ಸಹಕಾರ ನೀಡಿದ ಎಲ್ಲರಿಗೂ ಗೀತಾ ಕೆ.ಜಿ ರಾಜ್‌ಕುಮಾರ್ ಕೃತಜ್ಞತೆ
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮಾತನಾಡಿದರು.
ಭದ್ರಾವತಿ, ಆ. ೨೬: ನಗರಸಭೆ ಅಧ್ಯಕ್ಷೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಳೆದ ೧೦ ತಿಂಗಳು ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಗರಸಭೆ ನಿರ್ಗಮಿತ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಗೆ ಕಳೆದ ವರ್ಷ ಏ.೨೬ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ವಾರ್ಡ್ ನಂ.೨ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಅವಧಿಯಲ್ಲಿಯೇ ನನಗೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು, ನಗರಸಭಾ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಅ.೧೬ರಂದು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ೧೦ ತಿಂಗಳ ಅವಧಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.
ಕುಡಿಯುವ ನೀರು, ರಸ್ತೆ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ, ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣ, ಪೌರಕಾರ್ಮಿಕರಿಗೆ ಗೃಹ ನಿರ್ಮಾಣ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.
೧೦ ತಿಂಗಳ ಅವಧಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು:-
- ನಗರೋತ್ಥಾನ ಯೋಜನೆಯಡಿ ೩೪ ಕೋ. ರು. ವೆಚ್ಚದ ಅಭಿವೃದ್ಧಿ ಕಾರ್ಯಗಳು.
- ಎಸ್‌ಎಫ್‌ಸಿ ಹಾಗು ಇತರೆ ಯೋಜನೆಯಡಿ ೭ ಕೋ.ರು. ಅನುದಾನದ ಅಭಿವೃದ್ಧಿ ಕಾರ್ಯಗಳು
- ೯೨ ಲಕ್ಷ ರು. ವೆಚ್ಚದಲ್ಲಿ ಜಯಶ್ರೀ, ಹುತ್ತಾಕಾಲೋನಿ, ಬಸವೇಶ್ವರ, ಮಾಧವಚಾರ್,
ಹಾಲಪ್ಪ ಮತ್ತು ರಂಗಪ್ಪ ವೃತ್ತಗಳ ಅಭಿವೃದ್ಧಿ.
- ವಾರ್ಡ್ ನಂ.೯ರಿಂದ ಪ್ರತಿ ಮನೆಗೆ ಕಸದ ಬುಟ್ಟಿ ವಿತರಣೆ.
No comments:
Post a Comment