Saturday, August 13, 2022

೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ : ೨೫೦ ವಿದ್ಯಾರ್ಥಿಗಳಿಂದ ಆಕರ್ಷಕ ಮಾದರಿಗಳು

ವಿದ್ಯಾರ್ಥಿಗಳು, ಶಿಕ್ಷಕರ ಪರಿಶ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೆಚ್ಚುಗೆ

ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸುಮಾರು ೨೫೦ ವಿದ್ಯಾರ್ಥಿಗಳು ಆಕರ್ಷಕ ಮಾದರಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿದ್ಯಾರ್ಥಿಗಳು ಹಾಗು ಶಿಕ್ಷಕರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು



    ಭದ್ರಾವತಿ, ಆ. ೧೩ : ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ತಾಲೂಕಿನಾದ್ಯಂತ ವಿಭಿನ್ನವಾಗಿ ನಡೆಯುತ್ತಿದ್ದು, ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸುಮಾರು ೨೫೦ ವಿದ್ಯಾರ್ಥಿಗಳು ಆಕರ್ಷಕ ಮಾದರಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.


    ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿರುವ ಮಾದರಿಗಳನ್ನು ಎಲ್ಲಾ ವಿದ್ಯಾರ್ಥಿಗಳು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.
    ವಿದ್ಯಾರ್ಥಿಗಳು ಕಾಗದ, ಹಣ್ಣು, ತರಕಾರಿ, ಅನ್ನ, ದವಸ ಧಾನ್ಯಗಳು ಸೇರಿದಂತೆ ದಿನ ಬಳಕೆ ವಸ್ತುಗಳನ್ನು ಬಳಸಿ ತಮ್ಮಲ್ಲಿನ ಪ್ರತಿಭೆಗಳನ್ನು   ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಂದು ಮಾದರಿ ಸಹ ಆಕರ್ಷಕವಾಗಿದ್ದು, ದೇಶದ ಸ್ವಾತಂತ್ರ್ಯ ಯೋಧರು, ಸಂಸ್ಕೃತಿ, ಮಹಾನ್ ಆದರ್ಶ ವ್ಯಕ್ತಿಗಳು, ಐತಿಹಾಸಿಕ ಸ್ಮಾರಕಗಳು, ಕೃಷಿ, ಶಿಕ್ಷಣ, ಕೈಗಾರಿಕೆ ತಂತ್ರಜ್ಞಾನ ಬೆಳವಣಿಗೆ, ಭಾರತೀಯ ಸೇನೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ವಿವಿಧತೆಯಲ್ಲಿ ಏಕತೆ ಪ್ರತಿಪಾದನೆ ಸೇರಿದಂತೆ ಹಲವಾರು ವಿಚಾರಗಳ ಮಾಹಿತಿ ಕೋಶಗಳಂತೆ ಕಂಡು ಬಂದವು.


    ಮಾದರಿಗಳನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿದ್ಯಾರ್ಥಿಗಳು ಹಾಗು ಶಿಕ್ಷಕರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು
    ಶಾಲಾ ಸಂಯೋಜಕರಾದ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್,   ಉಪಪ್ರಾಂಶುಪಾಲ ಪ್ರಸನ್ನ, ಪ್ರೌಢಶಾಲಾ ಕನ್ನಡ ವಿಭಾಗದ ಮುಖ್ಯ ಶಿಕ್ಷಕರಾದ ಬಿ.ಸಿ ವಿನಯ್, ಬಿ.ವಿ ಸುಜಾತ, ಪೂರ್ವಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.


ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿರುವ ಮಾದರಿ.  

Friday, August 12, 2022

ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಆಟೋ ರ್‍ಯಾಲಿ, ಬೈಕ್ ರ್‍ಯಾಲಿ

ಭದ್ರಾವತಿ, ಆ. ೧೨ : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ 'ಹರ್ ಘರ್ ತಿರಂಗಾ' ಅಭಿಯಾನದ ಪ್ರಯುಕ್ತ ನಗರಸಭೆ ವತಿಯಿಂದ ಆ.೧೩ರಂದು ೮.೩೦ಕ್ಕೆ ಆಟೋ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಿಂದ, ತರೀಕೆರೆ ರಸ್ತೆಯ ಗಾಂಧಿ ವೃತ್ತದವರೆಗೆ ರ್‍ಯಾಲಿ ನಡೆಯುತ್ತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.



