ಭದ್ರಾವತಿ ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
ಭದ್ರಾವತಿ, ಆ. ೩೦: ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು, ವಾರ್ಡ್‌ನ ಎಲ್ಲಾ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಹಬ್ಬದ ಮಹತ್ವ ತಿಳಿಸಿಕೊಡುವ ಜೊತೆಗೆ ವಾರ್ಡ್ ನಿವಾಸಿಗಳ ನೋವು-ನಲಿವುಗಳಿಗಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂಬ ಸಂದೇಶವನ್ನು ವಿಜಯ ಅವರು ಹಬ್ಬದ ಸಂಭ್ರಮದ ಮೂಲಕ ತೋರ್ಪಡಿಸಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಮುಖಂಡರಾದ ಡಿ.ಟಿ ಶ್ರೀಧರ್, ಮೈಲಾರಪ್ಪ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಭದ್ರಾವತಿ, ಆ. ೩೦: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಅಲ್ಲದೆ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ನೆರವು ಸಹ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಇಲ್ಲಿನ ನಿವಾಸಿಗಳು ಪ್ರತಿವರ್ಷ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ ಸಂದರ್ಭದಲ್ಲಿ ಜಲಾವೃತಗೊಂಡು ಸಂತ್ರಸ್ಥರಾಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರ ಪಡೆದು ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ಥರಿಗೆ ಹಕ್ಕುಪತ್ರ ವಿತರಣೆ ಜೊತೆಗೆ ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅಥವಾ ಮನೆ ಕಟ್ಟಿಸಿಕೊಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಲದೆ ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾಗುವ ದಾಖಲೆ ರಹಿತ ಅನಧಿಕೃತ ಮನೆಗಳು ಸೇರಿದಂತೆ ಎಲ್ಲಾ ಮನೆಗಳಿಗೂ ಸಹ ಸೂಕ್ತ ಪರಿಹಾರ ನೀಡಲಿದೆ. ದೇಶದಲ್ಲಿ ಈ ರೀತಿಯ ಪರಿಹಾರ ನೀಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಹಾಗು ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬಡಜನರಿಗೆ ತೊಂದರೆ ನೀಡಬಾರದು. ಶಾಸಕರು ಹಾಗು ನಾನು ಬೇರೆ ಬೇರೆ ಪಕ್ಷದಲ್ಲಿದ್ದರೂ ಸಹ ಚುನವಣೆ ಸಂದರ್ಭದಲ್ಲಿ ಮಾತ್ರ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಇಬ್ಬರು ಸಹ ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಹಾಗು ಜಿಲ್ಲೆಯಲ್ಲಿ ಎಷ್ಟೋ ಜನ ಶಾಸಕರು, ಸಂಸದರು ಬಂದು ಹೋದರೂ ಆದರೆ ಯಾರಿಂದಲೂ ಸಹ ಹಕ್ಕು ಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ನಾನು ಹಾಗು ಸಂಸದರು ಒಗ್ಗಟ್ಟಾಗಿ ಈ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಸಂಸದರು ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಿಗೆ ನೀಡುವಷ್ಟು ಆದ್ಯತೆಯನ್ನು ನನ್ನ ಕ್ಷೇತ್ರಕ್ಕೂ ಸಹ ನೀಡಬೇಕೆಂದು ಮನವಿ ಮಾಡಿದರು.
