ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಜಾನುವಾರು ಸಂತೆಗೆ ಚಾಲನೆ ನೀಡಿದರು.
ಭದ್ರಾವತಿ, ಆ. ೨೮: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ೨ ದಿನ ಜಾನುವಾರು ಸಂತೆ ನಡೆಸಲು ಅನುಮತಿ ನೀಡುವ ಮೂಲಕ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ಭಾನುವಾರ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಸಂತೆಗೆ ಚಾಲನೆ ನೀಡಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಇದೀಗ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾನುವಾರು ಸಂತೆ ಪುನಃ ಆರಂಭಗೊಂಡಿರುವುದು ರೈತರು ಹಾಗು ವ್ಯಾಪಾರಸ್ಥರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ ಇಬ್ಬರು ಒಂದೆಡೆ ಸೇರಲು ಅನುಕೂಲವಾಗಿದೆ. ಜಾನುವಾರು ಸಂತೆ ಕೇವಲ ಭಾನುವಾರಕ್ಕೆ ಮಾತ್ರ ಸೀಮಿತವಾಗಬಾರದು. ಶನಿವಾರ ಮತ್ತು ಭಾನುವಾರ ೨ ದಿನ ಸಹ ಸಂತೆ ನಡೆಯಲು ಅವಕಾಶ ಮಾಡಿಕೊಡಬೇಕು. ಪಶು ಇಲಾಖೆ ವೈದ್ಯರು ಹಾಗು ಸಿಬ್ಬಂದಿಗಳು ರೈತರಿಗೆ ಇಲಾಖೆಯಿಂದ ಲಭ್ಯವಿರುವ ಸೇವೆಗಳನ್ನು ಕಲ್ಪಿಸಿಕೊಡಬೇಕು. ಜಾನುವಾರುಗಳ ಆರೋಗ್ಯ ಹಾಗು ಆರೈಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ರೈತರು ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಂಘವನ್ನು ನೋಂದಾಯಿಸಿ ಕೊಡಲಾಗುವುದು. ಅಲ್ಲದೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಎಂದು ಭರವಸೆ ನೀಡಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಜಾನುವಾರು ಸಂತೆಯೇ ಒಂದು ರೀತಿಯ ರೋಮಾಂಚಕಾರಿಯಾಗಿದೆ. ರೈತರು ಹಾಗು ವ್ಯಾಪಾರಸ್ಥರು ಒಂದೆಡೆ ಸೇರುವ ಹಾಗು ವ್ಯಾಪಾರ ನಡೆಸುವ ಪರಿ ನೋಡಿ ಕಣ್ತುಂಬಿಕೊಳ್ಳುವ ದಿನಗಳು ಪುನಃ ಆರಂಭಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಮಾರುವವರು ಹಾಗು ಕೊಳ್ಳುವವರು ಒಂದೆಡೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸೂಕ್ತ ಬೆಲೆಗೆ ಕೊಂಡುಕೊಳ್ಳುವ ಅಥವಾ ಮಾರಾಟ ಮಾಡುವ ಅವಕಾಶ ಲಭಿಸುತ್ತದೆ. ಮಾರುಕಟ್ಟೆಯಿಂದ ಹೊರಗೆ ವ್ಯವಹಾರ ನಡೆಸುವುದರಿಂದ ರೈತರು ಹಾಗು ವ್ಯಾಪಾರಸ್ಥರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಾನುವಾರು ಸಂತೆ ನಿರಂತರವಾಗಿ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುವಂತಾಗಬೇಕೆಂದರು.
ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಭದ್ರಾವತಿ ಸಂತೆ ಎಂದರೆ ಎಲ್ಲೆಡೆ ಹೆಸರುವಾಸಿಯಾಗಿದೆ. ಈ ಹಿಂದೆ ಹಳೇ ಸಂತೆ ಮೈದಾನದಲ್ಲಿ ಜಾನುವಾರು, ಕುರಿ ಸಂತೆ ನಡೆಯುತ್ತಿತ್ತು. ಜಾನುವಾರು, ಕುರಿ ಸಂತೆ ಪ್ರತ್ಯೇಕವಾಗಿ ನಡೆಸುವಂತೆ ಕಾನೂನು ರೂಪುಗೊಂಡ ನಂತರ ನಗರಸಭೆ ಆಡಳಿತ ಜಾನುವಾರು, ಕುರಿ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿತು. ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಜಾನುವಾರು ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಸಂತೆಯಾಗಿ ರೂಪುಗೊಳ್ಳಬೇಕೆಂದರು.
ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಿ.ಎಂ ಮಂಜುನಾಥ್, ಪೌರಾಯುಕ್ತ ಮನುಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಹೇಶ್, ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
ಜಾನುವಾರು ಸಂತೆಯಲ್ಲಿ ಮೊದಲ ದಿನವೇ ಭರ್ಜರಿ ವಹಿವಾಟು ನಡೆದಿದ್ದು, ವಿವಿಧಡೆಗಳಿಂದ ರೈತರು, ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು.
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ನಡೆದ ಜಾನುವಾರು ಸಂತೆಯಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್ ಹಾಗು ರೈತರ ಸಮ್ಮುಖದಲ್ಲಿ ಜಾನುವಾರು ಖರೀದಿ ಪ್ರಕ್ರಿಯೆ ನಡೆಯಿತು.
No comments:
Post a Comment