    ಜೈನ ಸಮಾಜದಿಂದ ಬೈಕ್ ರ್‍ಯಾಲಿ :
    'ಹರ್ ಘರ್ ತಿರಂಗಾ' ಅಭಿಯಾನದ ಪ್ರಯುಕ್ತ ಹಳೇನಗರದ ಜೈನ ಸಮಾಜದ ವತಿಯಿಂದ ಆ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
    ರ್‍ಯಾಲಿ ಕನಕಮಂಟಪ ಮೈದಾನದಿಂದ ಆರಂಭಗೊಂಡು ರಂಗಪ್ಪ ವೃತ್ತ, ಮಾಧವಚಾರ್‌ವೃತ್ತ, ಗಾಂಧಿ ವೃತ್ತ, ಹಾಲಪ್ಪ ವೃತ್ತ ಮತ್ತು ಅಂಬೇಡ್ಕರ್ ವೃತ್ತದವರೆಗೆ ಸಾಗಿ ಹೊಸಸೇತುವೆ ಮೂಲಕ ಜೈನ ಮಂದಿರ ತಲುಪಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜೈನ ಸಮಾಜದ ಮುಖಂಡ ಸಂಪತ್‌ರಾಜ್ ಬಾಂಟಿಯಾ ಕೋರಿದ್ದಾರೆ.

೩ ದಿನಗಳ ರಾಯರ ಆರಾಧನೆ ಮಹೋತ್ಸವ : ಪಾದಪೂಜೆ ಉತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ೩ ದಿನಗಳ ಕಾಲ ಆರಾಧನೆ ಮಹೋತ್ಸವ ಜರುಗುತ್ತಿದ್ದು, ಮೊದಲ ದಿನ ಶುಕ್ರವಾರ ಭಕ್ತರ ಮನೆಗಳಿಗೆ ಪಾದಪೂಜೆ ಉತ್ಸವ ನಡೆಯಿತು.
    ಭದ್ರಾವತಿ, ಆ. ೧೨: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ೩ ದಿನಗಳ ಕಾಲ ಆರಾಧನೆ ಮಹೋತ್ಸವ ಜರುಗುತ್ತಿದ್ದು, ಮೊದಲ ದಿನ ಶುಕ್ರವಾರ ಭಕ್ತರ ಮನೆಗಳಿಗೆ ಪಾದಪೂಜೆ ಉತ್ಸವ ನಡೆಯಿತು.
.    ಬೆಳಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.   ಸೇವಾಕರ್ತರು ರಾಯರ ಉತ್ಸವ ಮೂರ್ತಿ ಹಾಗು ಪಾದಗಳೊಂದಿಗೆ ರಾಷ್ಟ್ರ ಧ್ವಜ ಹಿಡಿದು ಮಂಗಳ ವಾದ್ಯಗಳೊಂದಿಗೆ ಭಕ್ತರ ಮನೆಗಳಿಗೆ ತೆರಳಿದರು.
    ದೇವಸ್ಥಾನದ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ, ನಿರಂಜನಚಾರ್, ಪವನ್‌ಕುಮಾರ್ ಉಡುಪ, ಪ್ರಮೋದ್, ವೇದಬ್ರಹ್ಮ ಗೋಪಾಲಕೃಷ್ಣಚಾರ್, ಶ್ರೀನಿವಾಸಚಾರ್, ಸತ್ಯನಾರಾಯಣ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಶ್ರೀ ಶನೈಶ್ವರಸ್ವಾಮಿಯ ಉತ್ಸವ ಮೂರ್ತಿ ಚರಪ್ರತಿಷ್ಠಾಪನಾ ಮಹೋತ್ಸವ

ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಶನೈಶ್ವರ, ಶ್ರೀ ಗಣಪತಿ, ಶ್ರೀ ಕೆಂಚಮ್ಮ ಮತ್ತು ಶ್ರೀ ಭೂತಪ್ಪನವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಶನೈಶ್ವರಸ್ವಾಮಿಯ ಉತ್ಸವ ಮೂರ್ತಿ ಚರಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಆ. ೧೨: ಹಳೇನಗರದ ಭೂತನಗುಡಿ ಶ್ರೀ ಶನೈಶ್ವರ, ಶ್ರೀ ಗಣಪತಿ, ಶ್ರೀ ಕೆಂಚಮ್ಮ ಮತ್ತು ಶ್ರೀ ಭೂತಪ್ಪನವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಶನೈಶ್ವರಸ್ವಾಮಿಯ ಉತ್ಸವ ಮೂರ್ತಿ ಚರಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಮಹೋತ್ಸವದ ಅಂಗವಾಗಿ ವಿಶೇಷ ಅಲಂಕಾರ, ಹೋಮ-ಹವನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ದೇವಸ್ಥಾನದ ಅರ್ಚಕರು,  ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ಸೇವಾಕರ್ತರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