ಕಲವಗುಂದಿ ಒಟ್ಟು ೩೦ ನೆರೆ ಸಂತ್ರಸ್ಥರ ಪೈಕಿ ೨೮ ಮಂದಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಗರಸಭೆ ಜೇಡಿಕಟ್ಟೆ ಗ್ರಾಮದಲ್ಲಿ ಸುಮಾರು ೧೮ ಎಕರೆ ಪ್ರದೇಶದಲ್ಲಿ ಹಕ್ಕು ಪತ್ರ ನೀಡಲಾಗಿದೆ. ಇಬ್ಬರು ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಇನ್ನೂ ಹಕ್ಕು ಪತ್ರ ನೀಡಿಲ್ಲ.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ದೊಡ್ಡೇಗೌಡರ್, ತಹಸೀಲ್ದಾರ್ ಆರ್. ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಸಂಸದರು-ಶಾಸಕರ ಮುಂದೆಯೇ ಮಾತಿನ ಚಕಮಕಿ : ಅವಾಚ್ಯ ಶಬ್ದ
ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಭಾಷಣದಲ್ಲಿ ಸಂಸದರಿಗೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ನಡುವೆ ಸ್ವತಃ ಸಂಸದರು ಸಮಾಧಾನ ಮಾಡಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ. ಈ ನಡುವೆ ಶಾಸಕರು ಬಿಜೆಪಿ ಮುಖಂಡರೊಬ್ಬರಿಗೆ ಅವಾಚ್ಯ ಶಬ್ದ ಬಳಸಿದ್ದು, ಈ ಸಂದರ್ಭದಲ್ಲಿ ಸಂಸದರು ತಕ್ಷಣ ಸ್ಥಳದಿಂದ ಕಾಲ್ಕಿತ್ತರು. ಶಾಸಕರ ಅವಾಚ್ಯ ಶಬ್ದ ಬಳಕೆಯಿಂದ ಸಂಸದರೇ ಬೆಚ್ಚಿ ಬಿದ್ದ ಘಟನೆ ನಡೆಯಿತು. ಈ ನಡುವೆ ಶಾಸಕರ ವರ್ತನೆಗೆ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಶ್ರೀ ವಿನಾಯಕ ಚುತುರ್ಥಿ ಅಂಗವಾಗಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವೀರ ಸಾವರ್ಕರ್ ಮತ್ತು ಬಾಲಗಂಗಾಧರನಾಥ ತಿಲಕ್ ಸೇರಿದಂತೆ sಸ್ವಾತಂತ್ರ್ಯ ಯೋಧರ, ದೇಶ ಭಕ್ತರನ್ನೊಳಗೊಂಡ ದ್ವಾರಬಾಗಿಲು ನಿರ್ಮಿಸಲಾಗಿದೆ.
ಭದ್ರಾವತಿ, ಆ. ೨೯: ನಗರದ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಶ್ರೀ ವಿನಾಯಕ ಚುತುರ್ಥಿ ಅಂಗವಾಗಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವೀರ ಸಾವರ್ಕರ್ ಮತ್ತು ಬಾಲಗಂಗಾಧರನಾಥ ತಿಲಕ್ ಸೇರಿದಂತೆ ಸ್ವಾತಂತ್ರ್ಯ ಯೋಧರ, ದೇಶ ಭಕ್ತರನ್ನೊಳಗೊಂಡ ದ್ವಾರಬಾಗಿಲು ನಿರ್ಮಿಸಲಾಗಿದೆ.
ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಚಾಮೇಗೌಡ ಏರಿಯಾದಲ್ಲಿ ಪ್ರತಿ ವರ್ಷ ಶ್ರೀ ವಿನಾಯಕ ಚತುರ್ಥಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷವಾಗಿ ದ್ವಾರ ಬಾಗಿಲು ನಿರ್ಮಿಸಲಾಗಿದ್ದು, ಸ್ವಾತಂತ್ರ್ಯ ಯೋಧರು, ದೇಶ ಭಕ್ತರಾದ ವೀರ ದಾಮೋದರ ವಿನಾಯಕ ಸಾರ್ವಕರ್, ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ರಾಜ್‌ಗುರು, ಚಂದ್ರಶೇಖರ್ ಆಜಾದ್, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚನ್ನಮ್ಮ ಹಾಗು ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಗಳು ರಾರಾಜಿಸುತ್ತಿವೆ.
ಗೌರಿ-ಗಣೇಶ ಮೂರ್ತಿಗಳು ಕಳೆದ ೨ ದಿನಗಳ ಹಿಂದೆಯೇ ಭದ್ರಾವತಿಯಲ್ಲಿ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ತಮಗೆ ಇಷ್ಟವಾದ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವುದು.
ಭರ್ಜರಿಯಾಗಿ ಖರೀದಿ:
ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸೋಮವಾರ ಜನಸಂದಣಿ ಅಧಿಕವಾಗಿದ್ದು, ಜನರು ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ತೊಡಗಿರುವುದು ಕಂಡು ಬಂದಿತು. ಈ ಬಾರಿ ಸಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡು ಬಂದಿದ್ದು, ಆದರೂ ಸಹ ವಿಧಿವಿಲ್ಲದೆ ವ್ಯಾಪಾರಸ್ಥರು ಕೇಳಿದಷ್ಟು ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಗೌರಿ-ಗಣೇಶ ಮೂರ್ತಿಗಳು ಕಳೆದ ೨ ದಿನಗಳ ಹಿಂದೆಯೇ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ತಮಗೆ ಇಷ್ಟವಾದ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದರೆ ಮತ್ತೆ ಕೆಲವರು ಮೊಬೈಲ್‌ಗಳಲ್ಲಿ ಮೂರ್ತಿಗಳನ್ನು ಕ್ಲಿಕ್ಕಿಸಿಕೊಂಡು, ಇನ್ನೂ ಕೆಲವರು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಆನಂದಿಸುತ್ತಿರುವುದು ಕಂಡು ಬಂದಿತು.
