Friday, August 5, 2022

ಪಿ. ಮರಿಯಮ್ಮ ನಿಧನ

   ಪಿ. ಮರಿಯಮ್ಮ
     ಭದ್ರಾವತಿ, ಆ. ೫: ಸುರಗಿತೋಪು ೨ನೇ ಕ್ರಾಸ್ ನಿವಾಸಿ ಪಿ. ಮರಿಯಮ್ಮ(೬೪) ಶುಕ್ರವಾರ ನಿಧನ ಹೊಂದಿದರು.
    ೩ ಗಂಡು, ೨ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದ ಕ್ರೈಸ್ತರ ಸಮಾಧಿಯಲ್ಲಿ ನೆರವೇರಲಿದೆ.

೫ ತಿಂಗಳಿನಿಂದ ಭದ್ರಾ ಜಲಾಶಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರಿಗೆ ವೇತನವಿಲ್ಲ

ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ

 ೫ ತಿಂಗಳಿನಿಂದ ಭದ್ರಾ ಜಲಾಶಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರಿಗೆ ವೇತನವಿಲ್ಲದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಭದ್ರಾವತಿ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವುದು.
ಭದ್ರಾವತಿ, ಆ. ೫ : ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೌಡಿಗಳು, ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು, ಅಕ್ಷರಸ್ಥ ಸಹಾಯಕರು, ಜಲಾಶಯ ನಿರ್ವಾಹಕರು ಹಾಗು ಇನ್ನಿತರ ವರ್ಗದ ಸುಮಾರು ೨೬೦ ನೌಕರರಿಗೆ ಕಳೆದ ಸುಮಾರು ೫ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರು ಗುರುವಾರದಿಂದ ನಗರದ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಉಪವಿಭಾಗ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
    ಭದ್ರಾ ಜಲಾಶಯದ ಬಿಆರ್‌ಪಿ, ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ ಹಾಗು ಡಿಬಿ ಹಳ್ಳಿ ಅಭಿಯಂತರರ ಕಛೇರಿ ವ್ಯಾಪ್ತಿಗೆ ಒಳಪಟ್ಟಂತೆ ಸುಮಾರು ೨೬೦ ನೌಕರರು ಸುಮಾರು ೨೦-೨೫ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷ ಪೂರ್ತಿ ಕೆಲಸ ಮಾಡುವ ಈ ನೌಕರರನ್ನು ಸರ್ಕಾರ ಇದುವರೆಗೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇವರಿಗೆ ಟೆಂಡರ್ ಮುಖಾಂತರ ವೇತನ ಪಾವತಿಸಲಾಗುತ್ತಿದೆ. ಇದರಿಂದಾಗಿ ನೌಕರರಿಗೆ ವೇತನ ಭದ್ರತೆ ಇಲ್ಲದಂತಾಗಿದೆ. ಕಳೆದ ೫ ತಿಂಗಳಿನಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ.
    ಅನಿಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ನೌಕರರು, ತಕ್ಷಣ ಟೆಂಡರ್ ಮುಖಾಂತರ ನೀಡುವ ವೇತನವನ್ನು ರದ್ದು ಮಾಡಬೇಕು. ಪೌರ ಕಾರ್ಮಿಕರಿಗೆ, ಗ್ರಾಮೀಣಾಭಿವೃದ್ಧಿ, ಜಿಲ್ಲಾ ಪಂಚಾಯತ್‌ರಾಜ್ ಇಲಾಖೆಯಲ್ಲಿನ ನೌಕರರಿಗೆ ನೇರವಾಗಿ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ತಾಲೂಕು ಶಾಖೆ ಅಧ್ಯಕ್ಷ ಜಿ.ಡಿ ಸುಬ್ಬರಾಯುಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಖಜಾಂಚಿ ಶ್ರೀಕಾಂತ್ ಸೇರಿದಂತೆ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

ನ್ಯಾಯವಾದಿ ಪಿ.ಬಿ ಅಶೋಕ್ ನಿಧನ

ಪಿ.ಬಿ ಅಶೋಕ್
    ಭದ್ರಾವತಿ, ಆ. ೫: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯಾಯವಾದಿ ಪಿ.ಬಿ ಅಶೋಕ್(೪೯) ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ ವರ್ಷಗಳಿಗೂ ಹೆಚ್ಚು ಕಾಲದಿಂದ ನ್ಯಾಯವಾದಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನ್ಯಾಯವಾದಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಯಾಗಿ ಹಾಗು ತಾಲೂಕು ವಕೀಲರ ಸಂಘದ ಪದಾಧಿಕಾರಿಯಾಗಿ ಸಹ ಸೇವೆ ಸಲ್ಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಅಂತರಗಂಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.
    ಇವರ ನಿಧನಕ್ಕೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Thursday, August 4, 2022