೭೫ನೇ ಸ್ವಾತಂತ್ರ್ಯೋತ್ಸವ ನೆನಪಿಗೆ ಹಿರಿಯ ಸದಸ್ಯರಿಗೆ ಗೌರವಾರ್ಪಣೆ, ನೌಕರರ ವರ್ಗಕ್ಕೆ ಸನ್ಮಾನ, ಪ್ರತಿಭಾ ಪುರಸ್ಕಾರ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ ಮಾತನಾಡಿದರು.
    ಭದ್ರಾವತಿ, ಆ. ೧೨: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ಆ.೧೪ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಹಳೇನಗರದ ವೀರಶೈವ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ, ಉಡಿ ತುಂಬುವ ಕಾರ್ಯಕ್ರಮ ಮತ್ತು ೭೫ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗೆ ಮಹಾಸಭಾದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗು ಸಮಾಜದ ನೌಕರರ ವರ್ಗಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಸಭಾ ಗೌರವಾಧ್ಯಕ್ಷರಾದ ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಜಿಲ್ಲಾಧ್ಯಕ್ಷ ರುದ್ರಮುನಿ ಎಸ್ ಸಜ್ಜನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಕರ್ನಾಟಕ ರಾಜ್ಯ ಒಳಚರಂಡಿ ಹಾಗು ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಜಿಲ್ಲಾ ಖಜಾನೆ ಉಪನಿರ್ದೇಶಕಿ ಎಚ್.ಎಸ್ ಸಾವಿತ್ರಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಹಟ್ಟಿ ಚಿನ್ನದ ಗಣಿ ನಿರ್ದೇಶಕ ಎಸ್. ಹಾಲೇಶ್ ಕೂಡ್ಲಿಗೆರೆ ಮತ್ತು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್. ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನಡೆಸಿಕೊಡಲಿದ್ದು, ಜಿ. ಸುರೇಶಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ತಾಲೂಕು ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್ ರೇವಪ್ಪ, ಖಜಾಂಚಿ ಜಿ.ಎಂ ಮೂರ್ತಿ, ನಿರ್ದೇಶಕಿಯರಾದ ಆರ್.ಎಸ್ ಶೋಭಾ, ಸೌಭಾಗ್ಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಕವಿತಾ ಸುರೇಶ್, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ್, ಆನಂದ, ಬಿ.ಎಂ ರಮೇಶ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಾಪುರುಷರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಿ

 


ಭದ್ರಾವತಿ, ಆ. ೧೨: ಮಹಾಪುರುಷರ ಜಯಂತಿಗಳ ಆಚರಣೆಗಳಿಗೆ ನೀಡುವಷ್ಟು ಮಹತ್ವವನ್ನು ಅವರ ಆದರ್ಶತನಗಳನ್ನು ಅಳವಡಿಸಿಕೊಳ್ಳುವ ಕಡೆಗೂ ನೀಡಬೇಕೆಂದು ಸಾಹಿತಿ, ಚಿಂತಕ ರಾಜೇಂದ್ರ ಬುರುಡಿಕಟ್ಟಿ ಹೇಳಿದರು.

ಅವರು ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ನುಲಿಯ ಚಂದಯ್ಯನವರ ೯೧೫ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವುಗಳು ಮಹಾಪುರುಷರ ಜಯಂತಿ ಆಚರಣೆಯನ್ನು ಬಹಳ ವಿಜೃಂಭಣೆಯಿಂದ, ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಆಚರಣೆಯ ಎಲ್ಲಾ ವಿಧಾನಗಳನ್ನು ಪಾಲನೆ ಮಾಡುತ್ತೇವೆ. ಆದರೆ ಅವರ ಆದರ್ಶತನಗಳನ್ನು ನಾವುಗಳು ಮೈಗೂಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಮಹಾಪುರಷರ ಜಯಂತಿ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

