Saturday, July 30, 2022

ಭದ್ರಾ ಜಲಾಶಯದಿಂದ ರೈತರಿಗೆ ಸಕಾಲದಲ್ಲಿ ನೀರು ಪೂರೈಕೆ : ಡಾ. ಕೆ.ಸಿ ನಾರಾಯಣಗೌಡ

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಶನಿವಾರ ಭದ್ರೆಗೆ ಬಾಗಿನ ಸಮರ್ಪಿಸಿದರು.
    ಭದ್ರಾವತಿ, ಜು. ೩೦: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರಿಗೆ ಸಕಾಲದಲ್ಲಿ ನೀರೊದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಜಲಾಶಯ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ ಭರವಸೆ ನೀಡಿದರು.
    ಅವರು ಶನಿವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಕಳೆದ ಕೆಲವು ವರ್ಷಗಳಿಂದ ಭದ್ರಾ ಜಲಾಶಯ ಭರ್ತಿಯಾಗುತ್ತಿರುವುದು ಈ ಭಾಗದ ರೈತರಲ್ಲಿ ಸಂತಸವನ್ನುಂಟು ಮಾಡುತ್ತಿದೆ. ಅಲ್ಲದೆ ಭದ್ರಾ ಜಲಾಶಯ ಭರ್ತಿಯಾಗುತ್ತಿರುವುದು ಇಡೀ ರಾಜ್ಯದ ಸಮೃದ್ಧಿಯ ಸಂಕೇತವಾಗಿದೆ. ಈ ಭಾಗದ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಸಕಾಲದಲ್ಲಿ ಜಲಾಶಯದಿಂದ ನೀರೊದಗಿಸಲಾಗುವುದು. ಜಲಾಶಯ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಅನುದಾನ ಸರ್ಕಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಗೆ ಬಿಡುಗಡೆಗೊಳಿಸಲಿದೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ಎಲ್ಲಾ ರೈತರಿಗೂ ಜಲಾಶಯದಿಂದ ನೀರೊದಗಿಸಲಾಗುವುದು. ಜಲಾಶಯ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ನೆರವನ್ನು ನೀಡಲಿವೆ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಸಹ ರೈತರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್ , ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್, ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ,  ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್ ವೈಶಾಲಿ, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ನೀರಾವರಿ ಇಲಾಖೆ ಹಾಗೂ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧಿಕಾರಿಗಳು, ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು  ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರಣಿ ಹತ್ಯೆಗೆ ಯುವ ಕಾಂಗ್ರೆಸ್ ಖಂಡನೆ : ಸಂತಾಪ

ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ಖಂಡಿಸಿ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಹತ್ಯೆಯಾದವರಿಗೆ  ಶ್ರದ್ಧಾಂಜಲಿ ಸಲ್ಲಿಸಲಾಯಿತು
    ಭದ್ರಾವತಿ, ಜು. ೩೦: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ಖಂಡಿಸಿ ನಗರದ ರಂಗಪ್ಪ ವೃತ್ತದಲ್ಲಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಹತ್ಯೆಯಾದವರಿಗೆ  ಶ್ರದ್ಧಾಂಜಲಿ ಸಲ್ಲಿಸಲಾಯಿತು
    ರಾಜ್ಯದಲ್ಲಿ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿನಾಕಾರಣ ಅಮಾಯಕರು ಬಲಿಯಾಗುತ್ತಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ತಕ್ಷಣ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಯಿತು. ಅಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಖಂಡಿಸಿ ಅವರ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.


    ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಅಭಿಷೇಕ್, ಎನ್‌ಎಸ್‌ಯುಐ ಅಧ್ಯಕ್ಷ ಮುಸ್ವೀರ್ ಬಾಷಾ,  ಅಸಂಘಟಿತ ಕಾರ್ಮಿಕರ ನಗರ ಅಧ್ಯಕ್ಷ ಐಸಾಕ್ ಲಿಂಕನ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ತಬ್ರೇಜ್ ಖಾನ್, ಅಭಿಷೇಕ್, ರಾಜ್ಯ ವಕ್ತಾರ ಆಮೋಸ್,  ಸಾಮಾಜಿಕ ಜಾಲತಾಣದ ಗ್ರಾಮಾಂತರ ಅಧ್ಯಕ್ಷ ಪ್ರವೀಣ್ ನಾಯ್ಕ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ರೂಪ,  ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಜ್ಜದ್, ಹರೀಶ್, ಸೈಯದ್, ನ್ಯಾಯವಾದಿ ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕುರುಬರ ಸಂಘದ ಅಧ್ಯಕ್ಷರಾಗಿ ಬಿ.ಎಂ ಸಂತೋಷ್ ೨ನೇ ಬಾರಿಗೆ ಪುನರ್ ಆಯ್ಕೆ

ಭದ್ರಾವತಿ ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೩೦: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಬಿ.ಎಂ ಸಂತೋಷ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸತೀಶ್ ಹೊಳೆಹೊನ್ನೂರು ಮತ್ತು ಬಿ.ಎಸ್ ಮಂಜುನಾಥ್, ಕಾರ್ಯದರ್ಶಿಯಾಗಿ ಬಿ.ಎ ರಾಜೇಶ್, ಸಹಕಾರ್ಯದರ್ಶಿಯಾಗಿ ಜೆ. ಕುಮಾರ್, ಖಜಾಂಚಿಯಾಗಿ ಬಿ.ಎಚ್ ವಸಂತ, ಲೆಕ್ಕಪರಿಶೋಧಕರಾಗಿ ಕೆ. ಕೇಶವ, ಕಾನೂನು ಸಲಹೆಗಾರರಾಗಿ ಎಲ್. ಪ್ರವೀಣ್ ಹಾಗು ನಿರ್ದೇಶಕರಾಗಿ ಸಣ್ಣಯ್ಯ, ನಾಗರಾಜ್, ಲೋಕೇಶ್, ವಿನೋದ್‌ಕುಮಾರ್, ಹೇಮಾವತಿ, ಬಿ.ಎಸ್ ನಾರಾಯಣಪ್ಪ ಮತ್ತು ಮಂಜುನಾಥ್(ಕೊಯ್ಲಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ತಾಲೂಕು ಕುರುಬರ ಸಂಘದ ಆಡಳಿತ ಮಂಡಳಿ ಒಟ್ಟು ೧೫ ನಿರ್ದೇಶಕ ಸ್ಥಾನಗಳನ್ನು ಒಳಗೊಂಡಿದ್ದು, ಚುನಾವಣಾಧಿಕಾರಿಯಾಗಿ ನವೀನ್ ಕರ್ತವ್ಯ ನಿರ್ವಹಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕುವೆಂಪು ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ

ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರದಿಂದ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಯಿತು.
    ಭದ್ರಾವತಿ, ಜು. ೩೦: ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರದಿಂದ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಯಿತು.
    ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ರಾಜ್ಯ ಸರ್ಕಾರದ ಆದೇಶದ ಮೇಲೆ ಜು.೯, ೨೦೨೦ರಂದು ಸಿಂಡಿಕೇಟ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಇದುವರೆಗೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ. ಬಡ್ತಿ ಹೊಂದಿರುವ ನೌಕರರಿಗೆ ವೇತನ ನಿಗದಿಕರಣ, ಉಪ ಕುಲಸಚಿವ ಹುದ್ದೆಗಳಿಗೆ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಬಡ್ತಿ ಕೈಗೊಂಡಿರುವುದಿಲ್ಲ. ಅಲ್ಲದೆ ಉಳಿದ ವಿಲೀಕರಣ ನೌವಕರರಿಗೆ ಸೌಲಭ್ಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಲಾಯಿತು.
    ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಲಾಯಿತು.
    ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಷ್ಕರದ ನೇತೃತ್ವ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಅಧ್ಯಾಪಕೇತರ ನೌಕರರು ಪಾಲ್ಗೊಂಡಿದ್ದರು.

