ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ
ಭದ್ರಾವತಿ, ಆ. ೨೭: ನಗರದ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು ೫-೬ ವರ್ಷಗಳ ನಂತರ ಆ.೨೮ರ ಭಾನುವಾರ ಜಾನುವಾರ ಸಂತೆ ನಡೆಸಲಾಗುತ್ತಿದೆ.
ಹೈನುಗಾರಿಕೆ ಹಾಗು ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದೀಗ ಜಾನುವಾರು ಸಂತೆ ಪ್ರತಿ ಶನಿವಾರ ನಡೆಸಲು ಉದ್ದೇಶಿಸಲಾಗಿದೆ. ೫-೬ ವರ್ಷಗಳ ಹಿಂದೆ ಕೆಲವು ಕಾರಣಾಂತರಗಳಿಂದ ಜಾನುವಾರು ಸಂತೆ ಸ್ಥಗಿತಗೊಂಡಿತು. ಎಲ್ಲಾ ರೀತಿಯ ಜಾನುವಾರುಗಳ ಮಾರಾಟ ನಡೆಯುತ್ತಿತ್ತು. ಸರ್ಕಾರ ಇದೀಗ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ರೈತರು ಮಾರುಕಟ್ಟೆಯಿಂದ ಹೊರಗೆ ಸಹ ಜಾನುವಾರುಗಳನ್ನು ಖರೀದಿಸಲು ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನಲೆಯಲ್ಲಿ ರೈತರು, ಜಾನುವಾರು ವ್ಯಾಪಾರಸ್ಥರು ಇತ್ತೀಚೆಗೆ ಸಭೆ ನಡೆಸಿ ಜಾನುವಾರ ಸಂತೆ ನಡೆಸಲು ನಿರ್ಧರಿಸಿದ್ದಾರೆ.
ಮಧ್ಯವರ್ತಿಗಳಿಗೆ ಅಥವಾ ೩ನೇ ವ್ಯಕ್ತಿಗೆ ಅವಕಾಶ ನೀಡದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ನೇರವಾಗಿ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಜಾನುವಾರುಗಳನ್ನು ನೇರವಾಗಿ ಖರೀದಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಜಾನುವಾರು ಸಂತೆ ನಡೆಯಲಿದೆ. ಹೈನುಗಾರಿಕೆ ಹಾಗು ಕೃಷಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ ಮಾತ್ರ ನಡೆಯಲಿದೆ.
ಜಾನುವಾರು ಸಂತೆಗೆ ಬೆಳಿಗ್ಗೆ ೯ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಪೊಲೀಸ್ ನಗರ ವೃತ್ತ ನಿರೀಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗೆ ಮೊ: ೮೯೭೧೬೦೩೯೬೪ ಅಥವಾ ೯೭೪೧೮೮೫೯೪೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
No comments:
Post a Comment