರಣಾ ಕೇಂದ್ರ ಪ್ರಾರಂಭಿಸಲು ಮತ್ತು ಪ್ರಸ್ತುತ ಗ್ರಾಮದಲ್ಲಿರುವ ಪದವಿ ಪೂರ್ವ  ಕಾಲೇಜನ್ನು ಮೇಲ್ದರ್ಜೆಗೇರಿಸಿ ಪದವಿ ಕಾಲೇಜು ಆರಂಭಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಒತ್ತಾಯಿಸುವುದು ಮತ್ತು ಸಿಂಗನಮನೆ, ಹಿರಿಯೂರು, ದೊಣಬಘಟ್ಟ, ಬಿಳಿಕಿ ಹಾಗು ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶುದ್ಧವಾದ ಮತ್ತು ಸಮರ್ಪಕವಾದ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
          ಮನವಿಯನ್ನು ಟ್ರಸ್ಟ್ ಚೇರ್ಮನ್  ಆರ್. ವೇಣುಗೋಪಾಲ್ ಡಿ.ಎಸ್ ಅರುಣ್ ಅವರಿಗೆ ಸಲ್ಲಿಸಿದ್ದು, ಈಗಾಗಲೇ ಪ್ರತ್ಯೇಕವಾಗಿ ಸಲ್ಲಿಸಿರುವ 6 ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಜಿಎಸ್‌ಟಿ ವಿರೋಧಿಸಿ ಜಯಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ : ಮನವಿ

ಕೇಂದ್ರ ಸರ್ಕಾರ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಭದ್ರಾವತಿಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೨೨: ಕೇಂದ್ರ ಸರ್ಕಾರ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಪ್ರಮುಖರು ಮಾತನಾಡಿ, ಕೇಂದ್ರ ಸರ್ಕಾರ ಅಸ್ವಾಭಾವಿಕ ಜಿಎಸ್‌ಟಿ ದರ ಜಾರಿಗೆ ತರಲು ಹೊರಟಿದೆ. ಆಹಾರ ಪದಾರ್ಥಗಳ ಮೇಲೂ ತೆರಿಗೆ ವಿಧಿಸಿದೆ. ಬಡವರು ಉಪಯೋಗಿಸುವ ಪ್ಯಾಕ್ ಮಾಡಿದ ಅಕ್ಕಿ, ಹಾಲು, ಮೊಸರು, ಮಜ್ಜಿಗೆ, ಹಪ್ಪಳ, ಉಪ್ಪಿನಕಾಯಿ, ಒಣಕಾಳು, ತರಕಾರಿ, ಮಾಂಸ, ಮೀನು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ದೇಶದ ಬಡವರ್ಗದ ಪ್ರಜೆಗಳ ಮೆಲೆ ಚಿಂತನೆ ಇಲ್ಲದೆ ಅಸಂಬದ್ಧವಾದ ತೆರಿಗೆ ವಿಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಕ್ಕಿ ಮೇಲೆ ಜಿಎಸ್‌ಟಿ ಹೇರಿರುವುದು ಬಡವರ ಅನ್ನವನ್ನು ಕಸಿಕೊಂಡಂತಾಗಿದೆ. ಈಗಾಗಲೇ ಕೊರೋನಾದ ಹಿನ್ನಲೆಯಲ್ಲಿ ಯಾವುದೇ ಉದ್ಯೋಗವಿಲ್ಲದೆ ಆರ್ಥಿಕತೆಯಿಂದ ಹಾಗು ನಿರುದ್ಯೋಗದಿಂದ ಹಿಂದುಳಿದಿರುವ ದೇಶದ ಬಡ ವರ್ಗದವರ ಸ್ಥಿತಿ ಹೇಳತೀರದಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ತೆರಿಗೆಯನ್ನು ವಿಧಿಸಲಾಗಿದೆ. ತಕ್ಷಣ ಜಿಎಸ್‌ಟಿ ರದ್ದು ಮಾಡಬೇಕೆಂದು ವೇದಿಕೆ ಆಗ್ರಹಿಸುತ್ತದೆ ಎಂದರು.
    ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ




ಎನ್. ವೈಷ್ಣವಿ ಕಾಮತ್(೪೮೫)


ಎಂ. ಪ್ರಜ್ವಲ್ (೪೬೩)


ಪಿ.ವಿ ಲಹರಿ (೪೬೧)


ತೇಜಸ್ವಿನಿ ಗೌಡ(೪೫೫)


ಮೇಘನಾ ಎಂ. ರೆಡ್ಡಿ (೪೫೨)


ಆರ್. ಹೇಮಾಲತಾ(೪೫೨)
    ಭದ್ರಾವತಿ, ಜು. ೨೨: ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಜ್ಞಾನಪೀಠ ಶಾಲೆ ಈ ಬಾರಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
    ಶಾಲೆಯ ವಿದ್ಯಾರ್ಥಿನಿ ಎನ್. ವೈಷ್ಣವಿ ಕಾಮತ್ ೫೦೦ಕ್ಕೆ ೪೮೫ ಅತಿ ಹೆಚ್ಚು ಶೇ.೯೭ ಅಂಕ ಪಡೆದುಕೊಂಡಿದ್ದು,  ಉಳಿದಂತೆ ಎಂ. ಪ್ರಜ್ವಲ್ ೫೦೦ಕ್ಕೆ ೪೬೩ ಶೇ.೯೨.೬, ಪಿ.ವಿ ಲಹರಿ ೫೦೦ಕ್ಕೆ ೪೬೧ ಶೇ.೯೨.೨, ತೇಜಸ್ವಿನಿ ಗೌಡ ೫೦೦ಕ್ಕೆ ೪೫೫ ಶೇ.೯೧, ಮೇಘನಾ ಎಂ. ರೆಡ್ಡಿ ೫೦೦ಕ್ಕೆ ೪೫೨ ಶೇ.೯೦.೪ ಹಾಗು ಆರ್. ಹೇಮಾಲತಾ ೫೦೦ಕ್ಕೆ ೫೫೨ಕ್ಕೆ ಶೇ.೯೦.೪ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
    ಒಟ್ಟು ೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ವಿದ್ಯಾರ್ಥಿಯಾಗಿದ್ದಾರೆ. ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್, ಉಪಪ್ರಾಂಶುಪಾಲ ಪ್ರಸನ್ನ ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

೨ನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ : ಬಿಜೆಪಿ ಸಂಭ್ರಮಾಚರಣೆ

ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ದ್ರೌಪತಿ ಮುರ್ಮು ಅವರು ದೇಶದ ೨ನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ನಗರದ ರಂಗಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.  
    ಭದ್ರಾವತಿ, ಜು. ೨೨: ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ದ್ರೌಪತಿ ಮುರ್ಮು ಅವರು ದೇಶದ ೨ನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ನಗರದ ರಂಗಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ದೇಶದ ೧೫ನೇ ರಾಷ್ಟ್ರಪತಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ದ್ರೌಪದಿ ಮುರ್ಮು ಅವರ ಆಯ್ಕೆ ಭಾರತ ದೇಶದ ಜನರು ಮಾತ್ರವಲ್ಲ ಇಡೀ ಜಗತ್ತು ಕುತೂಹಲದಿಂದ ನೋಡುವಂತಾಗಿದೆ. ಇವರ ಆಯ್ಕೆ ಐತಿಹಾಸಿಕವಾಗಿದೆ ಎಂದು ಬಣ್ಣಿಸಿದ್ದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ಎನ್. ವಿಶ್ವನಾಥರಾವ್, ಎಂ. ಪ್ರಭಾಕರ್, ನರಸಿಂಹಚಾರ್, ಎಂ. ಮಂಜುನಾಥ್, ಚನ್ನೇಶ್, ರಾಜಶೇಖರ ಉಪ್ಪಾರ, ರಾಮಚಂದ್ರಪ್ಪ, ಗಣೇಶ್‌ರಾವ್, ರಾಮನಾಥ್ ಬರ್ಗೆ, ಬಿ.ಎಸ್ ಶ್ರೀನಾಥ್, ಸತೀಶ್ ಕುಮಾರ್, ಧನುಷ್ ಬೋಸ್ಲೆ, ಮಂಜುನಾಥ್, ಬಿ.ಎಸ್ ನಾರಾಯಣಪ್ಪ, ಸತ್ಯಣ್ಣ, ವಿಜಯ್, ಶೋಭಾ ಪಾಟೀಲ್, ಹೇಮಾವತಿ, ಅನ್ನಪೂರ್ಣ, ಮಂಜುಳ, ಕವಿತಾ ರಾವ್, ಸುಲೋಚನಾ, ಶ್ಯಾಮಲ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ವಿಜೇತ ತಂಡಕ್ಕೆ ಅದ್ದೂರಿ ಸ್ವಾಗತ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಶುಕ್ರವಾರ ನಗರಕ್ಕೆ ಆಗಮಿಸಿದ ವಿಜೇತ ತಂಡಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
    ಭದ್ರಾವತಿ, ಜು. ೨೨: ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಶುಕ್ರವಾರ ನಗರಕ್ಕೆ ಆಗಮಿಸಿದ ವಿಜೇತ ತಂಡಕ್ಕೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
    ನಗರದ ಪ್ರಮುಖರು, ಪೋಷಕರು, ಕ್ರೀಡಾಭಿಮಾನಿಗಳು ವಿಜೇತ ತಂಡ ಆಗಮಿಸುತ್ತಿದ್ದಂತೆ ಮಳೆ ನಡುವೆಯೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದರು. ಅಲ್ಲದೆ ವಿಜೇತ ತಂಡದ ಎಲ್ಲರನ್ನು ಸನ್ಮಾನಿಸಿ ಅಭಿನಂದಿಸಿದರು. ನಂತರ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿರುವ ಸರ್ ಎಂ. ವಿಶ್ವೇಶ್ವರಾಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.