ಅರ್ಧ ತಾಸು ಸುರಿದ ಬಾರಿ ಮಳೆಗೆ : ತಗ್ಗು ಪ್ರದೇಶಗಳು ಜಲಾವೃತ

ಬಿಳಿಕಿ ವೃತ್ತದಲ್ಲಿ ಮಂಡಿವರೆಗೂ ನೀರು : ವಾಹನ ಸವಾರರ ಪರದಾಟ

ಭದ್ರಾವತಿ ಬಿಳಿಕಿ ವೃತ್ತದಲ್ಲಿ ಗುರುವಾರ ಸಂಜೆ ಸುರಿದ ಬಾರಿ ಮಳೆಯಿಂದಾಗಿ ರಸ್ತೆ ಮೇಲೆ ಮಂಡಿವರೆಗೂ ನೀರು ನಿಂತುಕೊಂಡಿರುವುದು.
ಭದ್ರಾವತಿ, ಆ. ೪: ನಗರದಲ್ಲಿ ಗುರುವಾರ ಸಂಜೆ ಏಕಾಏಕಿ ಸುಮಾರು ಅರ್ಧ ತಾಸುಗಳಿಗೂ ಹೆಚ್ಚು ಸಮಯ ಸುರಿದ ಬಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಘಟನೆಗಳು ನಡೆದಿವೆ.
ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಕೆಲ ಸಮಯ ಕೆರೆಯಂತೆ ಕಂಡು ಬಂದಿದ್ದು, ಮಳೆ ನಿಂತ ನಂತರ ನೀರಿನ ಮಟ್ಟ ಸಹ ಇಳಿಮುಖಗೊಂಡಿದೆ.
ನಗರಸಭೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ  ಚರಂಡಿಗಳಲ್ಲಿ ನೀರು ನಿಂತು ಕೊಂಡು ರಸ್ತೆ ಮೇಲೆ ಹರಿಯುತ್ತಿರುವುದು ಕಂಡು ಬಂದಿತು.
ಬಿಳಿಕಿ ವೃತ್ತದಲ್ಲಿ ರಸ್ತೆಯ ಎರಡು ಬದಿಯಲ್ಲೂ ಕಾಲುವೆಗಳು ಹರಿದು ಹೋಗಿದ್ದು, ಕಾಲುವೆ ನೀರಿನೊಂದಿಗೆ ಮಳೆ ನೀರು ಸೇರಿಕೊಂಡು  ರಸ್ತೆಯಲ್ಲಿ  ಮಂಡಿವರೆಗೂ ನಿಂತುಕೊಂಡಿದ್ದು, ಇದರಿಂದಾಗಿ ವಾಹನ ಸವಾರರು ಪರಾದಾಡುವಂತಾಯಿತು. ಇದೆ ರೀತಿ ಹಲವೆಡೆ ಮಳೆ ನೀರಿನಿಂದ ಸಮಸ್ಯೆ ಎದುರಾಗಿರುವುದು ಕಂಡು ಬಂದಿತು.    


ಭದ್ರಾವತಿ ಬಿಳಿಕಿ ವೃತ್ತದಲ್ಲಿ ಗುರುವಾರ ಸಂಜೆ ಸುರಿದ ಬಾರಿ ಮಳೆಯಿಂದಾಗಿ ರಸ್ತೆ ಮೇಲೆ ಮಂಡಿವರೆಗೂ ನೀರು ನಿಂತುಕೊಂಡಿದ್ದು, ಮುಂದೆ ಸಂಚರಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿರುವ ವಾಹನಗಳು.

