ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಅಡಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಶೈಲೇಶ್ ಕೋಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಜು. ೨೫: ಸಮಾಜವನ್ನು ಎಚ್ಚರಿಸುವ ಕೆಲಸ ಪತ್ರಕರ್ತರು ಮಾಡುತ್ತಿದ್ದು, ಅಲ್ಲದೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಸೋಮವಾರ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಅಡಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
೪ನೇ ಅಂಗವಾಗಿ ಗುರುತಿಸಿಕೊಂಡಿರುವ ಪತ್ರಿಕಾರಂಗ ತನ್ನದೇ ಆದ ಮೌಲ್ಯಗಳನ್ನು ಹೊಂದುವ ಜೊತೆಗೆ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ಬದ್ದತೆ ಕಾಯ್ದುಕೊಂಡು ಬಂದಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಕೆ.ವಿ ಶಿವಕುಮಾರ್ ಮಾತನಾಡಿ, ದೇಶದಲ್ಲಿ ಮುದ್ರಣ ಮಾದ್ಯಮದ ಕೊಡುಗೆ ಅಪಾರವಾಗಿದೆ. ಪ್ರಸ್ತುತ ದೃಶ್ಯ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳ ಪೈಪೋಟಿ ನಡುವೆಯೂ ಮುದ್ರಣ ಮಾದ್ಯಮ ತನ್ನ ತನವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕಾಲ ಕಳೆಯುವ ಬದಲು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಪತ್ರಕರ್ತ ಶೈಲೇಶ್ ಕೋಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಆರ್.ಎಸ್ ಹಾಲಸ್ವಾಮಿ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಉಪನ್ಯಾಸಕ ಮಹಮದ್ ನಜೀಬ್, ಉದ್ಯಮಿ ಬಿ.ಕೆ ಜಗನ್ನಾಥ್, ಎಸ್.ಎಸ್ ಭೈರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು ೪೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ತೋಹಿದ್ ಅಹಮದ್ ಭಾಷಣ, ಐಶ್ವಯ್ಯ ವೀಣಾವಾದನ ಮತ್ತು ಮಂಜುನಾಥ ಕಮಲಕರ್ ನಾಯ್ಕ ಗೀತಾ ಗಾಯನ ನಡೆಸಿಕೊಟ್ಟರು.
ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ವರದರಾಜ ಮತ್ತು ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು. ಪತ್ರಕರ್ತರು, ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.