    ಪಿಸಿಎ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ನೇಪಾಳ್ ಮತ್ತು ನ್ಯಾಷನಲ್ ಸ್ಪೋರ್ಟ್ಸ್ & ಎಜ್ಯುಕೇಷನ್ ಡೆವಲಪ್‌ಮೆಂಟ್ ಫೆಡರೇಷನ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೧೪ ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯದ ವಿದ್ಯಾರ್ಥಿಗಳಾದ ಬಿ.ಎಂ ವೇದಾಂತ್ ಡಿಸ್ಕಸ್ ಥ್ರೋ, ಕೆ. ಸಮಥ ಗುಂಡು ಎಸೆತ, ಶರಥ್ವಿ ಬಾಗ್ಸಲೆ ೨೦೦ ಮೀ. ಓಟ, ಕೆ,ಎಸ್ ಮೊಹಮದ್ ರಯಾನ್ ೪೦೦ ಮೀ. ಓಟ, ಕೆ. ಸುಪ್ರಿತ ಯೋಗಾಸನ ಮತ್ತು ಡಿ. ಚಿನ್ಮಯ ಪ್ರಸಾದ್ ಚೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗು ಕೆ.ಸಿ ಸಮರ್ಥ್ ಪುರಾಣಿಕ್ ಚೆಸ್ ಮತ್ತು ಪಿ. ಜಸ್ವಂತ್ ರೆಡ್ಡಿ ೨೦೦ ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ವಿಐಎಸ್‌ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂ, ತರಬೇತಿದಾರರು, ಎಲ್. ವೆಂಕಟೇಶ್ ನಾಯಕ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಛಲವಾದಿ ಸಮಾಜದ ಪ್ರಮುಖರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಮಂಜುನಾಥ್, ಎ. ತಿಪ್ಪೇಸ್ವಾಮಿ, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಎ.ಟಿ ರವಿ, ನಗರಸಭಾ ಸದಸ್ಯ ಕೋಟೇಶ್ವರರಾವ್, ದಿಲೀಪ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಬಿ.ಎಂ ರವಿಕುಮಾರ್, ಧನುಷ್ ಬೋಸ್ಲೆ, ನಕುಲ್, ಮಂಜುನಾಥ್ ಕೊಯ್ಲಿ, ಗಿರೀಶ್ ಸೇರಿದಂತೆ ಪೋಷಕರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.