ವೈಯಕ್ತಿಕ ಗಲಾಟೆ ಕೋಮು ಗಲಭೆಯಾಗಿ ಬಿಂಬಿಸಲು ಯತ್ನ : ಕಾಂಗ್ರೆಸ್ ಮುಖಂಡರ ಆರೋಪ
![](https://blogger.googleusercontent.com/img/a/AVvXsEgwUVUWiiQ4sGKiAWwwDPlMC6_5WgQR7Iob6ENu-PKcalZrnCgJS-93eJpyP6DnP2lGjbdfSnOMiyVjPJYa9OvPj_ivhU028UFN-2_sGcDLH5Cw5yf0gVy7RKeTSNyeCHTEbtFKqmKrgMO0X26NkkfkKoMwA0_SGcthRdoH85A8HoHkOY8_IajdnTIaog=w400-h180-rw)
ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು.
ಭದ್ರಾವತಿ, ಆ. ೧೮ : ಹಿರಿಯ ರಾಜಕಾರಣಿ, ಮಾಜಿ ಉಪಮುಖ್ಯಮಂತ್ರಿಯಾಗಿರುವ ಕೆ.ಎಸ್ ಈಶ್ವರಪ್ಪನವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಇಬ್ಬರ ನಡುವೆ ವೈಯಕ್ತಿಕವಾಗಿ ನಡೆದಿರುವ ಗಲಾಟೆಯನ್ನು ಕೋಮು ಗಲಭೆಯಾಗಿ ಬಿಂಬಿಸಲು ಯತ್ನಿಸಿರುವುದು ಅವರಿಗೆ ಶೋಭೆ ತರುವುದಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಕ್ಷೇತ್ರದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಕಳೆದ ೩ ದಿನಗಳ ಹಿಂದೆ ಇಬ್ಬರು ವೈಯಕ್ತಿಕವಾಗಿ ಗಲಾಟೆ ಮಾಡಿಕೊಂಡಿದ್ದು, ಇದನ್ನು ಹಿಂದೂ ಮುಸ್ಲಿಂ ಗಲಾಟೆಯಾಗಿ ಬಿಂಬಿಸಲು ಮುಂದಾಗಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
ಪೊಲೀಸರು ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಕಡೆ ಗಮನ ಹರಿಸದ ಈಶ್ವರಪ್ಪನವರು ಈ ಗಲಾಟೆ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಲ್ಲದೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.
ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಇದುವರೆಗೂ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಬಗ್ಗೆ ಮೊದಲು ಗಮನ ಹರಿಸಲಿ ಎಂದು ಸಲಹೆ ವ್ಯಕ್ತಪಡಿಸಿದರು.
ಈಶ್ವರಪ್ಪನವರ ಹೇಳಿಕೆಯಿಂದ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆತ :
ಸಿದ್ದರಾಮಯ್ಯನವರ ಹೇಳಿಕೆಯನ್ನು ಈಶ್ವರಪ್ಪನವರು ತಿರುಚಿದ್ದಾರೆ. ಯಾವುದೇ ಸೂಕ್ಷ್ಮ ಪ್ರದೇಶದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲು ಅನುಮತಿ ನೀಡುವಾಗ ಎಚ್ಚರ ವಹಿಸಬೇಕು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ. ಆದರೆ ಈಶ್ವರಪ್ಪನವರು ಮುಸ್ಲಿಂರಿಗೆ ಬೇರೆ ಜಾಗ, ಹಿಂದೂಗಳಿಗೆ ಬೇರೆ ಜಾಗ ಎಂದು ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪನವರ ಇಂತಹ ಹೇಳಿಕೆಯಿಂದಾಗಿ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆತ ಘಟನೆ ನಡೆದಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮುಖಂಡರಾದ ಟಿ.ವಿ ಗೋವಿಂದಸ್ವಾಮಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.