ರಾಷ್ಟ್ರಾಭಿಮಾನ, ಸ್ವಾಭಿಮಾನ, ಪ್ರತಿಷ್ಠೆ ಹಾಗೂ ಸಾರ್ವಭೌಮತ್ವದ ಸಂಕೇತ
ಭದ್ರಾವತಿ ಹಿಂದೂ ಮಹಾಸಭಾ ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳ
ಅನಂತಕುಮಾರ್
ಭದ್ರಾವತಿ: ಹಿಂದೂ ಸಂಘಟನೆಗಾಗಿ ರೂಪುಗೊಂಡ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆ ವತಿಯಿಂದ ನಗರದಲ್ಲಿ ಆಚರಿಸಲ್ಪಡುವ ಶ್ರೀ ವಿನಾಯಕ ಚತುರ್ಥಿಗೆ ಇದೀಗ ೫೦ರ ಸಂಭ್ರಮ.
ನಗರದ ಹೊಸಮನೆ ಮುಖ್ಯರಸ್ತೆಯಲ್ಲಿ ತಮಿಳು ಶಾಲೆ ಬಳಿ ಶ್ರೀ ಗಣಪತಿ ದೇವಸ್ಥಾನದಲ್ಲಿ ತನ್ನ ಶಾಖೆಯನ್ನು ತೆರೆದಿರುವ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆ ಇದೀಗ ಬಲಿಷ್ಠ ಸಂಘಟನೆಯಾಗಿ ಬೆಳೆದು ನಿಂತಿದೆ. ಕೇವಲ ಹಿಂದೂ ಸಂಘಟನೆ ಮಾಡುವುದು ಮಾತ್ರವಲ್ಲ ಇತರೆ ಧರ್ಮಿಯರನ್ನು ಸಹ ತನ್ನೊಂದಿಗೆ ಸೇರಿಸಿಕೊಂಡು ಮುನ್ನಡೆಯುತ್ತಿರುವುದು ಇದರ ವಿಶಿಷ್ಟತೆಗಳಲ್ಲಿ ಒಂದಾಗಿದೆ. ಕಳೆದ ೫೦ ವರ್ಷಗಳಿಂದ ತನ್ನ ಚಟುವಟಿಕೆಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ.
ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ ಎಂಬುವಂತೆ ಹಲವಾರು ಕಾರ್ಯಕ್ರಮಗಳನ್ನು ನಗರದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ. ಈ ಸಂಘಟನೆಯ ಬೆಳವಣಿಗೆಗೆ ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಹ ಕೈಜೋಡಿಸುತ್ತಿರುವುದು ಮತ್ತೊಂದು ವಿಶೇಷ.