ಹಿಂದಿ ಶಿಕ್ಷಕಿ ತ್ರಿವೇಣಿಗೆ ಗೌರವ ಡಾಕ್ಟರೇಟ್ ಪದವಿ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಕನ್ನಡ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಎನ್. ತ್ರಿವೇಣಿ ಅವರಿಗೆ ಏಷಿಯಾ ವೇದಿಕ್ ಕಲ್ಚರ್ ರಿಸರ್ಜ್ ಯುನವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
    ಭದ್ರಾವತಿ, ಆ. ೪: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಕನ್ನಡ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಎನ್. ತ್ರಿವೇಣಿ ಅವರಿಗೆ ಏಷಿಯಾ ವೇದಿಕ್ ಕಲ್ಚರ್ ರಿಸರ್ಜ್ ಯುನವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
    ತ್ರಿವೇಣಿ ಅವರ ಕಲೆ, ಸಾಮಾಜಿಕ ಹಾಗು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಸಾಧಕರ ಪದವಿ ವಿತರಣಾ ಸಮಾರಂಭದಲ್ಲಿ ತ್ರಿವೇಣಿ ಅವರು ಪದವಿ ಸ್ವೀಕರಿಸಿದ್ದಾರೆ.
    ಇವರು ಹಲವಾರು ವರ್ಷಗಳಿಂದ ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಹಾಮಾರಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಭರತನಾಟ್ಯ ನೃತ್ಯ ಕಲಾವಿದೆಯಾಗಿದ್ದು, ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಇವರ ಸಾಧನೆಗೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ, ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಕಬಡ್ಡಿ ಕೇಸರಿ ಪ್ರಶಸ್ತಿ ಪುರಸ್ಕೃತ ಎಚ್.ಆರ್ ರಂಗನಾಥ್ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಉಚಿತ ಮೂಳೆ-ಕೀಲು ತಪಾಸಣೆ ಶಿಬಿರ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ತನ್ನ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್)ಯೊ೦ಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಸೈಲ್ ಸ್ವರ್ಣ ಜಯಂತಿ ಅಂಗವಾಗಿ ಉಚಿತ 'ಮೂಳೆ ಮತ್ತು ಕೀಲು'  ತಪಾಸಣೆ ಶಿಬಿರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
    ಭದ್ರಾವತಿ, ಆ. ೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ತನ್ನ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್)ಯೊ೦ಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಸೈಲ್ ಸ್ವರ್ಣ ಜಯಂತಿ ಅಂಗವಾಗಿ ಉಚಿತ 'ಮೂಳೆ ಮತ್ತು ಕೀಲು'  ತಪಾಸಣೆ ಶಿಬಿರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
    ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರವನ್ನು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟಿಸಿದರು.
    ವಿಐಎಸ್‌ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಎಂ.ವೈ ಸುರೇಶ್, ಸುಬ್ಬಯ್ಯ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಗ ವಿಭಾಗದ ಮುಖ್ಯಸ್ಥರಾದ ಡಾ. ಹರೀಶ್ ಪೈ, ಡಾ. ಸಂದೀಪ್ ಕುಬ್ಸಾದ್, ಸಹಾಯಕ ಮುಖ್ಯಸ್ಥ ಡಾ. ಶರತ್, ಸಹಾಯಕ ವೈದ್ಯರಾದ ಡಾ. ಶಾನ್ ಮತ್ತು ಡಾ. ಶಾಜಿಯಾ ಅವರನ್ನೊಳಗೊಂಡ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು. ಕಾರ್ಖಾನೆಯ ಕಾಯಂ, ಗುತ್ತಿಗೆ ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರು ಸೇರಿದಂತೆ ಒಟ್ಟು ೭೬ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.
    ವಿಐಎಸ್‌ಎಲ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ತನ್ನ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್)ಯೊ೦ಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಸೈಲ್ ಸ್ವರ್ಣ ಜಯಂತಿ ಅಂಗವಾಗಿ ಉಚಿತ 'ಮೂಳೆ ಮತ್ತು ಕೀಲು'  ತಪಾಸಣೆ ಶಿಬಿರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು.

