ಭದ್ರಾವತಿ, ಸೆ. ೯: ನಿವೃತ್ತ ಶಿಕ್ಷಕಿ ಎನ್. ಶ್ಯಾಮಲ(೭೯) ನಿಧನ ಹೊಂದಿದ್ದು, ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನಡೆಯಿತು.
ಪತಿ ಹಾಗು ನಾಲ್ವರು ಪುತ್ರಿಯರನ್ನು ಹೊಂದಿದ್ದರು. ಶ್ಯಾಮಲ ಅವರು ತಾಲೂಕಿನ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭದ್ರಾವತಿ, ಸೆ. ೯: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್ ಮತ್ತು ಡಿ.ಎಸ್ ಅಶ್ವಿನಿ ದಂಪತಿಯ ಪುತ್ರಿ ಡಿ.ಎಸ್ ಸಂಜನಾ ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ೬೮೬ ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ೪೩೧ನೇ ರ‍್ಯಾಂಕ್ ಹಾಗು ಸಾಮಾನ್ಯ ವರ್ಗದಲ್ಲಿ ೨೯೭ನೇ ರ‍್ಯಾಂಕ್ ಪಡೆದುಕೊಂಡು ತಮ್ಮ ಮುಂದಿನ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದಿದ್ದಾರೆ.
ಸಂಜನಾ ಅವರು ಮೇ ತಿಂಗಳಿನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ನಡೆದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆ(ಕೆವಿಪಿವೈ) ಪರೀಕ್ಷೆಯಲ್ಲಿ ೨೨೮ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಮುಖ್ಯ ಪ್ರವೇಶ ಪರೀಕ್ಷೆ (ಜೆಇಇ ಪರೀಕ್ಷೆ)ಯಲ್ಲಿ ಶೇ.೯೯.೨೦ ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ರಾಜ್ಯಕ್ಕೆ ೧೬೩ನೇ ರ‍್ಯಾಂಕ್ ಪಡೆದುಕೊಂಡಿದ್ದು, ಪಶು ವೈದ್ಯಕೀಯದಲ್ಲಿ ೧೫ನೇ ರ‍್ಯಾಂಕ್, ಬಿಎಸ್‌ಸಿ ಕೃಷಿಯಲ್ಲಿ ೪೬ನೇ ರ‍್ಯಾಂಕ್ ಮತ್ತು ಬಿ.ಫಾರ್ಮ ೧೯ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಸಂಜನಾ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಪೂರೈಸಿದ್ದು, ಪ್ರಸ್ತುತ ಮಂಗಳೂರಿನ ಬಿಜೈ ಕಾಪಿಕಾಡ್ ಸಮೀಪದ ಸಿಎಫ್‌ಎಎಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಜನಾ ಅವರ ಸಾಧನೆಗೆ ನಗರದ ಅನೇಕ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ಸಾಧನೆಗೆ ಶುಭ ಹಾರೈಸಿದ್ದಾರೆ.
ಭದ್ರಾವತಿ ಕಾಗದನಗರದ ೪ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ಭದ್ರಾವತಿ, ಸೆ. ೯: ಕಾಗದನಗರದ ೪ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ಕಾಗದನಗರ ವ್ಯಾಪ್ತಿಯ ೮ ಅಂಗನವಾಡಿ ಕೇಂದ್ರಗಳು ಒಟ್ಟಾಗಿ ಸೇರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ
ನಗರಸಭಾ ಸದಸ್ಯೆ ಜಯಶೀಲ, ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪೂಜಾ, ಹಿರಿಯ ಆರೋಗ್ಯ ಸಹಾಯಕ ಮನೋಹರ್, ಕಿರಿಯ ಆರೋಗ್ಯ ಸಹಾಯಕಿ ಮಾರ್ಗರೇಟ್ ಹಾಗು ೮ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪೋಷಣ್ ಅಭಿಯಾನ್ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಅಂಗವಾಗಿ ಈ ಬಾರಿ ಮಲೆನಾಡು ಅಡಕೆ ತಟ್ಟೆ ತಯಾರಿಕರ ಸಂಘದ ವತಿಯಿಂದ ವಿಶೇಷವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಭದ್ರಾವತಿ, ಸೆ. ೮: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಅಂಗವಾಗಿ ಈ ಬಾರಿ ಮಲೆನಾಡು ಅಡಕೆ ತಟ್ಟೆ ತಯಾರಿಕರ ಸಂಘದ ವತಿಯಿಂದ ವಿಶೇಷವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಿ.ಎನ್ ರಸ್ತೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಬಾಲಾಜಿ ಲಾಡ್ಜ್ ಮುಂಭಾಗ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ವಿಶೇಷವಾಗಿ ತಟ್ಟೆಯಿಂದ ಹಾರವನ್ನು ವಿನಾಯಕ ಮೂರ್ತಿಗೆ ಸಮರ್ಪಿಸಲಾಯಿತು.