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆಗೆ ಕೇವಲ ಇದೊಂದು ಹಬ್ಬವಲ್ಲ. ರಾಷ್ಟ್ರಾಭಿಮಾನ, ಸ್ವಾಭಿಮಾನ, ಪ್ರತಿಷ್ಠೆ ಹಾಗೂ ಸಾರ್ವಭೌಮತ್ವದ ಸಂಕೇತವಾಗಿದೆ. ಈ ಹಿನ್ನಲೆಯಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವುದು ಎಂದರೆ ಸವಾಲಿನ ಕೆಲಸವಾಗಿದೆ. ಈ ಸಂಘಟನೆ ನೇತೃತ್ವ ವಹಿಸಿ ಮುನ್ನಡೆಸುವವರು ಸಹ ಹೆಚ್ಚು ಶ್ರಮಪಡಬೇಕಾಗುತ್ತಿದೆ. ಕಳೆದ ಸುಮಾರು ೩೦ಕ್ಕೂ ಹೆಚ್ಚು ವರ್ಷಗಳಿಂದ ಹಿರಿಯ ನಗರಸಭಾ ಸದಸ್ಯ, ಬಿಜೆಪಿ ಮುಖಂಡ ವಿ. ಕದಿರೇಶ್ ಸಾರಥ್ಯ ವಹಿಸಿಕೊಂಡಿದ್ದಾರೆ. ಸರಿ ಸಮಾರು ೬೫ರ ಇಳಿವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
೯ ದಿನಗಳವರೆಗೆ ಪ್ರತಿಷ್ಠಾಪನೆ : ಸಡಗರ ಸಂಭ್ರಮದ ಆಚರಣೆ
ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಈ ಬಾರಿ ಆ.೩೧ ರಂದು ನಡೆಯಲಿದ್ದು, ಸೆ.೮ರಂದು ವಿಸರ್ಜನೆ ನಡೆಯಲಿದೆ. ೯ ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ೫೦ನೇ ವರ್ಷದ ಅಂಗವಾಗಿ ಪ್ರತಿ ದಿನ ಸಂಜೆ ೬.೩೦ರಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಸೆ.೧ರಂದು ಕಾರ್ಯಕ್ರಮಗಳಸುವರ್ಣ ಸಂಭ್ರಮದ ಹಿಂದೂ ಜಾಗೃತಿ ಸಭೆ ನಡೆಯಲಿದ್ದು, ಹಿಂದು ವಾಗ್ಮಿ ಚೈತ್ರ ಕುಂದಾಪುರ ಹಾಗೂ ಬಾಲವಾಗ್ಮಿ ಹರಿಕಾ ಮಂಜುನಾಥ್, ಸೆ.೨ರಂದು ಬಿಗ್‌ಬಾಸ್ ಖ್ಯಾತಿಯ ರಾಜ್ಯ ಸರ್ಕಾರದ ಪ್ರಶಸ್ತಿ ಪುರಸ್ಕೃತೆ ಮೈಸೂರಿನ ಪ್ರಥಮ ಮಹಿಳಾ ಕಲಾವಿದೆ ಸುಮರಾಜ್ ಕುಮಾರ್ ಅವರಿಂದ ಹಾಸ್ಯಮಯ ಜಾದು ಹಾಗು ಮಾತನಾಡುವ ಗೊಂಬೆ ಪ್ರದರ್ಶನ ನಡೆಯಲಿದೆ. ಸೆ.೩ರಂದು ಚರಣ್ ಸಂಗೀತ ಆರ್ಕೇಸ್ಟ್ರಾ, ಸೆ.೪ರಂದು ಸುಧಾ ಬರಗೂರು ಮತ್ತು ತಂಡದಿಂದ ನಗೆ ಹಬ್ಬ, ಸೆ.೫ ರಂದು ಕಾಮಿಡಿ ಕಿಲಾಡಿಗಳು ಕೆ.ಆರ್ ಪೇಟೆ ಶಿವರಾಜ್ ಮತ್ತು ನಯನ ತಂಡದವರಿಂದ ಹಾಸ್ಯ ಸಂಜೆ ಮತ್ತು ಸೆ.೬ರಂದು ಜೀ ಟಿವಿ ಖ್ಯಾತಿಯ ಮಂಗಳೂರಿನ ರಾಜ್‌ಶೆಟ್ಟಿ ನೃತ್ಯ ತಂಡದವರಿಂದ ಡ್ಯಾನ್ಸ್ ನೈಟ್ ಹಾಗು ಸೆ.೭ರಂದು ಬೆಳಿಗ್ಗೆ ೯ ಗಂಟೆಗೆ ಗಣಹೋಮ ಮತ್ತು ಸಮುದಾಯ ಭವನ ಲೋಕಾರ್ಪಣೆ, ಅನ್ನಸಂತರ್ಪಣೆ ನಂತರ ಹಿಂದೂ ಧಾರ್ಮಿಕ ಸಭೆ ನಡೆಯಲಿದೆ.
ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ೫೦ನೇ ವರ್ಷದ ವಿನಾಯಕ ಚತುರ್ಥಿ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಸುಮಾರು ೫೦ ಅಡಿ ಎತ್ತರ ಶ್ರೀ ಆಂಜನೇಯ ಸ್ವಾಮಿಯ ದ್ವಾರ ಬಾಗಿಲು ನಿರ್ಮಿಸುತ್ತಿರುವುದು. ಅಧ್ಯಕ್ಷರು ಹಾಗು ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿರುವುದು.