ಯುವ ಸಮೂಹ ಮೋಸ, ವಂಚನೆ ವಿರುದ್ಧ ಹೋರಾಟ ನಡೆಸಬೇಕಿದೆ : ಡಿ. ಮಂಜುನಾಥ್

ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯಕ್ಕೆ ಭದ್ರಾವತಿ ತಾಲೂಕಿನ ಕೊಡುಗೆ ಕುರಿತ ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ, ಡಿ. ಮಂಜುನಾಥ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಆ. ೪: ಪ್ರಸ್ತುತ ದೇಶದಲ್ಲಿ ನಂಬಿಕೆ ಎಂಬುದು ದೂರವಾಗಿದ್ದು, ಮೋಸ, ವಂಚನೆ ಹೆಚ್ಚಾಗಿದೆ. ಇದರ ವಿರುದ್ಧ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಗುರುವಾರ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯಕ್ಕೆ ಭದ್ರಾವತಿ ತಾಲೂಕಿನ ಕೊಡುಗೆ ಕುರಿತ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು.
    ಬ್ರಿಟಿಷರು ಈ ದೇಶದ ಜನರನ್ನು ದಾಸ್ಯಕ್ಕೆ ಒಳಪಡಿಸಿ ೨೦೦ ವರ್ಷಗಳ ಆಳ್ವಿಕೆ ನಡೆಸಿದ್ದು, ಇಂತಹ ಸಂದರ್ಭದಲ್ಲಿ ದಾಸ್ಯಕ್ಕೆ ಒಳಗಾದ ದೇಶದ ಜನರಲ್ಲಿ ಮಹಾತ್ಮಗಾಂಧಿ ಒಳಗೊಂಡಂತೆ ಅನೇಕ ರಾಷ್ಟ್ರ ನಾಯಕರು ದೇಶಭಕ್ತಿ ಅಭಿವ್ಯಕ್ತಿಗೊಳಿಸಿ ಜಾಗೃತಿ ಮೂಡಿಸುವ ಮೂಲಕ ಹೋರಾಟಕ್ಕೆ ಪ್ರೇರೇಪಿಸಿದರು. ಅಂದು ದೇಶದ ಜನರು ರಾಷ್ಟ್ರ ನಾಯಕರ ಮೇಲೆ ನಂಬಿಕೆ ಹೊಂದಿದ್ದರು. ಸಾವಿರಾರು ಯುವ ಸಮೂಹ ತಮ್ಮ ಶೈಕ್ಷಣಿಕ ಬದುಕನ್ನು ಸ್ವಾತಂತ್ರ್ಯಕ್ಕಾಗಿ ಬಲಿಕೊಟ್ಟು ಹೋರಾಟಕ್ಕೆ ಧುಮುಕಿದರು. ಇದರ ಫಲವಾಗಿ ನಾವೆಲ್ಲರೂ ಇಂದು ೭೫ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸುವಂತಾಗಿದೆ ಎಂದರು.
    ೭೫ರ ಸ್ವಾತಂತ್ರ್ಯ ಸಂಭ್ರಮ ಕೇವಲ ಧ್ವಜಗಳನ್ನು ಹಾರಿಸುವುದಲ್ಲ ಬದಲಾಗಿ ನಮ್ಮ ಮುಂದಿನ ಸವಾಲುಗಳ ಬಗ್ಗೆ ಅವಲೋಕಿಸುವುದು, ಹೋರಾಟಗಳನ್ನು ರೂಪಿಸುವುದಾಗಿದೆ. ಪ್ರಸ್ತುತ ದೇಶದಲ್ಲಿ ನಂಬಿಕೆ ಇಲ್ಲವಾಗಿದೆ. ಮೋಸ, ವಂಚನೆ ಅಧಿಕವಾಗಿದೆ. ನಾವೆಲ್ಲರೂ ಸಂವಿಧಾನವನ್ನು ಗೌರವಿಸುವ ಮೂಲಕ ಅದರ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವ ಜೊತೆಗೆ ಭವಿಷ್ಯದ ಸರ್ಕಾರ ಆಯ್ಕೆ ಮಾಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
    ಇಂದು ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಳವಾಗಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕು. ಮುಂದೊಂದು ದಿನ ಯಾವುದೋ ಕಾರ್ಖಾನೆಯಲ್ಲಿ ನೌಕರನಾಗಿರುವ ಬದಲು ಒಂದಿಷ್ಟು ಜನರಿಗೆ ಉದ್ಯೋಗ ನೀಡುವಷ್ಟರ ಮಟ್ಟಿಗೆ ಬೆಳೆಯಬೇಕೆಂಬ ಗುರಿ ಹೊಂದಬೇಕು. ಆ ನಿಟ್ಟಿನಲ್ಲಿ ಮುನ್ನಡೆಯಬೇಕೆಂದು ಕರೆ ನೀಡಿದರು.
    ಉದ್ಯಮಿ ಬಿ.ಕೆ ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿದರು. ಪಾಂಶುಪಾಲ ಮಹಾಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ತಾಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ ಉಪನ್ಯಾಸ ನೀಡಿದರು.
    ಹಿರಿಯ ಸಾಹಿತಿ ಜಿ.ವಿ ಸಂಗಮೇಶ್ವರ್, ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕಾರ್ಯದರ್ಶಿ ಎಂ.ಈ ಜಗದೀಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಉಪನ್ಯಾಸಕ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್ ನಿರೂಪಿಸಿದರು. ಕೆ.ಟಿ ಪ್ರಸನ್ನ, ಬಿ. ಗುರು, ಉಮರ್ ಕೋಯ, ಉಪನ್ಯಾಸಕ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.