ಪತ್ರಕರ್ತರ ಮೇಲೆ ಹಲ್ಲೆ : ಮನವಿ

ಕರ್ನಾಟಕ ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್ ರಮೇಶ್‌ಕುಮಾರ್ ಅವರು ಮಾಧ್ಯಮದವರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೩೦ : ಕರ್ನಾಟಕ ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್ ರಮೇಶ್‌ಕುಮಾರ್ ಅವರು ಮಾಧ್ಯಮದವರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ತಹಸೀಲ್ದಾರ್ ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಕೆ.ಆರ್ ರಮೇಶ್‌ಕುಮಾರ್ ಅವರು ಕೋಲಾರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು, ತಕ್ಷಣ ಪತ್ರಕರ್ತರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಕೆ.ಆರ್ ಶ್ರೀಹರ್ಷ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತರಾದ ಕಟ್ಟಡ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಸಂಘದ ಮಾಜಿ ಅಧ್ಯಕ್ಷ ಎನ್. ಬಾಬು ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Friday, July 29, 2022

ಎಸ್. ಗೋವಿಂದರಾಜ ಶ್ರೇಷ್ಠಿ ನಿಧನ

ಎಸ್. ಗೋವಿಂದರಾಜ ಶ್ರೇಷ್ಠಿ
ಭದ್ರಾವತಿ, ಜು. ೨೯: ನಗರದ ಕೇಶವಪುರ ನಿವಾಸಿ, ಆರ್ಯವೈಶ್ಯ ಸಮಾಜದ ಪ್ರಮುಖರಾದ ಎಸ್. ಗೋವಿಂದರಾಜ ಶ್ರೇಷ್ಠಿ (೯೦) ಶುಕ್ರವಾರ ನಿಧನ ಹೊಂದಿದರು.
ಮೂರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಜು.೩೦ರ ಶನಿವಾರ ಬೆಳಿಗ್ಗೆ ೧೧ ಘಂಟೆಗೆ  ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನೆರವೇರಲಿದೆ.
ಆರ್ಯವೈಶ್ಯ ಸಮಾಜ ಸಂತಾಪ ವ್ಯಕ್ತಪಡಿಸುತ್ತದೆ.

ಪ್ರೌಢಶಾಲಾ ಶಿಕ್ಷಕರಿಗೆ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸಮಾಜ ವಿಜ್ಞಾನ ವಿಷಯ ವೇದಿಕೆ ಸಹಯೋಗದೊಂದಿಗೆ ಭದ್ರಾವತಿ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾಜ ವಿಜ್ಞಾನ ವಿಷಯದ ಕಾರ್ಯಾಗಾರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜು. ೨೯: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ವೇದಿಕೆ ಸಹಯೋಗದೊಂದಿಗೆ ನಗರದ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಗೀತಾಂಜಲಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ,  ಸಮಾಜ ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ಸಿ.ಡಿ ಮಂಜುನಾಥ್, ಶಿಕ್ಷಣ ಸಂಯೋಜಕ ರವಿಕುಮಾರ್, ಸಂಪನ್ಮೂಲ ವ್ಯಕ್ತಿ ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
         ಕಾರ್ಯಾಗಾರದಲ್ಲಿ ಕಲಿಕಾ ಚೇತರಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕುಮಾರ್, ಶ್ರೀಧರ್, ಮೌಲ್ಯಮಾಪನ ಕುರಿತು ಮಂಜಪ್ಪ, ೧೦ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಹೊಸ ವಿಷಯಗಳ ಸೇರ್ಪಡೆ ಕುರಿತು ಸತೀಶ್, ಸಿ.ಡಿ ಮಂಜುನಾಥ್ ವಿಷಯ ಮಂಡಿಸಿದರು.
ತಾಲೂಕಿನ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರು, ಸಮಾಜ ವಿಜ್ಞಾನ ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಹೇಮಾ ಮಾಲಿನಿ  ಸ್ವಾಗತಿಸಿ,  ಸಹ ಶಿಕ್ಷಕ ತಿಮ್ಮಣ್ಣ ಗೌಡ ವಂದಿಸಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.