೫೦ ಅಡಿ ಎತ್ತರದ ಶ್ರೀ ಆಂಜನೇಯ ಸ್ವಾಮಿ ದ್ವಾರಬಾಗಿಲು :
ಪ್ರತಿ ವರ್ಷ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಅಂಗವಾಗಿ ಬೃಹತ್ ದ್ವಾರಬಾಗಿಲುಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ರಂಗಪ್ಪ ವೃತ್ತದ ಹೊಸಮನೆ ಮುಖ್ಯರಸ್ತೆಯಲ್ಲಿ ಸುಮಾರು ೫೦ ಅಡಿ ಎತ್ತರದ ಆಕರ್ಷಕವಾದ ಶ್ರೀ ಆಂಜನೇಯ ಸ್ವಾಮಿ ದ್ವಾರಬಾಗಿಲು ನಿರ್ಮಿಸಲಾಗುತ್ತಿದ್ದು, ಉಳಿದಂತೆ ಮಾಧವಚಾರ್ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ನಾಯಕರ ಭಾವಚಿತ್ರಗಳೊಂದಿಗೆ ಬೃಹತ್ ದ್ವಾರಬಾಗಿಲುಗಳು ನಿರ್ಮಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮಕ್ಕೆ ಹೆಚ್ಚುತ್ತಿದೆ. ಕಳೆದ ಸುಮಾರು ೨ ವರ್ಷಗಳಿಂದ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಕ್ಷೀಣಿಸಿತ್ತು. ಈ ಬಾರಿ ಪುನಃ ಹಬ್ಬದ ಎಲ್ಲೆಡೆ ಕಂಡು ಬರುತ್ತಿದೆ.
ಸುಮಾರು ೩೦ ವರ್ಷಗಳಿಂದ ಒಂದೇ ಕುಟುಂಬದಿಂದ ಮೂರ್ತಿ ತಯಾರಿಕೆ :
ಹಳೇನಗರದ ಕುಂಬಾರರ ಬೀದಿ ನಿವಾಸಿ ಬಿ.ಎಸ್ ರುದ್ರಪ್ಪ ಕಳೆದ ಸುಮಾರು ೩೦ ವರ್ಷಗಳಿಂದ ಹಿಂದೂ ಮಹಾಸಭಾ ವಿನಾಯಕ ಮೂರ್ತಿ, ಮಾಧವಚಾರ್ ವೃತ್ತದ ವಿನಾಯಕ ಮೂರ್ತಿ ಸೇರಿದಂತೆ ನಗರದ ಪ್ರಮುಖ ದೊಡ್ಡ ವಿನಾಯಕ ಮೂರ್ತಿಗಳನ್ನು ಇವರು ತಯಾರಿಸಿಕೊಡುತ್ತಿದ್ದಾರೆ. ಅಲ್ಲದೆ ಇವರ ತಂದೆ ಸಿದ್ದಪ್ಪ ಸಹ ಇದೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಭದ್ರಾವತಿ ಹಳೇನಗರದ ಕುಂಬಾರರ ಬೀದಿಯ ಬಿ.ಎಸ್ ರುದ್ರಪ್ಪನವರ ಮನೆಯಲ್ಲಿ ತಯಾರಾಗುತ್ತಿರುವ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಈ ಪ್ರತಿಷ್ಠಾಪಿಸಲಿರುವ ವಿನಾಯಕ ಮೂರ್ತಿ.
ಹಿಂದೂ ಸಂಘ ಪರಿವಾರಗಳ ಕಾವಲು:
ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯದಿಂದ ಹಿಡಿದು ವಿಸರ್ಜನೆವರೆಗೂ ಸಂಘ ಪರಿವಾರಗಳಾದ ಆರ್‌ಎಸ್‌ಎಸ್, ಬಜರಂಗದಳ, ಕೇಸರಿಪಡೆ, ಹಿಂದೂ ಪಡೆ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದುಪರ ಸಂಘಟನೆಗಳು ಕಾವಲು ನಿಂತು ಯಶಸ್ವಿಗೆ ಮುಂದಾಗುವ ಮೂಲಕ ಹಿಂದೂತ್ವದ ಬಹುದೊಡ್ಡ ಶಕ್ತಿಯೇ ಇಲ್ಲಿ ಅನಾವರಣಗೊಳ್ಳುತ್ತದೆ.