ಮಲೆನಾಡು ಅಡಿಕೆ ತಟ್ಟೆ ತಯಾರಿಕರ ಸಂಘದ ಅಧ್ಯಕ್ಷ ಜಯಪಾಲ್, ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ರಾಮು, ಯಶೋಧರ ಪ್ರಭು, ಧನಂಜಯ, ಅರುಣಗಿರಿ, ಸುನಿಲ್, ಸೋಮಣ್ಣ, ವಿನಯ್, ಸುಬ್ರಮಣ್ಯ, ರುದ್ರೇಶ್ ಮತ್ತು ಲೋಕೇಶ್ ಹಾಗು ದಾನಿ ಎಸ್‌ಎಲ್‌ಎನ್ ಕಂಪನಿ ಮಾಲೀಕ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ೪ ಕೋ. ಅನುದಾನ : ಬಿವೈಆರ್
ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ, ಸೆ. ೮: ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಜೀರ್ಣೋದ್ದಾರಗೊಳಿಸಲು ಕೇಂದ್ರ ಪುರಾತತ್ವ ಇಲಾಖೆಯಿಂದ ವಿಶೇಷವಾಗಿ ಸುಮಾರು ೪ ಕೋ. ರು. ಅನುದಾನ ಮಂಜೂರಾತಿ ಮಾಡುವಂತೆ ಮನವಿ ಮಾಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಗುರುವಾರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದು ದೇವಾಲಯದ ಅಭಿವೃದ್ಧಿ ಸಮಿತಿ ಹಾಗು ಸ್ಥಳೀಯರೊಂದಿಗೆ ಚರ್ಚಿಸಿದರು.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಪುರಾತನ ದೇವಾಯವಾಗಿದ್ದು, ಸಾಕಷ್ಟು ಶಿಥಿಲಗೊಂಡಿದೆ. ಈ ಹಿನ್ನಲೆಯಲ್ಲಿ ಜೀರ್ಣೋದ್ದಾರಗೊಳಿಸುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಸುಮಾರು ೪ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಕೋರಲಾಗುವುದು ಎಂದರು.
ಒಂದು ವೇಳೆ ಅನುದಾನ ಬಿಡುಗಡೆಗೊಳ್ಳುವುದು ವಿಳಂಬವಾದಲ್ಲಿ ಸಂಸದರ ನಿಧಿಯಿಂದ ಶೌಚಾಲಯ ನಿರ್ಮಾಣ ಸೇರಿದಂತೆ ಅಗತ್ಯವಿರುವ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ದೇವಸ್ಥಾನಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸುವ ಮೂಲಕ ದೇವಾಲಯಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದರು.
ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಶೇಜೇಶ್ವರ್, ತಹಶೀಲ್ದಾರ್ ಅರ್. ಪ್ರದೀಪ್, ಎಇಇ ದಯಾನಂದ್, ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್, ನಗರಸಭಾ ಸದಸ್ಯರಾದ ಅನುಪಮ, ರವಿಕುಮಾರ್, ಮುಖಂಡರಾದ ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್, ರಾಮಲಿಂಗಯ್ಯ, ನರಸಿಂಹಚಾರ್, ಚನ್ನೇಶ್, ಮಾರುತಿ, ಲತಾ, ಅನೂಷಾ ಹಾಗು ದೇವಸ್ಥಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಸೆ. ೮ : ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಗೆ ಹೊಸಮನೆ ಮುಖ್ಯರಸ್ತೆ ತಮಿಳು ಶಾಲೆ ಬಳಿ ಮಧ್ಯಾಹ್ನ ೧೨ರ ಸಮಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಡೊಳ್ಳು ಕುಣಿತ, ವೀರಗಾಸೆ ಗೊಂಬೆ ನೃತ್ಯ, ಕೋಲಾಟ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಆರಂಭಗೊಂಡ ಉತ್ಸವ ಮೆರವಣಿಗೆ ಮಧ್ಯಾಹ್ನ ೩ರ ವೇಳೆಗೆ ರಂಗಪ್ಪ ವೃತ್ತ ತಲುಪಿತು. ಮೆರವಣಿಯುದ್ದಕ್ಕೂ ಭಕ್ತರಿಂದ, ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ, ಮೈಸೂರ್ ಪಾಕ್, ಲಾಡು ವಿತರಣೆ ಜೊತೆಗೆ ಅನ್ನ ಸಂತರ್ಪಣೆಗಳು ಸಹ ಜರುಗಿದವು.
ಇದೆ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ ರಂಗಪ್ಪ ವೃತ್ತದಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ದ್ವಾರಬಾಗಿಲು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಚೆನ್ನಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ ಸುದೀಪ್ ಕುಮಾರ್, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಕದಿರೇಶ್ ಸೇರಿದಂತೆ ನಗರಸಭಾ ಸದಸ್ಯರು, ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರದ್ದರು.
ಕುಣಿದು ಸಂಭ್ರಮಿಸಿದ ಭಕ್ತರು, ಕಾರ್ಯಕರ್ತರು:
ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ವಯಸ್ಸಿನ ಅಂತರವಿಲ್ಲದೆ ವಯೋವೃದ್ಧರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಮತ್ತೊಂದೆಡೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಹಿಂದೂಪರ ಘೋಷಣೆಗಳೊಂದಿಗೆ ಕೇಸರಿ ಧ್ವಜ ಹಿಡಿದು ಕುಣಿದು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ವಿಧಾನಪರಿಷತ್ ಡಿ.ಎಸ್ ಅರುಣ್, ಬಿಜೆಪಿ ಪಕ್ಷದ ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ, ಎಸ್. ಕುಮಾರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜೆಡಿಎಸ್ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ಹಾಗೂ ನಗರಸಭಾ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕೇಸರಿ ಧ್ವಜ ಹಿಡಿದು ಸಂಭ್ರಮಿಸಿದರು.