೧೨ನೇ ಶತಮಾನ ಒಂದು ಕ್ರಾಂತಿ ಯುಗವಾಗಿದ್ದು, ಜಗಜ್ಯೋತಿ ಬಸವಣ್ಣನವರು ಕೈಗೊಂಡ ನಿರ್ಧಾರಗಳು ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಿದವು. ಲಿಂಗಾಯತ ಎಂಬುದು ಒಂದು ಧರ್ಮವಲ್ಲ, ಜಾತಿಯಲ್ಲ ಬದಲಾಗಿ ಕಾಯಕ ಸಮಾಜವಾಗಿದೆ. ೧೨ನೇ ಶತಮಾನ ಸಮಾಜದಲ್ಲಿ ಎಲ್ಲರೂ ಸಮಾನರು, ಯಾವುದೇ ಬೇಧಭಾವವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ನುಲಿಯ ಚಂದಯ್ಯನವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಚಿಂತನೆಗಳು, ಆದರ್ಶಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ ಎಂದರು.

ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್, ನಗರಸಭಾ ಸದಸ್ಯ ಬಿ.ಕೆ ಮೋಹನ್, ಮಾಜಿ ಸದಸ್ಯ ಶಿವರಾಜ್, ರಮೇಶ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಬಿ.ಎಸ್ ಗಣೇಶ್, ನಾಗೇಶ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ ಹಾಗು ಕೊರಚ-ಕೊರಮ ಸಮಾಜದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ಸಮುದಾಯ ಸಂಘಟಕ ಈಶ್ವರಪ್ಪ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಸಿ. ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನಕ ವಿದ್ಯಾಸಂಸ್ಥೆಯ ಆರ್. ಸಂಜನ, ಎಸ್. ನಂದಿತ ಮತ್ತು ಪುಷ್ಪ ತಂಡದವರು ಪ್ರಾರ್ಥಿಸಿದರು.

Thursday, August 11, 2022

ಮಕ್ಕಳು ಜಂತುಹುಳು ಬಾಧೆ ಬಗ್ಗೆ ಹೆಚ್ಚಿನ ಗಮನ ನೀಡಿ : ಡಾ. ಎಂ.ವಿ ಅಶೋಕ್

ಭದ್ರಾವತಿ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜು. ೧೧:  ಮಕ್ಕಳ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿವಹಿಸಲಾಗಿದ್ದು, ಜಂತುಹುಳು ಬಾಧೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುತ್ತಿದೆ. ಕಡ್ಡಾಯವಾಗಿ ಮಕ್ಕಳು ಪ್ರತಿ ೬ ತಿಂಗಳಿಗೆ ಒಂದು ಮಾತ್ರೆ ತೆಗೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಂತುಹುಳು ಬಾಧೆಯಿಂದಾಗಿ ಬಹಳಷ್ಟು ಮಕ್ಕಳು ಅಪೌಷ್ಠಿಕತೆ ಹಾಗು ರಕ್ತಹೀನತೆಯಿಂದ ಬಳಲುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವ ಸರ್ಕಾರ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದರು.
    ಜಂತುಹುಳು ಬಾಧೆ ತಡೆಗಟ್ಟಲು ಮಕ್ಕಳು ತಮ್ಮ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಗಮನ ನೀಡಬೇಕು. ಜೊತೆಗೆ ಶುದ್ಧ ಆಹಾರ ಸೇವನೆ ಮಾಡಬೇಕೆಂದರು.
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ನೆಹರು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಚ್ಯುತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ಸೇರಿದಂತೆ ಇನ್ನಿತರರು ಜಂತು ಬಾಧೆ ಹಾಗು ನಿರ್ಮೂಲನೆಗೆ ಅನುಸರಿಸಬೇಕಾದ ಕ್ರಮ ಕುರಿತು ವಿತರಿಸಿದರು.
    ಟಿಎಲ್‌ಎಚ್‌ವಿ ಪ್ರೇಮಕುಮಾರಿ, ಆಶಾ ಮೆಂಟರ್ ಬಿ.ಎಂ ವಸಂತ, ಐಸಿಡಿಎಸ್ ಶಾರದ, ದೈಹಿಕ ಶಿಕ್ಷಕಿ ಜಿ.ಕೆ ದಿವ್ಯ, ಸಹ ಶಿಕ್ಷಕರಾದ ಚಂದ್ರನಾಯ್ಕ, ಡಿ.ಎ ಅಶ್ವಥ್, ಎನ್. ಮಮತ, ಎಚ್.ಜಿ ಗೀತಾ, ಸಲ್ಮಾ, ಜಿ.ಡಿ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್ ರವೀಂದ್ರ ಸ್ವಾಗತಿಸಿದರು. ಕವಿತಾ ವಂದಿಸಿದರು.