ವಿಸರ್ಜನೆಯಲ್ಲಿ ಸಾವಿರಾರು ಮಂದಿ ಬಾಗಿ:
ಪ್ರತಿವರ್ಷ ವಿನಾಯಕ ಮೂರ್ತಿ ವಿಸರ್ಜನೆಯಲ್ಲಿ ಸ್ವಯಂ ಪ್ರೇರಣೆಯಿಂದ ಸಾವಿರಾರು ಮಂದಿ ಕನಿಷ್ಠ ೧೦ ಸಾವಿರದಿಂದ ಗರಿಷ್ಠ ೩೦ ಸಾವಿರದ ವರೆಗೆ ಪಾಲ್ಗೊಳ್ಳುತ್ತಾರೆ. ಭಕ್ತರಿಂದ ಹಲವು ಸೇವೆಗಳು ಸಹ ಸ್ವಯಂ ಪ್ರೇರಣೆಯಿಂದ ಜರುಗುತ್ತವೆ. ಇವೆಲ್ಲವೂ ವಿಶೇಷ ಎಂದರೆ ತಪ್ಪಾಗಲಾರದು. ಭಕ್ತಿಯೋ, ಧರ್ಮ ಪ್ರೇಮವೋ, ರಾಷ್ಟ್ರ ಪ್ರೇಮವೋ ಒಟ್ಟಾರೆ ಒಂದು ದೈತ್ಯ ಶಕ್ತಿ ಅನಾವರಣಗೊಂಡು ಐಕ್ಯತೆಗೆ ಕಾರಣವಾಗುತ್ತಿದೆ.
ಉಳಿದ ದೇಣಿಗೆ ಹಣ ಸೇವಾ ಕಾರ್ಯಗಳಿಗೆ:
ಭಕ್ತರಿಂದ ಹಾಗೂ ದಾನಿಗಳಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡುವುದರೊಂದಿಗೆ ಉಳಿದ ಹಣವನ್ನು ಹಲವಾರು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಅಲ್ಲದೆ ಸುಮಾರು ೧ ಕೋ. ರು.ಗಳಿಗೆ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಇದುವರೆಗೂ ಖರ್ಚು-ವೆಚ್ಚಗಳಲ್ಲಿ ಯಾವುದೇ ಗೊಂದಲ ಉಂಟಾಗದಿರುವುದು ಸಂಘಟನೆಯಲ್ಲಿ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ.
ಬಿಗಿ ಪೊಲೀಸ್ ಭದ್ರತೆ:
ಕಳೆದ ಸುಮಾರು ೨೫ ವರ್ಷಗಳಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬರುತ್ತಿದೆ. ಈ ಹಿಂದಿಗಿಂತಲೂ ಪ್ರಸ್ತುತ ಇನ್ನೂ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಗಣಪತಿ ಹಬ್ಬ ಯಶಸ್ವಿಗೊಳಿಸುವುದು ಸಂಘಟನೆಗೆ ಮಾತ್ರವಲ್ಲ ಪೊಲೀಸರಿಗೂ ದೊಡ್ಡ ಸವಾಲಾಗಿ ಬಿಟ್ಟಿದೆ.
ಭದ್ರಾವತಿ ಹಳೇನಗರದದ ಕುಂಬಾರರ ಬೀದಿಯಲ್ಲಿರುವ ಮೂರ್ತಿ ತಯಾರಕ ಬಿ.ಎಸ್ ರುದ್ರಪ್ಪ ಮತ್ತು ಕುಟುಂಬದವರು.
ಕಳೆದ ೫೦ ವರ್ಷಗಳ ಹಿಂದೆ ಈ ಭಾಗದಲ್ಲಿ ಅನೇಕ ಮುಖಂಡರು ಒಗ್ಗೂಡಿ ಹಿಂದೂ ಸಂಘಟನೆಗಾಗಿ ಹೋರಾಟ ನಡೆಸಬೇಕಾಯಿತು. ಈ ಸಂಬಂಧ ಜೈಲಿಗೂ ಸಹ ಹೋಗಬೇಕಾಯಿತು. ಜೈಲಿನಿಂದ ಬಿಡುಗಡೆಗೊಂಡ ನಂತರ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಘಟನೆಯನ್ನು ಬಲಪಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಅಡೆತಡೆಗಳಿಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ.
- ವಿ. ಕದಿರೇಶ್, ಅಧ್ಯಕ್ಷರು, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ.
