Friday, August 12, 2022

ಮಹಾಪುರುಷರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಿ

 


ಭದ್ರಾವತಿ, ಆ. ೧೨: ಮಹಾಪುರುಷರ ಜಯಂತಿಗಳ ಆಚರಣೆಗಳಿಗೆ ನೀಡುವಷ್ಟು ಮಹತ್ವವನ್ನು ಅವರ ಆದರ್ಶತನಗಳನ್ನು ಅಳವಡಿಸಿಕೊಳ್ಳುವ ಕಡೆಗೂ ನೀಡಬೇಕೆಂದು ಸಾಹಿತಿ, ಚಿಂತಕ ರಾಜೇಂದ್ರ ಬುರುಡಿಕಟ್ಟಿ ಹೇಳಿದರು.

ಅವರು ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ನುಲಿಯ ಚಂದಯ್ಯನವರ ೯೧೫ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವುಗಳು ಮಹಾಪುರುಷರ ಜಯಂತಿ ಆಚರಣೆಯನ್ನು ಬಹಳ ವಿಜೃಂಭಣೆಯಿಂದ, ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಆಚರಣೆಯ ಎಲ್ಲಾ ವಿಧಾನಗಳನ್ನು ಪಾಲನೆ ಮಾಡುತ್ತೇವೆ. ಆದರೆ ಅವರ ಆದರ್ಶತನಗಳನ್ನು ನಾವುಗಳು ಮೈಗೂಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಮಹಾಪುರಷರ ಜಯಂತಿ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

೧೨ನೇ ಶತಮಾನ ಒಂದು ಕ್ರಾಂತಿ ಯುಗವಾಗಿದ್ದು, ಜಗಜ್ಯೋತಿ ಬಸವಣ್ಣನವರು ಕೈಗೊಂಡ ನಿರ್ಧಾರಗಳು ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಿದವು. ಲಿಂಗಾಯತ ಎಂಬುದು ಒಂದು ಧರ್ಮವಲ್ಲ, ಜಾತಿಯಲ್ಲ ಬದಲಾಗಿ ಕಾಯಕ ಸಮಾಜವಾಗಿದೆ. ೧೨ನೇ ಶತಮಾನ ಸಮಾಜದಲ್ಲಿ ಎಲ್ಲರೂ ಸಮಾನರು, ಯಾವುದೇ ಬೇಧಭಾವವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ನುಲಿಯ ಚಂದಯ್ಯನವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಚಿಂತನೆಗಳು, ಆದರ್ಶಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ ಎಂದರು.

ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್, ನಗರಸಭಾ ಸದಸ್ಯ ಬಿ.ಕೆ ಮೋಹನ್, ಮಾಜಿ ಸದಸ್ಯ ಶಿವರಾಜ್, ರಮೇಶ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಬಿ.ಎಸ್ ಗಣೇಶ್, ನಾಗೇಶ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ ಹಾಗು ಕೊರಚ-ಕೊರಮ ಸಮಾಜದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ಸಮುದಾಯ ಸಂಘಟಕ ಈಶ್ವರಪ್ಪ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಸಿ. ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನಕ ವಿದ್ಯಾಸಂಸ್ಥೆಯ ಆರ್. ಸಂಜನ, ಎಸ್. ನಂದಿತ ಮತ್ತು ಪುಷ್ಪ ತಂಡದವರು ಪ್ರಾರ್ಥಿಸಿದರು.

No comments:

Post a Comment