ವಿನಾಯಕ ಮಹೋತ್ಸವದ ವೈಭವ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ಸುಮಾರು ೧೦ ವರ್ಷಗಳಿಂದ ಸಮಿತಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದಿನ ಕೆಲವು ವರ್ಷಗಳ ವರೆಗೆ ಸುಮಾರು ೭ ರಿಂದ ೮ ಲಕ್ಷ ರು. ಒಟ್ಟು ವೆಚ್ಚವಾಗುತ್ತಿತ್ತು. ಈ ಬಾರಿ ೫೦ನೆ ವರ್ಷದ ಹಿನ್ನಲೆಯಲ್ಲಿ ಇದರ ವೆಚ್ಚ ಎರಡು ಪಟ್ಟು ಅಂದರೆ ಸುಮಾರು ೧೫ ರಿಂದ ೧೬ ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ.
- ಮಣಿ ಎಎನ್‌ಎಸ್, ಖಜಾಂಚಿ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ.
ನನ್ನ ತಂದೆ ಕಾಲದಿಂದಲೂ ನಗರದ ಪ್ರಮುಖ ದೊಡ್ಡ ದೊಡ್ಡ ಮೂರ್ತಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಪ್ರತಿ ವರ್ಷ ೩೦೦ ರಿಂದ ೪೦೦ ಮೂರ್ತಿಗಳನ್ನು ತಯಾರಿಸುತ್ತಿದ್ದು, ನಮಗೆ ಮೂರ್ತಿಗಳ ತಯಾರಿಕೆಯಿಂದ ಇದುವರೆಗೂ ಇದುವರೆಗೂ ಯಾವುದೇ ರೀತಿ ನಷ್ಟ ಉಂಟಾಗಿಲ್ಲ. ಎಲ್ಲಾ ಮೂರ್ತಿಗಳು ಮಾರಾಟವಾಗುತ್ತವೆ.
ಭದ್ರಾವತಿ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಭಾನುವಾರ ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಆ. ೨೮: ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕ್ಷೇತ್ರದ ಉನ್ನತ ಮಟ್ಟದ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಾಗುವ ಮೂಲಕ ಈ ಕ್ಷೇತ್ರದಲ್ಲೂ ಭದ್ರಾವತಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಹೇಳಿದರು.
ಅವರು ಭಾನುವಾರ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಉದ್ಘಾಟಿಸಿ ಮಾತನಾಡಿದರು.
ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕೇವಲ ವ್ಯವಹಾರಕ್ಕೆ ಸೀಮಿತವಾಗದೆ ಈ ಕ್ಷೇತ್ರದಲ್ಲಿ ಇತರರು ಸಹ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿಕೊಡಬೇಕು. ಆ ಮೂಲಕ ಸಾರ್ಥಕ ಸೇವೆ ಸಲ್ಲಿಸಬೇಕೆಂದರು. ಈ ನಿಟ್ಟಿನಲ್ಲಿ ನೂತನ ಆರಂಭಗೊಂಡಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಸಹಕಾರಿಯಾಗಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ಸೂಡಾ ಸದಸ್ಯೆ ಹೇಮಾವತಿ ವಿಶ್ವನಾಥ್, ಸುಂದರ್ ಬಾಬು, ಎಂ.ಎಸ್ ರವಿ, ಅನ್ನಸತೀಶ್, ರಾಜ್‌ಕುಮಾರ್, ಅಬಿದ್‌ಆಲಿ, ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮಾಲೀಕರಾದ ಸವಿತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಜಾನುವಾರು ಸಂತೆಗೆ ಚಾಲನೆ ನೀಡಿದರು.
ಭದ್ರಾವತಿ, ಆ. ೨೮: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ೨ ದಿನ ಜಾನುವಾರು ಸಂತೆ ನಡೆಸಲು ಅನುಮತಿ ನೀಡುವ ಮೂಲಕ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ಭಾನುವಾರ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಸಂತೆಗೆ ಚಾಲನೆ ನೀಡಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಇದೀಗ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾನುವಾರು ಸಂತೆ ಪುನಃ ಆರಂಭಗೊಂಡಿರುವುದು ರೈತರು ಹಾಗು ವ್ಯಾಪಾರಸ್ಥರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ ಇಬ್ಬರು ಒಂದೆಡೆ ಸೇರಲು ಅನುಕೂಲವಾಗಿದೆ. ಜಾನುವಾರು ಸಂತೆ ಕೇವಲ ಭಾನುವಾರಕ್ಕೆ ಮಾತ್ರ ಸೀಮಿತವಾಗಬಾರದು. ಶನಿವಾರ ಮತ್ತು ಭಾನುವಾರ ೨ ದಿನ ಸಹ ಸಂತೆ ನಡೆಯಲು ಅವಕಾಶ ಮಾಡಿಕೊಡಬೇಕು. ಪಶು ಇಲಾಖೆ ವೈದ್ಯರು ಹಾಗು ಸಿಬ್ಬಂದಿಗಳು ರೈತರಿಗೆ ಇಲಾಖೆಯಿಂದ ಲಭ್ಯವಿರುವ ಸೇವೆಗಳನ್ನು ಕಲ್ಪಿಸಿಕೊಡಬೇಕು. ಜಾನುವಾರುಗಳ ಆರೋಗ್ಯ ಹಾಗು ಆರೈಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ರೈತರು ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಂಘವನ್ನು ನೋಂದಾಯಿಸಿ ಕೊಡಲಾಗುವುದು. ಅಲ್ಲದೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಎಂದು ಭರವಸೆ ನೀಡಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಜಾನುವಾರು ಸಂತೆಯೇ ಒಂದು ರೀತಿಯ ರೋಮಾಂಚಕಾರಿಯಾಗಿದೆ. ರೈತರು ಹಾಗು ವ್ಯಾಪಾರಸ್ಥರು ಒಂದೆಡೆ ಸೇರುವ ಹಾಗು ವ್ಯಾಪಾರ ನಡೆಸುವ ಪರಿ ನೋಡಿ ಕಣ್ತುಂಬಿಕೊಳ್ಳುವ ದಿನಗಳು ಪುನಃ ಆರಂಭಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಮಾರುವವರು ಹಾಗು ಕೊಳ್ಳುವವರು ಒಂದೆಡೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸೂಕ್ತ ಬೆಲೆಗೆ ಕೊಂಡುಕೊಳ್ಳುವ ಅಥವಾ ಮಾರಾಟ ಮಾಡುವ ಅವಕಾಶ ಲಭಿಸುತ್ತದೆ. ಮಾರುಕಟ್ಟೆಯಿಂದ ಹೊರಗೆ ವ್ಯವಹಾರ ನಡೆಸುವುದರಿಂದ ರೈತರು ಹಾಗು ವ್ಯಾಪಾರಸ್ಥರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಾನುವಾರು ಸಂತೆ ನಿರಂತರವಾಗಿ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುವಂತಾಗಬೇಕೆಂದರು.
ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಭದ್ರಾವತಿ ಸಂತೆ ಎಂದರೆ ಎಲ್ಲೆಡೆ ಹೆಸರುವಾಸಿಯಾಗಿದೆ. ಈ ಹಿಂದೆ ಹಳೇ ಸಂತೆ ಮೈದಾನದಲ್ಲಿ ಜಾನುವಾರು, ಕುರಿ ಸಂತೆ ನಡೆಯುತ್ತಿತ್ತು. ಜಾನುವಾರು, ಕುರಿ ಸಂತೆ ಪ್ರತ್ಯೇಕವಾಗಿ ನಡೆಸುವಂತೆ ಕಾನೂನು ರೂಪುಗೊಂಡ ನಂತರ ನಗರಸಭೆ ಆಡಳಿತ ಜಾನುವಾರು, ಕುರಿ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿತು. ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಜಾನುವಾರು ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಸಂತೆಯಾಗಿ ರೂಪುಗೊಳ್ಳಬೇಕೆಂದರು.
ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಿ.ಎಂ ಮಂಜುನಾಥ್, ಪೌರಾಯುಕ್ತ ಮನುಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಹೇಶ್, ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
ಜಾನುವಾರು ಸಂತೆಯಲ್ಲಿ ಮೊದಲ ದಿನವೇ ಭರ್ಜರಿ ವಹಿವಾಟು ನಡೆದಿದ್ದು, ವಿವಿಧಡೆಗಳಿಂದ ರೈತರು, ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು.
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ನಡೆದ ಜಾನುವಾರು ಸಂತೆಯಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್ ಹಾಗು ರೈತರ ಸಮ್ಮುಖದಲ್ಲಿ ಜಾನುವಾರು ಖರೀದಿ ಪ್ರಕ್ರಿಯೆ ನಡೆಯಿತು.